ಎಸ್ ಬಂಗಾರಪ್ಪ ಜನ್ಮ ದಿನದಂದು ಆದ್ಯೋತ್ ವಿಶೇಷ

ಆದ್ಯೋತ್ ಸುದ್ದಿನಿಧಿ:
ಸುಮಾರು 4೦ ವರ್ಷಗಳ ಹಿಂದಿನ ಮಾತು; ನಾನು ಶಾಲೆಗೆ ರಜೆ ಬಂದಾಗ ಅಪ್ಪನ ಜೊತೆ ಪೇಟೆಗೆ ಬಂದು ವಲಯ ಅರಣ್ಯಾಧಿಕಾರಿಗಳ ಕಚೇರಿಯ ಪಕ್ಕದ ಚೌಧರಿ ಬಿಲ್ಡಿಂಗ್‌ನಲ್ಲಿ ಬಾಡಿಗೆಮನೆಯಲ್ಲಿದ್ದ ಅಕ್ಕನ ಮನೆಯಲ್ಲಿರುತ್ತಿದ್ದೆ. ಸಂತೆಯ ದಿನವಾದ ಬುಧವಾರ ತಪ್ಪದಂತೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅದೇ ಕಟ್ಟಡದ ಮಾಳಿಗೆಯ ಮೇಲಿದ್ದ ‘ಕ್ರಾಂತಿಕಾರಿ ಪಕ್ಷ’ ಎಂದು ಕೆಂಪು ಬಣ್ಣದಿಂದ ಬರೆದ ಬೋರ್ಡ ಹಾಕಿದ್ದ ಕೊಠಡಿಯಲ್ಲಿ ಜನ ಸೇರುತ್ತಿದ್ದರು.

ನಂತರ ಕೆಂಪು ಅಂಗಿ ಹಾಕಿಕೊಂಡ ಒಂದಷ್ಟು ಮಂದಿ ಸಭೆ ನಡೆಯುವ ಮುನ್ನ ಬ್ಯಾನರ್ ಹಿಡಿದು ಹಲಗೆ, ತಮಟೆ ಬಾರಿಸುತ್ತ ಪೇಟೆ ಬೀದಿಗಳಲ್ಲಿ ಸಂಚರಿಸಿ ಪುನ: ಇಲ್ಲಿಗೇ ಬಂದು ಸೇರುತ್ತಿದ್ದರು. ನಂತರ ಅರಣ್ಯ ಇಲಾಖೆ ಕಚೇರಿ ಪಕ್ಕದ ಹಲಸಿನ ಮರದ ನೆರಳಿನಲ್ಲಿ ಅಕ್ಕಪಕ್ಕದ ಮನೆಗಳಿಂದ ತಂದ ಮೇಜು, ಕುರ್ಚಿ ಜೋಡಿಸಿ ಸಭೆ ನಡೆಸುತ್ತಿದ್ದರು. ಬಿಳಿ ಅಂಗಿ, ಪ್ಯಾಂಟ್ ಹಾಕಿಕೊಂಡಿರುತ್ತಿದ್ದ ಓರ್ವ ಸಪೂರನೆಯ, ಸುಂದರ ಮನುಷ್ಯ ಗಟ್ಟಿಯಾದ ಧ್ವನಿಯಲ್ಲಿ ಭಾಷಣ ಮಾಡುತ್ತಿದ್ದ. ಆ ಮನುಷ್ಯ ಮಾತನಾಡುವ ವಿಷಯ ನನ್ನಂಥ ಚಿಕ್ಕ ಮಕ್ಕಳಿಗೆ ಅರ್ಥವಾಗದಿದ್ದರೂ ಆ ಮಾತುಗಳನ್ನ ಕೇಳಬೇಕೆಂಬ ಆಕರ್ಷಣೆ ಹುಟ್ಟಿಸುತ್ತಿತ್ತು. ಪದೇ ಪದೇ ಇದನ್ನು ನೋಡಿದ ನಾನು ಈ ಮನುಷ್ಯನ ಬಗ್ಗೆ ತಂದೆಯವರ ಬಳಿ ಕುತೂಹಲದಿಂದ ಕೇಳಿದಾಗ ಅವರು ಹೇಳಿದ್ದರು. ‘ ಅವರು ಬಂಗಾರಪ್ಪ ಅಂತಾ, ಸೊರಬದವರು. ಗೇಣಿದಾರರ ಹೋರಾಟ ಮಾಡುವವರು’ ಎಂದು ಇನ್ನಷ್ಟು ವಿವರಗಳನ್ನು ಹೇಳಿದ್ದರೂ ನನಗೆ ಆಗ ಅವೆಲ್ಲ ಅರ್ಥವಾಗಿರಲಿಲ್ಲ. ಬಂಗಾರಪ್ಪ ಎನ್ನುವದು ಮಾತ್ರ ನೆನಪಿನಲ್ಲಿತ್ತು.

