
ಆದ್ಯೋತ್ ಸುದ್ದಿನಿಧಿ:
ಇವತ್ತಿನ ಸಂಚಿಕೆಯಲ್ಲಿ ಸ್ವಲ್ಪ ಗಂಭೀರ ವಿಷಯದ ಬಗ್ಗೆ ಚರ್ಚೆ ನಡೆಸೋಣ.
ಶಿಕ್ಷಣ ಹಾಗು ಶೈಕ್ಷಣಿಕ ವಿಷಯದ ಬಗ್ಗೆ ಮಾತನಾಡುವ ಮೊದಲು, ಮಕ್ಕಳ ಬೆಳವಣಿಗೆ ಹಂತಗಳಲ್ಲಿ ಪೋಷಕರ ಪಾತ್ರ, ಸಹಕಾರ, ಪ್ರೋತ್ಸಾಹ, ಗಮನ ಹರಿಸುವ ಪರಿ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ತೆಗೆದುಕೊಳ್ಳುವ ನಿರ್ಧಾರದಲ್ಲಿ ಮಾಡುವ ತಪ್ಪು ನಿರ್ಣಯಗಳು, ಅವಸರದ ನಿರ್ಧಾರಗಳ ಬಗ್ಗೆ ಅರಿಯೋಣ.
ಮಗುವಿನ ಜನನ ತಂದೆ-ತಾಯಿಯ ಬಾಳಿನಲ್ಲಿ ಒಂದು ಹೊಸ ಅಧ್ಯಾಯ ಶುರುವಾದಂತೆ. ತಮ್ಮ ಕನಸು, ಪ್ರೀತಿ, ಆಶಾಗೋಪುರಗಳನ್ನು ಕಟ್ಟಿ ಅದನ್ನು ಸುಂದರವಾಗಿಸಲು ಹಗಲಿರುಳು ಪರಿಶ್ರಮ ಪಡುತ್ತಾರೆ. ಈ ಹಂತದಲ್ಲಿ ಹಲವಾರು ಪೋಷಕರು ತಾವು ಕಾಣದ, ತಾವು ಪಡೆಯಲಾರದ, ಈಡೇರಿಸಲಾಗದ ತಮ್ಮ ಕನಸುಗಳನ್ನು, ತಪ್ಪಿಹೋದ ಅವಕಾಶಗಳನ್ನು ಮಕ್ಕಳ ಮೇಲೆ ಹೇರುವ ಸಾಧ್ಯತೆಗಳು ತುಂಬಾ ಇರುತ್ತವೆ. ಈ ಘಟನೆಗಳಿಂದ ಮಕ್ಕಳ ಮೇಲೆ ಒತ್ತಡ, ಮಾನಸಿಕ ಹಿಂಸೆ, ಉಸಿರುಗಟ್ಟಿಸುವ ವಾತಾವರಣ, ಮನೋಬಲ ಹಾಗೂ ಆತ್ಮವಿಶ್ವಾಸ ದಿನೇದಿನೇ ಕುಂದುತ್ತಾ ಹೋಗುತ್ತದೆ. ಅದನ್ನು ತಪ್ಪಿಸುವುದು ಹೇಗೆ? ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಯಾವ ಶಿಕ್ಷಣ ನೀಡಬೇಕು ಎಂಬುದನ್ನು ತಿಳಿಯೋಣ.

“ಬೆಳೆಯುವ ಪೈರು ಮೋಳಕೆಯಲ್ಲಿ” ಎಂಬಂತೆ, ಚಿಕ್ಕ ವಯಸ್ಸಿನಲ್ಲಿ ಅಜ್ಜಿ-ಅಜ್ಜನ ಮಡಿಲಲ್ಲಿ ಆಟವಾಡುತ್ತಾ ಹಿರಿಕಿರಿಯ ವಯಸ್ಸಿನವರಿಗೆ ಗೌರವ ಹಾಗೂ ಸಂಸ್ಕಾರಗಳನ್ನು ಕಲಿಸುತ್ತಾರೆ. ಮಂತ್ರ-ಶ್ಲೋಕಗಳು, ರಾಮಾಯಣ ಮಹಾಭಾರತದಂತಹ ಪುರಾಣ ಕಥೆಗಳು, ಪಂಚತಂತ್ರ ಹಾಗೂ
ನೈತಿಕ ಕಥೆಗಳ ಮೂಲಕ ಜೀವನ ಪಾಠ ಕಲಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಜಾಗತೀಕರಣ, ಸಾಮಾಜಿಕೀಕರಣ ಹಾಗೂ ಉತ್ತಮ ಜೀವನ ಶೈಲಿಯನ್ನು ಪಡೆದುಕೊಳ್ಳಲು ಪಟ್ಟಣದ ದಿಕ್ಕಿಗೆ ಮುಖಮಾಡಿ ಅಜ್ಜಿ-ಅಜ್ಜಿಯಿಂದ ಮಕ್ಕಳು ದೂರವಾಗಿ ಶಿಶುವಿಹಾರಗಳಲ್ಲಿ ಸಮಯ ಕಳೆಯುತ್ತಾರೆ. ಹಾಗೆಯೆ ಅಜ್ಜ-ಅಜ್ಜಿಯ ಮನೆಯ ದೂರದ ಜೊತೆಗೆ ಮಾನಸಿಕವಾಗಿಯೂ ದೂರ ಹೋಗುತ್ತಿದ್ದಾರೆ.
