
ಆದ್ಯೋತ್ ಸುದ್ದಿನಿಧಿ;
ಸಿದ್ದಾಪುರದಲ್ಲಿ ರಾಷ್ಟ್ರೀಯ ಈಡಿಗ ಮಹಾ ಮಂಡಳಿ ಹಾಗೂ ಉತ್ತರ ಕನ್ನಡ ಜಿಲ್ಲಾ ರಾಷ್ಟ್ರೀಯ ಈಡಿಗ-ನಾಮಧಾರಿ- ಬಿಲ್ಲವ- ದಿವರು ಮಹಾಮಂಡಳಿ ಸಂಯುಕ್ತ ಆಶ್ರಯದಲ್ಲಿ ಸಮುದಾಯದ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ, ರಾಜಕೀಯದ ಬಗ್ಗೆ ಸಮಗ್ರ ಚಿಂತನೆ,ಚರ್ಚೆ,ನಿರ್ಣಯ ಸಂಬಂಧಿಸಿದ ಸಮಾವೇಶ ನಡೆಯಿತು.

ಸಾನ್ನಿಧ್ಯವಹಿಸಿದ್ದ ಡಾ ಪ್ರಣವಾನಂದ ಸ್ವಾಮೀಜಿ ಮಾತನಾಡಿ,ಎಲ್ಲಾ ಕಡೆಗಳಲ್ಲೂ ನಮ್ಮ ಸಮುದಾಯದವರನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ. ನಮ್ಮ ಸಮಾಜದವರು ಅವಘಡದಲ್ಲಿ ಸತ್ತರೂ ಯಾರೂ ಬರುವುದೂ ಇಲ್ಲ ಸರಿಯಾಗಿ ಪರಿಹಾರವನ್ನು ಕೊಡುವುದೂ ಇಲ್ಲ. ನಮ್ಮ ಸಮುದಾಯದ ಬಲದಿಂದ ಶಾಸಕರಾದವರು,ಮಂತ್ರಿಗಳಾದವರು ಸಮಾಜದ ಬಗ್ಗೆ ಕಿಂಚಿತ್ತು ಲಕ್ಷ್ಯ ಕೊಡದೆ ತಮ್ಮ ಲಾಭವನ್ನೂ ಮಾತ್ರ ಮಾಡಿಕೊಳ್ಳುತ್ತಿದ್ದಾರೆ. ಅಧಿವೇಶನದಲ್ಲಿ ಕೆಲವು ಸಮಾಜದ ಶಾಸಕರು ತಮ್ಮ ಸಮಾಜದ ಅಭಿವೃದ್ಧಿಗೆ ಅವಶ್ಯಕವಿರುವ ಕೆಲಸದ ಬಗ್ಗೆ ಧ್ವನಿ ಎತ್ತುತ್ತಾರೆ ಆದರೆ ನಮ್ಮ ಸಮಾಜದ ಶಾಸಕರು ಯಾವುದೇ ಮಾತನಾಡದೆ ಮೌನವಹಿಸುತ್ತಾರೆ ಹೀಗಾದರೆ ನಮ್ಮ ಸಮುದಾಯ ಅಭಿವೃದ್ಧಿಯಾಗಲು ಸಾಧ್ಯವೇ?ನಮ್ಮ ಸಮಾಜದ ಅಸ್ತಿತ್ವ ಉಳಿಸಿಕೊಳ್ಳಲು ನಾವು ಧ್ವನಿ ಎತ್ತಬೇಕಾಗಿದೆ. ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ. ಹಿಂದಿನ ಸರಕಾರದಲ್ಲಿ ನಮ್ಮ ಸಮುದಾಯದ ಇಬ್ಬರು ಮಂತ್ರಿಗಳು ನಾಲ್ಕು ಜನ ನಿಗಮ ಮಂಡಳಿ ಅಧ್ಯಕ್ಷರಿದ್ದರು ಆದರೆ ಈಗಿನ ಸರಕಾರದಲ್ಲಿ ಕೇವಲ ಒಂದು ಮಂತ್ರಿ ಸ್ಥಾನವನ್ನು ಮಾತ್ರ ನೀಡಲಾಗಿದೆ ಇದು ನಮ್ಮ ಸಮಾಜಕ್ಕೆ ಮಾಡುತ್ತಿರುವ ಅನ್ಯಾಯವಾಗಿದೆ ನಾವು ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ಸರಕಾರದ ಕಿವಿ ಹಿಂಡುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಸಮಾವೇಶ ಉದ್ಘಾಟಿಸಿದ ಮಾಜಿ ಶಾಸಕ ಜೆ.ಡಿ.ನಾಯ್ಕ ಮಾತನಾಡಿ, ಸಮುದಾಯದವರು ಎಲ್ಲಾ ರಾಜಕೀಯ ಪಕ್ಷದಲ್ಲಿದ್ದಾರೆ ರಾಜಕೀಯವಾಗಿ ಬೆಳೆಯಬೇಕಾದರೆ ಸಮುದಾಯದಲ್ಲಿ ಒಗ್ಗಟ್ಟು ಇರಬೇಕು. ಶೈಕ್ಷಣಿಕವಾಗಿ ನಮ್ಮ ಸಮುದಾಯ ಹಿಂದೆ ಇದೆ ಆದರೆ ಸಮುದಾಯದಿಂದ ಶಿಕ್ಷಣ ಸಂಸ್ಥೆ ನಡೆಸಲು ಕಷ್ಟವಾಗುತ್ತದೆ ಸರಕಾರದ ಕಠಿಣ ನಿಯಮಗಳಿರುತ್ತದೆ. ಸರಕಾರಿ ಶಾಲೆಗಳಲ್ಲೂ ಉತ್ತಮ ಶಿಕ್ಷಣ ದೊರಕುತ್ತಿದೆ ಆದ್ದರಿಂದ ನಮ್ಮ ಸಮುದಾಯದವರು ಮಕ್ಕಳಿಗೆ ಉತ್ತಮ ಶಿಕ್ಷಣ ನಿಡುವ ಕೆಲಸ ಮಾಡಬೇಕು. ಹಿಂದೆ ರಾಜಕೀಯ ಮಾಡಲು ಸರಳತೆ, ಉತ್ತಮ ಗುಣ ನಡತೆ ಮಾನದಂಡವಾಗುತ್ತಿತ್ತು ಆದರೆ ಇಂದು ಜಾತಿ ಮತ್ತು ಹಣ ಮುಖ್ಯವಾಗಿದೆ. ಹೀಗಾಗಿ ನಮ್ಮ ಸಮುದಾಯದವರು ಬೇರೆ ಸಮಾಜದವರಿಗೆ ತೊಂದರೆಯಾಗದ ರೀತಿಯಲ್ಲಿ ಸಂಘಟಿತರಾಗಿ ನಾರಾಯಣ ಗುರುಗಳ ತತ್ವ,ಆದರ್ಶ,ಚಿಂತನೆಯನ್ನು ಆದರ್ಶವಾಗಿ ನಡೆಯಬೇಕು ಎಂದರು.

ವಸಂತ ನಾಯ್ಕ ಮನಮನೆ ಮಾತನಾಡಿ,ನಮ್ಮ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಮ್ಮ ಸಮುದಾಯದವರ ಮತದಿಂದಲೇ ಚುನಾವಣೆಯಲ್ಲಿ ಗೆಲುವು ಸಿಗುತ್ತಿದೆ ಆದರೆ ನಮ್ಮ ಸಮುದಾಯದ ಶಾಸಕರು ಮಂತ್ರಿಗಳು ನಮ್ಮ ಸಮುದಾಯದವರಿಗೆ ಯಾವುದೇ ಸಹಾಯ ಮಾಡುತ್ತಿಲ್ಲ ನಮ್ಮ ಸಮುದಾಯದವರಿಗೆ ಅನ್ಯಾಯವಾಗುತ್ತಿದ್ದರೂ ನೋಡದಂತೆ ಇರುತ್ತಾರೆ ರಾಜಕೀಯವಾಗಿ,ಆರ್ಥಿಕವಾಗಿ ಮುಂದೆ ಬರುವವರನ್ನು ತುಳಿಯುವ ಕೆಲಸ ಮಾಡುತ್ತಾರೆ ಇದು ನಿಲ್ಲಬೇಕು ಅಧಿಕಾರ ಹಿಡಿದವರು ಸಮುದಾಯದ ಅಭಿವೃದ್ಧಿಯ ಬಗ್ಗೆ ಗಮನ ಕೊಡಬೇಕು ಎಂದು ಹೇಳಿದರು.

