ಸಿದ್ದಾಪುರ ಇಟಗಿ ಶ್ರೀಕ್ಷೇತ್ರ ಅಷ್ಟಬಂಧ ಮಹೋತ್ಸವ ಸ್ಮರಣ ಸಂಚಿಕೆ “ರಾಮೇಶ್ವರ” ಬಿಡುಗಡೆ


ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಇಟಗಿಯ ಶ್ರೀರಾಮೇಶ್ವರ ದೇವರ “ಅಷ್ಟಬಂಧ ಮಹೋತ್ಸವ ಕಾರ್ಯಕ್ರಮದ ಕುರಿತಾದ “ರಾಮೇಶ್ವರ” ಸ್ಮರಣ ಸಂಚಿಕೆಯನ್ನು ಶನಿವಾರ ಬಿಡುಗಡೆಗೊಳಿಸಲಾಯಿತು.

ಸ್ಮರಣಸಂಚಿಕೆಯನ್ನು ಬಿಡುಗಡೆಗೊಳಿಸಿದ ಖ್ಯಾತ ಯಕ್ಷಗಾನ ತಾಳಮದ್ದಲೆ ಅರ್ಥಧಾರಿ ವಾಸುದೇವ ರಂಗಾ ಭಟ್ಟ ಮಾತನಾಡಿ,ಶ್ರೀರಾಮ ಹಾಗೂ ಈಶ್ವರ ದೇವರುಗಳ ಸಮನ್ವಯ ಈ ಕ್ಷೇತ್ರದಲ್ಲಿದ್ದು ಇದರ ಕುರಿತಾದ ಸ್ಮರಣ ಸಂಚಿಕೆಯು ಸಾಕಷ್ಟು ವಿಶೇಷ ಅಂಶಗಳನ್ನು ಒಳಗೊಂಡಿದೆ. ನಾವು ಆರಾಧಿಸಿಕೊಂಡು ಬರುತ್ತಿರುವ ದೇವರ ಅಷ್ಟಬಂಧದAತಹ ಕಾರ್ಯಕ್ರಮಗಳಿಂದ ಭಕ್ತರಲ್ಲಿಯ ಶ್ರದ್ಧಾ ವಿಶ್ವಾಸ ಮತ್ತಷ್ಟು ಹೆಚ್ಚುತ್ತದೆ. ದೇವರಿಗೆ ನಿಗದಿತ ಅವಧಿಯಲ್ಲಿ ಅಷ್ಟಬಂಧವನ್ನು ನೆರವೇರಿಸುವುದು ನಮ್ಮ ಆಚರಣೆ-ಸಂಪ್ರದಾಯ
ಒಳಗೊಂಡಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಭಾರತ ಸೇವಾದಳ ತಾಲೂಕಾ ಅಧ್ಯಕ್ಷ ಕೆಕ್ಕಾರ ನಾಗರಾಜ ಭಟ್ಟ, ಶ್ರೀಕ್ಷೇತ್ರ ಇಟಗಿಯ ಐತಿಹಾಸಿಕ ಹಿನ್ನೆಲೆಯನ್ನು ವಿವರಿಸಿ ವಿಜಯನಗರ ಅರಸರ ಮಾಂಡಳಿಕರಾಗಿ ಆಳುತ್ತಿದ್ದ ಬಿಳಗಿಯ ಅರಸರ ಕಾಲದಲ್ಲಿ ಇಟಗಿ ಶ್ರೀ ಕ್ಷೇತ್ರ ಹಿಂದೆAದಿಗಿAತಲೂ ಹೆಚ್ಚು ಪ್ರವರ್ಧಮಾನಕ್ಕೆ ಬಂದುದು ತಿಳಿದುಬರುತ್ತದೆ. ಬಿಳಗಿಯನ್ನು ಆಳಿದ ಅರಸರು ಇಟಗಿ ಹಾಗೂ ಭುವನಗಿರಿ ಕ್ಷೇತ್ರಗಳನ್ನು ತಮ್ಮ ಎರಡು ಕಣ್ಣುಗಳಂತೆ ರಕ್ಷಿಸಿಕೊಂಡು ಬಂದಿದ್ದು ಸಾಕಷ್ಟು ಅಭಿವೃದ್ಧಿ ಮಾಡಿ ಭೂಮಿ, ದತ್ತಿಗಳನ್ನು ನೀಡಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಎಂದರು.

ಡಾ.ಶಶಿಭೂಷಣ ಹೆಗಡೆ ಮಾತನಾಡಿ, ಶ್ರೀ ರಾಮೇಶ್ವರ ದೇವರಿಗೆ ಅಷ್ಟಬಂಧ ನೆರವೇರಿಸುವ ಮೂಲಕ ಇತಿಹಾಸ ನಿರ್ಮಾಣವಾಗಿದೆ. ಅಂದಿನಿAದ ಇಂದಿನವರೆಗೂ ಶ್ರೀ ಕ್ಷೇತ್ರದಲ್ಲಿ ಅನ್ನದಾಸೋಹ ನಡೆದುಕೊಂಡು ಬಂದಿದ್ದು ಹೊತ್ತಿಸಿದ ಒಲೆ ಆರಿಲ್ಲ. ಒಳ್ಳೆಯ ಮನಸ್ಸು ಹಾಗೂ ಭಕ್ತಿಯಿದ್ದರೆ ಎಲ್ಲಾ ಕಾರ್ಯಗಳೂ ಸಾಂಗವಾಗಿ ನೆರವೇರುತ್ತದೆ ಎನ್ನುವುದಕ್ಕೆ ಇಲ್ಲಿ ನಡೆದ ಕಾರ್ಯಕ್ರಮಗಳು ಸಾಕ್ಷಿಯಾಗಿವೆ. ಸ್ಮರಣ ಸಂಚಿಕೆಯನ್ನೂ ಹೊರತಂದಿರುವುದರಿAದ ಮುಂದೆ ಇಂತಹ ವ್ಯವಸ್ಥೆಯನ್ನು ನಡೆಸಿಕೊಂಡುಹೋಗುವವರಿಗೆ ಈ ಸಂಚಿಕೆ ದಾರಿದೀಪವಾಗುತ್ತದೆ ಎಂದರು.

ಸ್ಮರಣ ಸಂಚಿಕೆಯ ಸಂಪಾದಕ ಸದಾನಂದ ಹೆಗಡೆ ಸಂಚಿಕೆಯಲ್ಲಿ ಅಳವಡಿಸಿರುವ ವಿಷಯಗಳನ್ನು ಸವಿಸ್ತಾರವಾಗಿ ಪ್ರಸ್ತಾವಿಸಿ ರಾಮೇಶ್ವರ ಸ್ಮರಣ ಸಂಚಿಕೆಯನ್ನು ಸಂಗ್ರಹಯೋಗ್ಯವಾಗಿ ತರುವಲ್ಲಿ ಸಾಕಷ್ಟು ಜನರ ಸಹಯೋಗವಿದೆ ಎಂದರು.
ಸಭೆಯ ಅಧ್ಯಕ್ಷತೆವಹಿಸಿದ್ದ ದೇವಾಲಯದ ಆಡಳಿತ ಮೊಕ್ತೇಸರ ಚಂದ್ರಶೇಖರ ಹೆಗಡೆ, ಜಾತಿ, ಲಿಂಗ, ವಯಸ್ಸಿನ ಭೇದವಿಲ್ಲದೆ ಎಲ್ಲರ ಸಹಕಾರದಿಂದ ಅಷ್ಟಬಂಧ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ಇದೀಗ ಸ್ಮರಣ ಸಂಚಿಕೆಯೂ ಹೊರಬಂದು ಭಕ್ತರ ಕೈಸೇರುತ್ತಿರುವುದು ಸಂತಸದಾಯಕ ಎಂದರು.
ಗಜಾನನ ಹೆಗಡೆ ಕೊಡ್ತಗಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಾರಾಯಣ ಹೆಗಡೆ ನಿರ್ವಹಿಸಿ, ವಂದಿಸಿದರು.

ನಂತರ ರಾಮೇಶ್ವರ ಗೆಳೆಯರ ಬಳಗದವರ ಸಂಘಟನೆಯಲ್ಲಿ ದಕ್ಷಿಣೋತ್ತರಕನ್ನಡ ಕಲಾವಿದರ ಕೂಡುವಿಕೆಯಲ್ಲಿ “ರಾಮ ನಿರ್ಯಾಣ” ಯಕ್ಷಗಾನ ತಾಳಮದ್ದಲೆ ಯಶಸ್ವಿಯಾಗಿ ನಡೆಯಿತು.
ಇಟಗಿಯಲ್ಲಿ ಅರ್ಥಪೂರ್ಣವಾಗಿ ನಡೆದರಾಮನಿರ್ಯಾಣತಾಳಮದ್ದಲೆ.

