ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಕವಂಚೂರು ಕಿತ್ತೂರುರಾಣಿಚೆನ್ನಮ್ಮ ವಸತಿ ಶಾಲೆಯು ಅನೇಕ ಸಾಧನೆಯನ್ನು ಮಾಡುವ ಮೂಲಕ ಗಮನ ಸೆಳೆಯುತ್ತಿದೆ.

ಸಾಗರ-ಸಿದ್ದಾಪುರ ಮುಖ್ಯರಸ್ತೆಯಲ್ಲಿ ನಿಸರ್ಗದ ಮಡಿಲಲ್ಲಿ ಸರ್ವಸೌಲಭ್ಯವನ್ನು ಹೊಂದಿರುವ ಕಲಿಕಾ ಕೇಂದ್ರಿತ,ಮಗು ಕೇಂದ್ರಿತ ವ್ಯವಸ್ಥೆಯನ್ನು ಹೊಂದಿರುವ ಶಾಲೆಯಲ್ಲಿ 6 ರಿಂದ 1೦ನೇ ತರಗತಿಯ 25೦ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ.ಕ್ರಿಯಾಶೀಲ ಪ್ರತಿಭಾವಂತ ಶಿಕ್ಷಕರ ವೃಂದವಿದ್ದು ಮಕ್ಕಳನ್ನು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಕ್ರೀಡೆಯಲ್ಲಿ ಮಕ್ಕಳನ್ನು ಅಣಿಗೊಳಿಸುತ್ತಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಅಂಗ ಸಂಸ್ಥೆಯಾಗಿರುವ ಕ.ವ.ಶಿ.ಸಂ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಶಾಲೆಯಲ್ಲಿ ಸರ್ಕಾರದಿಂದ ಹಲವಾರು ಸೌಲಭ್ಯಗಳನ್ನು ವಿದ್ಯಾರ್ಥಿನಿಯರಿಗೆ ಒದಗಿಸಲಾಗುತ್ತಿದೆ. ಮಕ್ಕಳಿಗೆ ಉಚಿತ ಶಿಕ್ಷಣ, ಊಟ, ವಸತಿಯ ಜೊತೆಗೆ ಸಮವಸ್ತ್ರ, ಪಠ್ಯಪುಸ್ತಕ, ನೋಟ್ ಬುಕ್, ಬರವಣಿಗೆ ಸಾಮಾಗ್ರಿಗಳನ್ನು ಒದಗಿಸಲಾಗುತ್ತಿದೆ.

ಪ್ರತಿಭಾ ಪುರಸ್ಕಾರ ಎಂಬ ವೇದ ವಾಕ್ಯದೊಂದಿಗೆ ಆರಂಭವಾಗಿರುವ ಈ ಸಂಸ್ಥೆಯು ಅದಕ್ಕೆ ತಕ್ಕಂತೆ ಪ್ರತಿಭಾವಂತ ಪ.ಜಾ.ಪ ಪಂಗಡ ಹಾಗೂ ಹಿಂದುಳಿದ ವರ್ಗದ ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಉದ್ದೇಶವನ್ನು ಹೊಂದಿರುತ್ತದೆ.
ಕಳೆದ ಐದು ವರ್ಷದಿಂದ ಸತತವಾಗಿ ಎಸ್.ಎಸ್.ಎಲ್.ಸಿ ಪರೀಕೆಯಲ್ಲಿ ಶೇ.1೦೦ರ ಸಾಧನೆ ಮಾಡಿದೆ ಅಲ್ಲದೆ ರಾಜ್ಯಮಟ್ಟದ ರ‍್ಯಾಂಕ್‌ಗಳಿಸುವ ಮೂಲಕ ಶೈಕ್ಷಣಿಕ ಸಾಧನೆ ಮಾಡಿದ್ದಾರೆ.

ಈ ಶಾಲೆಯು ವ್ಯವಸ್ಥಿತ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯಗಳನ್ನು ಹೊಂದಿದ್ದು “ಮಾಡಿ ಕಲಿ, ನೋಡಿ ತಿಳಿ” ಎಂಬ ಕಲಿಕಾ ಸಿದ್ದಾಂತವನ್ನು ಅಳವಡಿಸಿಕೊಳ್ಳಲಾಗಿದೆ. ಅಲ್ಲದೇ ಇಲ್ಲಿನ ವಿದ್ಯಾರ್ಥಿನಿಯರು ವಿಜ್ಞಾನ ಮತ್ತು ಗಣಿತ ಪ್ರದರ್ಶನದಲ್ಲಿ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿಯೂ ಸ್ಪರ್ಧಿಸಿ ಪ್ರಶಂಸೆಗೆ ಒಳಗಾಗಿದ್ದಾರೆ.

