ಸಿದ್ದಾಪುರದಲ್ಲಿ ಸ್ವಾತಂತ್ರ ಸ್ಮಾರಕ ಭವನ ನಿರ್ಮಾಣಕ್ಕೆ ಆಗ್ರಹಿಸಿ ಅಗಸ್ಟ-೩ಕ್ಕೆ ಸಭೆ


ಆದ್ಯೋತ್ ಸುದ್ದಿನಿಧಿ:
ಸ್ವಾತಂತ್ರ್ಯ ಹೋರಾಟದಲ್ಲಿ ಸಿದ್ದಾಪುರ ತಾಲೂಕಿನ ಪಾತ್ರ ಹಿರಿದಾದುದು. ಜಾತಿ,ವಯಸ್ಸು ಬೇಧವಿಲ್ಲದೆ ತಾಲೂಕಿನ ಜನರು ಹೋರಾಟಕ್ಕೆ ಧುಮುಕಿದ್ದರು. ಎಲ್ಲಕ್ಕಿಂತ ವಿಶೇಷವೆಂದರೆ ಈಡೀ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅತಿ ಹೆಚ್ಚು ಮಹಿಳೆಯರು ಭಾಗವಹಿಸಿದ್ದು ಸಿದ್ದಾಪುರದಲ್ಲಿ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಸಾವಿರಕ್ಕೂ ಹೆಚ್ಚು ಜನರ ಮಾಹಿತಿ ಲಭ್ಯವಿದ್ದರೂ ಉಳಿದವರ ಮಾಹಿತಿ ಸಿಗುತ್ತಿಲ್ಲ. ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ ಈ ಪವಿತ್ರ ಭೂಮಿಯಲ್ಲಿ ಹೋರಾಟಗಾರರನ್ನು ನೆನಪಿಸುವ ಯಾವುದೇ ಸ್ಮಾರಕ ಇಲ್ಲ. ಇದರಿಂದ ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ಕಳೆದುಕೊಂಡು ಈಗಲೂ ನೋವು ಅನುಭವಿಸುತ್ತಿರುವ ಹೋರಾಟಗಾರರ ಕುಟುಂಬದವರು ಬೇಸರವ್ಯಕ್ತಪಡಿಸುತ್ತಾ ಬಂದಿದ್ದರು. ನಮ್ಮ ಸರಕಾರವಾಗಲಿ ನಮ್ಮನ್ನಾಳುವ ಜನಪ್ರತಿನಿಧಿಗಳಾಗಲಿ ಈ ಬಗ್ಗೆ ಯಾವುದೇ ತಲೆ ಕೆಡಿಸಿಕೊಳ್ಳುತ್ತಿಲ್ಲ ಇದರಿಂದ ಸ್ಮಾರಕ ಭವನಕ್ಕಾಗಿ ಹೋರಾಟ ಕೈಗೊಳ್ಳಲು ಸಮಾನಮನಸ್ಕರು ನಿರ್ಧರಿಸಿದ್ದಾರೆ. ಇದಕ್ಕಾಗಿ ಅಗಸ್ಟ್3 ರಂದು ಸಿದ್ದಾಪುರದ ಹೊಸೂರು ಶಂಕರಮಠದಲ್ಲಿ ಸಭೆ ಕರೆದಿದ್ದಾರೆ
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ
ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ,ಸ್ವಾತಂತ್ರ‍್ಯ ದೊರೆತು 77 ವರ್ಷಗಳು ಕಳೆದರೂ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿದ್ದ ಸಿದ್ದಾಪುರ ತಾಲ್ಲೂಕಿನಲ್ಲಿ ಸ್ವಾತಂತ್ರ‍್ಯ ಭವನ ನಿರ್ಮಾಣವಾಗದಿರುವುದು ದುಃಖದ ಸಂಗತಿ.ಜಿಲ್ಲೆಯ ಅಂಕೋಲಾ ತಾಲ್ಲೂಕಿನಲ್ಲಿ 25 ವರ್ಷಗಳ ಹಿಂದೆಯೇ ಸ್ವಾತಂತ್ರ ಭವನನಿರ್ಮಾಣವಾಗಿದೆ.ಅಲ್ಲಿನ ಜನರಒಗ್ಗಟ್ಟು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯಿಂದ ಇದು ಸಾಧ್ಯವಾಗಿದೆ.ಇಂದಿನ ಯುವ ಪೀಳಿಗೆ ಹೆಚ್ಚಾಗಿ ಪಟ್ಟಣಗಳತ್ತ ಮುಖ ಮಾಡಿದ್ದು, ಅವರಿಗೆ ನಮ್ಮ ಪೂರ್ವಜರು ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಚಿತ್ರಣದ ಪರಿಚಯವಿಲ್ಲ. ಆದ್ದರಿಂದ ಸರ್ವಸ್ವವನ್ನು ತ್ಯಾಗ ಮಾಡಿ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಯೋಧರ ನೆನಪಿಗಾಗಿ ತಾಲ್ಲೂಕಿನಲ್ಲಿಯೂ ಸಹ ಸ್ವಾತಂತ್ರ ಭವನ ನಿರ್ಮಾಣವಾಗಬೇಕು.ತಾಲ್ಲೂಕಿನ ಸ್ವಾತಂತ್ರ‍್ಯಯೋಧರಕುಟುಂಬದವರೆಲ್ಲರೂ ಒಗ್ಗೂಡಿಆಗಸ್ಟ್ ಮೂರರಂದು ಸ್ವಾತಂತ್ರಯೋಧರ ಕುಟುಂಬದ ಸಂಘಟನೆಯೊಂದನ್ನು ಆರಂಭಿಸಲಿದ್ದೇವೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸ್ವಾತಂತ್ರ‍್ಯ ಯೋಧರ ಕುಟುಂಬದವರು ಮತ್ತು ದೇಶಾಭಿಮಾನಿಗಳು ಪಾಲ್ಗೊಳ್ಳಬೇಕೆಂದು ಆಗ್ರಹ ಪೂರ್ವಕವಾಗಿ ಕೋರಿಕೊಳ್ಳುತ್ತೇನೆ ಎಂದರು.