ರಾಮನಾಗಿ ಖ್ಯಾತ ಅರ್ಥಧಾರಿ ವಾಸುದೇವ ರಂಗಾ ಭಟ್ಟ ಶ್ರೀ ರಾಮಚಂದ್ರನ ಮೇರು ವ್ಯಕ್ತಿತ್ವದ ಚಿತ್ರಣವನ್ನು ತಮ್ಮ ಅರ್ಥಗಾರಿಕೆಯಲ್ಲಿ ಸ್ಪಷ್ಟಪಡಿಸಿದರು. ಪ್ರೊ.ಪವನ ಕಿರಣಕೆರೆ ಲಕ್ಷö್ಮಣನಾಗಿ ಸಹೋದರ ಬಾಂಧವ್ಯವನ್ನು ವಿಷದಪಡಿಸಿದರು. ಕಾಲಪುರುಷನಾಗಿ ಪವನ ಕಿರಣಕೆರೆ ರಾಮನ ಅಂತ್ಯದ ಗಮನಸೆಳೆಯವ ಅನಿವಾರ್ಯದ ಪಾತ್ರವಾಗಿ ಮನೋಜ್ಞವಾಗಿ ಅರ್ಥ ಹೇಳಿದರು. ದೂರ್ವಾಸರಾಗಿ ಗಣೇಶ ಶೆಟ್ಟಿ ಕನ್ನಡಿಕಟ್ಟೆ ಪಾತ್ರದ ಸಿಟ್ಟು, ಅಹಂಕಾರವನ್ನು ದರ್ಶಿಸಿ ಗುಡುಗಿನಂತಹ ಸಂಭಾಷಣೆಯ ಮೂಕ ಪಾತ್ರಕ್ಕೆ ಜೀವ ತುಂಬಿದರು. ನಾಲ್ಕುತಾಸುಗಳ ಕಾಲ ನಡೆದ ತಾಳಮದ್ದಲೆಯುದ್ದಕ್ಕೂ ಪ್ರಸನ್ನ ಭಟ್ಟ ಬಾಳಕಲ್ ಸುಶ್ರಾವ್ಯವಾಗಿ ಸಂಪ್ರದಾಯಬದ್ಧವಾಗಿ ಭಾಗವತಿಕೆ ಮಾಡಿ ಸಮರ್ಥ ಸೂತ್ರಧಾರನೆನಿಸಿದರು. ರಾಘವೇಂದ್ರ ಹೆಗಡೆ ಯಲ್ಲಾಪುರ ಮೃದಂಗದಲ್ಲಿ ಕೈಚಳಕ ತೋರಿದರೆ, ಭಾರ್ಗವ ಹೆಗ್ಗೋಡು ಚಂಡೆಯ ಧ್ವನಿಯನ್ನು ಮಾರ್ದನಿಸಿದರು. ಸಂಪ್ರದಾಯಕ ಚೌಕಟ್ಟು ಮೀರದೇ, ಅನಾವಶ್ಯಕವಾಗಿ ತರ್ಕ ವಿತರ್ಕಕ್ಕೆ ಅವಕಾಶ ನೀಡದೇ, ಪರಸ್ಪರ ಪಾತ್ರಗಳ ಹಿರಿಮೆಯನ್ನು ಗೌರವಿಸುತ್ತಾ, ಸಮಯೋಚಿತ ಹೊಂದಾಣಿಕೆಯ ಮೂಲಕ ಮೂಡಿಬಂದ “ರಾಮ ನಿರ್ಯಾಣ” ತಾಳಮದ್ದಲೆ ಪ್ರೇಕ್ಷಕವರ್ಗವನ್ನು ಅಲುಗಾಡದಂತೆ ಹಿಡಿದಿಟ್ಟುಕೊಳ್ಳುವಲ್ಲಿ, ಬಹುಕಾಲ ಮನದಾಳದಲ್ಲಿ ನೆಲೆನಿಲ್ಲುವಂತೆ ಮಾಡುವಲ್ಲಿ ಯಶಸ್ವಿಯಾಯಿತು.

About the author

Adyot

Leave a Comment