ಆದ್ಯೋತ್ ಸುದ್ದಿನಿಧಿ:
ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿನೂತನ ಯೋಜನೆಯಾದ ಉತ್ತರಕನ್ನಡ ಜಿಲ್ಲೆಯ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಉದ್ಘಾಟನಾ ಸಮಾರಂಭ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಗೂಗಲ್ ಮೀಟ್ ಆನ್‌ಲೈನ್ ವೇದಿಕೆಯಲ್ಲಿ ಜರುಗಿತು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೊಸ ನಾಮಾಂಕಿತರ ನಿರಂಕುಶ ಗೀತ ಎಂಬ ಕವನವನ್ನು ವಾಚನ ಮಾಡುವ ಮೂಲಕ ಸಮಾರಂಭ ಉದ್ಘಾಟಿಸಿ ಮಾತನಾಡಿ ಕಾವ್ಯಗಳ ಒಟ್ಟು ಮೌಲ್ಯ ಕಾವ್ಯದ ಆಶಯವು ಕೂಡಾ ಆಗಿರಬೇಕು. ಈ ನಿಟ್ಟಿನಲ್ಲಿ ಸದ್ಯ ಕಾವ್ಯ ಜಗತ್ತು ವೈಚಾರಿಕತೆಗೆ ತೆರೆದುಕೊಳ್ಳುವ ಮೂಲಕ ಸಾಮಾಜಿಕ ವೈರುಧ್ಯಗಳನ್ನು ಮೀರಿ ಸಾಮರಸ್ಯದ ನೆಲೆಗಳನ್ನು ಬಿತ್ತುವ ಕೆಲಸ ಮಾಡಬೇಕಿದೆ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಉತ್ತರ ಕನ್ನಡದ ಸದಸ್ಯ ಸಂಚಾಲಕರಾದ ಡಾ| ಮೈತ್ರೇಯಿಣಿ ಗದಿಗೆಪ್ಪಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಾಚೀನ ಕನ್ನಡ ಕಾವ್ಯದ ಸಾಮರಸ್ಯದ ನೆಲೆಗಳನ್ನು ಅಧುನೀಕೋತ್ತರ ಕಾಲಘಟ್ಟದಲ್ಲಿಯೂ ಮರು ಚಿಂತನೆಗೆ ಒಳಪಡಿಸಿ ತಲಸ್ಪರ್ಶಿಯಾಗಿ ಗ್ರಹಿಸಿಕೊಳ್ಳುವ ಅಗತ್ಯವಿದೆ ಎಂದರು
ಕಾವ್ಯಾನುಸಂಧಾನ ವಿಷಯ ಕುರಿತಾಗಿ ವಿಮರ್ಶಕ
ಕೆ.ಬಿ.ವೀರಲಿಂಗನಗೌಡರ್ ಮಾತನಾಡಿ, ಕಾವ್ಯಾನುಸಂಧಾನವು ಬುದ್ಧಿ ಭಾವಗಳ ವಿದ್ಯುದ್ದಾಲಿಂಗನ, ಈ ದಿಶೆಯಲ್ಲಿ ಕನ್ನಡ ಕಾವ್ಯಲೋಕ ಸಾಮರಸ್ಯದ ನೆಲೆಗಳನ್ನು ಅನುಸಂಧಾನಿಸುವ ಅವಶ್ಯಕತೆಯಿದೆ.ಬಡ ಮತ್ತು ಮಧ್ಯಮ ವರ್ಗದ ಹಾಗೂ ಕೂಲಿ ಕಾರ್ಮಿಕರ ಬದುಕು ಇಂದು ಚಿಂತಾಜನಕವಾಗಿದ್ದು ಸಾಹಿತಿಗಳಾದವರು ತಮ್ಮ ಸಶಕ್ತ ಕಾವ್ಯಗಳ ಮೂಲಕ ಆಳುವ ವರ್ಗವನ್ನು, ಅಧಿಕಾರಿ ಶಾಹಿಗಳನ್ನು ಸದಾ ಪ್ರಶ್ನಿಸುತ್ತ ಸಮಾಜೀಕರಣದ ಸಮಗ್ರ ಅಭಿವೃದ್ಧಿಗೆ ಇರುವ ಎಲ್ಲಾ ತೊಡಕುಗಳನ್ನು ನಿವಾರಿಸುವ ಹೊಣೆಗಾರಿಕೆ ಸಾಮ್ರಾಜ್ಯಶಾಹಿಗಿದೆ ಎಂಬುದನ್ನು ಎಚ್ಚರಿಸುತ್ತಿರಬೇಕು.