ಆದ್ಯೋತ್: “ಆಪ್ತಸಮಾಲೋಚನೆ”

ಆದ್ಯೋತ್ ಸುದ್ದಿನಿಧಿ:
ಕಳೆದೆರಡು ಸಂಚಿಕೆಯಲ್ಲಿ ನಾವು ಸಮಾಲೋಚಕನ ಬಗ್ಗೆ ಹಾಗೂ ಸಮಾಲೋಚನೆಯ ಬಗ್ಗೆ ತಿಳಿದುಕೊಂಡಿದ್ದೆವು. ಹಾಗೆಯೆ ನಿಮಗೆ ಅದರ ಬಗ್ಗೆ ಹಾಗೂ ಸಮಾಲೋಚಕನ ಬಗ್ಗೆ ಕಲ್ಪನೆ ಮಾಡುವಷ್ಟು ಮಾಹಿತಿ ದೊರೆತಿದೆ ಎಂದು ಭಾವಿಸುತ್ತೇನೆ.
ಈ ಸಂಚಿಕೆಯಲ್ಲಿ ಸಮಾಲೋಚಕನ ನಿಯಮಗಳು, ಕಟ್ಟುಪಾಡುಗಳು, ಜವಾಬ್ದಾರಿಗಳು, ಸಮಾಲೋಚನೆಯನ್ನು ನಡೆಸುವ ಪರಿಯನ್ನು ತಿಳಿದಿಕೊಳ್ಳೋಣ.
ಮತ್ತೊಮ್ಮೆ, ಸಮಾಲೋಚಕನೆಂದರೆ — ಒಬ್ಬ ವ್ಯಕ್ತಿ ತನ್ನ ದಿನನಿತ್ಯದ ಕೆಲಸಗಳಲ್ಲಿ ಅಥವಾ ಮಾನಸಿಕವಾಗಿ, ದೈಹಿಕವಾಗಿ, ಭಾವನಾತ್ಮಕವಾಗಿ, ಸಾಮಾಜಿಕವಾಗಿ ಎದುರಿಸುವ ಸಾಮರ್ಥ್ಯ ಹಾಗೂ ಶಕ್ತಿಯನ್ನು ಕಳೆದುಕೊಂಡಿದ್ದರೆ, ಅವನಿಗೆ ಧೈರ್ಯ ತುಂಬಿ ಸಮಸ್ಯೆಯನ್ನು ಎದುರಿಸುವ ಶಕ್ತಿಯನ್ನು ತುಂಬುವುದೇ ಸಮಾಲೋಚಕನ ಕೆಲಸ.
ಶಿಸ್ತು, ನಿಯಮ ಹಾಗೂ ಕಾಟಾಚಾರದಿಂದ ನಡೆದುಕೊಳ್ಳದೆ ಇದ್ದರೆ ಯಾವ ವ್ಯಕ್ತಿಯು ತನ್ನ ಸಮಸ್ಯೆಯನ್ನು ತೋಡಿಕೊಂಡಾನು? ಸಮಾಲೋಚಕನಾಗಲಿ ಅಥವಾ ಯಾವುದೇ ವ್ಯಕ್ತಿಯಾಗಲಿ ನಾವು ಧರಿಸುವ ವೇಷಭೂಷಣ, ಮಾತನಾಡುವ ಶೈಲಿ, ನಡೆದುಕೊಳ್ಳುವ ರೀತಿ, ನಮ್ಮ ಹಾವಭಾವಗಳು, ನಮ್ಮ ಯೋಚನೆ ಹಾಗೂ ಸಮಸ್ಯೆಯ ಪರಿಹಾರ ಕಂಡುಕೊಳ್ಳುವ ಬಗೆ ಎದುರಿರುವ ವ್ಯಕ್ತಿಯ ಮೇಲೆ ತುಂಬಾ ಪರಿಣಾಮ ಬೀರುತ್ತವೆ. ಆದ್ದರಿಂದ, ನಾವು ನಮ್ಮನ್ನು ಸಮಾಜದಲ್ಲಿ ಪ್ರತಿನಿಧಿಸುವ, ಬಿಂಬಿಸುವುದು ಬಹು ಮುಖ್ಯ.
ಸಮಾಲೋಚಕನು ಉತ್ತಮ ರೀತಿಯ ಉಡುಪನ್ನು ಧರಿಸಬೇಕು, ಶಿಸ್ತಿನಿಂದ ಕಾಣಿಸಬೇಕು. ಉತ್ತಮ ಕೇಳುಗನಾಗಿರಬೇಕು, ಗಮನವಿಟ್ಟು ವ್ಯಕ್ತಿಯ ಸಮಸ್ಯೆಯನ್ನು ಆಲಿಸಬೇಕು, ಕೆಲವು ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.
