ಯಕ್ಷಗಾನ ಭಾಗವತ ಕೇಶವ ಹೆಗಡೆ ಕೊಳಗಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ,ಲೇಖಕಿ ಭಾರತಿ ಹೆಗಡೆಗೆ ಸುವರ್ಣವ ಮಹೋತ್ಸವ ಪ್ರಶಸ್ತಿ

ಆದ್ಯೋತ್ ಸುದ್ದಿನಿಧಿ
ಬಡಗುತಿಟ್ಟಿನ ಯಕ್ಷಗಾನದ ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿಯವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.

ಕರ್ನಾಟಕ ರಾಜ್ಯಸರಕಾರ ಇಂದು ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದ್ದು ಕೇಶವ ಹೆಗಡೆ ಕೊಳಗಿಯವರ ಜೊತೆಗೆ ಪತ್ರಕರ್ತೆ,ಲೇಖಕಿ ಭಾರತಿ ಹೆಗಡೆಯವರಿಗೆ ಕರ್ನಾಟಕ ಸಂಭ್ರಮ ೫೦- ಸುವರ್ಣ ಮಹೋತ್ಸವ ಪ್ರಶಸ್ತಿ ಘೋಷಿಸಲಾಗಿದೆ.
ಸಿದ್ದಾಪುರ ತಾಲೂಕಿನ ಕೊಳಗಿಯ ಯಕ್ಷಗಾನ ಮನೆತನದಲ್ಲಿ ೧೯೬೪ರ ಮಾರ್ಚ ೮ರಂದು ಜನಿಸಿದ ಕೇಶವ ಹೆಗಡೆಯವರ ತಂದೆ ಪ್ರಸಿದ್ಧ ಯಕ್ಷಗಾನ ಕಲಾವಿದ ಅನಂತ ಹೆಗಡೆ, ತಾಯಿ ಅರುಂಧತಿ ಹೆಗಡೆ. ಇಬ್ಬರು ತಮ್ಮಂದಿರು, ಮೂವರು ತಂಗಿಯರು. ಪತ್ನಿ ಪ್ರೀತಾ, ಮಗಳು ಹರ್ಷಿತ.
ಬಾಲ್ಯದಿಂದಲೇ ಯಕ್ಷಗಾನದ ಒಲವು ಬೆಳೆಸಿಕೊಂಡಿದ್ದರು.

ಕೇಶವ ಹೆಗಡೆ ಸಿದ್ದಾಪುರದ ಸಿದ್ದಿವಿನಾಯಕ ಪ್ರೌಢಶಾಲೆಯಲ್ಲಿ ಶಿಕ್ಷಣ ಮುಗಿಸಿದ ನಂತರದಲ್ಲಿ ಉಡುಪಿ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದಲ್ಲಿ ಪ್ರಸಿದ್ಧ ಭಾಗವತರಾದ ನಾರ್ಣಪ್ಪ ಉಪ್ಪೂರು, ಕೆ.ಪಿ.ಹೆಗಡೆಯವರ ಶಿಷ್ಯತ್ವದಲ್ಲಿ ಭಾಗವತಿಕೆಯ ಅಭ್ಯಾಸ ಪಡೆದುಕೊಂಡರು. ನಂತರದಲ್ಲಿ ಪ್ರಥಮವಾಗಿ ಹೊನ್ನಾವರ ತಾಲೂಕಿನ ಗುಂಡಬಾಳ ಮೇಳದಲ್ಲಿ ಭಾಗವತರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದರು. ಮೂಲ್ಕಿ, ಅಮೃತೇಶ್ವರಿ, ಸಾಲಿಗ್ರಾಮ, ಕಮಲಶಿಲೆ, ಶಿರಸಿ, ಪಂಚಲಿAಗ, ಬಚ್ಚಗಾರು, ಯಾಜಿ ಮಿತ್ರ ಮಂಡಳಿ, ವೀರಾಂಜನೇಯ ಯಕ್ಷಮಿತ್ರ ಮಂಡಳಿ, ಕೊಂಡದಕುಳಿ ಮೇಳ ಮುಂತಾದ ಮೇಳಗಳಲ್ಲಿ ಪ್ರಮುಖ ಭಾಗವತರಾಗಿ ಕಾರ್ಯನಿರ್ವಹಿಸಿ ಪ್ರಸಿದ್ಧಿ ಪಡೆದರು.