ಸಂಘಟನೆಯ ಸಂಚಾಲಕ ನಾಗರಾಜ್ ಭಟ್‌ಕೆಕ್ಕಾರ್ ಮಾತನಾಡಿ,ತಾಲ್ಲೂಕಿನ ಸ್ವಾತಂತ್ರ‍್ಯ ಹೋರಾಟಗಾರರಚರಿತ್ರೆ ಇತಿಹಾಸಗಳಲ್ಲಿ ಉಲ್ಲೇಖವಾಗಿಲ್ಲ. ಇಚ್ಛಾಶಕ್ತಿಯಕೊರತೆಯಿಂದ ಅಥವಾ ಸಂಘಟನೆಯ ಕೊರತೆಯಿಂದ ಇಲ್ಲಿಯವರೆಗೆ ತಾಲ್ಲೂಕಿನಲ್ಲಿ ಸ್ವಾತಂತ್ರ‍್ಯಯೋಧರನ್ನು ನೆನಪಿಸಿಕೊಳ್ಳುವಂತಹ ಯಾವುದೇ ಕಟ್ಟಡಗಳಾಗಲಿ, ಭವನಗಳಾಗಲಿ ನಿರ್ಮಾಣವಾಗಿಲ್ಲ. 2022ರಲ್ಲಿ ವಿಶ್ವೇಶ್ವರ ಹೆಗಡೆಕಾಗೇರಿ ಶಾಸಕರಾಗಿದ್ದಾಗ ಪಟ್ಟಣದ ಸಮೀಪದಲ್ಲಿ ಸ್ವಾತಂತ್ರ‍್ಯಯೋಧರ ಸ್ಮಾರಕ ವನ ನಿರ್ಮಾಣ ಮಾಡಬೇಕೆಂದು ಉದ್ದೇಶಿಸಿ 1೦ ಗಿಡಗಳನ್ನು ನೆಡಲಾಯಿತು. ಆದರೆ ಆ ಕಾರ್ಯ ಅಲ್ಲಿಗೆ ನಿಂತು ಆಜಾಗದಲ್ಲಿ ನೆಟ್ಟ ಯಾವ ಗಿಡವು ಬದುಕುಳಿದಿಲ್ಲ. ಅದರಿಂದ ತಾಲ್ಲೂಕಿನಲ್ಲಿ ಸ್ವಾತಂತ್ರ‍್ಯಯೋಧರನ್ನು ನೆನಪಿಸಿಕೊಳ್ಳುವಂತಹ ಭವನ ನಿರ್ಮಾಣವಾಗಬೇಕು.ಆ ದಿಶೆಯಲ್ಲಿ ಸ್ವಾತಂತ್ರ‍್ಯ ಯೋಧರ ಆತ್ಮಕ್ಕೆ ಶಾಂತಿ ದೊರಕಿಸಿಕೊಟ್ಟಂತಾಗುತ್ತದೆ.ಇದು ಸ್ವಾತಂತ್ರ ಯೋಧರ ಕುಟುಂಬಸ್ಥರ ಜವಾಬ್ದಾರಿಯಾಗಿದೆ. ಈ ಹೋರಾಟಕ್ಕೆ ಸರಿಯಾದ ರೂಪ ನೀಡುವ ಉದ್ದೇಶದಿಂದ ಆಗಸ್ಟ್ ಮೂರರಂದು ಸ್ವಾತಂತ್ರಯೋಧರ ವಂಶಸ್ಥರ ಸಂಘಟನೆಗೆ ಚಾಲನೆ ನೀಡಲಿದ್ದೇವೆ. ಈ ಸಂಘಟನೆ ಜಾತ್ಯಾತೀತ, ಪಕ್ಷಾತೀತವಾಗಿರಲಿದ್ದು, ಕೇವಲ ಸ್ವಾತಂತ್ರ‍್ಯಯೋಧರಿಗೆ ಗೌರವ ಸಲ್ಲಿಸುವ ಉದ್ದೇಶಕ್ಕೆ ಸೀಮಿತವಾಗಿದೆ.ತಾಲ್ಲೂಕಿನ ಸ್ವಾತಂತ್ರ‍್ಯಯೋಧರ ಕುಟುಂಬಸ್ಥರು ಮತ್ತುದೇಶಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಸಂಘಟನೆಗೆ ಪ್ರೋತ್ಸಾಹಿಸಬೇಕೆಂದು ಕೋರಿದರು.

About the author

Adyot

Leave a Comment