ಸಮಾಲೋಚಕನು ಶಾಂತರೀತಿಯಿಂದ, ಸಮಾಧಾನದಿಂದ ತನ್ನ ಹಾವಭಾವವನ್ನು ನಿಯಂತ್ರಣದಲ್ಲಿಡಬೇಕು, ಯಾವುದೇ ರೀತಿಯ ಅಸಡ್ಡೆ, ತಿರಸ್ಕಾರ, ಅಸೂಯೆ, ಆಲಸ್ಯ, ಕೋಪ, ನೋವನ್ನು ವ್ಯಕ್ತಪಡಿಸಬಾರದು. ಇದರಿಂದ ವ್ಯಕ್ತಿಯು ತನ್ನ ನೋವನ್ನು, ಸಮಸ್ಯೆಯನ್ನು ತೋಡಿಕೊಳ್ಳಲು ಹಿಂಜರಿಯಬಹುದು, ಕಳವಳಗೊಳ್ಳಬಹುದು. ಆದ್ದರಿಂದ ಸಮಾಲೋಚಕನ ಹಾವಭಾವ ಬಹು ಮುಖ್ಯ.
ಸಮಾಲೋಚಕನು ದಯೆ, ಕರುಣೆ, ಸಹಾನುಭೂತಿ, ಅನುಕಂಪ, ಕನಿಕರ ಹೊಂದುವುದು ಬಹಳ ಮುಖ್ಯ. ಈ ಅಂಶಗಳು ಕೂಡ ಕಕ್ಷಿದಾರನ ಮೇಲೆ ತುಂಬಾ ಪರಿಣಾಮ ಬೀರುತ್ತವೆ.
ಸಮಾಲೋಚಕನು ಕಕ್ಷಿದಾರನ ಮಾತಿನ ಆಧಾರದ ಮೇಲೆ ಯಾವುದೇ ರೀತಿಯ ನಿರ್ಧಾರ, ಒಂದೇ ದೃಷ್ಟಿಕೋನದಲ್ಲಿ ವಿಚಾರಮಾಡಿ, ಯಾವುದೇ ರೀತಿಯ ನಿರ್ಣಾಯಕ ಹಂತಕ್ಕೆ ಬರಬಾರದು. ಎಲ್ಲಾ ಆಯಾಮಗಳಲ್ಲಿ ವಿಚಾರಿಸಿ, ಯೋಚಿಸಿ ನಂತರವೇ ನಿರ್ಣಯಕ್ಕೆ ಬರಬೇಕು
ಸಮಾಲೋಚಕನು ಗೌಪ್ಯತೆ ಹಾಗೂ ರಹಸ್ಯವಾಗಿ ಕಕ್ಷಿದಾರನ ಮಾಹಿತಿ ಹಾಗೂ ಅವನ ಸಮಸ್ಯೆಯನ್ನು ಕಾಪಾಡಬೇಕು. ವ್ಯಕ್ತಿಯು ತನ್ನ ಸಮಸ್ಯೆಯನ್ನು ತೋಡಿಕೊಳ್ಳುತ್ತಾರೆ ಅಂದರೆ ನಾವು ಸಹಾಯ ಮಾಡುವ ಸ್ಥಾನದಲ್ಲಿದ್ದೇವೆ. ಆದರೆ ಸಮಾಜದಲ್ಲಿ ಆ ವ್ಯಕ್ತಿಯ ಸಮಸ್ಯೆಯನ್ನು ಹೇಳಿಕೊಂಡು ಬರುವ ಮೂಲಕ, ನಮ್ಮನ್ನು ಉನ್ನತ ಸ್ಥಾನದಲ್ಲಿ ತೋರಿಸಬೇಕೆಂಬ ಅವಸರದಲ್ಲಿ ಇನ್ನೊಬ್ಬರನ್ನು ಸಣ್ಣವರನ್ನಾಗಿಸಬಾರದು ಎಂಬ ಅರಿವು ನಮ್ಮಲ್ಲಿರಬೇಕು.