ಕೆ.ಜಿ.ಪ್ರಶಾಂತ,ವಿಕ್ರಮ ನಾಯ್ಕ ಮುಂತಾದವರು ಮಾತನಾಡಿದರು.
ವೇದಿಕೆಯಲ್ಲಿ ಈಡಿಗ ಮಹಾಮಂಡಳಿಯ ಅಧ್ಯಕ್ಷ ತಿಪ್ಪೇಸ್ವಾಮಿ, ಉಪಾಧ್ಯಕ್ಷ ನಾಗರಾಜ ನಾಯ್ಕ,ಕಾರ್ಯದರ್ಶಿ ಶಿವಕುಮಾರ ಬೆಂಗಳೂರು,ಗಾAಧೀಜಿ ನಾಯ್ಕ, ಮಹಾಮಂಡಳಿಯ ಮಹಿಳಾ ಘಟಕದ ಪೂರ್ಣಿಮ,ಮಂಜುಳಾ ಬೆಳಗಾವಿ ಮುಂತಾದವರು ಉಪಸ್ಥಿತರಿದ್ದರು.
ಈಡಿಗ ಮಹಾಮಂಡಳಿಯ ಜಿಲ್ಲಾಧ್ಯಕ್ಷ ದೇವರಾಜ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು.ದಿವಾಕರ ನಾಯ್ಕ ನಿರೂಪಣೆ ಮಾಡಿದರು. ಶಿಕ್ಷಕ ಎಂ.ಕೆ.ನಾಯ್ಕ ಸ್ವಾಗತಿಸಿದರು.

ನಮ್ಮ ಸಮುದಾಯದ ಅಭಿವೃದ್ಧಿಯ ಬಗ್ಗೆ ಮತ್ತು ರಾಜಕೀಯವಾಗಿ ನಮಗೆ ಹೆಚ್ಚು ಅವಕಾಶ ಕೊಡಬೇಕೆಂದು ಆಗ್ರಹಿಸಿ ಜನವರಿ-೬-೨೦೨೬ ರಿಂದ ಫೆ.೨೬-೨೦೨೬ರವರೆಗೆ ಗುಲಬುರ್ಗ ದಿಂದ ಬೆಂಗಳೂರು ವರೆಗೆ ೭೫೦ ಕಿ.ಮಿ.ಪಾದಯಾತ್ರೆ ನಡೆಸಲಿದ್ದೆವೆ ಅಲ್ಲದೆ ಉತ್ತರಕನ್ನಡ ಜಿಲ್ಲೆಯ ಮಧ್ಯಭಾಗದಲ್ಲಿ ಒಂದು ಲಕ್ಷ ಜನರನ್ನು ಸೇರಿಸಿ ಸಮಾವೇಶ ನಡೆಸಲಾಗುವುದು ಎಲ್ಲಾ ಪಕ್ಷದಲ್ಲಿರುವ ಸಮುದಾಯದ ಶಾಸಕರು,ನಾಯಕರು ಭಾಗವಹಿಸಲಿದ್ದಾರೆ ಎಂದು
ಡಾ.ಪ್ರಣವಾನಂದ ಸ್ವಾಮೀಜಿ ಹೇಳಿದರು
