ಸಿದ್ದಾಪುರ ಟಿಎಂಎಸ್ ವಾರ್ಷಿಕ ಸರ್ವಸಾಧಾರಣ ಸಭೆ


ಆದ್ಯೋತ್ ಸುದ್ದಿನಿಧಿ:;
ಸಿದ್ದಾಪುರದ ಟಿ ಎಂ ಎಸ್ ಸಭಾ ಭವನದಲ್ಲಿ ಶನಿವಾರ ಟಿಎಂಎಸ್‌ನ 78ನೇ ವಾರ್ಷಿಕ ಸರ್ವ ಸಾಧಾರಣ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆವಹಿಸಿದ್ದ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೆಸರ ಮಾತನಾಡಿ,ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘವು 78 ಸಾರ್ಥಕ ವಸಂತಗಳನ್ನು ಪೂರೈಸಿ 79 ನೇ ವರ್ಷದಲ್ಲಿ ಕಾರ್ಯನಿರ್ವಹಿಸುತ್ತಿದೆ. 2024-25 ನೇ ಸಾಲಿನಲ್ಲಿ ಅವಶ್ಯ ನಿಧಿಗಳನ್ನು ತೆಗೆದಿರಿಸಿದ ನಂತರ ಸಂಘವು ರೂ. 5 ಕೋಟಿ 55ಲಕ್ಷರೂ. ನಿಕ್ಕಿ ಲಾಭ ಗಳಿಸಿರುತ್ತದೆ

