ಆದ್ಯೋತ್ ಸುದ್ದಿನಿಧಿ:
ಕಷ್ಟಗಳು ಬರುತಿರಲಿಮೆಟ್ಟಿ ಹಾಕುವನೆಂಬ
ಗಟ್ಟಿ ಮನವಿರಲಿ
ದಿಟ್ಟತನ ಗೆಲುವುಗಳ ಗುಟ್ಟು
ಧೀರನಿಗೆ ಪೂರ್ಣಜ್ಞ
ಇದು ವೃತ್ತಿ ಮತ್ತು ಜೀವನ ಎರಡರಲ್ಲೂ ಸಾಹಸ ಮೆರೆದ ಧೀರರಿಗೆ ಅನ್ವಯಿಸುವ ಮಾತು. ಯಾವುದೇ ಒಬ್ಬ ವ್ಯಕ್ತಿಗೆ ವೃತ್ತಿ ಜೀವನ ಎನ್ನುವುದು ಒಂದು ಇರುತ್ತದೆ. ಅದು ಖಾಸಗಿಯಾಗಿರಬಹುದು ಇಲ್ಲವೇ ಸರಕಾರಿಯಾಗಿರಬಹುದು. ಅದು ಆ ವ್ಯಕ್ತಿಯ ಜೀವನದ ಮಹತ್ತರ ಘಟ್ಟ. ಬದುಕಿನ ನಿರ್ವಹಣೆಯ ದಾರಿ. ಇದನ್ನು ದೇವರ ಪೂಜೆಯಂತೆ ಶ್ರದ್ಧೆಯಿಂದ ಆಚರಿಸಿದರೆ ಅದು ಒಲಿಯುತ್ತದೆ ಮತ್ತು ಶ್ರೇಯಸ್ಸನ್ನು ಕೊಡುತ್ತದೆ. ಹೀಗೆ ದೇವರ ಅನುಗ್ರಹ ಮತ್ತು ಸ್ವಂತ ಪರಿಶ್ರಮ, ನಿಸ್ವಾರ್ಥ ಶ್ರದ್ಧೆಯಿಂದ ಕಳೆದ ನಾಲ್ಕು ದಶಕ(೪೦ ವರ್ಷ) ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಎಸ್.ಎಸ್. ನಿಂಗಾಣಿ ಅವರು.
೪೦ ವರ್ಷಗಳ ಸೇವೆ ಎಂದರೆ ಹುಡುಗಾಟದ ಮಾತಲ್ಲ. ಹಲವು ಏಳುಬೀಳುಗಳು, ನೋವು ನಲಿವುಗಳ ಮಧ್ಯೆ ಇಡೀ ಇಲಾಖೆಯೇ ಹೆಮ್ಮೆ ಪಡುವಂತೆ ಜನಸಾಮಾನ್ಯರೊಂದಿಗೆ ಬೆರೆತು ಅವರ ಮನದಾಳದಲ್ಲಿ ಭದ್ರ ಸ್ಥಾನ ಪಡೆದವರು ಪ್ರಸ್ತುತ ಶಿರಸಿ ಎಸಿಎಫ್ ಎಸ್.ಎಸ್. ನಿಂಗಾಣಿ ಅವರು.
ಫೆ.1 1985 ರಂದು ಸೇವೆ ಆರಂಭಿಸಿದ ಇವರಿಗೆ ಇಂದು 4 ದಶಕಗಳ ಪೂರೈಸಿದ ಸಂತಸ ಹಾಗೂ ಹೆಮ್ಮೆಯ ಕ್ಷಣ.
ನೀವು ಅಂದುಕೊಂಡತೆ ಇವರು ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವರಲ್ಲ. ಬಡತನದಲ್ಲಿ ಅರಳಿದ ಹೂವಿದು. ತಂದೆಯವರ ಮೈಯಲ್ಲಿ ಹರಿಯುತ್ತಿದ್ದ ಪ್ರಾಮಾಣಿಕತೆ ಮತ್ತು ಕಾಡಿನ ಸೇವೆಯ ರಕ್ತ ಇವರಿಗೂ ಬಂದಿದೆ. ಪರಿಣಾಮ ಇವರು ಹೋದಲ್ಲೆಲ್ಲಾ ಅರಣ್ಯ ನಳನಳಿಸಿದೆ. ಜನ ಇವರನ್ನು ನೋಡಿದಾಕ್ಷಣ ಆಪದ್ಬಾಂಧವನಂತೆ ಅಪ್ಪಿಕೊಳ್ಳುತ್ತಾರೆ. ಇವರಿಗೆ ಜನಸಾಮಾನ್ಯರ ಕಷ್ಟದ ಅರಿವಿದೆ. ಇಲಾಖೆಯ ನಿಯಮಗಳ ಬಗ್ಗೆಯೂ ಗೌರವವಿದೆ. ಇವೆರಡನ್ನು ಸಮತೋಲನವಾಗಿ ಈವರೆಗೂ ಕಾಪಾಡಿಕೊಂಡು ಬಂದಿರುವುದು ಇವರ ಹೆಗ್ಗಳಿಕೆ.
