ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿಯ ಗೋಸೇವಾ ಗತಿವಿಧಿ ಸಂಘಟನೆಯಿಂದ
ಆಯೋಜಿಸಿದ್ದ ನಂದಿ ರಥಯಾತ್ರೆ ಕಾರ್ಯಕ್ರಮವು ಶಿರಸಿಯಲ್ಲಿ ಶ್ರದ್ಧಾ-ಭಕ್ತಿಯಿಂದ ನೆರವೇರಿತು.
ಪೊಳಲಿಯ ರಾಧಾ ಸುರಭಿ ಗೋಮಂದಿರದಿಂದ ಹೊರಟ ನಂದಿ ರಥವು ಶಿಕಾರಿಪುರ ಮಾರ್ಗವಾಗಿ ನಗರವನ್ನು ತಲುಪಿದಾಗ ಶ್ರೀ ಮಾರಿಕಾಂಬಾ ದೇವಸ್ಥಾನ ಬಳಿ ನಂದಿ ಪೂಜೆ ನೆರವೇರಿಸಿ ಸ್ವಾಗತಿಸಲಾಯಿತು. ಶ್ರೀ ಮಾರಿಕಾಂಬಾ ದೇವಸ್ಥಾನ ಹಾಗೂ ಗೋಸೇವಾ ಗತಿವಿಧಿಯ ಪ್ರಮುಖರು ಪೂಜೆಯನ್ನು ನೆರವೇರಿಸಿದರು. ಮಾತೆಯರು ಪೂರ್ಣಕುಂಭ ಸ್ವಾಗತ ಕೋರಿದರು.
ನಂದಿ ರಥಯಾತ್ರೆಯ ಸಂಯೋಜಕರಾದ ಹರೀಶ ಕರ್ಕಿ ಭಗವಾ ಧ್ವಜ ಹರಿಸಿ ಚಾಲನೆ ರಥಯಾತ್ರೆಗೆ ನೀಡಿದರು. ಚಂಡೆ-ವಾದ್ಯಗಳೊಂದಿಗೆ ಭವ್ಯ ಶೋಭಾಯಾತ್ರೆ ಜೊತೆಗೆ ನಂದಿ ರಥವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ರುದ್ರದೇವರ ಮಠದ ಬಳಿ ಆಗಮಿಸಿತು. ಮಾತೆಯರು ಹಾಗೂ ಭಜನಾ ಮಂಡಳಿಗಳಿಂದ ವಿಷ್ಣು ಸಹಸ್ರನಾಮ ಪಠಣ ನೆರವೇರಿತು.
ಸಾನ್ನಿಧ್ಯ ವಹಿಸಿದ್ದ ರಾಧಾ ಸುರಭಿ ಗೋಮಂದಿರದ ಅಧ್ಯಕ್ಷ ಶ್ರೀ ಭಕ್ತಿ ಭೂಷಣ ದಾಸ್ ಗುರೂಜಿ ಮಾತನಾಡಿ, ಗೋವು ನಮ್ಮನ್ನು ಸಾಕಿ ಸಲಹಲಿಕ್ಕೆ ಈ ಭೂಮಿಯಲ್ಲಿ ಇದೆ, ನಾವು ಅದನ್ನು ನೋಡಿಕೊಳ್ಳುವುದು ಅಲ್ಲ, ಬದಲಾಗಿ ಅದು ನಮ್ಮನ್ನು ನೋಡಿಕೊಳ್ಳುತ್ತಿದೆ. ಇವತ್ತು ಜನರಲ್ಲಿ ಡಿಪ್ರೆಶನ್ ಜಾಸ್ತಿ ಆಗುತ್ತಿದೆ, ಗೋಸೇವೆ ಮಾಡುವವರಿಗೆ ಡಿಪ್ರೆಶನ್ ತೊಂದರೆ ಇಲ್ಲ, ಉತ್ತಮ ಆರೋಗ್ಯ ಗೋಸೇವಕರಿಗೆ ಶತಸಿದ್ಧ
ಮಗುವಿನ ಪಾಲನೆ ಹಾಲಿನಿಂದಲೇ ಆಗತ್ತೆ, ತಾಯಿಯ ಹಾಲಿನ ಹಾಗೆಯೇ ಗೋವಿನ ಹಾಲು ಮಗುವಿನ ಪೋಷಣೆಗೆ ಅವಶ್ಯಕವಾಗಿದೆ. ಮಲಿನತೆ ನಿವಾರಣೆಗೆ ಪಂಚಗವ್ಯದಿಂದ ನಾವು ಶುದ್ಧಿ ಮಾಡುತ್ತೇವೆ ಹಾಗಾಗಿ ಆದಿಯಿಂದಲ್ಲೂ ಗೋವಿಗೆ ಪವಿತ್ರ ಸ್ಥಾನ ನೀಡಲಾಗಿದೆ .ನಮ್ಮ ನಮ್ಮ ಮನೆಗಳಲ್ಲಿ ಗವ್ಯ ಉತ್ಪನ್ನಗಳನ್ನು ಬಳಸುವ ಮೂಲಕ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳೋಣ ಎಂದರು.
