ಆದ್ಯೋತ್ “ಭಾಶಿ ಲೋಕ”

ಆದ್ಯೋತ್ ಸುದ್ದಿನಿಧಿ
ಮಲೆನಾಡಿನ ಭಾಷಾ ಸೊಗಡಿನಲ್ಲಿ ಸ್ವಾತಂತ್ರ್ಯ ಹೋರಾಟದ ಕ್ರಾಂತಿಯ ಕಿಡಿ ನಾಟಕ…
“ಈ ಭೂಮಿಯ ಮೇಲೆ ಎಷ್ಟೋ ಜನರು  ಜೀವಂತವಾಗಿದ್ದರೂ ಸತ್ತು ಬದುಕುತ್ತಾರೆ” ಎಂಬ ಯಾರೋ ಹೇಳಿದ ಮಾತೊಂದು ನನಗೆ ಆಗಾಗ ಕೊರೆಯುತ್ತದೆ.  ಬಹುತೇಕ ಜನ ಸ್ವಾರ್ಥಕ್ಕಾಗಿ ಬದುಕಿ ಸತ್ತವರ ಮಧ್ಯೆ ಅಪರೂಪಕ್ಕೆ ಅಲ್ಲಲ್ಲಿ ಕೆಲವೇ ಕೆಲವು ಹುತಾತ್ಮರು ನಮ್ಮ ದೇಶದಲ್ಲಿ ಸಿಗುತ್ತಾರೆ. ಅಂತವರ ಸಾಲಿನಲ್ಲಿ ಸಿಕ್ಕ ಅಪರೂಪದ ದಿಟ್ಟ ಹೋರಾಟಗಾರನೇ ಈ ಚೌಡಾ ನಾಯ್ಕ ಬೇಡ್ಕಣಿ.

ಇತ್ತೀಚೆಗೆ ಸಿದ್ದಾಪುರ ಶಂಕರಮಠದಲ್ಲಿ ಸ್ಥಳೀಯ ರಂಗಸೌಗಂಧ ತಂಡದವರು ಸ್ವಾತಂತ್ರ್ಯ ಹೋರಾಟವನ್ನು,ಹೋರಾಟಗಾರರನ್ನು ನೆನಪಿಸುವ ಕ್ರಾಂತಿಯಕಿಡಿ ನಾಟಕವನ್ನು ಪ್ರದರ್ಶಿಸಿದರು.ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ಕಳೆದುಕೊಂಡ ಧೀರ ಹೋರಾಟಗಾರ ಬೇಡ್ಕಣಿ ಚೌಡನಾಯ್ಕರ ಕುರಿತಾದ ಈ ನಾಟಕ ಸ್ಥಳೀಯ ಆಡುಭಾಷೆಯನ್ನು ಸಮರ್ಥವಾಗಿ ಬಳಸಿಕೊಂಡು ಪ್ರದರ್ಶನಗೊಂಡಿತು.
ಇತಿಹಾಸ ತಿಳಿದವರಿಗೆ ಸಿದ್ದಾಪುರ  ಎಂದಾಕ್ಷಣ ಮೈ ರೋಮಾಂಚನಗೊಳ್ಳುವ ಸ್ವಾತಂತ್ರ್ಯ ಹೋರಾಟದ ಕರಾಳ ನೆನಪುಗಳು!.