ಮಾನವೀಯ ಸಂವೇದನೆ, ಇಚ್ಛಾಶಕ್ತಿ ಮತ್ತು ಕರ್ತವ್ಯ ಪ್ರಜ್ಞೆ ಈ ಮೂರು ಅಂಶಗಳು ಒಬ್ಬ ಅರಣ್ಯ ಇಲಾಖೆ ಅಧಿಕಾರಿಯಲ್ಲಿ ಮೇಳೈಸಿದಾಗ ಹೊರಹೊಮ್ಮುವ ಫಲಿತಾಂಶ ಇಡೀ ಸಮಾಜವೇ ಮೆಚ್ಚುವಂತಾಗಿರುತ್ತದೆ. ಇಲಾಖೆಯ ಘನತೆ ಹೆಚ್ಚುವುದರ ಜತೆಗೆ ವನ್ಯಜೀವಿಗಳ ರಕ್ಷಣೆ, ಪೋಷಣೆಯೂ ಅಗುತ್ತದೆ. ಇದಕ್ಕೊಂದು ಉತ್ತಮ ಉದಾಃರಣೆ ಎಂದರೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಳವ ಗ್ರಾಮದಿಂದ 1 ಕಿಮೀ ದೂರದಲ್ಲಿ ಹಳ್ಳಕ್ಕೆ ತಡೆಗೋಡೆ ಕಟ್ಟಿ ನಿರ್ಮಿಸಿದ ಕೆರೆ ಇಂದಿಗೂ ವನ್ಯಜೀವಿಗಳ ಜಲದಾಹ ತೀರಿಸುತ್ತಿದೆ. ಇದು ನಿಂಗಾಣಿಯವರ ದೂರದೃಷ್ಟಿಯ ಫಲ. ಬರ ಹಾಗೂ ಬಿರು ಬಿಸಿಲಲ್ಲೂ ಈ ಕೆರೆ ಜಲಸಮೃದ್ಧಿಯಿಂದ ನಳನಳಿಸುತ್ತಿದೆ. ಇದು ಒಂದು ಸಣ್ಣ ಉದಾಹರಣೆಯಷ್ಟೇ. ಇಂತಹ ನೂರಾರು ಕೆಲಸಗಳು ಇವರಿಂದ ಆಗಿವೆ.
ಇಂತಹ ಅಧಿಕಾರಿಗಳು ಇಲಾಖೆಯ ಹಾಗೂ ನಾಡಿನ ಹೆಮ್ಮೆ ಇವರ ಕೆಲಸ ಅನುಕರಣೀಯ. ಎಸ್.ಎಸ್. ನಿಂಗಾಣಿ ಅವರು ಇಂದು ಪದೋನ್ನತಿ ಹೊಂದಿ ಹೊನ್ನಾವರದ ನಂತರ ಇದೀಗ ಶಿರಸಿಯಲ್ಲಿ ಎಸಿಎಫ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅವರು ಈ ಹಿಂದೆ ಇಲ್ಲಿದ್ದಾಗ ಮಾಡಿದ ಅನುಪಮ ಕೆಲಸವನ್ನು ಇಲ್ಲಿನ ಜನ ಇಂದಿಗೂ ನೆನೆಸುತ್ತಾರೆ. ಇದಕ್ಕಿಂತ ಬೇರೆ ಧನ್ಯತೆ ಬೇಕೇ? ಎಲ್ಲದಕ್ಕೂ ಮಿಗಿಲಾಗಿ ಇವರು ಒಬ್ಬ ಸಹೃದಯಿ ಮತ್ತು ಎಲ್ಲರಿಗೂ ಸಹಾಯ ಮಾಡುವ ಮನೋಭಾವದ ಅಪರೂಪದ ವ್ಯಕ್ತಿ . ಅವರ ಗುಣವೇ ಅವರ ಶಕ್ತಿ. ಇವರು ಸರಕಾರಿ ದಾಖಲೆಗಳ ಪ್ರಕಾರ ಸೇವೆಯಿಂದ ಇಂದಲ್ಲ ನಾಳೆ ನಿವೃತ್ತಿಯಾಗಬಹುದು ಆದರೆ ಜನರ ಮನದಾಳದಲ್ಲಿ ಇವರ ದಾಖಲೆ ಶಾಶ್ವತ. ಇದು ನೂರಕ್ಕೆ ನೂರರಷ್ಟು ಸತ್ಯ. ಇವರು ಸಾಗಿ ಬಂದ ದಾರಿ ಏರಿದ ಎತ್ತರ ಇಡೀ ಸಮಾಜಕ್ಕೆ ಮಾದರಿ.