ಆದ್ಯೋತ್ ಸುದ್ದಿನಿಧಿ:
ಡಿ.3೦ರಂದು ಪಟ್ಟಣದ ಹೊಸೂರು ಶೃಂಗೇರಿ ಶಂಕರಮಠದಲ್ಲಿ ನಡೆಯಲಿರುವ ತಾಲೂಕು ಏಳನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ಜಿ.ಜಿ.ಹೆಗಡೆ ಬಾಳಗೋಡರನ್ನು ಆಯ್ಕೆ ಮಾಡಲಾಗಿದೆ.
ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲ ನಾಯ್ಕ ಭಾಸಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಹಾಗೂ ಅಜೀವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಧಾರವನ್ನು ಪ್ರಕಟಿಸಲಾಯಿತು. ಸಮ್ಮೇಳನಾಧ್ಯಕ್ಷ ಆಯ್ಕೆಗೆ ಹಿರಿಯ ಸಾಹಿತಿಗಳಾದ ತಮ್ಮಣ್ಣ ಬೀಗಾರ,ಜಿ.ಜಿ.ಹೆಗಡೆ ಬಾಳಗೋಡು,ಗಂಗಾಧರ ಹೆಗಡೆ ಕೊಳಗಿ,ಪದ್ಮಾಕರ ಮಡಗಾಂವ್ಕರ್,ಪ್ರೋ.ಕೆ.ಎ.ಭಟ್ಟ ಹೆಸರುಗಳು ಪ್ರಸ್ತಾಪಗೊಂಡು ಅಂತಿಮವಾಗಿ ಜಿ.ಜಿ.ಹೆಗಡೆ ಬಾಳಗೋಡರನ್ನು ಆಯ್ಕೆ ಮಾಡಲಾಯಿತು.
ಸಾಹಿತ್ಯವಲಯದಲ್ಲಿ ಚಿರಪರಿಚಿತರಾಗಿರುವ ಜಿ.ಜಿ.ಹೆಗಡೆ ಬಾಳಗೋಡಕನ್ನಡ ಸಾಹಿತ್ಯಪರಿಷತ್‌ನ ತಾಲೂಕು ಅಧ್ಯಕ್ಷರಾಗಿ,ಜಿಲ್ಲಾಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದಾರೆ.ಪ್ರೌಢಶಾಲಾ ಶಿಕ್ಷಕರಾಗಿ ನಿವೃತ್ತರಾಗಿರುವ ಇವರಿಗೆ ರಾಷ್ಟ್ರಪ್ರಶಸ್ತಿಯೂ ದೊರಕಿದೆ. ಸಾಹಿತ್ಯದ ವಿವಿಧ ಪ್ರಾಕಾರದಲ್ಲಿ ಸುಮಾರು 13ಕ್ಕೂ ಹೆಚ್ಚು ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ.