“ಏಕಾಂಗಿ ನಾನಲ್ಲ” ಆಲ್ಬಂ ಸಾಂಗ್ ಬಿಡುಗಡೆ

ಆದ್ಯೋತ್ ಸುದ್ದಿನಿಧಿ:
ಎಸ್ ಎನ್ ಜಾಲ್ಸ್ ಕ್ರಿಯೇಟಿವ್ ಸ್ಟುಡಿಯೋದ ವತಿಯಿಂದ ನಿರ್ಮಿಸಲಾದ “ಏಕಾಂಗಿ ನಾನಲ್ಲ” ಆಲ್ಬಂ ಸಾಂಗ್ ನ್ನು ಬಾಗಲಕೋಟ ಜಿಲ್ಲೆಯ ಸುಕ್ಷೇತ್ರ ಸಿದ್ಧನಕೊಳ್ಳದ ಸಿದ್ದಪ್ಪಜ್ಜನ ಮಠದಲ್ಲಿ ಬಿಡುಗಡೆ ಮಾಡಲಾಯಿತು.
ಸಿದ್ಧನಕೊಳ್ಳದ ಪೀಠಾಧೀಪತಿಗಳಾದ ಡಾ.ಶಿವಕುಮಾರ ಮಹಾಸ್ವಾಮಿಗಳು ಯೂ ಟೂಬ್ ನಲ್ಲಿ ಬಿಡುಗಡೆ ಮಾಡಿ ಸಿಹಿತಿನ್ನಿಸುವ ಮೂಲಕ ನಟ ,ನಿರ್ಮಾಪಕ ಸಿದ್ಧಾರ್ಥ ಗೆ ಶುಭ ಹಾರೈಸಿದರು.

ನಂತರ ಮಾತನಾಡಿದ ಮಹಾಸ್ವಾಮಿಗಳು,ಸಿದ್ದಾರ್ಥ ಮೂಲತ: ಗಜೇಂದ್ರಗಡದವರು. ಕಲೆ,ಸಂಗೀತದಲ್ಲಿ ವಿಶೇಷ ಆಸಕ್ತಿ ಇರುವ ಯುವ ಕಲಾವಿದ ,ತಂತ್ರಜ್ಞರಾಗಿದ್ದು ಇದೀಗ ತಮ್ಮ ಸ್ವಂತ ಸ್ಟುಡಿಯೋ ಮೂಲಕ ಈಗಾಗಲೇ ‘ಏ ವಿಧಿಯೇ’ ಕೊರೊನಾ ಕುರಿತ ಆಲ್ಬಂ ಸಾಂಗ್ ಬಿಡುಗಡೆ ಮಾಡಿ ಜನರ ಮನ ಸೆಳೆದಿದ್ದಾರೆ. ಹಲವಾರು ಕಿರುಚಿತ್ರಗಳನ್ನೂ ನಿರ್ಮಿಸಿದ್ದಾರೆ. ಇದೀಗ ‘ಏಕಾಂಗಿ ನಾನಲ್ಲ’ ಆಲ್ಬಂ ಸಾಂಗ್ ಹುಬ್ಬಳ್ಳಿ- ಧಾರವಾಡ ಹಾಗೂ ಮಹಾರಾಷ್ಟ್ರದ ನಾನಾ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದ್ದು ಈ ಹಾಡು ಅತ್ಯಮೂಲ್ಯವಾದ ಸ್ನೇಹ ಮತ್ತು ಪ್ರೀತಿ ನಮ್ಮೊಟ್ಟಿಗೆ ಇದ್ದಾಗ ನಾವೆಲ್ಲ ಹೇಗೆ ಸಂತೋಷವಾಗಿರುತ್ತೇವೆ, ಅದೇ ಅಕಸ್ಮಾತ್ ಸ್ನೇಹ ಮತ್ತು ಪ್ರೀತಿ ಕೊಂಡಿ ಕಳಚಿಕೊಂಡಾಗ ಯಾವ ರೀತಿಯ ನೋವು ಸಂಕಟ , ಪಶ್ಚಾತ್ತಾಪವನ್ನು ಅನುಭವಿಸುತ್ತೇವೆ ಎಂಬುದನ್ನು ಇದರಲ್ಲಿ ತೋರಿಸಲಾಗಿದೆ. ಯುವ ಕಲಾವಿದ ಸಿದ್ಧಾರ್ಥ ಅವರಿಗೆ ಯೂಟೂಬ್ ನಲ್ಲಿ ಹಾಡು ನೋಡಿ, ಹೆಚ್ಚು ಶೇರ್ ಮಾಡಿ, ಸಬ್ ಸ್ಕ್ರೈಬ್ ಮಾಡುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದರು.

