ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡಜಿಲ್ಲೆ ಸಿದ್ದಾಪುರ ತಾಲೂಕಿನ ಶ್ರೀಮನ್ನೆಲೆಮಾವಿನಮಠದ ನೂತನ ಶ್ರೀಮನ್ಮಹಾರಥ ಸಮರ್ಪಣಾ ಮಹೋತ್ಸವದ ಕಾರ್ಯಕ್ರಮ ಬುಧವಾರ ನಡೆಯಿತು.
ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವಹಿಸಿದ್ದ ಶೃಂಗೇರಿ ಮಠದ ಶ್ರೀವಿದುಶೇಖರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ,ಹೊಸದಾಗಿ ನಾವು ಇನ್ನೇನೋ ಆರಂಭ ಮಾಡಬೇಕು ಅಂತ ಇಲ್ಲ, ಹಿಂದಿನಿಂದ ನಡೆಸಿಕೊಂಡು ಬಂದಿರುವ ಆಚರಣೆಯನ್ನು ಮಾಡಿದರೂ ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬಹುದು, ಪುಣ್ಯಪ್ರಾಪ್ತಿ ಮಾಡಿಕೊಳ್ಳಬಹುದು.ಹಳೆಯದನ್ನು ಬಿಡದೆ, ಹೊಸದನ್ನು ಆರಂಭಮಾಡುವ ಸಾಮರ್ಥ್ಯ ಇದ್ದರೆ ಮಾತ್ರ ಮಾಡಬಹುದು ಎಲ್ಲಾ ಆಚರಣೆಗಳಿಗೂ ವೈಜ್ಞಾನಿಕ ಪುರಾವೆ ನೀಡಲು ಸಾಧ್ಯವಿಲ್ಲ, ಹಾಗೆಯೇ ವೈಜ್ಞಾನಿಕ ಪುರಾವೆ ನೀಡಲು ಸಾಧ್ಯವಿಲ್ಲದ ಸಂಗತಿಗಳೆಲ್ಲ ಮೂಢನಂಬಿಕೆ ಅಂತ ಅರ್ಥವಲ್ಲ ಎಂದರು.
ಅನೇಕರಿಗೆ ಇಂತಹ ಭಾವನೆ ಇದೆ, ನಮಗೆ ಅರ್ಥವಾಗದ ವಿಷಯಗಳನ್ನೆಲ್ಲ ಮೂಢನಂಬಿಕೆ ಅಂತ ತೀರ್ಮಾನ ಮಾಡುವ ಜನ ಇದ್ದಾರೆ ನನಗೆ ತಿಳಿದಿರುವುದು ಮಾತ್ರ ಸರಿ, ಉಳಿದದ್ದೆಲ್ಲಾ ತಪ್ಪು ಎನ್ನುವ ವಾದ ಸರಿಯಲ್ಲ
ಧಾರ್ಮಿಕ ಆಚರಣೆಯಿಂದ ಮಾತ್ರ ಜೀವನವನ್ನು ಸಾರ್ಥಕ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಅವಕಾಶ ಮನುಷ್ಯನಿಗೆ ಮಾತ್ರ ಪ್ರಾಪ್ತವಾಗಿದೆ.
ಜಗದ್ಗುರು ಆದಿ ಶಂಕರರು ಚತುರಾಮ್ನಾಯ ಪೀಠ ಸ್ಥಾಪನೆ ಮಾಡಿದರು, ನಂತರ ಅನೇಕ ಶಂಕರಪೀಠಗಳ ಸ್ಥಾಪನೆ ಆಗಿರುವುದು ಧರ್ಮಾಚರಣೆಗೆ ಪ್ರಾಧಾನ್ಯತೆ ಕೊಡಲು ಸಾಧ್ಯವಾಯಿತು ಶ್ರೀಮಠದ ಪೀಠಾಧಿಪತಿಗಳಾದ ಮಾಧವಾನಂದ ಭಾರತೀ ಸ್ವಾಮಿಗಳವರು ಸಂಕಲ್ಪ ಮಾಡಿ ಶಿಷ್ಯರಿಗೆ ಅಪ್ಪಣೆ ಮಾಡಿದಂತೆ, ಎಲ್ಲಾ ಭಕ್ತರು ಸಂತೋಷವಾಗಿ ಹಾಗೂ ಉತ್ಸಾಹದಿಂದ ಈ ಕಾರ್ಯದಲ್ಲಿ ಭಾಗವಹಿಸಿ, ಸುಂದರವಾದ ರಥವು ನಿರ್ಮಾಣವಾಗಿದೆ. ವಿವಿಧ ಮೂರ್ತಿಗಳನ್ನು ಮತ್ತು ಸಂಪೂರ್ಣ ರಾಮಾಯಣದ ಘಟನೆಗಳನ್ನು ನಾವು ಅಲ್ಲಿ ನೋಡಬಹುದು. ಶ್ರೀ ಲಕ್ಷ್ಮೀನೃಸಿಂಹ ದೇವರ ನೂತನ ರಥವನ್ನು ಭಗವಂತನಿಗೆ ಅರ್ಪಣೆ ಮಾಡಿ, ಈ ಸಂದರ್ಭದಲ್ಲಿ ವಿಶೇಷ ರಥೋತ್ಸವವನ್ನು ಆಚರಣೆ ಮಾಡಿರುವುದು ಅತ್ಯಂತ ಸಂತೋಷಕರವಾದ ವಿಷಯವಾಗಿದೆ.