ಕಾರ್ಯಕ್ರಮದ ಮುಖ್ಯ ವಕ್ತಾರ ಸತ್ಯನಾರಾಯಣ ಭಟ್ ಗೋವಿನ ಜೊತೆಗೆ ವಿಶೇಷವಾಗಿ ನಂದಿಯ ರಕ್ಷಣೆಯ ಕೆಲಸ ಕೂಡಾ ಆಗಬೇಕು ಹಿಂದಿನಿಂದಲೂ ನಾವೆಲ್ಲ ಪೂಜ್ಯ ಭಾವನೆಯಿಂದ ನೋಡುತ್ತಾ ಸಂರಕ್ಷಣೆ ಮಾಡಿಕೊಂಡು ಬಂದಿದ್ದ ಗೋವು ಇಂದು ಅನೇಕ ಮನೆಗಳಲ್ಲಿ ಇಲ್ಲ. ಗೋ ಆಧಾರಿತ ಕೃಷಿ ಪದ್ಧತಿ ಹಿಂದೆ ಇತ್ತು, ಅದು ಭೂಮಿಯ ಫಲತ್ತತೆಯನ್ನು ಹೆಚ್ಚಿಸ್ತಾ ಇತ್ತು. ಆದರೆ ಇವತ್ತು ಹೊಗೆ ಉಗುಳುವ ಯಂತ್ರಗಳು ಭೂಮಿ ಉತ್ತುತ್ತಿವೆ ಗೋಸಂರಕ್ಷಣೆ, ಗೋಸಂವರ್ಧನೆ ಆದರೆ ಕುಟುಂಬದ ವ್ಯವಸ್ಥೆ ಚೆನ್ನಾಗಿ ಇರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುಣ್ಯಕೋಟಿ ಗೋಶಾಲೆಯ ಗಣೇಶ ಮುಂಡಗೋಡ, ಗೋವಿಗೆ ಪಾರಂಪರಿಕ ಔಷಧಿ ನೀಡುವ ವೈದ್ಯ ಮಂಜುನಾಥ ಗೌಡ ಅತ್ತಿಸವಲು, ಗೋ-ರಕ್ಷಕರು ಶಿರಸಿ ತಂಡದ ಲಕ್ಷ್ಮಣ ನಾಯ್ಕ ಹಾಗೂ ರವಿ ಗೌಳಿ, ಪುಣ್ಯಕೋಟಿ ಟ್ರಸ್ಟ್ ನ ಮಲೆನಾಡು ಗಿಡ್ಡ ಸಂರಕ್ಷಕ ಪುರುಷೋತ್ತಮ ಅಂಬಿಗ ಕಲ್ಮನೆ, ಗೋಸೇವಾ ನಿರತ ಪಾಂಡುರಂಗ ನಾಯ್ಕ ಕಾನಗೋಡ ಇವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಂದಿ ಸಂರಕ್ಷಕ ವಿಘ್ನೇಶ್ವರ ಹೆಗಡೆ ವಡಗೆರೆ ಅವರನ್ನು ಗೌರವಿಸಲಾಯಿತು. ಸನ್ಮಾನಿತರನ್ನು ಗುರುಪ್ರಸಾದ ಹೆಗಡೆ ಹರ್ತೆಬೈಲ್ ಸಭೆಗೆ ಪರಿಚಯಿಸಿ ನಿರ್ವಹಿಸಿದರು.
ಆನಂದ ಸಾಲೇರ ದಂಪತಿಗಳು ಪೂಜ್ಯ ಶ್ರೀ ಭಕ್ತಿಭೂಷಣ ದಾಸ್ ಗುರೂಜಿ ಅವರಿಗೆ ಫಲ ಸಮರ್ಪಿಸಿದರು. ಹರೀಶ್ ಕರ್ಕಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗಜಾನನ ಸಕಲಾತಿ ಅವರು ಸ್ವಾಗತಿಸಿ ನಿರ್ವಹಿಸಿದರು ಸಂದೀಪ್ ನಾಯ್ಕ ಧನ್ಯವಾದ ಅರ್ಪಿಸಿದರು.