ಆದ್ಯೋತ್ ಸುದ್ದಿನಿಧಿ:
ಉ.ಕ.ಜಿಲ್ಲೆಯ ಸಿದ್ದಾಪುರ ಪಟ್ಟಣದ ಹೊಸೂರು ಶಂಕರಮಠದಲ್ಲಿ ೭ನೇತಾಲೂಕು ಸಾಹಿತ್ಯ ಸಮ್ಮೇಳನ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಸಮ್ಮೇಳನದ ಸರ್ವಾಧ್ಯಕ್ಷ ಜಿ ಜಿ ಹೆಗಡೆ ಮಾತನಾಡಿ, ನಮ್ಮ ತಾಲ್ಲೂಕಿಗೆ ತನ್ನದೇ ಆದ ಇತಿಹಾಸವಿದೆ. ಹಿಂದಿನ ಅರಿವಿನ ಮೇಲೆ ಭವಿಷ್ಯ ರೂಪುಗೊಳ್ಳಲು, ವರ್ತಮಾನವನ್ನು ಗಟ್ಟಿಗೊಳಿಸಲು ಇತಿಹಾಸ ಅಗತ್ಯ. ಕಾವ್ಯ ಎಂಬುದು ಸಾಹಿತ್ಯದ ಮೊದಲ ಮೆಟ್ಟಿಲು. ಇದರಲ್ಲಿ ಅನುಭವ ಬೆರೆತಾಗ ಉತ್ತಮ ಕವಿತೆ ಹೊರಬರುತ್ತದೆ. ಸಾಧಕರು, ಮೇಧಾವಿಗಳು, ಪಂಡಿತರು ಪಾಂಡಿತ್ಯವನ್ನು ಹೊತ್ತುಕೊಂಡು ಹುಟ್ಟಿದವರಲ್ಲ. ಯಾವುದೇ ಕ್ಷೇತ್ರದಲ್ಲಿ ಸಾಧನೆಗೈಯಬೇಕಾದರೆ ನಿರಂತರ ಪರಿಶ್ರಮ ಅಗತ್ಯ. ನಮ್ಮ ತಾಲೂಕು ಸ್ವಾತಂತ್ರ್ಯಹೋರಾಟದಲ್ಲಿ ಮಂಚೂಣಿಯಲ್ಲಿದೆ. ಅದಲ್ಲದೆ ಸಾಂಸ್ಕೃತಿಕವಾಗಿ,ಸಾಹಿತ್ಯಕವಾಗಿ ಶ್ರೀಮಂತ ಪರಂಪರೆಯನ್ನು ಹೊಂದಿದೆ.ಇಲ್ಲಿ ಸಾಹಿತಿಗಳಿದ್ದಾರೆ,ಪತ್ರಕರ್ತರಿದ್ದಾರೆ,ಉತ್ತಮ ರಾಜಕಾರಣಿಗಳಿದ್ದಾರೆ,ಸಹಕಾರ ಕ್ಷೇತ್ರಕ್ಕೂ ನಮ್ಮ ತಾಲೂಕು ಸಾಕಷ್ಟು ಕೊಡುಗೆ ಕೊಟ್ಟಿದೆ.ಐತಿಹಾಸಿಕ ಪ್ರವಾಸಿಗಳಿಗೆ ಹೇಳಿ ಮಾಡಿಸಿದ ಸ್ಥಳಗಳು ಹೇರಳವಾಗಿವೆ ಎಂದು ಹೇಳಿದರು.
ಸಿದ್ದಾಪುರ ತಾಲೂಕಿಗೆ ತನ್ನದೇ ಆದ ಇತಿಹಾಸವಿದೆ. ಹಿಂದಿನ ಅರಿವಿನ ಮೇಲೆ ಭವಿಷ್ಯ ರೂಪುಗೊಳ್ಳಲು ವರ್ತಮಾನವನ್ನು ಗಟ್ಟಿಗೊಳಿಸಲು ಇತಿಹಾಸ ತೀರಾ ಅಗತ್ಯ ಪ್ರತಿ ಊರಿಗೂ ಪ್ರದೇಶಕ್ಕೂ ಇತಿಹಾಸವಿದೆ.ತಾಲೂಕಿನ ಪ್ರತಿ ಹಳ್ಳಿಗೂ ಒಂದು ಇತಿಹಾಸವಿದೆ ಅಲ್ಲಿ ಒಳ್ಳೆಯ ಆಚಾರ ವಿಚಾರಗಳಿವೆ ಅವುಗಳ ಪುನರುತ್ಥಾನವಾಗಬೇಕು. ಹೋಬಳಿಗಳಿಗೆ ಸಂಸ್ಕೃತಿ ಇದೆ ತ್ಯಾಗ ಬಲಿದಾನದ ಐಹಿತ್ಯಗಳಿವೆ ಅವು ಯಾಕೆ ಆಯಿತು ಎಂಬ ಅರಿವು ಜಾಗೃತವಾಗಬೇಕು ತ್ಯಾಗ ಮಾಡಿದ ಜನರ ಇತಿಹಾಸ ಮರೆಯಾಗಬಾರದು ತಾಲೂಕಿಗೆ ತನ್ನದೇ ಆದ ವಿಶಿಷ್ಟತೆ ಇದೆ ಅವು ಅರಳಬೇಕು ಸಿದ್ದಾಪುರದ ಬ್ರಾಂಡ್ ನಿರ್ಮಾಣವಾಗಬೇಕು ನಮ್ಮತನ ಅಳಿಸಬಾರದು ಅದೇ ನಮ್ಮ ವಿಶೇಷ ಎಂದು ಹೇಳಿದರು.
