ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ತಾಲೂಕಿನ ವಾಜಗದ್ದೆಯ ಶ್ರೀದುರ್ಗಾವಿನಾಯಕ ದೇವಾಲಯದ ಸಭಾಭವನದ ಶ್ರೀವಿಶ್ವನಾಥ ಶೇಟ್ ವೇದಿಕೆಯಲ್ಲಿ ಶನಿವಾರ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಸರ್ವಾಧ್ಯಕ್ಷತೆಯಲ್ಲಿ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನ ವಿಜೃಂಭಣೆಯಿಂದ ನಡೆಯಿತು.

ಸಮ್ಮೇಳನಾಧ್ಯಕ್ಷ ತಮ್ಮಣ್ಣ ಬೀಗಾರ ಮಾತನಾಡಿ,ನಮ್ಮ ಹಳ್ಳಿಗಳಲ್ಲಿ ಇಂದಿಗೂ ಕನ್ನಡದ ವಾತಾವರಣವಿದ್ದು ಕನ್ನಡದ ಅಸ್ಮಿತೆ ಇರುವುದು ಹಳ್ಳಿಗಳಲ್ಲಿ. ಇಂತಹ ಕನ್ನಡದ ವಾತಾವರಣ ಇರುವ ವಾಜಗದ್ದೆ ಸಾಹಿತ್ಯಕವಾಗಿ,ಸಾಂಸ್ಕೃತಿಕವಾಗಿ ಮೇರು ಮಟ್ಟದಲ್ಲಿ ಇದೆ. ಇಲ್ಲಿಯ ಓದುವ ಸಂಸ್ಕೃತಿ, ಗ್ರಂಥಾಲಯ ಎಲ್ಲಾ ಗ್ರಾಮಗಳಿಗೂ ಮಾದರಿಯಾಗಿದೆ. ಸರಕಾರದಿಂದ ನಡೆಯುತ್ತಿರುವ ಗ್ರಂಥಾಲಯಗಳಲ್ಲಿ ಸ್ಥಳೀಯ ಸಾಹಿತಿಗಳ,ಸ್ವಾತಂತ್ರ್ಯ ಹೋರಾಟಗಾರರ ಪುಸ್ತಕಗಳು ಇರಬೇಕು ಇದರಿಂದ ಹಳ್ಳಿಗಳಲ್ಲಿ ಸಾಹಿತ್ಯಕ ವಾತಾವರಣ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.

ಕನ್ನಡ ಸಹಿತ್ಯದಲ್ಲಿ ಹಿಂದೆ ಮಕ್ಕಳಿಗಾಗಿ ವಿಶೇಷ ಪ್ರಾಕಾರಗಳಿರಲಿಲ್ಲ ಹಿರಿಯ ಸಾಹಿತಿಗಳು ಮಕ್ಕಳಿಗಾಗಿ ಕೆಲವಷ್ಟು ಕೃತಿಗಳನ್ನು ರಚಿಸಿದ್ದಾರೆ ಇತ್ತೀಚೆಗೆ ಮಕ್ಕಳಿಗಾಗಿ ಸಾಹಿತ್ಯ ರಚಿಸುವವರು ಹೆಚ್ಚಾಗುತ್ತಿದ್ದಾರೆ. ಮಕ್ಕಳಲ್ಲಿ ಬೌದ್ಧಿಕ ಅಭಿರುಚಿಗಳನ್ನು ಬೆಳೆಸುವುದು ಪುಸ್ತಕಗಳು ಪಾಲಕರು ಪುಸ್ತಕಗಳನ್ನು ಮನೆಗೆ ತರುವುದರಿಂದ ಓದುವುದರಿಂದ ಮಕ್ಕಳಲ್ಲೂ ಅಭಿರುಚಿ ಹೆಚ್ಚುತ್ತದೆ. ಬೇಡ್ಕಣಿಯಲ್ಲಿ ದಿ.ಆರ್.ಪಿ.ಹೆಗಡೆ ಅಧ್ಯಕ್ಷತೆಯ ಪ್ರಥಮ ಸಮ್ಮೇಳನದಲ್ಲಿ ತಾಲೂಕಿನಲ್ಲಿ ಕನ್ನಡ ಭವನ ನಿರ್ಮಾಣ ಮಾಡುವುದರ ಬಗ್ಗೆ ಪ್ರಸ್ತಾಪಿಸಲಾಗಿತ್ತು ಆದರೆ ೮ ಕನ್ನಡ ಸಾಹಿತ್ಯ ಸಮ್ಮೇಳನ ನಡೆದರೂ ಇಲ್ಲಿಯವರೆಗೆ ಕನ್ನಡ ಭವನದ ನಿರ್ಮಾಣವಾಗದಿರುವುದು ಬೇಸರದ ಸಂಗತಿ ಎಂದು ಹೇಳಿದರು.