ಸಮಾಲೋಚಕನು ಉತ್ತಮ ಮಾತುಗಾರನಾಗಿರಬೇಕು. ಮಾತು ಮಹತ್ವಪೂರ್ಣವಾಗಿರಬೇಕು, ಅರ್ಥಪೂರ್ಣವಾಗಿರಬೇಕು, ಮೌಖಿಕವಾಗಿ ಹಾಗೂ ಅಮೌಖಿಕವಾಗಿ ಮಾತನಾಡುವ ಪರಿಣತಿ ಹೊಂದಿರಬೇಕು.
ಸಮಾಲೋಚಕನಿಗೆ ಸಮಸ್ಯೆ ಬಗೆಹರಿಸುವ ಪಥ, ವಿಧಾನ, ಕೌಶಲ್ಯವನ್ನು ಹೊಂದಿರಬೇಕು. ತಾನು ಮಾಡುತ್ತಿರುವ ಕೆಲಸದ ಮೇಲೆ, ತನ್ನ ಮಾತಿನ ಮೇಲೆ, ಬಗೆಹರಿಸುತ್ತಿರುವ ವಿಧಾನದ ಮೇಲೆ ಗಮನವಿರಬೇಕು. ಹಾಗೂ ಮುಖ್ಯವಾಗಿ ತನ್ನ ನಿಯಮ ಹಾಗೂ ಕಟ್ಟುಪಾಡುಗಳನ್ನು ದಾಟದೆ, ತನ್ನ ವೃತ್ತಿ ವ್ಯಾಪ್ತಿಯಲ್ಲಿಯೇ ಬಗೆಹರಿಸಬೇಕು.
ಸಮಾಲೋಚಕನು ಸಾಂಸ್ಕೃತಿಕವಾಗಿ, ಧರ್ಮದ ವಿಚಾರಗಳನ್ನು, ರೀತಿ-ರಿವಾಜುಗಳನ್ನು ಯಾವುದೇ ರೀತಿಯ ಜಾತಿ, ಧರ್ಮ, ಪಂಗಡಗಳನ್ನು ಅವಮಾನಿಸದೆ, ಅವರ ಭಾವನೆಗಳಿಗೆ ದಕ್ಕೆ ಬಾರದಂತೆ, ಅವರ ವಿಚಾರಗಳಿಗೆ ಹಾನಿಯಾಗದಂತೆ, ಎಲ್ಲ ಜಾತಿ-ಧರ್ಮಗಳಿಗೂ ಗೌರವವನ್ನು ಚಾಚುವಂತೆ ನೋಡಿಕೊಳ್ಳುವುದು ಬಹು ಮುಖ್ಯ.
ಸಮಾಲೋಚಕನ ಮಾತುಗಳು ಕಕ್ಷಿದಾರನ ಸಮಸ್ಯೆಗಳನ್ನು ನಿವಾರಿಸುವುದು, ಸಮಸ್ಯೆಯನ್ನು ಎದುರಿಸುವ ಶಕ್ತಿಯನ್ನು ನೀಡುವುದು, ತನ್ನ ಗುರಿಯನ್ನು ಮುಟ್ಟುವದಕ್ಕೆ ದಾರಿ ತೋರಿಸುವುದು ಹಾಗೂ ಅದಕ್ಕೆ ಬೇಕಾದ ತಯಾರಿಯನ್ನು ನಡೆಸಿ ಮುನ್ನಡೆಯುವಂತೆ ಮಾರ್ಗದರ್ಶನ ನೀಡುವುದು ಸಮಾಲೋಚಕನ ಕರ್ತವ್ಯ.
ಈ ಎಲ್ಲಾ ಗುಣಗಳು ಹಾಗೂ ಲಕ್ಷಣಗಳನ್ನು ಸಮಾಲೋಚಕನು ಹೊಂದಿರಬೇಕು. ಆಗ ಮಾತ್ರ ಸಮಾಲೋಚಕನು ಕಕ್ಷಿದಾರನಿಗೆ ಆಪ್ತ ಸಮಾಲೋಚಕನಾಗಲು ಸಹಾಯವಾಗುತ್ತದೆ.
ಮುಂದಿನ ಸಂಚಿಕೆಯಲ್ಲಿ ಸಮಾಲೋಚಕನು ಕಕ್ಷಿದಾರನ ಜೊತೆಗೆ ಹೇಗೆ ಸಂವಹನ ಮಾಡಬೇಕು, ಯಾವ ರೀತಿ ನಡೆಸಬೇಕೆಂಬುದನ್ನು ತಿಳಿಯೋಣ
ಧನುಷ್ ಭಟ್

About the author

Adyot

Leave a Comment