ಸಿದ್ದಾಪುರ ಕಲಗದ್ದೆಯಲ್ಲಿ ಗಾಯತ್ರೀ ಮಹಾ ಸತ್ರ ಸಂಪನ್ನ ಪುರಸ್ಕಾರ ಪ್ರದಾನ

ಆದ್ಯೋತ್ ಸುದ್ದಿನಿಧಿ:

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಕಲಗದ್ದೆಯ ನಾಟ್ಯವಿನಾಯಕ ದೇವಾಲಯದಲ್ಲಿ ಕಳೆದ ೩೭೨ ದಿನಗಳ ಕಾಲ ನಿರಂತರವಾಗಿ ನಡೆದ ಗಾಯತ್ರೀ ಮಹಾ ಸತ್ರ ಸಂಪನ್ನ ಸಮಾರಂಭದ ಪೂರ್ಣಾಹುತಿ ಹಾಗೂ ರಾಜಮಾನ್ಯ, ಸಿಂಧೂರ ಶ್ರೀ, ಗಾನ ಶ್ರೀ ಪ್ರಶಸ್ತಿ, ಗಾಯತ್ರೀ ಪುರಸ್ಕಾರ ಪ್ರದಾನ ಸಮಾರಂಭ ನಡೆಯಿತು.

ಧರ್ಮಸಭೆಯ ಸಾನ್ನಿಧ್ಯವಹಿಸಿದ್ದ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ,ಇಂದಿನ ಕಾಲದ ವಿವಿಧ ಆಕರ್ಷಣೆಗಳ ಹಿಂದೆ ಓಡದೆ ಧರ್ಮಾನುಷ್ಠಾನದ ಜೊತೆಗೆ ನಾವು ಸಾಗಬೇಕು. ಸಂಪತ್ತಿಗೆ ವಿಪ್ಪತ್ತು ಇರುತ್ತದೆ ಧರ್ಮ,ದೇವರ ಕೃಪೆಯೊಂದೇ ಶಾಶ್ವತವಾಗಿದೆ

ನಮ್ಮ ಬುದ್ದಿ ಸರಿಯಾದ ದಾರಿಯಲ್ಲಿ ಇರಬೇಕು. ಸಾವಿರ ಬುದ್ದಿವಂತಿಕೆ ಇದ್ದರೂ ಪ್ರಯೋಜನ ಇಲ್ಲ.ಶರೀರಕ್ಕೆ ಶಿರಸ್ಸಿನಷ್ಟೆ ಬದುಕಿಗೆ ಗಾಯತ್ರೀ ದೇವಿ ಉಪಾಸನೆ ಮುಖ್ಯ. ಅನರ್ಥ ಮಾಡುವ ಮನಸ್ಸುಗಳಿಗೆ ಅದು ಬಾರದೆ ಇರುವಂತೆ ಇದು ಪ್ರೇರಕ.ಗಾಯತ್ರಿ ಮಹಾ ಮಂತ್ರ ಸರಿಯಾಗಿ ಬಂದರೆ, ಅನುಷ್ಠಾನ ಮಾಡಿದರೆ ಪಾಪ ಇಲ್ಲ. ಬದುಕಿನ ತುಂಬಾ ನೆಮ್ಮದಿ. ಸಮೃದ್ಧಿ ದೊರಕುತ್ತದೆ. ಈ ಕ್ಷೇತ್ರದಲ್ಲಿ ದೀರ್ಘವಾಗಿ ಗಾಯತ್ರಿ ಅನುಷ್ಠಾನ ನಡೆದಿದೆ.ನಿರಂತರವಾಗಿ ನಡದಿರುವುದರಿಂದ ಇದು ಮಹಾಸತ್ರವಾಗಿದೆ ಎಂದು ಶ್ರೀಗಳು
ಹೇಳಿದರು.

ಶ್ರೀಕ್ಷೇತ್ರದಿಂದ ಕೊಡಮಾಡಲ್ಪಟ್ಟ ರಾಜಮಾನ್ಯ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ,ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಸಿಗಬೇಕು ಮುಂದಿನ ತಲೆಮಾರು ನಮ್ಮ ಸಂಸ್ಕೃತಿಯನ್ನು ಬೆಳೆಸುವ ಕೆಲಸಮಾಡಬೇಕು ಕಲಗದ್ದೆಯಲ್ಲಿ ಹಲವಾರು ಪವಿತ್ರ ಒಳ್ಳೆ ಕಾರ್ಯ ಸಮಾಜದ ಪರವಾಗಿ ಮಾಡಲಾಗುತ್ತಿದೆ. ಸಾನ್ನಿಧ್ಯ ನೀಡಿದ ಗುರುಗಳು ಕೇವಲ ಒಂದು ಸಮಾಜಕ್ಕೆ ಆಶೀರ್ವಾದ ಕೊಡದೇ ಎಲ್ಲರಿಗೂ ಆಶೀರ್ವಾದ ಬಯಸುತ್ತಾರೆ. ಅಂಥ ಗುರುಗಳು ನಮ್ಮ ಹೆಮ್ಮೆ, ನಮ್ಮ ಭಾಗ್ಯ. ಎಂದರು.

ಸಿಂಧೂರ ಶ್ರೀ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಜ್ಯೋತಿಷಿ ಡಾ| ಗೋಪಾಲಕೃಷ್ಣ ಶರ್ಮಾ ಮಾತನಾಡಿ, ನಾಟ್ಯ ಗಣಪತಿ ವಿಶ್ವ ಗಣಪತಿಯಾಗುತ್ತಾನೆ. ಇಲ್ಲಿ ಯಕ್ಷಗಾನ ಕೂಡ ನಿತ್ಯ ಹವನದಂತೆ ನಡೆಯುವ ಕಾಲ ಬರಲಿ ಎಂದರು.

ಗಾನ ಶ್ರೀ ಪ್ರಶಸ್ತಿ ಸ್ವೀಕರಿಸಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಭಾಗವತ ಕೇಶವ ಹೆಗಡೆ ಕೊಳಗಿ ಮಾತನಾಡಿದರು.
ವೇದಿಕೆಯಲ್ಲಿ ಹವ್ಯಕ ಮಹಾ ಮಂಡಳದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಸಮಿತಿ ಕಾರ್ಯಾಧ್ಯಕ್ಷ ಡಾ| ಜಿ.ಎಲ್.ಹೆಗಡೆ ಕುಮಟಾ, ಶಾಸಕ ಭೀಮಣ್ಣ ನಾಯ್ಕ, ಗೌರವಾಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಇತರರು ಇದ್ದರು.

About the author

Adyot

Leave a Comment