ಸಮ್ಮೇಳನವನ್ನು ಉದ್ಘಾಟಿಸಿದ ಸಾಹಿತಿ ಡಾ ಅಣ್ಣಪ್ಪ ಎನ್ ಮಳಿಮಠ ಮಾತನಾಡಿ,ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಸಾಹಿತಿಗಳು ಸಿಗುವುದು ತುಂಬ ವಿರಳ ಮಕ್ಕಳ ಸಾಹಿತ್ಯ ಎಂದರೆ ನೆನಪಾಗುವುದು ನಾ.ಡಿಸೋಜ. ಅವರ ಕೃತಿ ಹಾಗೂ ಶೈಲಿಯನ್ನು ಮತ್ತೊಮ್ಮೆ ನೆನಪಿಸುವುದು ತಮ್ಮಣ್ಣ ಬೀಗಾರರ ಕೃತಿಗಳು. ಸಾಂಸ್ಕೃತಿಕವಾಗಿ,ಸಾಹಿತ್ಯಕವಾಗಿ ಮೇರುಮಟ್ಟದಲ್ಲಿರುವ ಸಿದ್ದಾಪುರ ಸ್ವಾತಂತ್ರ್ಯ ಹೋರಾಟದಲ್ಲಿ ಮಂಚೂಣಿಯಲ್ಲಿತ್ತು ಎಂದು ಹೇಳಿದರು.

ನೂತನ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ,ಕನ್ನಡ ಎನ್ನುವುದು ಕೇವಲ ಪುಸ್ತಕಗಳಲ್ಲಿ ಇರಬಾರದು ಅದು ಎಲ್ಲಡೆಗೂ ಹರಡಬೇಕುನಮ್ಮ ಉಸಿರಲ್ಲಿ,ಕಣಕಣದಲ್ಲಿ ಕನ್ನಡ ಇರಬೇಕು. ಪ್ರತಿಯೊಬ್ಬರೂ ಕೈಜೋಡಿಸಿದರೆ ಕನ್ನಡ ಶಾಲೆಗಳು ಉಳಿಯುತ್ತದೆ. ನಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳಿಗೆ ಕಳುಹಿಸಿ ಸರಕಾರ ಸರ್ಕಾರಿ ಶಾಲೆಗಳನ್ನು ಮುಚ್ಚುತಿದೆ ಎಂಬ ಆರೋಪ ಮಾಡುವುದು ಸರಿಯಲ್ಲ.ಪಾಲಕರು ಪ್ರಾಥಮಿಕ ಹಂತದಲ್ಲಾದರೂ ಕನ್ನಡ ಮಾಧ್ಯಮದ ಸರಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಬೇಕು ಆಗ ಸರಕಾರಿ ಶಾಲೆಗಳು ಉಳಿಯಲು ಸಾಧ್ಯ ಎಂದು ಹೇಳಿದರು.


