ಆದ್ಯೋತ್ ಸುದ್ದಿನಿಧಿ
ಸಿದ್ದಾಪುರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರಿನ ಅಭಿನವ ಪ್ರಕಾಶನದ ಸಹಯೋಗದಲ್ಲಿ ಮಗುತನದ ಸಾಹಿತಿ ತಮ್ಮಣ್ಣ ಬೀಗಾರರ ನಾಲ್ಕು ಮಕ್ಕಳ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

ಪುಸ್ತಕ ಲೋಕಾರ್ಪಣೆಗೊಳಿಸಿದ ಚಿಂತಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ಮಕ್ಕಳಿಗಾಗಿ ದೊಡ್ಡವರು ಬರೆದಿರುವುದೆಲ್ಲವೂ ಮಕ್ಕಳ ಸಾಹಿತ್ಯವಲ್ಲ ಪ್ರಬುದ್ಧ ಮನಸ್ಸಿನ ಹಿರಿಯರು ಮಗುತನವನ್ನು ಅಳವಡಿಸಿಕೊಂಡು ಬರೆಯುವುದು ಮಕ್ಕಳ ಸಾಹಿತ್ಯವಾಗುತ್ತದೆ. ನಾವು ಬಾಲ್ಯವನ್ನು ಪಡೆಯಲು ಸಾಧ್ಯವಿಲ್ಲ ಆದರೆ ನಮ್ಮ ಮನಸ್ಸನ್ನು ಬಾಲ್ಯಾವಸ್ಥೆಯಲ್ಲಿರುವಂತೆ ರೂಪಿಸಿಕೊಳ್ಳಬೇಕು.ಭಾಷೆಗೆ ಹೊಗಳುವ ಮತ್ತು ತೆಗಳುವ ಸಾಧ್ಯತೆಗಳಿರುತ್ತದೆ ಇವೆರಡನ್ನು ಬಿಟ್ಟು ಸತ್ಯವನ್ನು ಹೇಳುವುದು ಸಾಹಿತ್ಯದ ಕೆಲಸ.ಸಮಾಜದಲ್ಲಿ ಮತ್ತು
ಸಾಹಿತ್ಯದಲ್ಲಿ ನಿರ್ಲಕ್ಷಿತವಾಗಿರುವುದು ಮಕ್ಕಳು ಮತ್ತು ಮಕ್ಕಳ ಸಾಹಿತ್ಯ. ಮಕ್ಕಳಲ್ಲಿ ಸಂಸ್ಕೃತಿ ಮತ್ತು ಸಂಪ್ರದಾಯದ ಅರಿವಿಲ್ಲ ಮಾನವೀಯತೆಯನ್ನು ಎಲ್ಲರೂ ಕಳೆದುಕೊಳ್ಳುತ್ತಿದ್ದಾರೆ ಇಂತಹ ಸಮಯದಲ್ಲಿ ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಮಕ್ಕಳ ಸಾಹಿತ್ಯದ ಅವಶ್ಯಕತೆ ಇದೆ. ಇಂದು ರಾಜಕೀಯ ಮತ್ತು ಧರ್ಮದ ಹೆಸರಿನಲ್ಲಿ ಎಲ್ಲರನ್ನೂ ಅಧೀನದಲ್ಲಿ ಇಟ್ಟುಕೊಳ್ಳಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಇವನ್ನು ಪ್ರಶ್ನಿಸುವ ತಾಕತ್ತಿರುವುದು ಸಾಹಿತ್ಯಕ್ಕೆ ಮಾತ್ರ. ಸಮಾಜದ ಸ್ವಾಸ್ಥö್ಯವನ್ನು ಕಾಪಾಡಬಲ್ಲದ್ದು ಸಾಹಿತ್ಯ ಎಂದು ಹೇಳಿದರು.

ರಾಜ್ಯಾದ್ಯಂತ ಸಾಹಿತ್ಯ ಪರಿಷತ್ತು ಹಲವು ಬಿಕ್ಕಟ್ಟಿನಿಂದ ನರಳುತ್ತಿದೆ ಆದರೆ ಇಂತಹ ಸಮಯದಲ್ಲೂ ಉತ್ತರಕನ್ನಡ ಜಿಲ್ಲೆಯ ಸಾಹಿತ್ಯ ಪರಿಷತ್ತು ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ. ಇಲ್ಲಿಯ ಪ್ರಕೃತಿ ಮತ್ತು ಸಂಸ್ಕೃತಿ ಅದ್ಭುತವಾಗಿದೆ ಇದನ್ನು ಜಗತ್ತಿನಾದ್ಯಂತ ಮುಟ್ಟಿಸುವ ಕೆಲಸವನ್ನು ಸಾಹಿತ್ಯಪರಿಷತ್ ಮಾಡಬೇಕಾಗಿದೆ ಎಂದು ನರಹಳ್ಳಿ ಹೇಳಿದರು.