ಭಗವಂತನ ನಾನಾ ರೂಪಗಳನ್ನು ಈ ರಥದಲ್ಲಿ ನೋಡಬಹುದು ಹಾಗೂ ನಮ್ಮ ಧರ್ಮದ ಪುನರುಜ್ಜೀವನ ಮಾಡಿದ ಜಗದ್ಗುರು ಶ್ರೀ ಶ್ರೀ ಆದಿ ಶಂಕರ ಭಗವತ್ಪಾದಾಚಾರ್ಯರ ಮೂರ್ತಿಯನ್ನು ನಾವು ಇಲ್ಲಿ ನೋಡಬಹುದು ಹೀಗೆ ಸುಂದರವಾಗಿ ನಿರ್ಮಾಣವಾದ ನೂತನ ಶ್ರೀಮನ್ಮಹಾಸ್ಯಂದನದಲ್ಲಿ ಇವತ್ತು ಭಗವಂತನು ರಥಾರೂಢರಾಗಿರುವುದು, ಈ ಸುಸಂದರ್ಭದಲ್ಲಿ ರಥೋತ್ಸವ ಪ್ರಾರಂಭವಾಗಿರುವುದು ಹಾಗೂ ಮುಂದೆ ದೀರ್ಘಕಾಲ ಶ್ರೀದೇವರಿಗೆ ಈ ರಥದಲ್ಲಿ ರಥೋತ್ಸವ ನಡೆಯುವುದು ಸಂತೋಷದ ವಿಚಾರ ಎಂದರು.
ಶ್ರೀಮನ್ನೆಲೆಮಾವಿನ ಮಠದ ಶ್ರೀಮಾಧವಾನಂದ ಭಾರತೀ ಸ್ವಾಮಿಜಿಯವರು ಆಶೀರ್ವಚನ ನೀಡಿ, ರಥ ಸಮರ್ಪಣೆ ಎನ್ನುವುದು ಅತ್ಯಂತ ವಿಶಿಷ್ಟವಾದದ್ದು, ದೇವರನ್ನು ಹತ್ತಿರದಿಂದ ನೋಡಲು ಸಾಧ್ಯವಾಗುವುದು ಶ್ರೀ ದೇವರು ರಥಾರೂಢನಾದಾಗ ಮಾತ್ರ. ಮನುಷ್ಯ ಜನ್ಮ ಶ್ರೇಷ್ಠವಾದದ್ದು, ಅದನ್ನು ಸಾರ್ಥಕ ಮಾಡಿಕೊಳ್ಳಲು ನಾವು ಧರ್ಮಮಾರ್ಗದಲ್ಲಿ ನಡೆಯಬೇಕು ಧರ್ಮಮಾರ್ಗದಲ್ಲಿ ಸಾಗಿದಾಗ ಮಾತ್ರ ಜೀವನವನ್ನು ಉತ್ತಮ ಪಡಿಸಿಕೊಳ್ಳಲು ಸಾಧ್ಯ, ಅದರಿಂದ ಒಳ್ಳೆಯದು ಎನ್ನುವುದು ಪ್ರಾಪ್ತಿಯಾಗುತ್ತದೆ ಎಂದರು.
ರಥಸಮರ್ಪಣೆ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಗಣಪತಿ ಪೂಜೆ, ನಾಂದಿ ಪುಣ್ಯಾಹ, ನವಗ್ರಹ ಪೂರ್ವಕ ವಾಸ್ತುಹೋಮ, ರಥಾಧಿವಾಸ ಹೋಮ, ರಥಾಧಿವಾಸ ಪೂಜೆ, ಕಲಶಾಭಿಷೇಕ, ಶ್ರೀ ಲಕ್ಷ್ಮೀನೃಸಿಂಹ ದೇವರ ಪ್ರಾರ್ಥನೆ, ಬಲಿ, ರಥಾರೋಹಣ ನೆರವೇರಿತು. ರಥಾರೂಢ ಶ್ರೀ ಲಕ್ಷ್ಮೀನೃಸಿಂಹ ದೇವರಿಗೆ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳು ಪೂಜೆ ಸಲ್ಲಿಸಿದರು. ಸಪ್ತಗ್ರಾಮದ ಸಾಮವೇದಿ ವೈದಿಕರಿಂದ ಸಾಮವೇದ ಪಾರಾಯಣ, ವೇದ ಪಂಡಿತರಿAದ ಯಜುರ್ವೇದ ಪಾರಾಯಣವು ನಡೆಯಿತು.