ಕೇಶವ ಹೆಗಡೆಯವರಿಗೆ ಸಂದ ಪ್ರಶಸ್ತಿಗಳು, ಪುರಸ್ಕಾರಗಳು ಅಸಂಖ್ಯ. ಮಹಾಬಲ ಹೆಗಡೆ ಪ್ರಶಸ್ತಿ, ನೆಬ್ಬೂರು ನಾರಾಯಣ ಪ್ರಶಸ್ತಿ, ಹೈದರಾಬಾದ್‌ನ ಕರ್ನಾಟಕ ಕರಾವಳಿ ಮೈತ್ರಿ ಸಂಘದ ಪ್ರಶಸ್ತಿ, ನಂತರದಲ್ಲಿ ಅದೇ ಸಂಘ ನೀಡಿದ ಗಾನವಾರಿಧಿ ಪ್ರಶಸ್ತಿ, ಹೈಕೋರ್ಟ ವಕೀಲರ ಸಂಘ ನೀಡಿದ ಕರಾವಳಿ ಕೋಗಿಲೆ ಪ್ರಶಸ್ತಿ, ನಮ್ಮನೆ ಪ್ರಶಸ್ತಿ, ಯಕ್ಷಕಲಾ ರಂಜಿನಿ ಪ್ರಶಸ್ತಿ ಮುಂತಾಗಿ ಅನೇಕ ಪ್ರಶಸ್ತಿಗಳು ಸಂದಿವೆ. ಈಗ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಎಲ್ಲಾ ಪ್ರಶಸ್ತಿಗಳಿಗೂ ಗರಿಮೆ ಸಿಕ್ಕಂತಾಗಿದೆ.ವೃತ್ತಿ ಮೇಳದ ಭಾಗವತಿಕೆಯಿಂದ ಹಿಂದೆ ಸರಿದ ನಂತರದಲ್ಲಿ ಹಲವಾರು ಹವ್ಯಾಸಿ ಮೇಳಗಳ ಜೊತೆಯಲ್ಲಿ ಸಕ್ರೀಯರಾಗಿರುವ ಕೇಶವ ಹೆಗಡೆಯವರ ಸಿರಿ ಕಂಠ ಯಕ್ಷಗಾನ ಪ್ರಿಯರನ್ನು ಇಂದಿಗೂ ರಂಜಿಸುತ್ತಿದೆ.
——
ಪತ್ರಕರ್ತೆ, ಬರಹಗಾರ್ತಿ ಭಾರತಿ ಹೆಗಡೆಯವರಿಗೆ ಕರ್ನಾಟಕ ಸಂಭ್ರಮ ೫೦ಸುವರ್ಣ ಮಹೋತ್ಸವ ಪ್ರಶಸ್ತಿ

ಮೂಲತ: ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಐನಕೈಯವರಾದ ಭಾರತಿ ಹೆಗಡೆ ಕನ್ನಡಪ್ರಭ, ಉದಯವಾಣಿ,ಹೊಸದಿಗಂತ, ವಿಜಯವಾಣಿ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದು ಈಗ ಹವ್ಯಾಸಿ ಪತ್ರಕರ್ತೆಯಾಗಿ, ಟಿ.ವಿ.ಧಾರಾವಾಹಿಗಳಿಗೆ ಚಿತ್ರಕಥೆ-ಸಂಭಾಷಣೆ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸೀತಾಳೆ ದಂಡೆಯ ಸದ್ದಿಲ್ಲದ ಕತೆಗಳು, ಮೊದಲ ಪತ್ನಿಯ ದುಗುಡ, ಮಣ್ಣಿನ ಗೆಳತಿ,ಪಂಚಮವೇದ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ಅವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ,ಕೃಷಿ ವಿ.ವಿ.ಯ ಕೃಷಿ ಪುಸ್ತಕ ಪ್ರಶಸ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ, ಚರಕ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳು ದೊರಕಿವೆ. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
——–

ಕಳೆದ ೪೦ವರ್ಷದಿಂದ ಯಕ್ಷಗಾನ ಕ್ಷೇತ್ರದಲ್ಲಿದ್ದೆನೆ ನನ್ನ ತಂದೆಯವರೂ ಯಕ್ಷಗಾನ ಕಲಾವಿದರಾಗಿದ್ದರು ಅವರ ನೆರಳಿನಲ್ಲಿ ನಾನು ಬೆಳೆದಿದ್ದೇನೆ. ಸರಕಾರ ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಅಭಿಮಾನಿಗಳ ಹಾರೈಕೆ,ಅಭಿಮಾನ ಇಂತಹ ಪ್ರಶಸ್ತಿ ಪಡೆಯಲು ಕಾರಣವಾಗಿದೆ ಪ್ರಶಸ್ತಿ ನನ್ನೆಲ್ಲ ಅಭಿಮಾನಿಗಳಿಗೆ ಅರ್ಪಿಸುತ್ತೇನೆ ಎಂದು ಆದ್ಯೋತ್ ನ್ಯೂಸ್ ಗೆ ಕೇಶವ ಹೆಗಡೆ ಕೊಳಗಿ ತಿಳಿಸಿದ್ದಾರೆ

About the author

Adyot

Leave a Comment