ಹಿರಿಯ ಸಂಪಾದಕ ಮಹಾಬಲ ಸೀತಾಳಬಾವಿ ಮಾತನಾಡಿ,ಕನ್ನಡ ಬಾಷೆ ನಾಶವಾಗುತ್ತದೆ ಎಂಬ ಆತಂಕ ಪಡುವುದು ಬೇಡ ಯಾವುದೇ ಭಾಷೆಯನ್ನು ಸಾಯಿಸುವುದು ಸುಲಭವಲ್ಲ ಬೆಂಗಳೂರಿನಂತಹ ನಗರ ಪ್ರದೇಶದಲ್ಲಿಉದ್ಯಮಿಗಳು,ಖ್ಯಾತರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಕಲಿಸಲು ಪ್ರಾರಂಭಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಸಾಹಿತ್ಯಪರಿಷತ್ ಜಿಲ್ಲಾಧ್ಯಕ್ಷ ಬಿ ಎನ್ ವಾಸರೆ ಆಶಯ ನುಡಿಯನ್ನಾಡಿದರು ವೇದಿಕೆಯಲ್ಲಿ ತಾಲೂಕು ದಂಡಾಧಿಕಾರಿ ಎಂ ಆರ್ ಕುಲಕರ್ಣಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ ಜಿ ನಾಗರಾಜ್,ಲೋಕಧ್ವನಿ ಸ್ಥಾನಿಕ ಸಂಪಾದಕ ನಾಗರಾಜ್ ಮತ್ತಿಗಾರ,ಹಾರ್ಸಿಕಟ್ಟ ಗ್ರಾಪಂ ಅಧ್ಯಕ್ಷೆ ಹನುಮಕ್ಕ ಬೋವಿ ,ಜಿ ಜಿ ಹೆಗಡೆ ಬಾಳಗೋಡು, ನಾಗರಾಜ್ ಮಾಲ್ಕೋಡ್ ಟಿಎಂಎಸ್ ಸಂಸ್ಥೆಯ ಮುಖ್ಯಸ್ಥರು ಆರ್ ಎಂ ಹೆಗಡೆ ಬಾಳೆಸರ ಉಪಸ್ಥಿತರಿದ್ದರು.

ತಾಲೂಕು ಸಾಹಿತ್ಯಪರಿಷತ್ ಅಧ್ಯಕ್ಷ ಚಂದ್ರಶೇಖರ ಕುಂಬ್ರಿಗದ್ದೆ ಸ್ವಾಗತಿಸಿದರು ನಾಣಿಕಟ್ಟ ಕಾಲೇಜ್ ವಿದ್ಯಾರ್ಥಿನಿಯರಿಂದ ನಾಡಗೀತೆ ಮತ್ತು ಹಾರ್ಸಿಕಟ್ಟ ಶಾಲಾ ವಿದ್ಯಾರ್ಥಿನಿಯರು ರೈತಗೀತೆ ಹಾಡಿದರು ವಾಜಗದ್ದೆ ಶಾಲಾ ಮಕ್ಕಳು ಡೊಳ್ಳು ಕುಣಿತ ಮಾಡಿದರು.

ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಮಹನೀಯರಾದ ನಾಗೇಶ ಹೆಗಡೆ ನೇರಲಮನೆ, ಬಂಗಾರ್ಯ ನಾಯ್ಕ್ ಹಳಿಯಾಳ , ದೇವರು ಹೆಗಡೆ ಹೊಲಗದ್ದೆ,ದೇಸಾಯಿ ಗೌಡರ್ ಮುಟ್ಟಳ್ಳಿ, ದಿವಾಕರ್ ಹೆಗಡೆ ಮತ್ತಿಗಾರ್, ಶೇಷಗಿರಿ ಸುಬ್ರಾಯ ಹೆಗಡೆ ಹುಲಿಮನೆ ಗೌರವಾರ್ಥವಾಗಿ ದ್ವಾರಗಳ ನಿರ್ಮಾಣ ಮಾಡಲಾಗಿತ್ತು.

ವಿವಿಧ ಸಾಹಿತಿಗಳ ಪುಸ್ತಕಮಳಿಗೆಗಳು, ವಿವಿಧ ಉತ್ಪನ್ನಗಳ ಮಾರಾಟ ಮಳಿಗೆಗಳು ಸಮ್ಮೇಳನದಲ್ಲಿ ಗಮನ ಸೆಳೆದವು.
—–