ಬದುಕು ಬರಹ ಸಮಚಿತ್ತದಿಂದ ಮುನ್ನಡೆದಾಗ ಮಾತ್ರ ಕವಿಯ ಮತ್ತು ಸಾಹಿತ್ಯದ ನಿಜವಾದ ಆಶಯ ಈಡೇರಿಸಲು ಸಾಧ್ಯ.ಕವಿತೆಯೆಂದರೆ ಮಾತು ಮೌನಗಳಾಚೆ ಜೀವ ತಳೆಯುವ ದಿವ್ಯ ಚೇತನ. ಕವಿತೆಯೆಂದರೆ ನಮ್ಮ ಕಾಯಿಲೆಗೆ ನಾವೇ ಬರೆದುಕೊಳ್ಳುವ ಔಷಧಿಯ ರಸೀದಿಗಳು.ಕವಿತೆಯೆಂದರೆ ಕೆಲವರ ದೃಷ್ಟಿಯಿಂದ ಗುಂಪಿಗೆ ಸೇರದ ಪದ. ಮಡುಗಟ್ಟಿರುವ ಮೌಢ್ಯಗಳನ್ನು ಕುಟ್ಟಿ ಪುಡಿಮಾಡಿ ಹೊಸದೊಂದು ವ್ಯವಸ್ಥೆಗೆ ಮಾರ್ಗ ರೂಪಿಸುವುದೇ ಕವಿತೆ.ಕವಿತೆ ಎಂದರೆ ಎಲ್ಲವನ್ನು ಕಳಚಿಕೊಂಡು ಅಕ್ಕನಂತಾಗುವುದು ಎಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಅಕಾಡೆಮಿ ಸದಸ್ಯ ಹಾಗೂ ನಾಡಿನ ಖ್ಯಾತ ಕವಿ, ಅಂಕಣಕಾರ ಮಹದೇವ ಬಸರಕೋಡ ಕಾವ್ಯವೆಂದರೆ ಎನು? ಅದು ಹೇಗಿರಬೇಕು? ಕವಿ ಮತ್ತು ಕವಿತತ್ವ ಕವಿತ್ವಗಳು ಹೇಗೆ ಅನುಸಂಧಾನಕ್ಕೆ ಒಳಗಾಗುತ್ತವೆ ? ಎಂಬುದನ್ನು ಕವನವಾಚನಗಳ ಮುಖಾಂತರ ವಿವರಿಸಿದರು.
ಉತ್ತರಕನ್ನಡ ಜಿಲ್ಲೆಯ ಚಕೋರ ಸಂಚಾಲಕಿ ಶ್ರೀದೇವಿ ಕೆರೆಮನೆ ಸ್ವಾಗತಿಸಿದರು.ಈ ಕಾರ್ಯಕ್ರಮದ ತಾಂತ್ರಿಕ ನಿರ್ವಹಣೆ ಮತ್ತು ಸಂಯೋಜನೆಯನ್ನು ಚಕೋರ ಸಾಹಿತ್ಯ ವಿಚಾರ ವೇದಿಕೆ ಉತ್ತರಕನ್ನಡದ ಸಂಚಾಲಕಿ ಡಾ| ವಿಜಯಲಕ್ಷ್ಮಿ ದಾನರಡ್ಡಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಡಾ| ಸಿದ್ದರಾಮ ಹೊನ್ಕಲ್, ಪ್ರೊ| ಜಾಜಿ ದೇವೇಂದ್ರಪ್ಪ,ರಂಗಮ್ಮ ಹೊದೆಕಲ್, ಲೀಲಾ ಕಲಕೋಟಿ,ಡಾ| ಕೆ.ಆರ್ ಸಿದ್ದಗಂಗಮ್ಮ, ಡಾ|ಸಿದ್ದೇಶ್ವರಿ, ಜ್ಯೋತಿ ಬದಾಮಿ,ಹಮೀದಾ ಬೇಗಂ ದೇಸಾಯಿ,ವಿಜಯಕುಮಾರ ಇಟಗಿ, ಗಂಗಾಧರ ಕೊಳಗಿ, ಪ್ರೇಮಾ ತಾಸೀಲದಾರ್, ನೀಲಕಂಠ ಮಲಕಣ್ಣನವರ, ಪುಷ್ಪಾ ಮುರಗೋಡ ಮುಂತಾದವರು ಪಾಲ್ಗೊಂಡಿದ್ದರು.