ನಂತರ ಆ ವ್ಯಕ್ತಿಯ ಶಕ್ತಿಯನ್ನ ಕಂಡದ್ದು ನಮ್ಮೂರ ಸಮೀಪದ ಶಿರಳಗಿ ಪಕ್ಕದ ಬಾಳೆಕೊಪ್ಪ ಎನ್ನುವಲ್ಲಿನ ಸಾವಿರಾರು ಹೇಕ್ಟೇರ್ ದಟ್ಟ ಕಾಡನ್ನು ಅರಣ್ಯ ಇಲಾಖೆ ಕಡಿಯಲು ಉದ್ದೇಶಿಸಿದಾಗ. ದೇವರಾಜ ಅರಸರ ಸಂಪುಟದಲ್ಲಿ ಪ್ರಾಯಶ: ಸಹಕಾರಿ ಸಚಿವರಾಗಿದ್ದ ಕೆ.ಎಚ್.ಪಾಟೀಲ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾಗುವ ಮುನ್ನ ಬಾಳೆಕೊಪ್ಪದ ಕಾಡನ್ನು ಕಡಿದು,ಅಲ್ಲಿ ಹೊಸ ತಳಿಯ ಹುಲ್ಲುಗಳನ್ನು ಬೆಳೆಸಿ, ಹಿಂಡಿ ತಯ್ಯಾರಿಸುವ ಕಾರ್ಖಾನೆಗೆ ಯೋಜನೆ ರೂಪಿಸಿದ್ದರು ಎನ್ನುವದನ್ನು ತಂದೆಯವರೇ ಹೇಳಿದ್ದರು. ನನಗೊಂದಿಷ್ಟು ರಾಜಕೀಯ, ಸಾಮಾಜಿಕ ಜ್ಞಾನ ಬಂದಿದ್ದರೆ ಅದು ನನ್ನ ತಂದೆಯವರಿoದ. ಅವರು ಸ್ವಲ್ಪಮಟ್ಟಿಗೆ ಧಾರ್ಮಿಕ ಶೃದ್ಧೆ ಉಳ್ಳವರಾಗಿದ್ದರೂ ಯಾವತ್ತೂ ಅದನ್ನು ತಲೆಗೆ ತೆಗೆದುಕೊಂಡವರಲ್ಲ. ನಾನು ಚಿಕ್ಕವನಾಗಿದ್ದರೂ ಎಲ್ಲ ವಿಷಯಗಳನ್ನು ಹೇಳುತ್ತಿದ್ದ ನೆನಪು ಈಗಲೂ ಇದೆ. ಅವರಿಗೆ ವಿಷಯ ಹಂಚಿಕೊಳ್ಳಲು ಯಾರೂ ಸಿಕ್ಕಿಲ್ಲವೋ? ಅಥವಾ ಇದೆಲ್ಲ ಮುಂದೊoದು ದಿನ ನನಗೆ ಉಪಯುಕ್ತವಾಗಬಹುದು ಎಂದೋ ಎಲ್ಲವನ್ನೂ ಹೇಳುತ್ತಿದ್ದರು. ಚಿಕ್ಕವಯಸ್ಸಿನ ನಾನು ಅದೆಲ್ಲವನ್ನೂ ಕೇಳಿಸಿಕೊಂಡರೂ ಒಂದಿಷ್ಟು ನೆನಪಿದೆ.