ಸಮಾಜದ ಪ್ರತಿಷ್ಠೆಗಾಗಿ ಮಕ್ಕಳಿಗೆ ಮಾತೃಭಾಷೆಯನ್ನು ಬಿಟ್ಟು ಆಂಗ್ಲ ಭಾಷೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇದರಿಂದಾಗಿ ಭಾಷಾ ಸಮಸ್ಯೆಯಿಂದ ಅಜ್ಜಿ-ಅಜ್ಜಿ ಮೊಮ್ಮಕ್ಕಳ ಜೊತೆಗೆ ಮಾತನಾಡಲು ಕಷ್ಟವಾಗುತ್ತಿದೆ.
ಸಮಾಜ ಎಷ್ಟೇ ಮುಂದುವರಿದರೂ ಸಂಸ್ಕಾರ ಹಾಗು ಸನ್ನಡತೆ ನಮ್ಮ ಚಿಕ್ಕ ವಯಸ್ಸಿನಲ್ಲಿಯೆ ದೊರೆಯಬೇಕು, ಬಜಾರಿನಲ್ಲಿ ಅಲ್ಲ. ಉತ್ತಮ ಜೀವನದ ಅಡಿಪಾಯ ಗಟ್ಟಿಯಾಗದಿದ್ದರೆ ಹಣ-ಶ್ರಿಮಂತಿಕೆಯಿಂದ ಅದನ್ನು ಕಟ್ಟಲು ಸಾಧ್ಯವಿಲ್ಲ. ಆದ್ದರಿಂದ ಪ್ರಥಮ ಹಂತದ ಶಿಕ್ಷಣವೆಂದರೆ ಸಂಸ್ಕಾರ. ಅದನ್ನು ಪಡೆದುಕೊಂಡ ಮೇಲೆಯೆ ಮುಂದಿನ ಹಂತದ ಬೆಳವಣಿಗೆ.
ಮೊದಲಿಗೆ ತಮ್ಮ ಮಕ್ಕಳು ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಬೇಕು ಎಂಬ ಆಶೆ, ಹಂಬಲ ಇದ್ದೆ ಇರುತ್ತದೆ. ಅದಕ್ಕಾಗಿ ಅವರ ಮೇಲೆ ಒತ್ತಡ ಹೇರುವುದು ಅಥವಾ “ವಿವೇಕಾನಂದ, ಅಬ್ದುಲ್ ಕಲಾಂ, ನ್ಯೂಟನ್ ತರ” ಆಗಬೇಕು ಎಂದು ಹೇಳಿ ಬೇರೆ ಮಕ್ಕಳ ಜೊತೆಗೆ ಅವರನ್ನು ಹೋಲಿಸುವುದು ಅಥವಾ ಅವರನ್ನು ನೋಡಿ ಕಲಿ ಎಂಬುದು ಎಷ್ಟು ಮಟ್ಟಿಗೆ ಸರಿ? ಪ್ರತಿಯೊಂದು ಮಗುವಿನಲ್ಲೂ ಒಂದು ವಿಶೇಷವಾದ ಕಲೆ, ಬುದ್ಧಿವಂತಿಕೆ, ಕೌಶಲ್ಯಗಳಿರುತ್ತವೆ. ಅದನ್ನು ಮೊದಲು ಗುರುತಿಸುವುದು ಪೋಷಕರ ಕರ್ತವ್ಯ. ಕೇವಲ ಇಂಜಿನಿಯರ್ ಅಥವಾ ಡಾಕ್ಟರ್‌ರಾದರೆ ಮಾತ್ರ ಸಮಾಜದಲ್ಲಿ ಸ್ಥಾನಮಾನ ಸಿಗುತ್ತದೆ ಎಂಬ ಯೋಚನೆ ತಪ್ಪು.
ಉದಾ: ಕೇವಲ ಪಿಯುಸಿ ಯಲ್ಲಿ ವಿಜ್ಞಾನ ಅಧ್ಯಯನ ಮಾಡಿದರೆ ಮಾತ್ರ ಉತ್ತಮ ಜ್ಞಾನ, ಗರ್ವಪೂರ್ವಕವಾಗಿ ಸಮಾಜದಲ್ಲಿ ಹೇಳಲು ಸಾಧ್ಯವಿಲ್ಲ. ವಾಣಿಜ್ಯ ತೆಗೆದುಕೊಂಡರೆ ಅಲ್ಪ ಜ್ಞಾನ, ಕಲಾ ವಿಭಾಗ ಅಥವಾ ಡಿಪ್ಲೊಮಾ/ಐಟಿಐ ಮಾಡಿದವರು ಅಪ್ರಯೋಜಕ ಅಥವಾ ನಾಚಿಕೆ ಎಂಬ ಭಾವನೆ ಕೂಡ ತಪ್ಪು.
