ಆದ್ಯೋತ್ ಸುದ್ದಿನಿಧಿ:
ಗೋವಾ ರಾಜ್ಯದ ಕಾಣಕೋಣದಲ್ಲಿರುವ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ೨೪ನೇ ಪೀಠಾಧಿಪತಿಗಳಾಗಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಶುಕ್ರವಾರ ಗುರುಪೀಠಾರೋಹಣಗೈದರು.

ಶುಕ್ರವಾರ ಮಧ್ಯಾಹ್ನ ೩.೧೦ರ ವೃಶ್ಚಿಕ ಲಗ್ನದ ಧನುರ್
ನವಾಂಶದ ಸುಮುಹೂರ್ತದಲ್ಲಿ ಶ್ರೀ ಪರ್ತಗಾಳಿ ಜೀವೋತ್ತಮ ಮಠದಲ್ಲಿ ನಡೆದ ಸರಳ ಧಾರ್ಮಿಕ ಕಾರ್ಯಕ್ರಮದಲ್ಲಿ ಪೀಠಾರೋಹಣದ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಮಠದ ಸಂಪ್ರದಾಯದಂತೆ ನಡೆದ ಪೀಠಾರೋಹಣ
ಕಾರ್ಯಕ್ರಮದಲ್ಲಿ ಮಠ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಕೋವಿಡ್ ಹಿನ್ನೆಲೆಯಲ್ಲಿ ಪೀಠಾರೋಹಣ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಶುಕ್ರವಾರ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಬೆಳಿಗ್ಗೆ ನೈರ್ಮಾಲ್ಯ ವಿಸರ್ಜನೆ ನಡೆಯಿತು. ಪೂರ್ವಾಹ್ನ ಶ್ರೀ ರಾಮದೇವ ವೀರ ವಿಠ್ಠಲ ದೇವರ ಮಹಾಪೂಜೆಯಿಂದ ಕಾರ್ಯಕ್ರಮ ಆರಂಭಗೊಂಡಿತು. ನಂತರ ಶ್ರೀಗಳು ದೀಪವನ್ನು ಪ್ರಜ್ವಲಿಸುವ ಮೂಲಕ ಸಿಂಹಾಸನದಲ್ಲಿ ಆಸೀನರಾದರು. ನಂತರ ಶ್ರೀಮಠದ ಶಾಖಾ ಮಠಗಳ ಸಮೀತಿಯಿಂದ ಪೀಠಾರೂಢ ಗುರುಗಳಿಗೆ ಪಟ್ಟ ಕಾಣಿಕೆ ಸಲ್ಲಿಸಿ, ಫಲಮಾಲಾದಿಗಳನ್ನು ಅರ್ಪಿಸಲಾಯಿತು.

ಶ್ರೀವಿದ್ಯಾಧೀಶ ತೀರ್ಥರು:
ಕರ್ನಾಟಕದ ಬೆಳಗಾವಿಯ ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ಟ ಮತ್ತು ಪದ್ಮಾವತಿ ದಂಪತಿಗಳ ದ್ವಿತೀಯ ಪುತ್ರ ಉದಯ ಭಟ್ಟ ನಾಮಾಂಕಿತರೆ ಇಂದು ಪೀಠಾರೋಹಣ ಮಾಡಿದ ಶ್ರೀವಿದ್ಯಾಧೀಶತೀರ್ಥರು.
2012ರಲ್ಲಿ ಹಿರಿಯ ಶ್ರೀಗಳು ಬೆಳಗಾವಿಯಲ್ಲಿ ಚಾತುರ್ಮಾಸ ವ್ರತದಲ್ಲಿದ್ದಾಗ ಶಿಷ್ಯ ಸ್ವೀಕಾರಕ್ಕೆ ತೀರ್ಮಾನಿಸಿದರು.ಆ ಸಮಯದಲ್ಲಿ ಅವರ ದೃಷ್ಠಿಗೆ ಬಿದ್ದವರು ಮರಾಠ ಮಂಡಲ ಇಂಜನಿಯರಿಂಗ್ ಕಾಲೇಜ್ ನ ಮೆಕ್ಯಾನಿಕಲ್ ವಿಭಾಗದಲ್ಲಿ ಓದುತ್ತಿದ್ದವರು ಉದಯ ಭಟ್ಟ.

ಬಹುರೀತಿಯ ಪರೀಕ್ಷೆಯ ನಂತರ ಮಠಕ್ಕೆ ಕರೆತಂದು ಧಾರ್ಮಿಕ ಶಿಕ್ಷಣ ನೀಡಲಾಯಿತು 2017ರಲ್ಲಿ ಶಿಷ್ಯರಾಗಿ ಸ್ವೀಕರಿಸಿದರು.
ಕೊಂಕಣಿ ಮಾತೃಭಾಷೆಯಾದರೂ ಕನ್ನಡ,ಹಿಂದಿ,ಇಂಗ್ಲೀಷ್ ಭಾಷೆಯಲ್ಲಿ ಪಾಂಡಿತ್ಯವನ್ನು ಹೊಂದಿದ್ದಾರೆ.26 ವರ್ಷದ ಯುವ ಸ್ವಾಮೀಜಿಯವರು ಇನ್ನು ಮುಂದೆ ಸಮಾಜವನ್ನು ಮುನ್ನಡೆಸಬೇಕಾಗಿದೆ.
