
strong>ಆದ್ಯೋತ್ ಸುದ್ದಿನಿಧಿ:
ಶಿರಸಿಯ ಅರಣ್ಯ ಕಾಲೇಜ್‌ನಲ್ಲಿ ವಿದ್ಯಾರ್ಥಿಗಳಿಗಾಗಿ ದೇಶಕಟ್ಟುವಿಕೆಯಲ್ಲಿ ಅರಣ್ಯ ವಿಜ್ಞಾನದ ಪಾತ್ರ ಎಂಬ ವಿಷಯದ ಕುರಿತು ವಿಚಾರಸಂಕಿರಣ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪರಾಷ್ಟ್ರಪತಿ ಜಗದೀಪ ಧನಕರ್ ಮಾತನಾಡಿ, ಈ ಭೂಮಿಯ ಮೇಲಿನ ಸೃಷ್ಟಿಗೆ ನಾವು ಗ್ರಾಹಕರಲ್ಲ ನಾವು ಟ್ರಸ್ಟಿಗಳು ಇದರ ಉಳಿಸುವ ಸಂಪೂರ್ಣ ಜವಾಬ್ದಾರಿ ನಮ್ಮ ಮೇಲಿದೆ. ಭೂಮಿ ತಾಯಿ ನಮ್ಮನ್ನು ಸಲಹುವ ಸಲುವಾಗಿ ಈ ಸುಂದರ ಪರಿಸರವನ್ನು ನೀಡಿದ್ದಾಳೆ. ಇದು ಕೇವಲ ಮನುಷ್ಯರಿಗಷ್ಟೆ ಎಂದು ನಾವು ತಿಳಿಯುವುದು ಬೇಡ ಇಲ್ಲಿನ ಪ್ರತಿಯೊಂದು ಜೀವಿಗೂ ಇದರ ಮೇಲೆ ಹಕ್ಕಿದೆ.

ಅರಣ್ಯ ಹವಾಮಾನವನ್ನು ನಿಯಂತ್ರಿಸುತ್ತದೆ,ನೈಸರ್ಗಿಕ ವಿಪತ್ತಿನಿಂದ ನಮ್ಮನ್ನು ಕಾಪಾಡುತ್ತದೆ. ಈ ಭೂಮಿಯನ್ನು ಹೊರತು ಪಡಿಸಿ ನಮಗೆ ಉಳಿಯಲು ಬೇರೆ ಸ್ಥಳವೇ ಇಲ್ಲ. ಅರಣ್ಯ ವಿಜ್ಞಾನದಲ್ಲಿ ಸಂಶೋಧನೆ ಮಾಡಲು ಸಾಕಷ್ಟು ವಿಷಯಗಳಿವೆ ನೀವು ಎಷ್ಟು ಸಂಶೋಧನೆ ಮಾಡುತ್ತಿರೋ ಅಷ್ಟು ಕೊಡುಗೆಯನ್ನು ಈ ಭೂಮಿಗೆ ನೀಡಿದಂತಾಗುತ್ತದೆ. ಇಂದು ಈಡೀ ವಿಶ್ವದ ಕಣ್ಣು ಭಾರತದ ಮೇಲಿದೆ. ಯುವಶಕ್ತಿ ಭಾರತದ ಶಕ್ತಿಯಾಗಿ ರೂಪುಗೊಂಡಿದೆ. ನಿಮ್ಮ ಕೌಶಲ್ಯ,ಬುದ್ದಿಶಕ್ತಿಯನ್ನು ಉಪಯೋಗಿಸಿಕೊಂಡು ಸಾಧನೆ ಮಾಡಬೇಕು ಈ ಸಾಧನೆ ದೇಶಕ್ಕೆ ದೊಡ್ಡ ಕೊಡುಗೆಯಾಗಿರಬೇಕು.ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಪಶ್ಚಿಮ ಘಟ್ಟದ ಸುಂದರ ಪರಿಸರದಲ್ಲಿ ಈ ಪ್ರದೇಶವಿದೆ ಇಲ್ಲಿನ ಮಣ್ಣಿನ ಸುಹಾಸನೆ ನಮ್ಮನ್ನು ಭಾವಪರವಶರನ್ನಾಗಿ ಮಾಡಿರುವುದಲ್ಲದೆ ಇಲ್ಲಿಯೇ ನೆಲೆಸುವಂತೆ ಪ್ರಚೋದನೆ ನೀಡುತ್ತಿದೆ. ಇಂತಹ ಪ್ರಕಾಋತಿಕ ಸಂಪತ್ತಿನ ಸ್ಥಳದಲ್ಲಿ ನಿಮ್ಮ ವಿದ್ಯಾಭ್ಯಾಸ ನಡೆಯುತ್ತಿರುವುದು ನಿಮ್ಮ ಪುಣ್ಯ ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಜಗದೀಪ ಧನಕರ ಹೇಳಿದರು.

ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿಗಳ ಪತ್ನಿ ಸುಧೇಶ ಧನಕರ,ರಾಜ್ಯಪಾಲ ಥಾವರಚಂದ್ ಗೆಹ್ಲೋಟ್,ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ,ಜಿಲ್ಲಾ ಉಸ್ತುವಾರಿ ಸಚೀವ ಮಂಕಾಳು ವೈದ್ಯ,ಶಾಸಕ ಭೀಮಣ್ಣ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ನಂತರ ಉಪರಾಷ್ಟ್ರಪತಿಗಳು ಶಿರಸಿಯ ಪ್ರಸಿದ್ದ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಸಿದ್ದಾಪುರಕ್ಕೆ ಭೇಟಿ;-
ಸಿದ್ದಾಪುರದ ಇಂದಿರಾನಗರದ ನಿವಾಸಿ ಹಿರಿಯ ವಕೀಲ ಎನ್.ಡಿ.ನಾಯ್ಕರ ಮನೆಗೆ ಸೋಮವಾರ ಉಪರಾಷ್ಟ್ರಪತಿ ಜಗದೀಪ ಧನಕರ್ ಅವರ ಪತ್ನಿ ಸುದೇಶ್ ಧನಕರ್ ಆಗಮಿಸಿದ್ದರು.

ಇತ್ತೀಚೆಗೆ ಎನ್.ಡಿ.ನಾಯ್ಕರ ಪತ್ನಿ ಲಕ್ಷ್ಮೀ ನಾಯ್ಕ ಅನಾರೋಗ್ಯದಿಂದ ನಿಧನ ಹೊಂದಿದ್ದರು ಇವರ ಪುತ್ರ ರಾಜೇಶ ನಾಯ್ಕ (ಐಎಪ್‌ಎಸ್) ಉಪರಾಷ್ಟ್ರಪತಿಗಳ ಪಿಎಸ್‌ಒ ಆಗಿದ್ದು ಅವರ ಕುಟುಂಬದಿಂದ ಆಯೋಜಿಸಲಾಗಿದ್ದ ತಾಯಿಯ ಸ್ಮರಣೆಯಲ್ಲಿ ಒಂದು ವೃಕ್ಷ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದರು.

ಉಪರಾಷ್ಟ್ರಪತಿಗಳು ತಮ್ಮ ತಾಯಿ ದಿ.ಕೇಸರಿ ದೇವಿ,ಅವರ ಪತ್ನಿ ಸುದೇಶ ಧನಕರ್ ಅವರ ತಾಯಿ ಭಗವತಿ ದೇವಿಯವರ ನೆನಪಿನಲ್ಲಿ ಒಂದೊಂದು ಮಾವಿನಗಿಡವನ್ನು ನೆಟ್ಟರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಮ್ಮ ತಾಯಿ ಸುಮನಾಭಾಯಿ ನೆನಪಿನಲ್ಲಿ ಮಾವಿನಗಿಡವನ್ನು ನೆಟ್ಟರು.ನಂತರ ದಿ.ಲಕ್ಷ್ಮೀ ಎನ್ ನಾಯ್ಕರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರ ಮನೆಯವರಿಗೆ ಸಾಂತ್ವಾನ ಹೇಳಿದರು.
ಈ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚೀವ ಮಂಕಾಳ ವೈದ್ಯ,ಶಾಸಕ ಭೀಮಣ್ಣ ನಾಯ್ಕ, ಹಿರಿಯ ವಕೀಲರಾದ ಆರ್.ಎಂ.ಹೆಗಡೆ ಬಾಳೆಸರ,ರವಿ ಹೆಗಡೆ ಹೂವಿನಮನೆ,ಸಾರಂಗನಜಡ್ಡು ಕಾರ್ತೀಕೇಯ ಪೀಠದ ಶ್ರೀ ಯೋಗೇಂದ್ರ ಅವಧೂತ ಸ್ವಾಮೀಜಿ ಮುಂತಾದವರು ಉಪಸ್ಥಿತರಿದ್ದರು