ಉಪ್ಪಿನ ಸತ್ಯಾಗ್ರಹಕ್ಕೆ  ಅಂಕೋಲಾ ತಾಲೂಕು ಹೆಸರಾದರೆ ಕರನಿರಾಕರಣೆ,  ಕಾಯ್ದೆ ಭಂಗ, ಹುಲ್ಲುಬೇಣ ಚಳುವಳಿ, ಸೊಪ್ಪಿನ ಬೆಟ್ಟ, ಮಾವಿನ ಗುಂಡಿ ಮಹಿಳಾ ಸ್ವಾತಂತ್ರ್ಯ ಹೋರಾಟ ಹೀಗೆ ಹತ್ತು ಹಲವು ಸನ್ನಿವೇಶಗಳು  ಸಿದ್ದಾಪುರ ತಾಲೂಕಿನಲ್ಲಿ ನಡೆದ ಪ್ರಮುಖ ದಾಖಲೆಗಳು. ಈ ಎರಡೂ ತಾಲೂಕುಗಳು ದಕ್ಷಿಣ ಭಾರತದ ಬಾರ್ಡೀಲಿ ಎಂದೇ ಹೆಸರಾಗಿವೆ. ಅದರಲ್ಲೂ ಸಿದ್ದಾಪುರ ತಾಲೂಕಿನ  ಸ್ವಾತಂತ್ರ್ಯ ಹೋರಾಟಗಾರರ  ಕೆಚ್ಚು ತುಸು ಹೆಚ್ಚೇ. ಕಾರಣ ಉತ್ತರ ಕನ್ನಡ ಜಿಲ್ಲೆ ಅಷ್ಟೇ ಅಲ್ಲ ರಾಜ್ಯದಲ್ಲಿಯೇ ಅತಿಹೆಚ್ಚು ಅಂದರೆ ಸುಮಾರು ಒಂದು ಸಾವಿರಕ್ಕಿಂತ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದ ತಾಲೂಕು. ಇನ್ನೊಂದು ವಿಶೇಷ ವೇನೆಂದರೆ ಈ ನೆಲದ ಪುರುಷರಷ್ಟೇ ಅಲ್ಲದೆ ಮಹಿಳೆಯರು,ಮಕ್ಕಳೂ ಸಹ  ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು!. ಇವರೆಲ್ಲರೂ ತಮ್ಮಮನೆ, ಗದ್ದೆ ,ತೋಟ, ಹಣ,ಆಭರಣ,ಪಾತ್ರೆ ಪಗಡೆ ಅಷ್ಟೇ ಅಲ್ಲದೆ ಜಾನುವಾರುಗಳನ್ನು ಸಹ ಕಳೆದುಕೊಂಡು ಕಷ್ಟಗಳ ಸರಮಾಲೆ ಹೊತ್ತು ನಿತ್ಯ ಕರಾಳ ಬದುಕು ಸವೆಸಿದ  ತ್ಯಾಗಜೀವಿಗಳು. ಮಹಾತ್ಮ ಗಾಂಧೀಜಿಯವರ ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟದ ಕರೆಗೆ ಓಗೊಟ್ಟು 1915-47 ರ ವರೆಗೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಡಿದವರಿಗೆ ಲೆಕ್ಕವಿಲ್ಲ.ಮನಮನೆ, ಮಾವಿನಗುಂಡಿ, ಶಿರಳಗಿ, ದೊಡ್ಮನೆ, ಬಿಳಗಿ,ಬೇಡ್ಕಣಿ, ಕಾನಸೂರು, ಸಿದ್ದಾಪುರ ಹೀಗೆ ಎಲ್ಲೆಡೆ ಸ್ವಾತಂತ್ರ್ಯ ಹೋರಾಟಗಾರರ ಚಳವಳಿ, ಪಾದಯಾತ್ರೆಗಳ ದೂಳಿಯಿಂದ ಈ ನೆಲ‌ಪಾವನವಾಗಿದೆ. ಇದಕ್ಕೆ ಸಾಕ್ಷಿಯಾಗಿ ಈಗಲೂ ನೂರಾರು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳು ಎಲೆಮರೆಗೆ ಸರಿದು  ಬರಿ ತಮ್ಮ ತಮ್ಮ ತಾತ,ಮುತ್ತಾತರ ಹಳೆಯ ನೆನಪುಗಳನ್ನೂ ಮರೆಯುವ ಹಂತಕ್ಕೆ ಬಂದಿರುವುದು ತುಂಬಾ ಖೇಧದ ಸಂಗತಿ.
ಕಾರಣ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಎಲ್ಲಾ ಕುಟುಂಬದವರದ್ದೂ  ಸೂಕ್ತ ದಾಖಲೆಗಳಿಲ್ಲ. ಕೇವಲ ಸೆರೆಮನೆವಾಸ ಅನುಭವಿಸಿದ ಖೈದಿಗಳು ಮಾತ್ರ ಅಧಿಕೃತ ಹೋರಾಟಗಾರರೆಂದು ಪರಿಗಣಿಸಲಾಗಿದೆ.
ಗೋಪಾಲ ನಾಯ್ಕ ಭಾಶಿ
ಶಿಕ್ಷಕರು

About the author

Adyot

Leave a Comment