ಸಿದ್ದಾಪುರದಲ್ಲಿ ಧನ್ವಂತರಿ ಮೆಡಿಕಲ್ ಕಾಲೇಜ್ ರಜತಮಹೋತ್ಸವ ಕಾರ್ಯಕ್ರಮ: ಮುಂದಿನ ವರ್ಷ ಮಂಗನಕಾಯಿಲೆಗೆ ಲಸಿಕೆ– ದಿನೇಶ ಗುಂಡೂರಾವ್


ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಧನ್ವಂತರಿ ಆಯುರ್ವೇದ ಮೆಡಿಕಲ್ ಕಾಲೇಜ್,ಹಾಸ್ಪಿಟಲ್,ಹಾಗೂ ರಿಸರ್ಚ ಸೆಂಟರ್‌ನ ರಜತಮಹೋತ್ಸವ ಕಾರ್ಯಕ್ರಮ ಹಾಗೂ ನೂತನ ಹಾಸ್ಪಿಟಲ್ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಆರೋಗ್ಯ ಸಚೀವ ದಿನೇಶ ಗುಂಡೂರಾವ್ ಮಾತನಾಡಿ,ಆರೋಗ್ಯ ಕ್ಷೇತ್ರವು ತುಂಬಾ ಸಂಕೀರ್ಣವಾದ ಕ್ಷೇತ್ರವಾಗಿದೆ. ಇದು ಸೇವೆ ನೀಡುವ ಕ್ಷೇತ್ರವಾಗಿದ್ದು ಇಲ್ಲಿ ಕೆಲಸ ಮಾಡುವವರಿಗೆ ಸೇವಾಮನೋಭಾವ ಇರಬೇಕು.ಆಯುರ್ವೇದ, ಸಿದ್ಧ, ಯುನಾನಿ ಗಳು ಭಾರತೀಯ ವೈದ್ಯಕೀಯ ಪದ್ಧತಿಗಳು. ಅಲೋಪತಿ ರೋಗಿಗಳಾದಮೇಲೆ ಚಿಕಿತ್ಸೆ ಪಡೆಯುವ ವಿಧಾನ. ಆದರೆ ನ್ಯಾಚುರೋಪತಿ ರೋಗ ಬರದಂತೆ ಜೀವನ ನಡೆಸುವ ವಿಧಾನ. ನಮ್ಮ ಆಹಾರ ಪದ್ಧತಿ ಮತ್ತು ಜೀವನ ಶೈಲಿಯಿಂದಾಗಿ ಇಂದು ರೋಗಗಳು ಹೆಚ್ಚುತ್ತಿವೆ. ಇವುಗಳನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ರಜತಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಆರೋಗ್ಯ ಸಚಿವರು ಜಿಲ್ಲೆಗೆ ಭೇಟಿ ನೀಡಿರುವುದರಿಂದ ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಕೊಡುಗೆಗಳು ಸಿಗಲಿ ಎಂದು ಆಶಿಸುತ್ತೇನೆ. ಸಾಮಾಜಿಕ ಕ್ಷೇತ್ರದಲ್ಲಿ ದೂರದೃಷ್ಟಿಯ ಕನಸನ್ನು ಕಂಡು ಅದನ್ನು ನನಸು ಮಾಡುವತ್ತ ಗಣೇಶ ಹೆಗಡೆಯವರ ಶ್ರಮ ಶ್ಲಾಘನೀಯ. ಜಿಲ್ಲೆಯಲ್ಲಿ ಇರುವ ಮೂರು ಮೆಡಿಕಲ್ ಕಾಲೇಜುಗಳಲ್ಲಿ ೨ ಕಾಲೇಜುಗಳು ನಮ್ಮ ತಾಲ್ಲೂಕಿನಲ್ಲಿರುವ ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯ. ಪಶ್ಚಿಮ ಘಟ್ಟಗಳು ಆಯುರ್ವೇದದ ತವರೂರಾಗಿದೆ. ಈ ಭಾಗದ ನಾಟಿ ವೈದ್ಯರು ಸಾಕಷ್ಟು ಜನರಿಗೆ ಅನುಕೂಲ ಮಾಡುತ್ತಿದ್ದಾರೆ ಸರ್ಕಾರ ನಾಟಿ ವೈದ್ಯರನ್ನು ಗುರುತಿಸಿ ಅವರಿಗೆ ಬೆಂಬಲ ನೀಡುವ ಕೆಲಸವಾಗಬೇಕು. ಮಂಗನ ಕಾಯಿಲೆ ಈ ಭಾಗದಲ್ಲಿ ಇದೆ. ಹಿಂದೆ ಪರಿಹಾರ ಇತ್ತು. ಆದರೆ ಈಗ ಇಲ್ಲ. ಪರಿಹಾರ ಬರುವಂತಾಗಬೇಕು. ಪರೀಕ್ಷಾ ಕೇಂದ್ರ ಆದಷ್ಟು ಬೇಗ ಕಾರ್ಯನಿರ್ವಹಿಸುವಂತೆ ಆಗಬೇಕು. ಜಿಲ್ಲೆಯಲ್ಲಿ ಸುಪರ್ ಸ್ಪೆಶಾಲಿಟಿ ಆಸ್ಪತ್ರೆ ಬೇಕು ಎಂಬ ಕೂಗು ಮೊದಲಿಂದಲೂ ಇದೆ. ಅದನ್ನು ಮಾಡಲು ಪ್ರಯತ್ನ ಮುಂದುವರಿಯಬೇಕು ಎಂದು ಆಗ್ರಹಿಸಿದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿAದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಾಮಾಜಿಕ ಕಳಕಳಿ ಹೊಂದಿ ಸಮಾಜ ಸೇವೆಗೆ ನಿಮನ್ನು ಸಿದ್ಧಗೊಳಿಸಿಕೊಳ್ಳಬೇಕು. ಅಂತೆಯೇ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ಸಿದ್ಧರಾಗಿ ಗ್ರಾಮೀಣ ಭಾಗದ ಜನರಿಗೆ ಸ್ಪಂದಿಸುವ ಕೆಲಸವಾಗಬೇಕು. ಎಂ ಬಿ ಬಿ ಎಸ್ ಕೋರ್ಸ್ ಗೆ ಶುಲ್ಕ ದುಬಾರಿಯಾಗಿದ್ದು ಬಡವರಿಗೆ ಶುಲ್ಕ ಪಾವತಿ ಹೊರೆಯಾಗುತ್ತದೆ. ಶುಲ್ಕ ಕಡಿಮೆಯಾಗದಿದ್ದರೆ ಮೆಡಿಕಲ್ ಸೀಟುಗಳು ಕೇವಲ ಹಣವಂತರ ಮಕ್ಕಳಿಗೆ ಸೀಮಿತವಾಗುತ್ತದೆ. ಆದ್ದರಿಂದ ಆಸಕ್ತಿ ಇರುವ ಎಲ್ಲರಿಗೂ ಮೆಡಿಕಲ್ ಸೀಟು ದೊರಕುವಂತಾಗಬೇಕು ಎಂದರು.

