ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ಭುವನಗಿರಿಯ ಶ್ರೀಭುವನೇಶ್ವರಿಯ ಸನ್ನಿಧಾನದಲ್ಲಿ ಕನ್ನಡ ರಾಜ್ಯೋತ್ಸದ ಅಂಗವಾಗಿ ಮಾತೃ ವಂದನಾ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿದ ತಹಶೀಲ್ದಾರ ಎಂ ಆರ್ ಕುಲಕರ್ಣಿ ಮಾತನಾಡಿ, ಭುವನಗಿರಿ ಕ್ಷೇತ್ರವು ಸಿದ್ದಿಕ್ಷೇತ್ರವಾಗಿದೆ.ಹಂಪಿಯಲ್ಲಿಯೂ ಸಹ ಭುವನೇಶ್ವರಿ ದೇವಿಯ ಮೂರ್ತಿ ನೋಡಸಿಗುತ್ತದೆ. ಆದರೆ ತ್ರಿಕಾಲ ಪೂಜೆ ಸಲ್ಲುತ್ತಿರುವ ದೇವಿ ಇರುವುದು ಭುವನಗಿರಿಯಲ್ಲಿ. ತೆಂಗು, ಭತ್ತ, ಅಡಿಕೆ ಮತ್ತು ಅರಣ್ಯ ಪ್ರದೇಶದ ಮಧ್ಯದಲ್ಲಿರುವ ಈ ಪ್ರದೇಶ ರಮಣೀಯವಾಗಿದೆ ಎಂದು ಹೇಳಿದರು.

ಹಿರಿಯ ಸಾಹಿತಿ ಪದ್ಮಾಕರ ಮಾಡಗಾಂವಕರ್ ಅವರ ಶ್ವೇತಪುರ ೨೦:೨೦ ಮತ್ತು ವಿದ್ಯಾರ್ಥಿಗಳಿಗಾಗಿ ಕೃತಿಗಳನ್ನು ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಬಿಡುಗಡೆಗೊಳಿಸಿ,ಯಾರಿಗೆ ಇತಿಹಾಸದ ಪ್ರಜ್ಞೆ ಇರುವುದಿಲ್ಲವೋ ಅವನು ಭವಿಷ್ಯವನ್ನು ಕಲ್ಪಿಸಿಕೊಳ್ಳಲಾರ. ಬಿಳಗಿಯ ಇತಿಹಾಸವನ್ನು ನಮ್ಮೆದುರು ತೆರೆದಿಟ್ಟ ಪದ್ಮಾಕರ ಮಾಡಗಾಂವಕರ್ ಅವರ ಕಾರ್ಯ ಶ್ಲಾಘನೀಯ. ಭಾರತೀಯ ಭಾಷೆಗಳಲ್ಲಿ ಕನ್ನಡಕ್ಕೆ ವೈಜ್ಞಾನಿಕ ಶಬ್ದಕೋಶ ನೀಡಿದ ಗರಿಮೆ ಕಿಟ್ಟಲ್ ಅವರಿಗೆ ಸಲ್ಲುತ್ತದೆ. ಇಂಗ್ಲಿಷ್ ಭಾಷಿಕರಿಗೆ ಇರುವ ಭಾಷಾ ಪ್ರೇಮ ನಮ್ಮಲ್ಲೂ ಇದ್ದಿದ್ದರೆ ಕನ್ನಡವೇ ವಿಶ್ವಾದ್ಯಂತ ಜನಪ್ರಿಯ ಭಾಷೆಯಾಗಿರುತ್ತಿತ್ತು ಕನ್ನಡ ಸಾಹಿತ್ಯ ಪರಿಷತ್ತು ಅಪ್ಪಟ ಕನ್ನಡ ಭಾಷೆಯನ್ನು ಪ್ರತಿನಿಧಿಸುವ ಯಕ್ಷಗಾನವನ್ನೂ ಹೆಚ್ಚಿನದಾಗಿ ಬೆಂಬಲಿಸುತ್ತಿಲ್ಲ. ೧೦ ನೇ ಶತಮಾನದಲ್ಲಿ ಆದಿಕವಿ ಪಂಪನು ಬರೆಯುವಾಗ ಇಂಗ್ಲೀಷ್ ಭಾಷೆ ಬರ್ಬರವಾದ ಭಾಷೆಯಾಗಿತ್ತು. ಇಂದು ಪ್ರಪಂಚದಾದ್ಯAತ ಇಂಗ್ಲೀಷ್ ಏವಿಜೃಂಭಿಸುತ್ತಿದೆ. ನಮ್ಮ ಪುರಾತನ ಕಾವ್ಯಗಳನ್ನು, ವಚನಗಳನ್ನು ವಿವಿಧ ಭಾಷೆಗಳಿಗೆ ಅನುವಾದ ಮಾಡಬೇಕು. ನಮ್ಮ ಮೂಲ ಸಂಸ್ಕೃತಿಯನ್ನು ಮರಳಿ ತರುವ ಕೆಲಸವಾಗಬೇಕು. ನಮ್ಮ ಅಸ್ಮಿತೆಯನ್ನು ನಮ್ಮ ಜನಕ್ಕೆ ಪರಿಚಯಿಸಬೇಕು ಎಂದು ಹೇಳಿದರು.

ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಾಂತ ಭಟ್ಟ ಗುಂಜಗೋಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗಿಯಾದ ರಾಜ್ಯ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಮುಖ್ಯಾಧ್ಯಾಪಕ ಆರ್ ಎಸ್ ಹೆಗಡೆ ಶಿರಸಿ, ಸಾಹಿತಿ ಪದ್ಮಾಕರ ಮಾಡಗಾಂವಕರ್, ಸ್ಥಳೀಯ ಗ್ರಾಪಂ ಸದಸ್ಯ ಗೋವಿಂದ ನಾಯ್ಕ ಹೊಸಳ್ಳಿ ಸಭೆಯಲ್ಲಿ ಮಾತೃ ವಂದನಾ ಸಮಿತಿಯ ಗೌರವ ಸಲಹೆಗಾರ ಅನಂತ ಪ ಭಟ್ಟ ಮುತ್ತಿಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಜಯರಾಮ ಹೆಗಡೆ ಭಾನ್ಕುಳಿ, ದೇವಾಲಯದ ನಿಕಟಪೂರ್ವ ಅಧ್ಯಕ್ಷ ವಿ ಎಸ್ ಹೆಗಡೆ ಸಾತನಕೇರಿ, ಹಿರಿಯ ಹಸೆಚಿತ್ತಾರ ಕಲಾವಿದೆ ಕೆನ್ನೆ ನಾರಾಯಣ ನಾಯ್ಕ ಅಳಗೋಡು ಅವರುಗಳಿಗೆ ಶ್ರೀ ಮಾತಾ ಅನುಗ್ರಹ ಗೌರವ ಸಂಮಾನ ನೀಡಿ ಗೌರವಿಸಲಾಯಿತು.
ಸುಜಯ್ ಭಟ್ಟ ಮುತ್ತಿಗೆ, ಸಿಂಚನಾ ಹೆಗಡೆ, ರಾಜೇಶ್ವರಿ ಭಟ್ಟ ಡೊಂಬೆಕೈ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ವಿನೋದಾ ಭಟ್ಟ ಕೃತಿ ಪರಿಚಯ ಮಾಡಿದರು.

ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಾದ ದೀಕ್ಷಾ ಗೌಡ, ತನ್ಮಯೀ ಹೆಗಡೆ, ಭೂಮಿಕಾ ಒಕ್ಕಲಿಗ, ಶ್ರೇಯಾ ಹೆಗಡೆ ಅವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಾತೃ ವಂದನಾ ಸಮಿತಿಯ ಕಾರ್ಯಾಧ್ಯಕ್ಷ ನಾಗರಾಜ ಭಟ್ಟ ಕೆಕ್ಕಾರ ಪ್ರಾಸ್ತಾವಿಕ ಮಾತನಾಡಿದರು.
ಜಯರಾಮ ಭಟ್ಟ ಗುಂಜಗೋಡು ಸ್ವಾಗತಿಸಿದರು. ಮಾತೃ ವಂದನಾ ಸಮಿತಿಯ ಪ್ರಶಾಂತ ಹೆಗಡೆ ವಂದಿಸಿದರು.