ಮಕ್ಕಳ ಸಾಹಿತಿ ಧಾರವಾಡದ ಡಾ.ಆನಂದ ಪಾಟೀಲ ಮಾತನಾಡಿ,ಸಾಹಿತ್ಯ ಕ್ಷೇತ್ರದಲ್ಲಿ ಮಕ್ಕಳ ಸಾಹಿತ್ಯವನ್ನು ಪ್ರತ್ಯೇಕವಾಗಿಡಲಾಗಿದೆ. ವಿಮರ್ಶಕರು ಮಕ್ಕಳ ಸಾಹಿತ್ಯವನ್ನು ವಿಮರ್ಶಿಸುವ ಕೆಲಸ ಮಾಡಿಲ್ಲ ಇದೆಲ್ಲವನ್ನು ಆದ್ಯತೆಯಿಂದ ಮಾಡಿದರೆ ಮಕ್ಕಳ ಸಾಹಿತ್ಯಕ್ಕೆ ಗೌರವ ಸಿಗುತ್ತದೆ. ಮಕ್ಕಳ ಸಾಹಿತ್ಯಕ್ಕೆ ಉ.ಕ.ಜಿಲ್ಲೆಯ ಕೊಡುಗೆ ಹೆಚ್ಚಾಗಿದೆ ತಮ್ಮಣ್ಣ ಬೀಗಾರರ ಕತೆಗಳು ಮಧ್ಯಮವರ್ಗದ ಮಕ್ಕಳ ಬಾಲ್ಯವನ್ನು ಚಿತ್ರಿಸುತ್ತದೆ. ಮಕ್ಕಳ ಜೊತೆ ಒಡನಾಟವಿದ್ದರೆ ಮಾತ್ರ ಇಂತಹ ಸಾಹಿತ್ಯ ರಚಿಸಲು ಸಾಧ್ಯ ಎಂದು ಹೇಳಿದರು.

ಅಧ್ಯಕ್ಷತೆವಹಿಸಿದ್ದ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿದರು.
ಅಭಿನವ ಪ್ರಕಾಶನದ ನ.ರವಿಕುಮಾರ ಪ್ರಾಸ್ತಾವಿಕ ಮಾತನಾಡಿ,ಅಭಿನವ ಪ್ರಕಾಶನದಲ್ಲಿ ಸಾಕಷ್ಟು ಹೆಸರಾಂತ ಸಾಹಿತಿಗಳ ಪುಸ್ತಕಗಳನ್ನು ಪ್ರಕಟಿಸಿದ್ದೆವೆ ಆದರೆ ನಾವು ಮಕ್ಕಳ ಸಾಹಿತ್ಯವನ್ನು ಸಾಕಷ್ಟು ಪ್ರಕಟಿಸಿದ್ದೆವೆ. ತಮ್ಮಣ್ಣ ಬೀಗಾರರ ಕತೆಗಳು ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿರುತ್ತದೆ.ನಮ್ಮೆಲ್ಲರ ಬಾಲ್ಯದ ಅನುಭವವನ್ನು ಮಲೆನಾಡಿನ ಸುಂದರ ಪರಿಸರವನ್ನು ಅಕ್ಷರರೂಪದಲ್ಲಿ ಬರೆಯುತ್ತಾರೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹೆಚ್ನಾಯ್ಕ,ತಮ್ಮಣ್ಣ ಬೀಗಾರ,ಸಂಕಲ್ಪ ಸಂಸ್ಥೆಯ ಪಿ.ಬಿ.ಹೊಸೂರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಚಿತ್ರದುರ್ಗದ ಚಳ್ಳಕೆರೆಯ ಚಿತ್ರಕಲಾವಿದ ಜಿ.ಎಸ್.ನಾಗಾನಾಥ್ರನ್ನು ಸನ್ಮಾನಿಸಲಾಯಿತು.
ಪ್ರೋ.ರತ್ನಾಕರ ನಾಯ್ಕ ನಿರೂಪಣೆ ಮಾಡಿದರು.ಸುಮಾ ಹೆಗಡೆ ಭಾವಗೀತೆ ಹಾಡಿದರು.ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಚಂದ್ರಶೇಖರ ನಾಯ್ಜ ಕುಂಬ್ರಿಗದ್ದೆ ಸ್ವಾಗತಿಸಿದರು.
ತಮ್ನಣ್ಣ ಬೀಗಾರರ ಅಪ್ಪ ಮತ್ತು ಡಾಗಿ (ಮಕ್ಕಳ ಕಥಾಸಂಕಲನ) ಕಪ್ಪೆಯ ಪಯಣ (ನೀಳ್ಗತೆ ಬಹುವರ್ಣದ ಪುಸ್ತಕ) ಹೇಗೆಲ್ಲಾ ಆಗುತ್ತದೆ(ಮಕ್ಕಳ ಚಿತ್ರಕಥೆ) ಸೋನು(ಮಕ್ಕಳ ಕಾದಂಬರಿ) ಲೋಕಾರ್ಪಣೆ ಗೊಳಿಸಲಾಯಿತು.