ಸಭೆಯಲ್ಲಿ ಮಹಾವಿದ್ಯಾಲಯದ ಕಟ್ಟಡ ವಿನ್ಯಾಸಕಾರ ಆರ್ ಕೆ ಹೆಗಡೆ, ಹಾಗೂ ನಿವೃತ್ತರಾಗಿರುವ ಪ್ರಾಂಶುಪಾಲರನ್ನು ಗೌರವಿಸಲಾಯಿತು.
ಶಿಕ್ಷಣ ಪ್ರಸಾರಕ ಸಮಿತಿಯ ಅಧ್ಯಕ್ಷ ಶಶಿಭೂಷಣ ಹೆಗಡೆ ದೊಡ್ಮನೆ ಸಭೆಯ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ನಿರ್ದೇಶಕ ಜಿ ಕೆ ಹೆಗಡೆ ಗೊಳಗೋಡು ಕಾಲೇಜು ನಡೆದು ಬಂದ ಹಾದಿಯ ಕುರಿತು ಮಾತನಾಡಿದರು.ಧನ್ವಂತರಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ರೂಪಾ ಭಟ್ಟ ಸ್ವಾಗತಿಸಿದರು. ನ್ಯಾಚುರೋಪತಿ ವಿಭಾಗದ ಪ್ರಾಚಾರ್ಯೆ ಡಾ. ವಾಣಿ ಜೀರಗಲ್ ವಂದಿಸಿದರು.ಡಾ. ಸ್ನೇಹಾ ಹೆಗಡೆ ಮತ್ತು ಟಿ ಎನ್ ಭಟ್ಟ ನಿರೂಪಿಸಿದರು.