ಬಾಳೆಕೊಪ್ಪ ಸುತ್ತಲಿನ ಹತ್ತಾರು ಊರು, ಗ್ರಾಮಗಳ ಜನತೆಗೆ ಅತ್ಯಂತ ಅವಶ್ಯವಾಗಿದ್ದ, ಅವರ ಬೇಸಾಯಕ್ಕೆ ಎಲ್ಲ ರೀತಿಯ ನೆರವನ್ನೂ ನೀಡುತ್ತಿದ್ದ ಸಮೃದ್ದ ಕಾಡನ್ನು ಕಡಿಯಲು ಮುಂದಾದಾಗ ಆಗ ಸೋಷಲಿಸ್ಟ ಚಳುವಳಿಯಲ್ಲಿದ್ದ ಎಸ್.ಬಂಗಾರಪ್ಪ ಜನರನ್ನು ಸಂಘಟಿಸಿದ್ದರು. ಜಿಲ್ಲೆಯ ಮಹತ್ವದ ಜನಪರ ಹೋರಾಟಗಳಲ್ಲೊಂದಾದ ಈ ಹೋರಾಟದ ಅಂಗವಾಗಿ ದಿನ, ವಾರಗಟ್ಟಲೆ ಬಾಳೆಕೊಪ್ಪದಲ್ಲಿ, ಸಿದ್ದಾಪುರದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಒಮ್ಮೆಯಂತೂ ಸಿದ್ದಾಪುರದಲ್ಲಿ ಪ್ರತಿಭಟನೆ ಆಯೋಜಿಸಿ, ಬಾಳೆಕೊಪ್ಪದಿಂದ ಮೆರವಣಿಗೆ ತೆಗೆದರು. ಮೆರವಣಿಗೆ ಕನಿಷ್ಠ ನಾಲ್ಕು ಕಿಮೀ.ಉದ್ದವಿದ್ದುದನ್ನು ಬುಧವಾರ ಮಧ್ಯಾಹ್ನ ರಜೆಯಿದ್ದ ಕಾರಣ ಅಪ್ಪನ ಜೊತೆಗೆ ಸಂತೆಗೆ ಬಂದಿದ್ದ ನಾನು ಬೆರಗಿನಿಂದ ನೋಡಿದ್ದೆ. ನಂತರ ಪ್ರತಿಭಟನಾನಿರತರನ್ನು ಗಂಡಸರು- ಮಹಿಳೆಯರೆನ್ನದೇ ಪೊಲೀಸರು ಬಂಧಿಸಿ, ಕಾರವಾರ, ಬೆಳಗಾವಿ ಮುಂತಾದ ಕಡೆ ಜೇಲಿಗೆ ತಳ್ಳಿ ವಾರಗಟ್ಟಲೆ ಅಲ್ಲಿಟ್ಟಿದ್ದರ ಬಗ್ಗೆ ಅಪ್ಪ ಹೇಳುತ್ತಿದ್ದುದನ್ನ ಕೇಳಿದೆ. ನಮ್ಮ ಮನೆಯ ಕೆಲಸಕ್ಕೆ ಬರುತ್ತಿದ್ದ ಶಿರಳಗಿ, ಹೆರವಳ್ಳಿಯ ಹಲವರು ಜೈಲಿನಿಂದ ಬಿಡುಗಡೆ ಮಾಡಿದಾಗ ಬರಲು ಹಣವಿಲ್ಲದೇ ನಡೆದು ಬಂದಿದ್ದನ್ನು ಹೇಳಿದ್ದರು.

