ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ಸ್ಥಳೀಯ ಆಧಾರ್ ಸಂಸ್ಥೆ ಆಶ್ರಯದಲ್ಲಿ, ಮಂಗಳೂರಿನ ಒಮೇಗಾ ಆಸ್ಪತ್ರೆ ಹಾಗೂ ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ದಿ. ಡಿ.ಎನ್. ಶೇಟ್ ಸ್ಮರಣಾರ್ಥ ಬೃಹತ್ ಉಚಿತ ಹೃದಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.
ಶಿಬಿರ ಉದ್ಘಾಟಿಸಿದ ಶಾಸಕ ಭೀಮಣ್ಣ ನಾಯ್ಕ,
ನಮ್ಮ ಹಿರಿಯರು ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೆ ನೂರಾರು ವರ್ಷ ಜೀವನ ಸಾಗಿಸುತ್ತಿದ್ದರು. ಆದರೆ ಈಗಿನ ಕಾಲದ ಆಹಾರ ಪದ್ದತಿ ಹಾಗೂ ಜೀವನ ಶೈಲಿಯಿಂದ ಚಿಕ್ಕವಯಸ್ಸಿನಲ್ಲೆ ಹೃದಯ ಸಂಬAಧಿತ ಕಾಯಿಲೆ ಸಹಿತ ಅನೇಕ ಕಾಯಿಲೆಗಳಿಗೆ ಯುವಕರು ಬಲಿಯಾಗುತ್ತಿದ್ದಾರೆ.ನಾವು ಆರೋಗ್ಯವಂತರಾಗಿದ್ದರೂ ಸಹ ಇಂದಿನ ದಿನಗಳಲ್ಲಿ ಆರೋಗ್ಯ ತಪಾಸಣೆ ಮಾಡಬೇಕಾದ ಪರಿಸ್ಥಿತಿ ಇದೆ. ನಾವು ಕಂಡ ಕನಸು ನನಸಾಗುವ ಜೊತೆಗೆ ಗುರಿ ಮುಟ್ಟಬೇಕಾದರೇ ಎಲ್ಲರೂ ಆರೋಗ್ಯವಂತರಾಗಿರಬೇಕು. ಈ ಕಾರಣಕ್ಕಾಗಿ ಇಂತಹ ಆರೋಗ್ಯ ತಪಾಸಣಾ ಶಿಬಿರಗಳು ಸಹಕಾರಿಯಾಗಬಲ್ಲವು ಈ ಕಾರಣದಿಂದ ಎಲ್ಲರೂ ಈ ಆರೋಗ್ಯ ತಪಾಸಣಾ ಶಿಬಿರದ ಉಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಧಾರ್ ಸಂಸ್ಥೆ ಅಧ್ಯಕ್ಷ ನಾಗರಾಜ್ ನಾಯ್ಕ ಮಾಳ್ಕೋಡ್ ಮಾತನಾಡಿ, ಆಧಾರ್ ಸಂಸ್ಥೆ ಕಳೆದ ೧೫ ವರ್ಷಗಳಿಂದ ಈ ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಸ್ವಉದ್ಯೋಗಕ್ಕೆ ಸಂಬAಧಿಸಿದAತೆ ಕೆಲಸವನ್ನು ಮಾಡುತ್ತಿದ್ದು, ಕಳೆದ ೧೨ ವರ್ಷಗಳ ಹಿಂದೆ ಒಮೇಗಾ ಆಸ್ಪತ್ರೆ ಸಹಯೋಗದಲ್ಲಿ ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಆಶ್ರಯದಲ್ಲಿ ಹೃದಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು ಮತ್ತೊಮ್ಮೆ ನಮಗೆ ಈ ಅವಕಾಶ ಒದಗಿಬಂದಿದೆ. ಮುಂದಿನ ದಿನಗಳಲ್ಲಿ ಶಿರಸಿಯಲ್ಲಿಯೂ ಸಹ ಬೃಹತ್ ಆರೋಗ್ಯ ಶಿಬಿರವನ್ನು ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಹಮ್ಮಿಕೊಳ್ಳುವ ಆಲೋಚನೆಯಿದೆ ಎಂದು ಹೇಳಿದರು
ಉಪಸ್ಥಿತರಿದ್ದ ಹಿರಿಯ ಹೃದ್ರೋಗ ತಜ್ಞ ಕೆ. ಮುಕುಂದ ಮಾತನಾಡಿ, ಪ್ರಸ್ತುತ ದೇಶದಲ್ಲಿ ಹೃದಯಘಾತದ ಪ್ರಕರಣಗಳು ಸಾಕಷ್ಟು ಹೆಚ್ಚಾಗುತ್ತಿದ್ದು ಹೃದಯಾಘಾತ ಸಂಭವಿಸಿದರೆ ಪ್ರಾಥಮಿಕವಾಗಿ ನೀಡುವ ಔಷಧಿಗಳ ಲಭ್ಯತೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯ ಕೊರತೆ ಇರುವ ಬಗ್ಗೆ ತಿಳಿಸಿದ ಅವರು ಈ ವೇಳೆ ಹೃದಯಾಘಾತ ಸಂಭವಿಸಲು ಕಾರಣಗಳು ಅದಕ್ಕಿರುವ ಮುಂಜಾಗ್ರತ ಪರೀಕ್ಷೆಗಳು ಹಾಗೂ ಮಂಗಳೂರು ಒಮೇಗಾ ಆಸ್ಪತ್ರೆಯಲ್ಲಿ ಇದಕ್ಕಿರುವ ಅತ್ಯಾಧುನಿಕ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಎಮ್ ಆರ್ ಕುಲಕರ್ಣಿ, ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಅಮಿತ್ ಕಿರಣ್, ಡಾ. ಅಭಿಜಿತ್ ಪಾಟೀಲ್, ಪ. ಪಂ. ಸದಸ್ಯ ನಂದನ್ ಬೋರಕರ್, ಆಧಾರ್ ಸಂಸ್ಥೆ ಉಪಾಧ್ಯಕ್ಷ ಬೈಜು ಜೋಸೆಫ್, ಶಿಬಿರದ ಸಂಯೋಜಕ ಧರ್ಮ ಅಂಬಿಗ, ಮಂಗಳೂರು ಒಮೇಗಾ ಆಸ್ಪತ್ರೆ ಎಚ್ ಆರ್ ನಾಗರಾಜ್ ಟಿ. ಹಾಗೂ ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಪಿ ಆರ್ ಓ ಬಾಲಕೃಷ್ಣ ಮುಟ್ಟಂ ಹಾಜರಿದ್ದರು.
ಕಾರ್ಯಕ್ರಮವನ್ನು ಆಧಾರ್ ಸಂಸ್ಥೆ ಸಂಯೋಜಕ ಸುರೇಶ್ ಮಡಿವಾಳ ಕಡಕೇರಿ ನಿರೂಪಿಸಿದರು. ಸಂಸ್ಥೆಯ ನಿರ್ದೇಶಕಿ ಪುಷ್ಪಲತಾ ನಾಯ್ಕ ಸ್ವಾಗತಿಸಿದರು. ದಿ. ಡಿ ಎನ್ ಶೇಟ್ ಕುಟುಂಬಸ್ಥ ಪ್ರಶಾಂತ್ ಶೇಟ್ ವಂದಿಸಿದರು.
ಕು. ಸಾಯಿ ಸ್ಫೂರ್ತಿ ಹಾಗೂ ಪ್ರಾಚಿ ಶೇಟ್ ಪ್ರಾರ್ಥಿಸಿದರು.