——-
ಜನರ ಆರೋಗ್ಯದ ಬಗ್ಗೆ ನಿಗಾವಹಿಸಲು ರಾಜ್ಯಸರಕಾರ “ಗೃಹ ಆರೋಗ್ಯ”ಎಂಬ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗುತ್ತಿದೆ. ವೈದ್ಯರು,ವೈದ್ಯಕೀಯ ಸಿಬ್ಬಂದಿಗಳು ಮನೆ ಮನೆಗೂ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ನಡೆಸಿ ಬಿ.ಪಿ. ಹಾಗೂ ಶುಗರ್ ಪರೀಕ್ಷೆಯನ್ನು ಮಾಡಲಾಗುವುದು ಇಂತಹ ರೋಗ ಇರುವವರಿಗೆ ಪ್ರತಿದಿನ ಉಚಿತ ಅಗತ್ಯ ಔಷಧಿಗಳನ್ನು ನೀಡಲು ಚಿಂತಿಸಲಾಗಿದೆ. ಇದರಿಂದ ಜನರ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.ಶಿರಸಿಯ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆ ದರ್ಜೆಗೆ ಏರಿಸಲು ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು ೨೫೦ ಹಾಸಿಗೆಯ ಆಸ್ಪತ್ರೆಗೆ ಅವಶ್ಯಕವಿರುವ ಸಿಬ್ಬಂದಿಗಳನ್ನು ಉಪಕರಣವನ್ನು ನೀಡಲಾಗುವುದು —-ದಿನೇಶ ಗುಂಡೂರಾವ್

——-
ಆಶಾಕಾರ್ಯಕರ್ತರು ಆರೋಗ್ಯ ಇಲಾಖೆಯ ಆಧಾರಸ್ತಂಭಗಳಾಗಿದ್ದಾರೆ ಅವರಿಂದ ಅನೇಕ ರೋಗಗಳ ಗುರುತಿಸುವುದರಲ್ಲಿ ಸಹಾಯವಾಗುತ್ತಿದೆ ಕೇಂದ್ರ ಸರಕಾರ ಆರೋಗ್ಯ ಕ್ಷೇತ್ರದಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ ಇದರ ಪ್ರಯೋಜನ ಜನರಿಗೆ ತಲುಪಲು ರಾಜ್ಯ ಸರಕಾರ ಕೈಜೋಡಿಸಬೇಕು-ವಿಶ್ವೇಶ್ವರ ಹೆಗಡೆ ಕಾಗೇರಿ