ನಟ ನಿರ್ಮಾಪಕ ಸಿದ್ಧಾರ್ಥ ಮಾತನಾಡಿ,ಈ ಹಾಡಿನಲ್ಲಿ ನನ್ನೊಂದಿಗೆ ದೇವಿಕಾ, ರಾಘವೇಂದ್ರ ಆರ್ ಜೆ, ಮೊದಲಾದವರು ನಟಿಸಿದ್ದಾರೆ. ವಾಣಿಶ್ರೀ ಅವರು ಹಾಡು ರಚಿಸಿದ್ದಾರೆ. ಚೇತನ ಪಾವಟೆ ಹಾಡನ್ನು ಸುಂದರವಾಗಿ ಸಂಯೋಜಿಸಿ ಹಾಡಿದ್ದಾರೆ .ಸುಭಾಷ್ ಅವರು ಹಾಡಿಗೆ ಸ್ಕ್ರೀನ್ ಪ್ಲೇ, ಮತ್ತು ನಿರ್ದೇಶನ ಮಾಡಿದ್ದಾರೆ. ರಾಘವೇಂದ್ರ ಆರ್.ಜೆ ಕೊರಿಯೋಗ್ರಫಿ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ ಅವರದಿದೆ. ರಾಜೇಶ್ ಪವಾರ್ ಛಾಯಾಗ್ರಹಣ ಸೊಗಸಾಗಿದ್ದು ಯುವ ಜನರನ್ನು ಸೆರೆ ಹಿಡಿಯುತ್ತದೆ. ಶ್ರೀಗಳು ನಮಗೆ ಯಾವಾಗಲೂ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ . ಈ ಹಾಡಿನ ಚಿತ್ರೀಕರಣದಲ್ಲಿ ಹಲವರು ತುಂಬಾ ಸಹಕಾರ ನೀಡಿದ್ದಾರೆ , ಹಿಂದಿನ ನನ್ನ ಆಲ್ಬಂ ಸಾಂಗ್ ಗೂ ಮಾಧ್ಯಮ ಬಳಗದವರು ತುಂಬಾ ಪ್ರಚಾರ ನೀಡಿದ್ದು ನಮ್ಮಂತ ಯುವ ಪ್ರತಿಭೆಗಳು ಬೆಳಗಲು ಅವಕಾಶ ನೀಡಿರುವ ಪತ್ರಿಕೆ ಸಂಪಾದಕರು, ಬಳಗದವರಿಗೆ ಕೃತಜ್ಞತೆಗಳು ಎಂದು ಸಿದ್ಧಾರ್ಥ ನುಡಿದರು.
ಈ ಸಂದರ್ಭದಲ್ಲಿ ಸಿದ್ಧಾರ್ಥ ಜಾಲಿಹಾಳ, ಅಮೀತಕುಮಾರ್ ಕಲ್ಯಾಣಶೆಟ್ಟರ್, ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ್, ರಾಘವೇಂದ್ರ ಆರ್.ಜೆ, ನಾಗರಾಜ ಕಲ್ಗುಡಿ ಮತ್ತು ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.

About the author

Adyot

Leave a Comment