ಈ ವಸತಿ ಶಾಲೆಯಲ್ಲಿ ಸುಂದರವಾದ ಆಟದ ಮೈದಾನವಿದ್ದು, ದೈಹಿಕ ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರತಿದಿನ ಅಭ್ಯಾಸ ಮಾಡಿಸಲಾಗುತ್ತದೆ. ಕ್ರೀಡೆಯ ಜೊತೆಗೆ ಯೋಗಾಸನ, ಕರಾಟೆ ಇವುಗಳ ತರಬೇತಿಯನ್ನು ನೀಡಲಾಗುತ್ತದೆ. ಯೋಗಾಸನ ಸ್ಪರ್ಧೆಯಲ್ಲಿ ವಿಭಾಗ ಮಟ್ಟದವರೆಗೂ ಇಲ್ಲಿನ ವಿದ್ಯಾರ್ಥಿನಿಯರು ಭಾಗವಹಿಸಿರುವುದು ವಿಶೇಷವಾಗಿದೆ.

ಜಾಯ್‌ಪುಲ್ ಇಂಗ್ಲೀಷ್ ಲರ್ನಿಂಗ್ ಮಾದರಿಯಲ್ಲಿ ಇಂಗ್ಲೀಷನಲ್ಲಿ ನಲಿ-ಕಲಿ ಮಾದರಿ ಪ್ರಯೋಗವನ್ನು ಅನುಷ್ಠಾನಗೊಳಿಸಲಾಗಿರುವುದರಿಂದ 5ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ ಬರುವವರಿಗೆ ಆಂಗ್ಲಮಾಧ್ಯಮಕ್ಕೆ ಹೊಂದಿಕೊಳ್ಳಲು ಅನುಕೂಲವಾಗುತ್ತಿದೆ. ಜೊತೆಗೆ 6-7ನೇ ತರಗತಿಯವರೆಗೂ ವಿಸ್ತರಿಸಿರುವುದರಿಂದ ಪ್ರೌಢಶಾಲೆಯ ಹಂತಕ್ಕೆ ಬರುವಷ್ಟರಲ್ಲಿ ವಿದ್ಯಾರ್ಥಿನಿಯರು ಆಂಗ್ಲಾಭಾಷೆಯಲ್ಲಿ ಪ್ರೌಢಿಮೆ ಹೊಂದಲು ಸಾಧ್ಯವಾಗುತ್ತಿದೆ. ಇತರೆ ರಾಷ್ಟ್ರದ ಸಂಪನ್ಮೂಲ ವ್ಯಕ್ತಿಗಳೊಡನೆ ಯಾವುದೇ ನೆಟ್‌ವರ್ಕ ಸಹಾಯವಿಲ್ಲದೆ ಸಂವಹನ ನಡೆಸಬಹುದಾದ ಹೆಚ್‌ಎಎಮ್ ರೇಡಿಯೋ ವ್ಯವಸ್ಥೆಯನ್ನು ಈ ಶಾಲೆಯಲ್ಲಿ ಅಳವಡಿಸಲಾಗಿದ್ದು ಈಡೀ ರಾಜ್ಯದ 2೦ ವಸತಿ ಶಾಲೆಗಳಲ್ಲಿ ಮಾತ್ರ ಈ ವ್ಯವಸ್ಥೆ ಇರುವುದು ವಿಶೇಷವಾಗಿದೆ ಇದರಿಂದ ವಿದ್ಯಾರ್ಥಿನಿಯರ ಬೌದ್ಧಿಕ ಜ್ಞಾನ ಹೆಚ್ಚಾಗುವುದಕ್ಕೆ ಸಹಾಯವಾಗುತ್ತದೆ.

ಒಟ್ಟಾರೆ ಸಂಪನ್ಮೂಲಗಳನ್ನು ಬಳಸಿಕೊಂಡು ಸಾಧನೆಯನ್ನು ಮಾಡುತ್ತಿರುವ ಕೆಲವೇ ಶಾಲೆಗಳಲ್ಲಿ ಕವಂಚೂರಿನ ಈ ಶಾಲೆಯೂ ಒಂದು ಎನ್ನುವುದು ತಾಲೂಕಿಗೆ ಹೆಮ್ಮೆ ಎನ್ನುವುದು ಸಾರ್ವಜನಿಕರ ಹೇಳಿಕೆ.
——–
ಮಕ್ಕಳ ಶ್ರೇಯಸ್ಸಿಗಾಗಿ ಎಲ್ಲರೂ ಒಗ್ಗಟ್ಟಾಗಿ ಪರಿಶ್ರಮ ಪಟ್ಟು ಕರ್ತವ್ಯ ನಿರ್ವಹಿಸುತ್ತಿರುವುದರಿಂದ ನಮ್ಮ ಶಾಲೆಯು ಎಲ್ಲಾ ವಿಭಾಗದಲ್ಲೂ ಮುಂಚೂಣಿಯ ಸಾಧನೆ ಮಾಡಲು ಸಾಧ್ಯವಾಗಿದೆ. ಎಲ್ಲಾ ಶಿಕ್ಷಕರ, ಸಿಬ್ಬಂದಿಗಳ ಸಹಕಾರ ಇದ್ದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ.

ವೀರಣ್ಣ ನೂರಂದನವರ
ಪ್ರಾಂಶುಪಾಲರು ಕಿ.ರಾ.ಚೆ.ವ.ಶಾಲೆ ಕವಂಚೂರು ಸಿದ್ಧಾಪುರ
