ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ನೆಹರೂ ಮೈದಾನದಲ್ಲಿ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಮೇಳದ ನೂತನ ಯಕ್ಷಗಾನ ಪ್ರಸಂಗ ಶುಭಲಕ್ಷಣದ ೫೦ನೇ ಪ್ರಯೋಗ ನಡೆಯಿತು. ಈ ಸಂದರ್ಭದಲ್ಲಿ ಯಕ್ಷಗಾನದಲ್ಲಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಭಾಗವತ ಕೇಶವ ಹೆಗಡೆ ಕೊಳಗಿ ಅವರಿಗೆ ಸಿದ್ದಾಪುರ ತಾಲೂಕಿನ ಯಕ್ಷಗಾನ ಅಭಿಮಾನಿಗಳು ಸನ್ಮಾನ ಕಾರ್ಯಕ್ರಮ ನಡೆಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಡಾ,ಶಶಿಭೂಷಣ ಹೆಗಡೆ ದೊಡ್ಮನೆ ಮಾತನಾಡಿ, ಯಾವುದೇ ಕೆಲಸದಲ್ಲಿ ಶ್ರಮ,ತಪಸ್ಸು ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಅಂತಹ ಸಾಧಕರ ಸಾಲಿಗೆ ಕೇಶವ ಹೆಗಡೆ ಕೊಳಗಿ ಸೇರುತ್ತಾರೆ.ಯಕ್ಷಗಾನದಲ್ಲಿರುವ ಆಸಕ್ತಿ, ಬದ್ಧತೆ,ತಪಸ್ಸು ಹಾಗೂ ಶ್ರಮ ಇವುಗಳಿಂದ ಕೇಶವ ಹೆಗಡೆ ಕೊಳಗಿಯವರು ಯಕ್ಷಗಾನ ರಂಗದಲ್ಲಿ ಸಾಧನೆಮಾಡಿದ ಫಲವಾಗಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ. ಯಕ್ಷಗಾನದ ಶಾಸ್ತಿçÃಯತೆಯನ್ನು ಉಳಿಸಿಕೊಂಡಿರುವ ಕೆಲವೇ ಕಲಾವಿದರಲ್ಲಿ ಒಬ್ಬರಾಗಿರುವ ಕೇಶವ ಹೆಗಡೆ ಕೊಳಗಿ ಅವರು ಯಕ್ಷಗಾನದ ಮಾಣಿಕ್ಯ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೇಶವ ಹೆಗಡೆ ಕೊಳಗಿ, ಇದು ನನ್ನ ಹುಟ್ಟೂರಿನಲ್ಲಿ ನಡೆದ ಸನ್ಮಾನ. ನಾನು ಯಕ್ಷಗಾನ ರಂಗದಲ್ಲಿ ಭಾಗವತನಾಗುವುದಕ್ಕೆ ದಿ.ಉಪ್ಪೂರು ನಾರಾಯಣ ಭಾಗವತ್ ಹಾಗೂ ಕೆ.ಪಿ.ಹೆಗಡೆ ಗೋಳಗೋಡ ಕಾರಣರು. ನಂತರ ಮಹಾಬಲ ಹೆಗಡೆ ಕೆರೆಮನೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ತಂದೆಯವರಾದ ಅನಂತ ಹೆಗಡೆ ಕೊಳಗಿಯವರು ನನ್ನ ಬೆಳವಣಿಗೆಗೆ ಸಹಾಯಕರಾದರು. ಅನೇಕ ಹಿರಿ-ಕಿರಿಯ ಕಲಾವಿದರಿಗೆ ಭಾಗವತಿಕೆ ಮಾಡಿದ ಸಂತಸ ನನಗೆ ಇದೆ ಎಂದು ಹೇಳಿದರು.
ಡಾ.ಕೆ.ಶ್ರೀಧರ ವೈದ್ಯ ಅಧ್ಯಕ್ಷತೆವಹಿಸಿದ್ದರು.ಪತ್ರಕರ್ತ ಗಂಗಾಧರ ಕೊಳಗಿ ಅಭಿನಂದನಾ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಾಲಿಗ್ರಾಮ ಮೇಳದ ಭಾಗವತರಾದ ಚಂದ್ರಕಾAತ ಮೂಡಬೆಳ್ಳೆ, ಪ್ರಶಾಂತ ಶೆಟ್ಟಿಗಾರ, ಈಶ್ವರ ನಾಯ್ಕ ಮಂಕಿ, ಶಶಿಕಾಂತ ಶೆಟ್ಟಿ, ಮಹಾಬಲೇಶ್ವರ ಭಟ್ಟ ಕ್ಯಾದಗಿ ಇವರನ್ನು ಸಂಘಟಕರು ಸನ್ಮಾನಿಸಿ ಗೌರವಿಸಿದರು.
ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ವಕೀಲ ಜಿ.ಎಸ್.ಹೆಗಡೆ ಬೆಳ್ಳೆಮಡಕಿ, ಟಿಎಸ್‌ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಉದ್ಯಮಿ ಉಪೇಂದ್ರ ಪೈ, ವಿ.ವಿನಾಯಕ ಭಟ್ಟ ಮತ್ತೀಹಳ್ಳಿ, ಸಂಘಟಕರಾದ ಸತೀಶ ಹೆಗಡೆ ಬೈಲಳ್ಳಿ, ರವಿ ನಾಯ್ಕ ಜಾತಿಕಟ್ಟೆ, ಸುಧೀರ್ ಕೊಂಡ್ಲಿ, ನಾಗರಾಜ ಗೊದ್ಲಬೀಳ, ನಟರಾಜ ಹೆಗಡೆ, ಕೇಶವ ಹೆಗಡೆ ಕಿಬ್ಳೆ ಇತರರಿದ್ದರು.
ಎಸ್.ಕೆ.ಮೇಸ್ತಾ, ಹರೀಶ ಗೌಡರ್, ನಾಗರಾಜ ನಾಯ್ಕ ಬೇಡ್ಕಣಿ ಕಾರ್ಯಕ್ರಮ ನಿರ್ವಹಿಸಿದರು.