ನಂತರದ್ದು ಆಗಿನ ಮುಖ್ಯಮಂತ್ರಿ ದೇವರಾಜ ಅರಸರ ಕಾರ್ಯಕ್ರಮ. ಶಾಸಕರಾಗಿ ಆಯ್ಕೆಗೊಂಡಿದ್ದ ಎಸ್.ಬಂಗಾರಪ್ಪನವರ ನೇತೃತ್ವದಲ್ಲಿ ಪಟ್ಟಣದ ನೆಹರೂ ಮೈದಾನವನ್ನು ಪೂರ್ತಿಯಾಗಿ ಆವರಿಸಿಕೊಂಡ ದಾಖಲೆಯ ಕಾರ್ಯಕ್ರಮ. ಆ ಸಮಾರಂಭವನ್ನು ನೋಡಲು ಕೊಂಡ್ಲಿ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದ ನಾನು ಹಠ ಹಿಡಿದು ಅಪ್ಪನ ಜೊತೆಗೆ ಬಂದ ನೆನಪು ಈಗಲೂ ಇದೆ. ದಡಸಲು, ತಾಳೆ ಸೋಗೆ ಹೊಚ್ಚಿ ನಿರ್ಮಿಸಿದ ಚಪ್ಪರದ ಕೆಳಗೆ ಹತ್ತಾರು ಸಾವಿರ ಮಂದಿ ಸೇರಿದ್ದ ಈ ಕಾರ್ಯಕ್ರಮ ತಾಲೂಕಿನ ಮಟ್ಟಿಗೆ ನ ಭೂತೋ ನ ಭವಿಷ್ಯತೀ. ಅಂದು ಅರಸರನ್ನು ಸನ್ಮಾನಿಸಿ ಗೌರವಿಸಲಾಗಿತ್ತು. ಬಂಗಾರಪ್ಪನವರ ಶಕ್ತಿ, ಜನ ಬೆಂಬಲವನ್ನು ಅರಸು ಗಮನಿಸಿದ್ದರ ಪರಿಣಾಮವೋ, ಅದಾಗಿ ಕೆಲವೇ ದಿನಗಳಲ್ಲಿ ಅದಾಗಲೇ ಶಾಸಕರಾಗಿದ್ದ ಎಸ್.ಬಂಗಾರಪ್ಪ ಅರಸು ಸಂಪುಟದಲ್ಲಿ ಸಚಿವರಾಗಿದ್ದರು. ಚರಿತ್ರೆಗೆ ಎರಡು ಮುಖಗಳಿರುತ್ತದೆ. ಒಂದು ನಾವು ಪ್ರತ್ಯಕ್ಷ ಕಂಡದ್ದು, ಎರಡು ಅಧ್ಯಯನದ ಮೂಲಕ ಅರಿತದ್ದು. ನನಗೆ ಬಂಗಾರಪ್ಪ ಶಾಸಕರಾದದ್ದು, ಮಂತ್ರಿಯಾಗಿದ್ದು ಏನೂ ಗೊತ್ತಿಲ್ಲ. ಗೊತ್ತಾದದ್ದೂ ನನ್ನ ಬುದ್ದಿ ಬೆಳೆದ ಮೇಲೆ. ಆದರೆ ಕಣ್ಣಲ್ಲಿ ಕಂಡದ್ದು ಈಗಲೂ ಮನಸ್ಸಿನಲ್ಲಿದೆ.

