
ಆದ್ಯೋತ್ ಸುದ್ದಿನಿಧಿ
ಮೊದಲೇ ಹೇಳಿದಂತೆ ಮನೋ ಸಮಾಲೋಚನೆ ಅಂದರೆ ಕೇವಲ ಆ ಪರಿಸ್ಥಿತಿಯನ್ನು ತಿಳಿಗೊಳಿಸಲು ಅಥವಾ ಆ ಸಮಯದಲ್ಲಿ ಕೆಲವೊಂದು ಮಾತುಗಳು ತ್ವರಿತ ಪರಿಹಾರ ಒದಗಿಸುವುದಲ್ಲ ಶಾಶ್ವತ ಪರಿಹಾರವನ್ನು ನೀಡುವುದು ಎಂದು ತಿಳಿಸಲಾಗಿತ್ತು, ಹಾಗಾದರೆ ಮನೋ ಸಮಾಲೋಚನೆ ಅಥವಾ ಮಾಗ೯ದಶ೯ನ ಎಂದರೇನು ಎಂದು ತಿಳಿದುಕೊಳ್ಳೋಣ. ಸಾಮಾನ್ಯ ಭಾಷೆಯಲ್ಲಿ ಹೇಳಬೇಕೆಂದರೆ ನುರಿತ ಆಥವಾ ಪರಿಣಿತಿ ಪಡೆದವರು, ವ್ಯಕ್ತಿಯ ಸಮಸ್ಯೆಗಳಾದ ಮಾನಸಿಕ, ಭಾವನಾತ್ಮಕವಾಗಿ, ಜೀವನದಲ್ಲಿ ಗುರಿ ಮುಟ್ಟಲು ಬೇಕಾದ ಮಾಗ೯ದಶ೯ನ ನೀಡುವವರು.
ಕೌನ್ಸೆಲಿಂಗ್‌ನ ಮಾನ್ಯ ವ್ಯಾಖ್ಯಾನಗಳು ;
1- ಬ್ರಿಟೀಷ್ ಅಸೋಸಿಯೇಷನ್ ಫಾರ್ ಕೌನ್ಸೆಲಿಂಗ್ ಆಂಡ್ ಸೈಕೋಥೆರಪಿ (BACP): “ಕೌನ್ಸೆಲಿಂಗ್ ಅಂದರೆ ತರಬೇತಿ ಪಡೆದ ಮನೋ ಸಮಾಲೋಚಕನೊಂದಿಗೆ ಮಾತುಕತೆ ನಡೆಸಿ, ವೈಯಕ್ತಿಕ ಹಾಗೂ ಭಾವನಾತ್ಮಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಕ್ರಿಯೆ.”
2- ಅಮೆರಿಕನ್ ಸೈಕೋಲಾಜಿಕಲ್ ಅಸೋಸಿಯೇಷನ್ (APA):
“ಕೌನ್ಸೆಲಿಂಗ್ ಎಂಬುದು ವೈವಿಧ್ಯಮಯ ವ್ಯಕ್ತಿಗಳು, ಕುಟುಂಬಗಳು ಮತ್ತು ಗುಂಪುಗಳನ್ನು ಮಾನಸಿಕ ಆರೋಗ್ಯ, ಶಿಕ್ಷಣ ಹಾಗೂ ವೃತ್ತಿ ಉದ್ದೇಶಗಳ ಸಾಧನೆಗೆ ಪ್ರೆರೇಪಿಸುವ ವೃತ್ತಿಪರ ಸಂಬಂಧ.”
ಮನೋ ಸಮಾಲೋಚನೆಯು ವಯಕ್ತಿಕ ಬೆಳವಣಿಗೆ ಉತ್ತೇಜಿಸುವುದು, ಭಾವನಾತ್ಮಕ ಸಮತೋಲನವನ್ನು ಬೆಳೆಸುವುದು,ಜೀವನದ ಕಠಿಣ ಸವಾಲುಗಳನ್ನು ಪರಿಹರಿಸಲು ಸಹಕರಿಸುವುದು ಹಾಗೂ ಸಮಾಲೋಚಕನು ಮನೋವಿಜ್ಞಾನಿಕ ವಿಷಯವನ್ನು ಗುರುತಿಸಿ ಸಮಸ್ಯೆಯನ್ನು ಎದುರಿಸುವ ತಂತ್ರಗಳನ್ನು ಅನ್ವೇ಼ಷಿಸಿ ಜೀವನ ನಿವ೯ಹಣಾ ಸಾಮಥ್ಯ೯ವನ್ನು ಹೆಚ್ಚಿಸುವುದನ್ನು, ತುಂಬುವುದನ್ನು ಸಮಾಲೋಚಕನು ನಿವ೯ಹಿಸುತ್ತಾನೆ.