——
ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ದಿನೇಶ ಗುಂಡೂರಾವ್,ಮಂಗನಕಾಯಿಲೆಗೆ ಹಿಂದೆ ನಿಡುತ್ತಿದ್ದ ಲಸಿಕೆಯಿಂದ ಹೆಚ್ಚಿನ ಪ್ರಯೋಜನವಾಗಿಲ್ಲ ಇದರಿಂದ ಹೊಸಲಸಿಕೆ ತಯಾರಿಸುವ ಬಗ್ಗೆ ಮಾತುಕತೆ ನಡೆಸಿ ಅನುದಾನವನ್ನು ನೀಡಲಾಗಿದೆ ಮುಂದಿನ ವರ್ಷ ಲಸಿಕೆ ದೊರಕಲಿದೆ.ಸರಕಾರ ಮಂಗನಕಾಯಿಲೆಯ ಲಸಿಕೆಯ ವಿಚಾರದಲ್ಲಿ ಸರಕಾರ ನಿರ್ಲಕ್ಷ
ವಹಿಸಿಲ್ಲ ಲಸಿಕೆ ಸಲವಾಗಿ ನಾನು ಸಹ ದೆಹಲಿಗೆ ಹೋಗಿದ್ದೆನೆ ಕೇಂದ್ರಸರಕಾರದ ಜೊತೆಗೆ ಮಾತನಾಡಿದ್ದೆನೆ ಹೈದರಾಬಾದ್ ಸಂಸ್ಥೆಯ ಜೊತೆ ಮಾತುಕತೆ ಮಾಡಲಾಗಿದೆ ಅವರಿಗೆ ದುಡ್ಡು ಸಹ ನೀಡಲಾಗಿದೆ. ಈಗಾಗಲೇ ಲಸಿಕೆ ತಯಾರಿಯ ಬಗ್ಗೆ ಅವರು ತಯಾರಿ ನಡೆಸುತ್ತಿದ್ದಾರೆ. ಮುಂದಿನ ವರ್ಷದಲ್ಲಿ ಲಸಿಕೆ ದೊರೆಯಲಿದೆ. ಮಂಗನಕಾಯಿಲೆಯ ಕುರಿತು ಡಿಸಂಬರ್‌ನಲ್ಲೆ ಸಭೆ ನಡೆಸಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಕುರಿತು ಮಾತನಾಡಿದ್ದೆನೆ ಅವಶ್ಯಕತೆಯುಳ್ಳ ಸೌಲಭ್ಯ ನೀಡುವಂತೆ ಸೂಚಿಸಿದ್ದೆನೆ.ಮಂಗನಕಾಯಿಲೆಯಿಮದ ಮೃತಪಟ್ಟವರಿಗೆ ಒಮ್ಮೆ ಮಾತ್ರ ಪರಿಹಾರ ನೀಡಲಾಗಿದೆ ಅದು ಯಾವ ರೀತಿ ನೀಡಿದ್ದಾರೋ ಗೊತ್ತಿಲ್ಲ ಪರಿಶೀಲನೆ ಮಾಡುತ್ತೆನೆ ಏಕೆಂದರೆ ಹಿಂದೆ ಯಾವಾಗಲೂ ಇಂತಹ ಪ್ರಕರಣಗಳಿಗೆ ಪರಿಹಾರ ನೀಡಿಲ್ಲ ಪ್ರಕೃತಿ ವಿಕೋಪ ಕೆಲವು ಕಾಯ್ದೆ ಅಡಿಯಲ್ಲಿ ಪರಿಹಾರ ಕೊಡಲು ಅವಕಾಶ ಇರುತ್ತದೆ ಆನೆ ಹಾವಳಿ ಮತ್ತು ಪ್ರಾಣಿಗಳಿಂದಾಗುವಂತಹ ಹಾವಳಿ ಇವೆಲ್ಲವೂ ಕಾಯ್ದೆ ಅಡಿಯಲ್ಲಿ ಬರುತ್ತದೆ ಮಂಗನ ಕಾಯಿಲೆ ಯಾವುದೇ ಕಾಯ್ದೆ ಅಡಿಯಲ್ಲಿ ಬರುವುದಿಲ್ಲ ವಿವೇಚನೆಯ ಮೇಲೆ ಯಾವುದೋ ಒಂದು ವರ್ಷ ಪರಿಹಾರ ಕೊಟ್ಟಿದ್ದಾರೆ. ಆದರೂ ಅದನ್ನು ಪರಿಶೀಲನೆ ಮಾಡಿ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ ಎಂದರು
ಜನಿವಾರ ತೆಗೆಯಿಸಿರುವ ಪ್ರಕರಣದ ಬಗ್ಗೆ ನಾವೇಲ್ಲರೂ
ಖಂಡಿಸಿದ್ದೇವೆ ಇಂತಹ ಕೆಲಸವನ್ನು ಯಾರೂ ಮಾಡಬಾರದು. ಇದು ಎಲ್ಲರಿಗೂ ಕೆಟ್ಟ ಹೆಸರನ್ನು ತರುತ್ತದೆ.ಉನ್ನತ ಶಿಕ್ಷಣ ಸಚೀವರು ವಿದ್ಯಾರ್ಥಿಗಳಿಗೆ ಅನ್ಯಾಯವಾಗದರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಎಂದಿದ್ದಾರೆ ಪೂರ್ವಾಗ್ರಹ ಪೀಡಿತ ಮನಸ್ಥಿತಿಯುಳ್ಳವರು ಇಂತಹ ಕೆಲಸ ಮಾಡುತ್ತಾರೆ ಇದನ್ನು ನಾನು ಖಂಡಿಸುತ್ತೇನೆ ಎಂದು ದಿನೇಶ ಗುಂಡೂರಾವ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

About the author

Adyot

Leave a Comment