ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಶ್ರೀಮನ್ನೆಲೆಮಾವುಮಠದ 26ನೇ ಫೀಠಾಧಿಪತಿಯಾಗಿ ಶ್ರೀಮಾಧವನಂದ ಭಾರತೀ ಸ್ವಾಮೀಜಿ ಸೋಮವಾರ ಅನುಗ್ರಹಿತರಾದರು.
ಶೃಂಗೇರಿಯ ನರಸಿಂಹವನದಲ್ಲಿ ಜಗದ್ಗುರು ಶ್ರೀಭಾರತೀ ತೀರ್ಥ ಮಹಾಸನ್ನಿಧಾನಂಗಳ ಹಾಗೂ ಶ್ರೀವಿಧುಶೇಖರ ಭಾರತೀ ಸನ್ನಿಧಾನಂಗಳ ಆಶೀರ್ವಾದದೊಂದಿಗೆ ಶ್ರೀಶಿವಗಂಗಾ ಮಠದ ಶ್ರೀ ಪುರುಷೋತ್ತಮ ಭಾರತೀ ಸ್ವಾಮೀಜಿಯವರು ನೂತನ ಪೀಠಾದಿಪತಿಗಳಿಗೆ ಸನ್ಯಾಸ ದೀಕ್ಷೆಯನ್ನು ನೀಡಿ ಶ್ರೀಮಾಧವಾನಂದ ಭಾರತೀ ಎಂಬ ಯೋಗಪಟ್ಟವನ್ನು ನೀಡಿ ಅನುಗ್ರಹಿಸಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಜಗದ್ಗುರು ಶ್ರೀವಿಧುಶೇಖರ ಭಾರತೀ ಸ್ವಾಮೀಜಿ,ಸನಾತನ ಧರ್ಮದಲ್ಲಿ ಸನ್ಯಾಸ ಧರ್ಮವೇ ಶ್ರೇಷ್ಠವಾದುದು. ಸನ್ಯಾಸ ಧರ್ಮವನ್ನು ನಿಯುಕ್ತ್ತಿಗೊಳಿಸಿದವರು ಜಗದ್ಗುರು ಶಂಕರಾಚಾರ್ಯರು ಅವರು ಸನ್ಯಾಸಿಗಳಿಗೆ ಜಗದ್ಗುರುಗಳು. ಅವರು ಸನ್ಯಾಸಿಗಳಿಗೆ ನಿಯಮವನ್ನು ರೂಪಿಸಿದರು.ಸನ್ಯಾಸ ಎನ್ನುವುದು ಕರ್ಮತ್ಯಾಗಮಾಡುವುದು,ಕಾವಿಬಟ್ಟೆ ಹಾಕುವುದು ಮಾತ್ರವಲ್ಲ. ಕರ್ಮವನ್ನು ಮಾಡಿ ಯೋಗ್ಯತೆಯನ್ನು ಪಡೆದು ನಂತರ ಕರ್ಮವನ್ನು ಬಿಟ್ಟು ಸನ್ಯಾಸವನ್ನು ಸ್ವೀಕರಿಸಬೇಕು ಮನಸ್ಸಿನ ಎಲ್ಲಾ ಕಲ್ಮಷವನ್ನು,ರಾಗ-ದ್ವೇಷವನ್ನು ತ್ಯಜಿಸಬೇಕು. ಸನ್ಯಾಸಿಯಾದವರು ಯಾವ ರೀತಿ ಇರಬೇಕು ಹೇಗೆ ಇರಬೇಕು ಎನ್ನುವುದನ್ನು ಶಂಕರಾಚಾರ್ಯರು ತಿಳಿಸಿದ್ದಾರೆ.
ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸಿ ನಾಲ್ಕು ದಿಕ್ಕಿಗಳಿಗೆ ಮಠವನ್ನು ಸ್ಥಾಪಿಸಿ ಅಲ್ಲಿ ಯತಿಗಳನ್ನು ನಿಯಮಿಸಿದರು. ಅವರು ಧರ್ಮ ಪ್ರಚಾರ ಮಾಡುವಂತೆ ನಿರ್ದೇಶಿಸಿದರು. ಮಠಾಧಿಪತಿಯಾದವರು ಮಠದಪರಂಪರೆಯನ್ನು ಬೆಳೆಸಬೇಕು. ಶಿಷ್ಯಂದಿರ ಆತ್ಮೋದ್ದಾರವನ್ನು ಮಾಡಬೇಕು ಶ್ರೀಮನ್ನೆಲೆಮಾವು ಮಠದ ಹಾಗೂ ಶೃಂಗೇರಿ ಶಾರದಾ ಪೀಠದ ಒಡನಾಟ ಹಿಂದಿನ ಪೂಜ್ಯ ಪೀಠಾಧಿಪತಿಗಳ ಕಾಲದಿಂದಲೂ ಇದೆ, ನೆಲೆಮಾವಿನ ನೂತನ ಯತಿಗಳಾದ ಮಾಧವಾನಂದ ಭಾರತೀ ಶ್ರೀಗಳು ಅಧ್ಯಯನ ಹಾಗೂ ಅವರ ಅನುಷ್ಠಾನದ ವಿಶೇಷ ಕಾರಣಕ್ಕೆ ನಮಗೆ ಪ್ರೀತಿಪಾತ್ರರಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಪುರುಷೋತ್ತಮ ಭಾರತೀ ಸ್ವಾಮೀಜಿ,ಶ್ರೀಮಾಧವಾನಂದ ಭಾರತೀ ಸ್ವಾಮೀಜಿ,ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,ಮಠದ ಅಧ್ಯಕ್ಷ ಜಿ.ಎಂ.ಹೆಗಡೆ ಹೆಗ್ನೂರು ಉಪಸ್ಥಿತರಿದ್ದರು.
ಸೋಮವಾರ ಬೆಳಿಗ್ಗೆ 7 ಗಂಟೆಯಿಂದಲೇ ಸನ್ಯಾಸ ದೀಕ್ಷೆಯ ಕಾರ್ಯಕ್ರಮ ಪ್ರಾರಂಭವಾಯಿತು. ಪುರುಷಸೂಕ್ತ ಹೋಮ,ವಿರಜಾ ಹೋಮ,ನದಿಯಲ್ಲಿ ಪ್ರೈಷೋಚ್ಚಾರಣೆ,ಸಂನ್ಯಾಸ,ದಂಡಕಮಂಡಲು ಪರಿಗ್ರಹಣ, ಮುಂತಾದ ಕಾರ್ಯಕ್ರಮಗಳು ನಡೆದವು. 10 ಗಂಟೆಯಿಂದ 10-20ರ ಮೀನಲಗ್ನದಲ್ಲಿ ನರಸಿಂಹವನದಲ್ಲಿರುವ ಅಧಿಷ್ಠಾನಂದಿರದಲ್ಲಿ ಪ್ರಣವ ಮಹಾವಾಕ್ಯೋಪದೇಶ ಮಾಡಲಾಯಿತು. ನಂತರ ಶ್ರೀಮಾಧವಾನಂದ ಭಾರತೀ ಎಂದು ಯೋಗಪಟ್ಟವನ್ನು ನೀಡಲಾಯಿತು.
ಮುಂದಿನ ಒಂದೆರಡು ತಿಂಗಳಲ್ಲಿ ಶ್ರೀ ಮಾಧವಾನಂದ ಭಾರತೀಯವರು ಶ್ರೀಮನ್ನೆಲೆಮಾವು ಮಠಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