ಆದ್ಯೋತ್ ಸುದ್ದಿನಿಧಿ
3೦ ಲಕ್ಷ ಶಿಕ್ಷಕರ ಸದಸ್ಯತ್ವ ಹೊಂದಿದ ಅಖಿಲ ಭಾರತ ಶಿಕ್ಷಕರ ಫೆಡರೇಷನದ ಅಧ್ಯಕ್ಷ ಹುದ್ದೆ ಪ್ರಥಮವಾಗಿ ಕರ್ನಾಟಕ ರಾಜ್ಯಕ್ಕೆ ದೊರಕಿದೆ. 1954 ರಲ್ಲಿ ಸ್ಥಾಪಿತವಾದ ಎ.ಐ.ಪಿ.ಟಿ.ಎಫ್ 75 ವರ್ಷದ ಸಂಘಟನೆಯ ಇತಿಹಾಸ ಹೊಂದಿದೆ.
ಬಸವರಾಜ ಗುರಿಕಾರ ಕರ್ನಾಟಕ ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸತತ 3 ಅವಧಿಯವರೆಗೆ ಕರ್ತವ್ಯ ನಿರ್ವಹಿಸಿದ್ದಾರೆ. ಸದ್ಯ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿದ್ದ ಗುರಿಕಾರ ಕೇರಳದ ಕೊಚ್ಚಿಯಲ್ಲಿ ಇಂದು ಜರುಗಿದ ಚುನಾವಣೆಯಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಹೊಸಹಳ್ಳಿಯಲ್ಲಿ ಜನಿಸಿದ ಗುರಿಕಾರ ಪ್ರಾಥಮಿಕ ಶಿಕ್ಷಣವನ್ನು ಹೊಸಹಳ್ಳಿ ಗ್ರಾಮದಲ್ಲಿ ನಂತರ ಪ್ರೌಢ ಶಿಕ್ಷಣವನ್ನು ರೋಣದಲ್ಲಿ, ಕಾಲೇಜು ಶಿಕ್ಷಣವನ್ನು ಗದಗ ಹಾಗೂ ಧಾರವಾಡದಲ್ಲಿ ವ್ಯಾಸಂಗ ಮಾಡಿದ್ದಾರೆ. 1984 ರಲ್ಲಿ ರಾಜ್ಯ ಮಟ್ಟದ ನಿರುದ್ಯೋಗಿ ಶಿಕ್ಷಕರ ಸಂಘ ಸ್ಥಾಪಿಸಿ, ಹೋರಾಟದ ಮುಖಾಂತರ ಶಿಕ್ಷಕರ ನೇಮಕಾತಿ ಸಕ್ರಮಗೊಳಿಸಿ ತಮ್ಮ ಶಿಕ್ಷಕ ವೃತ್ತಿ ಆರಂಭಿಸಿದ ಗುರಿಕಾರ ತಾಲೂಕು, ಜಿಲ್ಲಾ, ರಾಜ್ಯಮಟ್ಟದ ಅಧ್ಯಕ್ಷರಾಗಿ ಕಳೆದ 45 ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಹಾಗೂ ರಾಜ್ಯ ಸಂಘದ ಹಿರಿಯ ಉಪಾದ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ.
ಬಸವರಾಜ ಗುರಿಕಾರ ಅಧ್ಯಕ್ಷರಾಗಿ ಮಹಾಪ್ರಧಾನ ಕಾರ್ಯದರ್ಶಿಯಾಗಿ ಓಡಿಸ್ಸಾದ ಕಮಲಕಾಂತ ತ್ರಿಪಾಠಿ, ಹಿರಿಯ ಉಪಾಧ್ಯಕ್ಷರಾಗಿ ಕೇರಳದ ಹರಿಗೋವಿಂದನ್ ಖಜಾಂಚಿಯಾಗಿ ಉಮಾಶಂಕರ ಕರ್ನಾಟಕದ ಚಂದ್ರಶೇಖರ ನುಗ್ಗಲಿ ಕಾರ್ಯದರ್ಶಿಯಾಗಿ ಒಟ್ಟು ವಿವಿಧ ರಾಜ್ಯಗಳ 3೦ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.