ಸ್ವಾತಂತ್ರ‍್ಯ ಪೂರ್ವದಲ್ಲಿ ಅನೇಕ ಮಹನೀಯರು, ಮಹಿಳೆಯರು ತಮ್ಮ ಮನೆ, ಆಸ್ತಿ ಚರ-ಸ್ಥಿರ ಸೊತ್ತನ್ನು ತೊರೆದು ಸ್ವಾತಂತ್ರ‍್ಯ ಹೋರಾಟದ ಗುರಿಯನ್ನು ಹೊತ್ತು ಹೋರಾಟ ಮಾಡಿದ್ದಾರೆ.ತಾಲೂಕಿನ ಜನರ ನಡೆನುಡಿ, ಆಚಾರ ವಿಚಾರ ಇವೆಲ್ಲ ಜನಪದದ ಸತ್ವಗಳಾಗಿವೆ. ಜನಪದ ಸಂಪತ್ತು ನಮ್ಮ ಶ್ರೀಮಂತಿಕೆಯನ್ನು ವೈವಿಧ್ಯತೆಯನ್ನು ವಿವರಿಸುತ್ತದೆ. ಜನಪದ ಕಾವ್ಯಗಳೇ ಶಿಷ್ಟ ಸಾಹಿತ್ಯದ ಉಗಮಕ್ಕೆ ಮೂಲ. ಎಲ್ಲ ಹಳ್ಳಿಗಳಲ್ಲಿ ನೆಲೆಸಿರುವ ಜಾನಪದ ಸಿರಿಯನ್ನು ಶೋಧಿಸಿ ಸಂಸ್ಕರಿಸಿ ಸಂಗ್ರಹಿಸುವ ಕೆಲಸ ಆಗಬೇಕು ಎಂದು ಹೇಳಿದ ಅವರು ತಾಲೂಕಿನಲ್ಲಿ ರಚಿಸಿದ ಸಾಹಿತ್ಯದ ಕೆಲವು ಪ್ರಕಾರಗಳ ಬಗ್ಗೆ ಮಾತನಾಡಿದ ಅವರು ತಾಲೂಕಿನ ಸಾಹಿತಿಗಳ ಬಗ್ಗೆ ಯಕ್ಷಗಾನ, ಸಾಹಿತ್ಯ, ಕೃತಿಗಳ ಬಗ್ಗೆ ನಾಟಕಗಳ ಬಗ್ಗೆ ನಾಟಕ ರಚನಕಾರರ ಬಗ್ಗೆ, ಕಥೆ, ಕಾದಂಬರಿ, ಸಾಹಿತ್ಯ, ಯಕ್ಷಗಾನ, ಪತ್ರಿಕಾ ಕ್ಷೇತ್ರದ ಬಗ್ಗೆ ತಮ್ಮ ಭಾಷಣದಲ್ಲಿ ತಿಳಿಸಿದರು.
