ಗೋವಧೆ ಮಾಡಿದವರನ್ನು ಬಂಧಿಸಲು ಬಿಜೆಪಿ ಜಿಲ್ಲಾಧ್ಯಕ್ಷರ ಆಗ್ರಹ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಗರ್ಭತುಂಬಿದ್ದ ಗೋವನ್ನು ಕಡಿದು ಕ್ರೌರ್ಯ ಮೆರೆದ ಘಟನೆ ಆಘಾತಕಾರಿಯಾಗಿದ್ದು, ತಕ್ಷಣವೇ ಗೋವಧೆ ಮಾಡಿದವರನ್ನು ಗುರುತಿಸಿ ಕಠಿಣ ಶಿಕ್ಷೆ ವಿಧಿಸಿ ಎಂದು ಬಿಜೆಪಿ ಉತ್ತರಕನ್ನಡ ಜಿಲ್ಲಾಧ್ಯಕ್ಷ ಎನ್.ಎಸ್ ಹೆಗಡೆ ಕರ್ಕಿ ಆಗ್ರಹಿಸಿದ್ದಾರೆ.
ಹೊನ್ನಾವರ ತಾಲ್ಲೂಕಿನ ಸಾಲ್ಕೋಡ ಪಂಚಾಯತ ವ್ಯಾಪ್ತಿಯಲ್ಲಿ ಕೃಷ್ಣ ಆಚಾರಿ ಎಂಬುವವರಿಗೆ ಸೇರಿದ ಆಕಳನ್ನು ವಧೆ ಮಾಡಿದ್ದು, ತಲೆ, ಕಾಲು & ಗರ್ಭದೊಳಗಿದ್ದ ಕರುವನ್ನು ಬಿಸಾಡಿ ಅಮಾನುಷ ಕೃತ್ಯ ಎಸಗಿದ್ದಾರೆ. ಚಾಮರಾಜಪೇಟೆ ಘಟನೆ ಮಾಸುವ ಮುನ್ನವೇ, ರಾಜ್ಯವೇ ಬೆಚ್ಚಿ ಬೀಳುವ ಮತ್ತೊಂದು ಘಟನೆ ಹೊನ್ನಾವರದಲ್ಲಿ ನಡೆದಿದೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ ಎಂದು ಎನ್ ಎಸ್ ಹೆಗಡೆ ಕರ್ಕಿ ತಿಳಿಸಿದ್ದಾರೆ.

ಜಿಲ್ಲೆಯ ಜನ ಈ ಪಾಶವೀ ಕೃತ್ಯವನ್ನು ಕಂಡು ಅತ್ಯಂತ ನೋವು ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ವಿಫಲಗೊಂಡಿದ್ದು – ಅತ್ಯಂತ ಬೇಜವಾಬ್ದಾರಿಯುತ ಸರ್ಕಾರ ಅಸ್ತಿತ್ವದಲ್ಲಿದೆ ಎನ್ನುವುದಕ್ಕೆ ಈ ಕೃತ್ಯ ಸಾಕ್ಷಿಯಾಗಿದೆ.ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರು ಮತ್ತು ದರೋಡೆಕೋರರಿಗೆ ಕಾನೂನಿನ ಭಯವಿಲ್ಲದಂತಾಗಿದೆ. ಓಲೈಕೆ ಎಲ್ಲೆ ಮೀರಿದೆ ಹಾಗೂ ತುಷ್ಟೀಕರಣ ಪರಾಕಾಷ್ಠೆ ತಲುಪಿದೆ; ಇದರ ಪರಿಣಾಮವನ್ನು ಜನರೀಗ ಅನುಭವಿಸುತ್ತಿದ್ದಾರೆ.ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ನ್ಯಾಯದ ನಿರೀಕ್ಷೆ ಇಟ್ಟುಕೊಳ್ಳುವುದು, ಕೃತ್ಯ ಎಸಗಿರುವವರ ವಿರುದ್ಧ ಕ್ರಮದ ಭರವಸೆ ಇಟ್ಟುಕೊಳ್ಳುವುದೂ ವ್ಯರ್ಥ ಅನ್ನಿಸುತ್ತಿದೆ.ಸಾಲ್ಕೋಡ ಭಾಗದಲ್ಲಿ ಈ ರೀತಿಯ ಇನ್ನೂ ಕೆಲವು ಘಟನೆಗಳು ವರದಿಯಾಗಿವೆ, ಅವುಗಳ ಬಗ್ಗೆಯೂ ಸೂಕ್ತ ತನಿಖೆ ಆಗಬೇಕು ತಕ್ಷಣವೇ ಘಟನೆಯ ಹಿಂದೆ ಇರುವ ವ್ಯಕ್ತಿಗಳನ್ನು ಅಥವಾ ಸಂಘಟನೆಗಳನ್ನು ಗುರುತಿಸಿ, ಮೃಗೀಯ ವರ್ತನೆ ತೋರುತ್ತಿರುವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಿ ಎಂದು ಅವರು ಆಗ್ರಹಿಸಿದರು

About the author

Adyot

Leave a Comment