ಉದಾಹರಣೆಗೆ ಒಬ್ಬ ಮಧ್ಯಪಾನ ಮಾಡುವ ವ್ಯಕ್ತಿಯು ನಿಮ್ಮ ಹತ್ತಿರ ಬಂದಾಗ ಕುಡಿತ ಜೀವನವನ್ನು ಹಾಳು ಮಾಡುತ್ತದೆ, ಇದರಿಂದ ನಿಮಗೆ ಹಾಗೂ ನಿಮ್ಮ ಪರಿವಾರಕ್ಕೆ ತುಂಬಾ ಕಷ್ಟವಾಗುತ್ತದೆ, ಕುಡಿತವನ್ನು ನಿಲ್ಲಿಸಬೇಕು. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಬೇಕೆಂದು ಬುದ್ಧಿ ಮಾತನ್ನು ಹೆಚ್ಚೆಂದರೆ ತಲೆಯ ಮೇಲೆ ಬಿಟ್ಟು ಹೇಳಿರಬಹುದು. ಆದರೆ ಈ ಮಾತುಗಳು ಯಾವುದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ. ಆದರೆ ಮಾಗ೯ದಶ೯ಕನು ಅದರ ಮೂಲ ಸ್ವರೂಪ ಹಾಗೂ ಸಮಸ್ಯೆಯ ಮೂಲವನ್ನು ತಿಳಿದುಕೊಳ್ಳುವ ಹಾಗೂ ಯಾವ ಕಾರಣಕ್ಕಾಗಿ ಕುಡಿತದ ಮಾಗ೯ವನ್ನು ಕಂಡುಕೊಂಡ, ಯಾವ ಪರಿಸ್ಥಿತಿಯು ಅವನನ್ನು ಕುಡಿತದ ಹಾದಿಗೆ ಕರೆದೊಯ್ದಿತು ಎಂಬುದನ್ನು ಅರಿತು ಅದಕ್ಕೆ ಪರಿಹಾರವನ್ನು ಮತ್ತು ಕುಡಿತದಿಂದ ಅವರ ಮನೆಯವರ ಮೇಲಾಗುತ್ತಿರುವ ಪರಿಣಾಮಗಳು, ಮಕ್ಕಳ ಮೇಲೆ ಉಂಟಾಗುತ್ತಿರುವ ಪರಿಣಾಮಗಳು, ಸಮಾಜದಲ್ಲಿ ಅವರನ್ನ ನೋಡುತ್ತಿರುವ ದೃಷ್ಷಿಯ ಬಗ್ಗೆ ಅವರಿಗೆ ತಿಳಿಹೇಳಿ ಅವರ ಜೀವನದ ಗುರಿ ಹಾಗೂ ಮುಖ್ಯ ಉದ್ದೇಶವನ್ನು ಗುರುತಿಸಿ, ವೈಜ್ಞಾನಿಕವಾಗಿ ಹಾಗೂ ಕೆಲವು ತತ್ವಗಳನ್ನು ಬಳಸಿ ಅದರಿಂದ ಮುಕ್ತಿಗೊಳಿಸುವ ಕ್ರಿಯೆಯನ್ನು ಜಾರಿಗೆ ತರುವ ಜವಾಬ್ದಾರಿಯನ್ನು ಸಮಾಲೋಚಕನು ನಿವ೯ಹಿಸುತ್ತಾನೆ. ಇದೇ ಸಾಮಾನ್ಯವಾಗಿ ಬುದ್ಧಿ ಹೇಳುವುದಕ್ಕೂ ತರಬೇತಿ ಪಡೆದಿರುವ ಮಾಗ೯ದಶ೯ಕರಿಗೆ ಇರುವ ವ್ಯತ್ಯಾಸ
(ಮುಂದಿನ ಸಂಚಿಕೆ ಗುರುವಾರ ಸಮಾಲೋಚಕನು ಹೇಗಿರಬೇಕು )