ಸಿದ್ದಾಪುರ ತಾಲೂಕಿಗೊಂದು ರಂಗಮಂದಿರದ ಅಗತ್ಯವಿದೆ, ಕವಿ, ಕಲಾವಿದರಿಗೆ ಸೂಕ್ತ ಸ್ಥಳವಿಲ್ಲ. ಸ್ವಾತಂತ್ರ‍್ಯ ಹೋರಾಟದ ಅಪ್ರತಿಮ ನೆಲೆಯುಳ್ಳ ಈ ಸ್ಥಳದಲ್ಲಿ ಸ್ವಾತಂತ್ರ‍್ಯ ಹೋರಾಟಗಾರರ ನೆನಪಿನಲ್ಲಿ ಸ್ವಾತಂತ್ರ‍್ಯ ಸೌಧದ ಅಗತ್ಯವಿದೆ. ಕೃಷಿಕರು ಒಂದೆಡೆ ಸೇರಿ ಚರ್ಚಿಸಲು ಹೊಸ ಆವಿಷ್ಕಾರವನ್ನು ತಿಳಿಯಲು ಕೃಷಿ ಭವನ ತೀರಾ ಅಗತ್ಯವಿದೆ. ಈಗಿರುವ ಕೃಷಿ ಭವನದಲ್ಲಿ ಯಾರು ಅಧಿಕಾರಿಗಳು ಉಳಿದುಕೊಳ್ಳುತ್ತಿದ್ದು ಇದ್ದು ಕೃಷಿಕರಿಗೆ ಸಿಗುತ್ತಿಲ್ಲ. ಇಂಥಹ ವೇದಿಕೆಯನ್ನು ಕಲ್ಪಿಸುವುದು ಸರಕಾರದ ಕರ್ತವ್ಯ ಎಂದು ಜಿ.ಜಿ.ಹೆಗಡೆ ಆಗ್ರಹಿಸಿದರು
ಸಮ್ಮೇಳನದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಪತ್ರಕರ್ತ ರವೀಂದ್ರ ಭಟ್ಟಐನಕೈ ಮಾತನಾಡಿ,ಅಭಿವೃದ್ಧಿ ಎನ್ನುವುದು ಕೇವಲ ಕಟ್ಟಡ ಕಟ್ಟುವುದು,ರಸ್ತೆ ಮಾಡುವುದು ಮಾತ್ರವಲ್ಲ ನಮ್ಮ ನಾಡಿನ ಸಂಸ್ಕೃತಿ, ಪರಿಸರ, ನೆಲ, ಜಲವನ್ನು ಕಲುಷಿತಗೊಳ್ಳದಂತೆ ಕಾಪಾಡಿಕೊಳ್ಳುವುದು ನಿಜವಾದ ಅಭಿವೃದ್ಧಿ. ಸರಕಾರದ ಅನುದಾನಕ್ಕೆ ಕಾಯದೇ ಕನ್ನಡಿಗರ ಪರಿಶ್ರಮದಿಂದ ಮಾಡುತ್ತಿರುವ ಸಮ್ಮೇಳನ ಅರ್ಥಪೂರ್ಣವಾದುದು. ಇಂದು ಮಕ್ಕಳು ಮೊಬೈಲ್‌ಗೆ ಗೀಳು ಹಚ್ಚಿಕೊಳ್ಳುತ್ತಿದ್ದಾರೆಇದರಿಂದ ಮಕ್ಕಳ ಕಲ್ಪನಾ ಶಕ್ತಿ ಕುಂಠಿತವಾಗುತ್ತದೆ.ನಮ್ಮ ಮನೆಗಳಲ್ಲಿ ನಮಗೆ ತಿಳಿಯದಂತೆ ಭಾಷೆಗಳು ಬದಲಾಗುತ್ತಿವೆ. ವಾರಕ್ಕೆ ಒಂದು ದಿನವಾದರೂ ಮೊಬೈಲ್ ರಹಿತ ದಿನವನ್ನಾಗಿ ನಾವು ಆಚರಿಸಬೇಕಾಗಿದೆ.