“ಗಿಳಿಯನ್ನು ಬಂಗಾರದ ಪಂಜರದಲ್ಲಿ ಇಟ್ಟು ಸಾಕಿದರೆ ಅದು ಸಹಜವಾಗಿರುತ್ತದೆಯಾ?”ಹಳಸಿದ ಅನ್ನವನ್ನು ಬಂಗಾರದ ತಟ್ಟೆಯಲ್ಲಿ ಊಟ ಮಾಡಿದರೆ ಅದು ರುಚಿಯಾಗಿರುತ್ತದೆಯಾ?”– ಮಕ್ಕಳಿಗೆ ಆಸಕ್ತಿ ಇಲ್ಲದ ವಿಷಯದಲ್ಲಿ ತೊಡಗಿಸಿದರೆ ಅವರು ಅದರಲ್ಲಿ ಶತಃ ಪ್ರಮಾಣದಲ್ಲಿ ಯಶಸ್ಸು ಸಾಧಿಸಬಹುದು ಎಂಬುದು ಅನುಮಾನ.
ಪೋಷಕರ ಮೊದಲ ಹೆಜ್ಜೆ: ತಮ್ಮ ಮಕ್ಕಳು ಯಾವ ವಿಷಯಗಳಲ್ಲಿ ಆಸಕ್ತರಾಗಿದ್ದಾರೆ ಎಂಬುದನ್ನು ಅರಿತುಕೊಂಡು, ಅದನ್ನು ಪ್ರೋತ್ಸಾಹಿಸಿದರೆ ಅವರು ಸಮಾಜದಲ್ಲಿ ಸಾವಿರಾರು ಜನರಿಗೆ ಮಾದರಿಯಾಗುತ್ತಾರೆ. ಒಳ್ಳೆಯ ಹಾಗೂ ಪರಿಪೂರ್ಣ ಜೀವನ ನಡೆಸಲು ಸಾಧ್ಯ.
ಹಾಗೆಯೇ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಮೊಬೈಲ್ ಕೊಡುವುದನ್ನು ಬಿಟ್ಟು, ಕಲೆ, ಸಾಂಸ್ಕೃತಿಕ, ಜನಪದ, ಯಕ್ಷಗಾನ, ಸಾಹಿತ್ಯದ ರುಚಿಯನ್ನು ಉಣಬಡಿಸಿದರೆ ಮುಂದೆ ಅದೆ ಹವ್ಯಾಸವಾಗಿ ಜೀವನಕ್ಕೂ, ಜೀವನೋಪಾಯಕ್ಕೂ ಸಹಾಯವಾಗುತ್ತದೆ. ಬಾಲ್ಯಾವಸ್ಥೆಯಿಂದಲೆ ಮಕ್ಕಳನ್ನು ಕ್ರಿಯಾಶೀಲರನ್ನಾಗಿಸುವುದೂ, ಸೊಂಪು/ಸೊಂಬೆಯನ್ನಾಗಿಸುವುದೂ ಪೋಷಕರ ಮುಂದಿರುವ ಪ್ರಕ್ರಿಯೆಯೇ ಆಗಿದೆ.
ಅತಿಯಾದ ಮುದ್ದು, ಕಾಳಜಿ, ಮಮಕಾರ, ವ್ಯಾಮೋಹ, ಅಳತೆಯನ್ನು ಮೀರಿ ಹೋದರೆ ಮಕ್ಕಳು ಬಹುಚಟುವಟಿಕೆಗಳಲ್ಲಿ ಪಾಲ್ಗೊಳ್ಳದೆ ಅಂತರಮುಖಿಗಳಾಗುತ್ತಾರೆ. ಆದ್ದರಿಂದ ಪ್ರಾಥಮಿಕ ಹಂತದ ಶಿಕ್ಷಣ ಮನೆದಲ್ಲಿರುವ ಅಜ್ಜಿ-ಅಜ್ಜಿಯವರಿಂದ, ಪೋಷಕರಿಂದಲೇ ಆರಂಭವಾಗಬೇಕು.
ಮುಂದಿನ ಸಂಚಿಕೆಯಲ್ಲಿಶೈಕ್ಷಣಿಕ ವಿಷಯಗಳು ಹಾಗು ಯಾವ ಕೋರ್ಸ್ ತೆಗೆದುಕೊಂಡರೆ ಉತ್ತಮ ಮತ್ತು ಪ್ರಗತಿ ಸಾಧ್ಯ ಎಂಬ ಬಗ್ಗೆ, ಹೊಸ ಅಧ್ಯಯನಗಳ ಮಾಹಿತಿ ಪಡೆಯೋಣ.
ಧನುಷ್ ಭಟ್
9945266006