ಎಸ್.ಬಂಗಾರಪ್ಪ ಮೂಲತ: ಶಿವಮೊಗ್ಗ ಜಿಲ್ಲೆಯ ಸೊರಬದವರಾದರೂ ಅವರಿಗೆ ರಾಜಕೀಯ ಶಕ್ತಿ ಒದಗಿಸಿದ್ದು ಖಂಡಿತವಾಗಿಯೂ ಸಿದ್ದಾಪುರ ತಾಲೂಕು. ಕೊನೆಯವರೆಗೂ ಈ ತಾಲೂಕಿನ ಜೊತೆಗೆ ಅವಿನಾಭಾವ ಸಂಬoಧವನ್ನು ಅವರಿಟ್ಟುಕೊಂಡದ್ದೇ ಇದಕ್ಕೆ ಸಾಕ್ಷಿ. ಬಂಗಾರಪ್ಪ ಸಭೆ ಇದೆ ಎಂದರೆ ಪಕ್ಷ, ಜಾತಿ, ಪಂಗಡ ಮರೆತು ಹತ್ತಾರು ಸಾವಿರ ಜನ ಸೇರುತ್ತಿದ್ದರು. ಮರದ ನೆರಳಿನಲ್ಲಿ ಹತ್ತಾರು ಜನರ ಸಭೆ ನಡೆಸುತ್ತಿದ್ದ ಮನುಷ್ಯ ರಾಜ್ಯದ ಉದ್ದಗಲಕ್ಕೂ ಸಾವಿರಾರು ಜನರನ್ನು ಆಕರ್ಷಿಸುವ ಹಂತಕ್ಕೆ ಬೆಳೆಯುವದು ಹುಡುಗಾಟದ ಮಾತಲ್ಲ. ಮುಖ್ಯಮಂತ್ರಿಯಾಗಿದ್ದಾಗ ಕಾರ್ಯಕ್ರಮಕ್ಕೆಂದು ರಾತ್ರಿ 9ರ ಸುಮಾರಿಗೆ ಸಿದ್ದಾಪುರಕ್ಕೆ ಬಂದ ಅವರನ್ನು ಸ್ವಾಗತಿಸಿದ್ದು ಅದೆಷ್ಟೋ ಸಾವಿರ ಮಂದಿ. ತಾಲೂಕಿನ ಪ್ರತಿ ಊರಲ್ಲೂ ಈವರೆಗೂ ಹೆಸರಿಡಿದು ಕರೆಯುವ ಹತ್ತಾರು ಮಂದಿಯ
ಪರಿಚಯ ಬಂಗಾರಪ್ಪನವರಿಗಿತ್ತು. ಅವರ ರಾಜಕೀಯ ನಿರ್ಧಾರಗಳೇನೇ ಇದ್ದರೂ ಜನರ ನಡುವಿನಿಂದ ರೂಪುಗೊಂಡ ನಿಜವಾದ ಜನನಾಯಕ ಎನ್ನುವದರಲ್ಲಿ ಯಾವುದೇ ಅನುಮಾನವಿಲ್ಲ. ಕೆಲವು ಬಾರಿ ಒಂದು ವರ್ಗಕ್ಕೆ ಸೀಮಿತವಾದ ರಾಜಕಾರಣಿಯಂತೇ ಕಂಡರೂ ಅವರ ವ್ಯಕ್ತಿತ್ವ ಹಾಗಿರಲಿಲ್ಲ ಎನ್ನುವದಕ್ಕೆ ಹಲವು ನಿದರ್ಶನಗಳಿವೆ. ತಳಮಟ್ಟದ ಜನರನ್ನೂ ತಲುಪುವ ಶಕ್ತಿಯಿದ್ದ ಬಂಗಾರಪ್ಪ ತನ್ನ ವರ್ಣರಂಜಿತ ರಾಜಕಾರಣದ ಉತ್ತುಂಗದಲ್ಲಿದ್ದಾಗಲೂ ತನಗೊಂದು ಭದ್ರವಾದ ಪ್ಲಾಟಫಾರಂ ಒದಗಿಸಿದ ಸಿದ್ದಾಪುರವನ್ನು ಮರೆತಿರಲಿಲ್ಲ. ಅಂತೆಯೇ ಇಲ್ಲಿನವರೂ ಅವರ ಮೇಲಿನ ಪ್ರೀತಿ, ವಿಶ್ವಾಸವನ್ನು ಮರೆತಿರಲಿಲ್ಲ.