ನಮ್ಮ ಜಿಲ್ಲೆಯಲ್ಲಿ ಶುದ್ಧವಾದ ಕನ್ನಡ ಇನ್ನೂ ಜೀವಂತವಾಗಿ ಇರುವುದರಿಂದ ಸಾಹಿತ್ಯ ಮತ್ತು ಮಾಧ್ಯಮ ರಂಗದಲ್ಲಿ ಹೆಚ್ಚು ಜಿಲ್ಲೆಯ ಜನರನ್ನು ಕಾಣಲು ಸಾಧ್ಯ. ಇಂತಹ ಪರಂಪರೆಯನ್ನು ನಾವು ಉಳಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಶಾಸಕ ಭೀಮಣ್ಣ ನಾಯ್ಕ ಹೊಸ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಸಾಹಿತಿಗಳ ಪರಿಕಲ್ಪನೆ ಕೇವಲ ಪುಸ್ತಕಗಳಿಗೆ ಸೀಮಿತವಾಗದೇ ಅದು ಕಾರ್ಯರೂಪಕ್ಕೆ ಬಂದಾಗ ಮಾತ್ರ ಬದಲಾವಣೆ ಸಾಧ್ಯ. ಸಾಹಿತ್ಯ ಸಮ್ಮೇಳನಗಳು ಯುವ ಸಾಹಿತಿಗಳ ಪ್ರತಿಭೆ ಅನಾವರಣಗೊಳ್ಳಲು ಉತ್ತಮ ವೇದಿಕೆಯಾಗಿದೆ. ನಾವು ಶಿಕ್ಷಣವನ್ನು ಯಾವುದೇ ಭಾಷೆಯಲ್ಲಿ ಪಡೆದರೂ ನಮ್ಮ ವ್ಯವಹಾರಿಕ ಭಾಷೆಯನ್ನಾಗಿಯಾದರೂ ಕನ್ನಡವನ್ನು ಬೆಳೆಸಬೇಕು. ಕ್ಷೇತ್ರದಲ್ಲಿರುವ ಪಂಚಾಯಿತಿ ವಾಚನಾಲಯಗಳಲ್ಲಿ ಕ್ಷೇತ್ರದ ಸಾಹಿತಿಗಳ ಪುಸ್ತಕ ಇಡಲು ಶಾಸಕರ ನಿಧಿಯಿಂದ ವ್ಯವಸ್ಥೆಮಾಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತಾಲ್ಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ ಜಿ ನಾಗರಾಜ ದ್ವಾರಗಳನ್ನು ಉದ್ಘಾಟಿಸಿದರು. ನಿವೃತ್ತ ಉಪನ್ಯಾಸಕ ಕೆ ಎ ಭಟ್ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಆರ್ ಕೆ ಹೊನ್ನೆಗುಂಡಿ ಧ್ವಜ ಹಸ್ತಾಂತರಿಸಿದರು.
ವೇದಿಕೆಯಲ್ಲಿ ಸ್ಥಳೀಯ ಟಿ ಎಂ ಎಸ್ ಅಧ್ಯಕ್ಷ ಆರ್ ಎಂ ಹೆಗಡೆ ಬಾಳೆಸರ, ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ, ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಶಶಿಭೂಷಣ ಹೆಗಡೆ, ಮಾತನಾಡಿದರು.ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಿಜೇಂದ್ರ ಗೌಡರ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಗೌಡರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಎಚ್ ನಾಯ್ಕ,ಸತೀಶ ಹೆಗಡೆ, ಸುಬ್ರಾಯ ಭಟ್ಟ ಬಕ್ಕಳ ಮುಂತಾಧವರು ಉಪಸ್ಥಿತರಿದ್ದರು.
ಬೆಳಿಗ್ಗೆ ೮.೩೦ ಕ್ಕೆ ಪಟ್ಟಣದ ಹೊಸೂರು ಜೋಗ ವೃತ್ತದಿಂದ ಆರಂಭಗೊAಡ ಸಾಂಸ್ಕೃತಿಕ ಮೆರವಣಿಗೆಗೆ ತಾಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ತಲಕೊಪ್ಪ ಚಾಲನೆ ನೀಡಿದರು. ಪಟ್ಟಣದ ಜೋಗ ವೃತ್ತದಿಂದ ಶಂಕರಮಠದವರೆಗೆ ಸಮ್ಮೇಳನಾಧ್ಯಕ್ಷ ಜಿ.ಜಿ.ಹೆಗಡೆಯವರನ್ನೊಳಗೊಂಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ನಡೆಯಿತು.
ಜಿ.ಜಿ.ಹೆಗಡೆ,ಸ್ವರ್ಣಲತಾ ದಂಪತಿಗಳನ್ನು ಸಾಹಿತ್ಯಪರಿಷತನಿಂದ ಸನ್ಮಾನಿಸಲಾಯಿತು.
ಸ್ವಾಗತ ಸಮಿತಿ ಅಧ್ಯಕ್ಷ ತಹಸೀಲ್ದಾರ ಎಂ ಆರ್ ಕುಲಕರ್ಣಿ ಸ್ವಾಗತಿಸಿದರು. ಕಸಾಪ ತಾಲ್ಲೂಕು ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ಪ್ರಾಸ್ತಾವಿಕ ಮಾತನಾಡಿದರು.
ಕಸಾಪ ಜಿಲ್ಲಾಧ್ಯಕ್ಷ ಬಿ ಎನ್ ವಾಸರೆ ಆಶಯ ನುಡಿಗಳನ್ನಾಡಿದರು.ಎಂ ಆರ್ ಭಟ್ಟ ಮತ್ತು ಉಷಾರಾಣಿ ನಾಯ್ಕ ನಿರೂಪಿಸಿದರು.
———-