ಆದ್ಯೋತ್ ಸುದ್ದಿನಿಧಿ:
ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ರಾಜ್ಯಸರಕಾರದ ವೈಫಲ್ಯದ ವಿರುದ್ಧ ಬಿಜೆಪಿ ಯುವಮೋರ್ಚಾವತಿಯಿಂದ ಪ್ರತಿಭಟನೆ ನಡೆಯಿತು.


ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಉ.ಕ.ಜಿಲ್ಲಾಬಿಜೆಪಿ ಪ್ರದಾನಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್,
ಸಿದ್ದರಾಮಯ್ಯನವರ ಮಜಾವಾದದ ನೀತಿಯಿಂದಾಗಿ ಜೈಲ್ ನಲ್ಲಿರುವ ಭಯೋತ್ಪಾದಕರು, ವಿಕೃತ ಕಾಮಿ, ರೌಡಿಗಳಿಗೆ ಟಿವಿ, ಮೊಬೈಲ್ ನೋಡಿಕೊಂಡು ಮೋಜು-ಮಸ್ತಿ ಮಾಡಲು ಸಾಧ್ಯವಾಗಿದೆ.ದೆಹಲಿಯಲ್ಲಿ ಬ್ಲಾಸ್ಟ್ ಆಗಿದ್ದು ಇಡೀ ದೇಶ ಬೇಸರಗೊಂಡಿದ್ದರೆ ಸಿದ್ದರಾಮಯ್ಯ ಮಾತ್ರ ಇದು ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಕ್ಕೆ ಹೆಚ್ಚು ಸೀಟು ತಂದುಕೊಡಲಿದೆ ಎಂದಿದ್ದಾರೆ, ಇದು ವಿಕೃತಿಯಲ್ಲವೇ? ಎಂದು
ಪ್ರಶ್ನಿಸಿದರು.

ಈ ಸರ್ಕಾರವನ್ನು ಕಾಂಗ್ರೆಸ್ ಸರ್ಕಾರ ಎಂದು ಹೇಳಬಹುದು ಅಷ್ಟೇ, ಇದನ್ನು ಕರ್ನಾಟಕ ಸರ್ಕಾರ ಎಂದು ಒಪ್ಪಲು ಸಾಧ್ಯವೇ ಇಲ್ಲ, ರಾಜ್ಯದ ಅಭಿವೃದ್ಧಿಯಾಗುತ್ತಿಲ್ಲ, ರಸ್ತೆಗಳ ಕನಿಷ್ಠ ನಿರ್ವಹಣೆಯಿಲ್ಲ ಎಲ್ಲಾ ಕಡೆ ಹೊಂಡ-ಗುಂಡಿಗಳೇ ತುಂಬಿವೆ, ಬ್ರಷ್ಟಾಚಾರ ತಾಂಡವವಾಡುತ್ತಿದ್ದು ಜನರು ರೋಸಿ ಹೋಗಿದ್ದಾರೆ ಯಾವುದು ಕೇಳಿದರೂ ಗೊತ್ತಿಲ್ಲ ಎಂದು ಹೇಳುವ ಗೃಹ ಸಚಿವ ಪರಮೇಶ್ವರ್ ತಮ್ಮ ಖಾತೆಯನ್ನು ಗೊತ್ತಿಲ್ಲ ಖಾತೆ ಎಂದೇ ಬದಲಾಯಿಸಿಕೊಳ್ಳಲಿ ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ್ ಮಾತನಾಡಿ ಜೈಲು ಮನಃ ಪರಿವರ್ತನೆಯ ಕೇಂದ್ರ ಆಗಬೇಕು, ಆದರೆ ಕಾಂಗ್ರೆಸ್ ಆಡಳಿತದಲ್ಲಿ ಜೈಲ್ ಮೋಜು ಮಸ್ತಿಯ ಕೇಂದ್ರವಾಗಿ, ರೆಸಾರ್ಟ್ ಮಾದರಿಯಲ್ಲಿ ಖೈದಿಗಳು ದಿನಕಳೆಯುತ್ತಿದ್ದಾರೆ. ಗೃಹ ಸಚಿವರಿಗೆ ಗೊತ್ತಿದ್ದೇ ಎಲ್ಲವೂ ನಡೆಯುತ್ತಾ ಇದೆಯೇ, ನಡೆಯಲಿ ಅಂತ ಏನಾದರೂ ಮೌಖಿಕ ಆದೇಶ ನೀಡಿದ್ದಾರೆಯೇ?ಎಂದು ಪ್ರಶ್ನೆ ಮಾಡಿದರು.

ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ ನಾಯ್ಕ್ ಪ್ರಸ್ತಾವಿಕವಾಗಿ ಮಾತನಾಡಿ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಾಹಾರ ಕಾಂಗ್ರೆಸ್ ಆಡಳಿತದಲ್ಲಿ ರೆಸಾರ್ಟ್ ಆಗಿ ಮಾರ್ಪಟ್ಟಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಬೀಡಿ, ಸಿಗರೇಟ್, ಗುಂಡು – ತುಂಡು, ಮೊಬೈಲ್ ಎಲ್ಲವನ್ನೂ ಅಪರಾಧಿಗಳಿಗೆ ಲಭ್ಯವಾಗಿಸಿದ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸಲು ವಿಫಲವಾಗಿದೆ ಎಂದರು.


ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶುಭಂ ಕಳಸ ಸ್ವಾಗತಿಸಿ ನಿರ್ವಹಿಸಿದರು. ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಮೋದ ನಾಯ್ಕ ಮನವಿ ಪತ್ರವನ್ನು ಓದಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ ಜಿ ಅವರು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ಕಾರವಾರ ನಗರ ಮಂಡಲ ಅಧ್ಯಕ್ಷ ನಾಗೇಶ ಕುರ್ಡೇಕರ್, ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ ಗುನಗಿ, ಅಂಕೋಲಾ ಮಂಡಲ ಅಧ್ಯಕ್ಷ ಸಂಜಯ ನಾಯ್ಕ, ಜಿಲ್ಲಾ ವಿಶೇಷ ಆಹ್ವಾನಿತರಾದ ಮನೋಜ ಭಟ್, ಎಸ್ ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ ಹಳ್ಳೇರ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಕಿಶನ್ ಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು.
