ಆದ್ಯೋತ್ ಸುದ್ದಿನಿಧಿ:
ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಗೋವಿನ ಮೇಲೆ ಕ್ರೌರ್ಯ ನಡೆಸಲಾಗುತ್ತಿದ್ದು ಹತ್ಯೆಯು ಹೆಚ್ಚಾಗುತ್ತಿದ್ದು ಇದನ್ನು ತಡೆದು ಸುರಕ್ಷಿತ ವಾತಢವರಣ ನಿರ್ಮಿಸಬೇಕೆಂದು ಸಿದ್ದಾಪುರ ಶ್ರೀಮನ್ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿಯವರು ಆಗ್ರಹಿಸಿದ್ದಾರೆ.
ಭಾರತೀಯ ಸನಾತನ ಪರಂಪರೆಯಲ್ಲಿ ಗೋವಿಗೆ ತಾಯಿಯ ಸ್ಥಾನವಿದೆ. ಗೋವಿನ ಹಾಲನ್ನು ಪರಮಾತ್ಮನಿಗೆ ಅಭಿಷೇಕಕ್ಕೆ ಬಳಸಿದರೆ, ಮನುಷ್ಯನಿಗೆ ಜನನದಿಂದ ಮರಣದವರೆಗೆ ಪೋಷಣೆಯನ್ನು ನೀಡುತ್ತದೆ. ಮಗು ಹುಟ್ಟಿದಾಕ್ಷಣ ತಾಯಿಯನ್ನು ಕಳೆದುಕೊಂಡರೆ ಆ ಮಗುವಿನ ಬೆಳವಣಿಗೆಗೆ ಹಸುವಿನ ಹಾಲೇ ಅಮೃತವಾಗುತ್ತದೆ. ಹಾಗಾಗಿ ಮನುಷ್ಯನಿಗೆ ಗೋವು ಸದಾ ಉಪಕೃತ ಮತ್ತು ಉಪಕಾರಿ. ಧಾರ್ಮಿಕವಾಗಿ, ಕೃಷಿಯಲ್ಲಿ ಗೋವು ಭಾರತವನ್ನು ಹಿಂದಿನಿಂದಲೂ ಸಲಹುತ್ತ ಬಂದಿದೆ. ಅದಕ್ಕಾಗಿಯೇ ಗಾವೋ ವಿಶ್ವಸ್ಯ ಮಾತರಃ ಎನೆಸಿಕೊಂಡಿದೆ. ನಾವು ವಾಸಮಾಡುವ ಮನೆ ನಿರ್ಮಲವಾಗಬೇಕಾದರೆ, ಪೋಷಿಸುವ ಆಹಾರ ಬೆಳೆಗಳು ಸಮೃದ್ಧಿಯನ್ನು ಕಾಣಬೇಕಾದರೆ, ಗೋಮೂತ್ರ ಗೋಮಯಗಳೇ ಪ್ರಧಾನವಾಗಿ ಬಳಕೆಯಾಗುತ್ತದೆ. ಗುಣಗಳಿಗೆಲ್ಲ ಗೋವನ್ನೇ ಹೋಲಿಸುವುದುಂಟು. ಅಂತಹ ಸಾಧು ಪ್ರಾಣಿಯಾದ ಗೋವು ನಮ್ಮ ರಾಷ್ಟ್ರದ ಸಂಪತ್ತಾಗಿಯೂ ಕರೆಸಿಕೊಂಡಿದೆ.
ಇತ್ತೀಚೆಗೆ ಗೋವಿನ ಮೇಲೆ ಹೀನಾತಿ ಹೀನ ದೌರ್ಜನ್ಯ ನಡೆಯುತ್ತಿದೆ. ಕ್ರೌರ್ಯತೆ ಮೆರೆದು ಮೂಕ ಪ್ರಾಣಿಯಾದ ಗೋವಿನ ವಧೆ ಸಾರಾ ಸಗಟಾಗಿ ನಡೆಯುತ್ತಿರುವುದು, ಸಭ್ಯಸಮಾಜ ತಲೆತಗ್ಗಿಸುವ ವರದಿಗಳು ಬರುತ್ತಿವೆ. ನಾಡಿನ ಸಜ್ಜನರು ಭಯಪಡುವ ರೀತಿಯಲ್ಲಿ ಇಂತಹ ಹತ್ಯೆಗಳು ನಡೆಯುತ್ತಿರುವುದು ಅಘಾತಕಾರಿ. ಗೋವನ್ನೇ ತಾಯಿಯಾಗಿ ಪೂಜಿಸುವ ಬಹುಪಾಲು ಜನರ ಭಾವನೆಗಳೇ ಹತವಾಗುತ್ತದೆ. ಇಂತಹ ಕೃತ್ಯ ಯಾವತ್ತಿಗೂ ಶ್ರೇಯಸ್ಸನ್ನು ತರಲಾರದು. ಸಾಕ್ಷಾತ್ ಮೂವತ್ಮೂರು ಕೋಟಿ ದೇವತೆಗಳು ವಾಸಿಸುವ ಗೋವಿನ ರಕ್ಷಣೆ ನಾಡಿನ ಎಲ್ಲ ಧರ್ಮ, ಜಾತಿ, ಪಂಗಡದವರ ಹೊಣೆಗಾರಿಕೆಯಾಗಿದೆ. ಗೋವು ನೆಮ್ಮದಿಯಿಂದಿದ್ದರೆ ಮಾತ್ರ ನಾಡು ಸಂಪದ್ಬರಿತವಾಗಿಯೂ, ಸುರಕ್ಷಿತವಾಗಿಯೂ, ನೆಮ್ಮದಿಯಾಗಿಯೂ ಇರಲು ಸಾಧ್ಯ. ಇದನ್ನು ಎಲ್ಲ ವೇದ ಪುರಾಣಗಳೂ ಸಾರಿವೆ. ಹಾಗಾಗಿ ಗೋವು ನಮ್ಮೆಲ್ಲರಿಗೂ ಧಾರ್ಮಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಕ, ಆರ್ಥಿಕ ಶಕ್ತಿಯಾಗಿದ್ದು ಗೋ ಹತ್ಯೆಯನ್ನು ಹಿಂದೂ ಸಮಾಜ ಸರ್ವಥಾ ಒಪ್ಪಲು ಸಾಧ್ಯವಿಲ್ಲ ಹಾಗಾಗಿ ಗೋ ರಕ್ಷಣೆ ಕುರಿತು ನಾವೆಲ್ಲರೂ ಜಾಗೃತಿ ಮೂಡಿಸುವ ಮತ್ತು ನಮ್ಮ ಕರ್ತವ್ಯವನ್ನು ಮಾಡಲೇಬೇಕಾದ ಸಮಯ ಒದಗಿಬಂದಿದೆ. ಸರಕಾರಗಳೂ ಈ ನಿಟ್ಟಿನಲ್ಲಿ ನಾಡಿನ ಪ್ರಜೆಗಳಿಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕಾಗಿದೆ. ಮುಂದೆ ಇಂತಹ ಗೋ ಪೀಡನೆ ಎಲ್ಲೂ ನಡೆಯದ ರೀತಿಯಲ್ಲಿ ಸುರಕ್ಷಿತ ವಾತಾವರಣ ನಿರ್ಮಿಸಬೇಕೆಂದು
ಶ್ರೀಗಳು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.