ಕಾನಸೂರು ಹಾಗೂ ಶಿರಸಿಯಲ್ಲಿ ಶಾಖೆಗಳನ್ನು ಹೊಂದಿರುವ ಸಂಘವು ಗಣನೀಯ ಪ್ರಮಾಣದಲ್ಲಿ ಅಡಿಕೆ, ಕಾಳುಮೆಣಸು ಹಾಗೂ ಹಸಿ ಅಡಿಕೆ ವಿಕ್ರಿಮಾಡಿದೆ. ಸಂಘದ ವಹಿವಾಟು ರೂ. 234.೦೧ ಕೋಟಿ ಆಗಿದೆ. ದುಡಿಯುವ ಬಂಡವಾಳ ರೂ 237.2೦ ಕೋಟಿಗೂ ಅಧಿಕವಾಗಿದೆ. ಸಂಚಿತ ನಿಧಿಗಳ ಮೊತ್ತ ರೂ. 66.84ಕೋಟಿಯಷ್ಟಿದೆ. ರೂ. 117.58 ಕೋಟಿ ಠೇವುಗಳನ್ನು ಸಂಗ್ರಹಿಸಲಾಗಿದೆ ಎಂದರು. ಕೃಷಿ ವಿಭಾಗದಲ್ಲಿ ಗೊಬ್ಬರ, ಕ್ರಿಮಿನಾಶಕ, ಕೃಷಿ ಉಪಕರಣ ಹಾಗೂ ಪ್ಲಾಸ್ಟಿಕ್ ಸಾಮಗ್ರಿ ವಿಕ್ರಿ ವ್ಯವಹಾರ ಮಾಡಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ, ಎಲ್ಲರಿಗೂ ಸರಿಯಾದ ಶಿಕ್ಷಣ ದೊರೆತಾಗ ಮಾತ್ರ ಅಭಿವೃದ್ಧಿ ಸಾಧ್ಯ. ಸಂಘ ಸಂಸ್ಥೆಗಳು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವುದು ಉತ್ತಮ ಕಾರ್ಯ. ಇದರಿಂದ ಇನ್ನಷ್ಟು ಮಕ್ಕಳಿಗೆ ಉತ್ತೇಜನ ದೊರೆಯುತ್ತದೆ. ಗ್ರಾಮೀಣ ಭಾಗಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳ ಉನ್ನತ ಶಿಕ್ಷಣಕ್ಕೆ ಸಹಕಾರಿ ಸಂಘಗಳು ಲಾಭಾಂಶದ ಕೆಲವೊಂದು ಭಾಗವನ್ನು ತೆಗೆದಿಟ್ಟು ಸಹಕರಿಸಿದರೆ ದೇಶದಲ್ಲಿ ಮತ್ತಷ್ಟು ಪ್ರತಿಭೆಗಳನ್ನು ಹೊರತರಲು ಸಾಧ್ಯ. ಟಿಎಂಎಸ್ ತನ್ನ ಶೇರುದಾರರಿಗೆ ೧೫ ಶೇಕಡಾ ಡಿವಿಡೆಂಡ್ ನೀಡುತ್ತಿರುವುದು ದಾಖಲೆ ಮಟ್ಟದ ಡಿವಿಡೆಂಡ್ ನೀಡಿದಂತಾಯಿತೆಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ಜಿಲ್ಲೆಯಲ್ಲಿಯ ಸಹಕಾರಿ ಸಂಘಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ಚಿಕ್ಕಪುಟ್ಟ ವ್ಯತ್ಯಾಸಗಳಿದ್ದರೆ ಅವುಗಳನ್ನೇ ದೊಡ್ಡದು ಮಾಡದೆ ಸಂಘದ ಹಿತದೃಷ್ಟಿಯಿಂದ ಸುಧಾರಿಸಿಕೊಂಡು ಹೋಗಬೇಕು. ಈ ನಡುವೆಯೂ ಕೆಲವು ಪ್ರಾಥಮಿಕ ಸಂಘಗಳಲ್ಲಿ ಅಪರಾ ತಪರಾ ಆಗಿದ್ದು ಕಂಡುಬAದಿದೆ. ಸಂಘವು ಅದನ್ನು ತಿದ್ದಿಕೊಂಡು ಸರಿಪಡಿಸಿಕೊಂಡು ಹೋಗಲು ಪ್ರಯತ್ನಿಸಬೇಕು. ಹೆಚ್ಚಿನ ಸಹಕಾರಿ ಸಂಘಗಳು ಮಾನವೀಯ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸ್ವಾಗತಾರ್ಹ. ಕೆಲವು ಸಹಕಾರಿ ಅಧಿಕಾರಿಗಳು ಬ್ರಿಟಿಷ್‌ರಂತೆ ವರ್ತಿಸುತ್ತಿರುವುದು ಸಹನೀಯವಲ್ಲ. ರೈತರ ಹಿತದೃಷ್ಟಿಯಿಂದ ಎಲೆಚುಕ್ಕಿ ಹಾಗೂ ಹಳದಿ ರೋಗ ಅಧ್ಯಯನ ಹಾಗೂ ಪರಿಹಾರೋಪಾಯ ಕಂಡು ಹಿಡಿಯಲು ರಾಜ್ಯ ಸರ್ಕಾರ ೫೦ ಕೋಟಿ ರೂ.ನೀಡಿದ್ದು ಶಿರಸಿ ಹಾಗೂ ಸಿದ್ದಾಪುರಗಳಲ್ಲಿ ಈ ಕುರಿತು ಸಂಶೋಧನೆ ಮುಂದುವರಿದಿದೆ ಎಂದು ಭೀಮಣ್ಣ ನಾಯ್ಕ ಹೇಳಿದರು.

ವೇದಿಕೆಯಲ್ಲಿ ಸಂಘದ ನಿರ್ದೇಶಕರು, ವ್ಯವಸ್ಥಾಪಕ ಸತೀಶ ಹೆಗಡೆ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಎಂ.ಜಿ.ನಾಯ್ಕ ಹಾದ್ರಿಮನೆ ಸ್ವಾಗತಿಸಿದರು. ಸಂಘದ ಉಪವ್ಯವಸ್ಥಾಪಕ ಪ್ರಸನ್ನಕುಮಾರ ಭಟ್ಟ ಕೆರೆಹೊಂಡ, ಜಿ.ಜಿ.ಹೆಗಡೆ ಬಾಳಗೋಡು ನಿರೂಪಿಸಿದರು. ನಿರ್ದೇಶಕ ಜಿ.ಎಂ.ಭಟ್ಟ ಕಾಜಿನಮನೆ ವಂದಿಸಿದರು.