ಎಸ್.ಬಂಗಾರಪ್ಪ ಯಾವತ್ತೂ ಮಿಡೀಯಾಗಳನ್ನು ಗೌರವಿಸುತ್ತಿದ್ದರು ಎನ್ನುವದಕ್ಕೆ ಹಲವು ಹಿರಿಯ ಪತ್ರಕರ್ತರಂತೆ ನನಗೂ ಅನುಭವಗಳಾಗಿದೆ. ತುಂಬಾ ವರ್ಷಗಳ ಹಿಂದೆ ನನ್ನ ಅಲೆಮಾರಿ ಬದುಕಿನಲ್ಲಿ ಬೆಂಗಳೂರಿನಲ್ಲಿ ನನ್ನ ಪತ್ರಿಕೋದ್ಯಮದ ಗುರು ಶಶಿಧರ ಭಟ್ ಜೊತೆ ಇದ್ದೆ. ಒಂದು ದಿನ ನಾವಿಬ್ಬರೂ ಬೆಳಿಗ್ಗೆ ರಸ್ತೆಯಲ್ಲಿ ಹೋಗುತ್ತಿರುವಾಗ ಒಂದಿಷ್ಟು ಹುಡುಗರು ಸೈಕಲ್ ಹೊಡೆದುಕೊಂಡು ಹೋಗುತ್ತಿರುವದನ್ನು ಕಂಡ ಭಟ್‌ರು ಅವರನ್ನು ತಡೆದರು. ಹವ್ಯಕ ಭಾಷೆಯಲ್ಲಿ “ ಏನ್ರಾ, ಎತ್ಲಾಗೆ ಹೊಂಟ್ರಾ?” ಎಂದು ಪ್ರಶ್ನಿಸಿದರು. ಅವರು ‘ ಬಂಗಾರಪ್ಪನವರ ಮನೆಗೆ ಚಕ್ಕಲಿ ಮಾಡಲೆ ಬರಹೇಳಿದ್ದಾ, ಹೊಂಟಿದ್ಯಾ’ ಅಂದರು. ನಾನು ಕಕ್ಕಾಬಿಕ್ಕಿ. ಬ್ರಾಹ್ಮಣರನ್ನು ತಾರಾಮಾರಾ ಟೀಕಿಸುತ್ತಿದ್ದ ಬಂಗಾರಪ್ಪನವರ ಮನೆಗೆ ಚಕ್ಕುಲಿ ಮಾಡಲು ಬ್ರಾಹ್ಮಣ ಹುಡುಗರು ಹೋಗುವದನ್ನು ಕನಸಿನಲ್ಲೂ ನಾನು ಊಹಿಸುವದು ಸಾಧ್ಯವಿರಲಿಲ್ಲ. ನಂತರ ಗೊತ್ತಾಯಿತು; ಅವರಿಗೆ ಯಾವ್ಯಾವುದೋ ಫಾಕ್ಟರಿ, ಇಂಡಸ್ಟಿçಗಳಲ್ಲಿ ಕೆಲಸ ಕೊಡಿಸಿದ್ದೇ ಬಂಗಾರಪ್ಪನವರಂತೆ! ಕಳೆದ ವರ್ಷ ನಟ ಶಿವರಾಜ್ ಕುಮಾರ್ ಅವರಿಗೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದ ಬಂಗಾರಪ್ಪ ಚೌತಿಯ ಹೊಸ ಹಬ್ಬಕ್ಕೆ ಚಕ್ಕುಲಿ ಮಾಡಲು ಇವರಿಗೆ ಕರೆದಿದ್ದರು. ಇವರೂ ನಿಷ್ಠೆಯಿಂದ ಹೋಗಿ ಮಾಡಿಬಂದಿದ್ದರು. ಈಗ ಯೋಚಿಸುವಾಗ ಅನ್ನಿಸುತ್ತದೆ. ಬಂಗಾರಪ್ಪ ಎಷ್ಟೇ ವ್ಯಗ್ರರಾಗಿ ಜಾತಿ ದೂಷಣೆ ಮಾಡಿದರೂ ಅವರೊಳಗೊಂದು ಮಾನವೀಯತೆ ಇತ್ತು, ಅಪ್ಪಟ ಮನುಷ್ಯತ್ವವಿತ್ತು. ಜಾತಿಯ ಬೇಲಿಯನ್ನು ಮೀರುವ ತಾಕತ್ತಿತ್ತು.
#######
ಗಂಗಾಧರ ಕೊಳಗಿ
ಪತ್ರಕರ್ತರು,ಸಿದ್ದಾಪುರ

About the author

Adyot

Leave a Comment