ಸಭೆಯಲ್ಲಿ ಸಂಘದ ಹಿರಿಯ ಸದಸ್ಯರನ್ನು, ತಾಲ್ಲೂಕಿನಲ್ಲಿ ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮತ್ತು ಗೌರವ ಡಾಕ್ಟರೇಟ್ ಪಡೆದ ಜಿ.ಜಿ.ಹೆಗಡೆ ಬಾಳಗೋಡು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ತಾಲೂಕಿನ ದೊಡ್ಮನೆ, ತಾರೇಹಳ್ಳಿ ಕಾನಸೂರ ಹಾಗೂ ಹೆಗ್ಗರಣಿ ಸೇವಾ ಸಹಕಾರಿ ಸಂಘಗಳಿಗೆ ಪತ್ತು ಮತ್ತು ಮಾರಾಟ ಜೋಡಣೆಯ ಅನುಸರಣೆಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ ನೀಡಲಾಯಿತು.

ಟಿಎಂಎಸ್‌ನ ಹಿರಿಯ ಸದಸ್ಯರಾದ ಗಂಗಾಭವಾನಿ ನಾರಾಯಣ ಭಟ್ಟ ಗುಡ್ಡೆಕೊಪ್ಪ, ಸಣ್ಯಾ ಈಶ್ವರ ನಾಯ್ಕ ನರಮುಂಡಗೆ, ಗಣಪತಿ ಕೃಷ್ಣಯ್ಯ ಹೆಗಡೆ ಹಳದೋಟ, ಅಜ್ಜು ಈರಾ ಮಡಿವಾಳ ಮರಲಿಗೆ, ಮೋಹನ ವಾಮನ ಶಾನಭಾಗ ಹಾರ್ಸಿಕಟ್ಟಾ, ಯಂಕ ಪುಟ್ಟ ಗೌಡ ಕಲ್ಮನೆ, ಅನಂತ ವೆಂಕಪ್ಪ ಹೆಗಡೆ ಮಗೇಗಾರ, ಮಹಾಬಲೇಶ್ವರ ಗೋವಿಂದ ಹೆಗಡೆ ಬಗ್ರಿಮಕ್ಕಿ, ಈಶ್ವರ ತಿಮ್ಮಾ ನಾಯ್ಕ ಹೊನ್ನೆಬಿಡಾರ, ಮಹಾಬಲೇಶ್ವರ ಹುಚ್ಚಾ ನಾಯ್ಕ ಬೇಡ್ಕಣಿ, ನೇತ್ರಾವತಿ ರಾಮಚಂದ್ರ ಹೆಗಡೆ ಮುಸೇಗಾರ-ಕೊಡ್ತಗಣಿ, ರಾಜೇಂದ್ರ ಮೃತ್ಯುಂಜಯ ಗೌಡ ಬೇಡ್ಕಣಿ, ರತ್ನಿ ರಾಮ ನಾಯ್ಕ ಹರ್ಕನಳ್ಳಿ, ವಿಠ್ಠಲ ರಾಮಕೃಷ್ಣ ಶೇಟ್ ಹಲಗೇರಿ ಅವರುಗಳನ್ನು ಸನ್ಮಾನಿಸಲಾಯಿತು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ದೀಕ್ಷಾ ಗೌಡ, ಭೂಮಿಕಾ ಒಕ್ಕಲಿಗ, ಶ್ರೇಯಾ ಹೆಗಡೆ, ವರ್ಷಾ ಹೆಗಡೆ, ತನ್ಮಯಿ ಹೆಗಡೆ, ಅರ್ಪಿತಾ ಹೆಗಡೆ, ರಕ್ಷಿತಾ ನಾಯ್ಕ ಅವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

About the author

Adyot

Leave a Comment