ಆದ್ಯೊತ್ ಸುದ್ದಿನಿಧಿ:
ಸಿದ್ದಾಪುರ ತಾಲೂಕಿನ ಜನರಲ್ಲಿ ಆತಂಕವನ್ನು ಸೃಷ್ಟಿಸಿರುವ ಅಘನಾಶಿನಿ ನದಿ ಜೋಡಣೆಯ ವಿರುದ್ದ ಅರಣ್ಯ ಭೂಮಿ ಹಕ್ಕು ಹೋರಾಟ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಬುಧವಾರ ಸುಮಾರು ೫೦೦೦ ಕ್ಕೂ ಹೆಚ್ಚು ಜನರು ಬಿಳಗಿಯ ಶ್ರೀ ಮಾರಿಕಾಂಬಾ ದೇವಾಲಯದಿಂದ ಪಟ್ಟಣದ ನೆಹರೂ ಮೈದಾನದವರೆಗೆ ಸುಮಾರು ೧೫ ಕಿ.ಮಿ. ಪಾದಯಾತ್ರೆ ನಡೆಸಿ ನಂತರ ಐತಿಹಾಸಿಕ ನೆಹರೂ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ ಮಧುಸೂದನ ಕುಲಕರ್ಣಿಯವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.


ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ರವೀಂದ್ರ ನಾಯ್ಕ,ಇವತ್ತು ಅಘನಾಶಿನಿ ನದಿಜೋಡಣೆಗೆ ಎಷ್ಟರಮಟ್ಟಿಗೆ ಆಕ್ರೋಶ ಇದೆ ಎಂದರೆ. ಯಾರಾದ್ರೂ ಅಘನಾಶಿನಿ ನದಿ ಜೋಡಣೆ ಮಾಡುತ್ತೇನೆ ಎಂದು ಬಂದರೆ ಧೂಳಿಪಟವಾಗಿ ಹೋಗುತ್ತಾರೆ.ಧಾರಾಳವಾಗಿ ಜಿಲ್ಲೆಯ ಅರಣ್ಯ ಭೂಮಿಯನ್ನ ಅರಣ್ಯೇತರ ಚಟುವಟಿಕೆಗೆ ನೀಡಿರುವುದರಿಂದ ೧೯೭೩ ರಲ್ಲಿ ಶೇಕಡಾ ೭೨.೨೬ ಇರುವಂತ ಅರಣ್ಯ ಪ್ರಮಾಣ ೨೦೧೩ ರಲ್ಲಿ ಶೇ.೫೯.೭೦ ರಷ್ಟು ಕಡಿಮೆಯಾಗಿರುವುದು ವಿಷಾಧಕರ ಮುಂಡಗೋಡ ತಾಲೂಕಿನಲ್ಲಿ ೧೬೦೦ ಹೆಕ್ಟರ್ ಭೂಮಿಯನ್ನ ಟಿಬೆಟಿಯನ್ ಕಾಲೋನಿಗೆ ನೀಡುವ ಸರ್ಕಾರ, ಜಿಲ್ಲೆಯ ೮೦ ಸಾವಿರ ಅರಣ್ಯವಾಸಿ ಕುಟುಂಬಗಳಿಗೆ ಕೇವಲ ೫೪ ಸಾವಿರ ಎಕರೆ ಭೂಮಿ ನೀಡಲು ಹಿಂದೇಟು ಹಾಕುವುದು ವಿಷಾದನೀಯ.ಅರಣ್ಯವಾಸಿಗಳಿಗೆ ಅವಶ್ಯಕ ವಿರುವ ೫೪ ಸಾವಿರ ಎಕರೆ ಭೂಮಿಯನ್ನು ಮೊದಲು ಕೊಡಿ ಆ ನಂತರದಲ್ಲಿ ನೀವು ಯೋಜನೆಗಳನ್ನು ತರುವ ಬಗ್ಗೆ ಯೋಚನೆ ಮಾಡಿ ಎಂದು ಹೇಳಿದರು.


ಸರಕಾರಗಳು ತರಲು ಹೊರಟಿರುವ ಯೋಜನೆಗಳು ಜಿಲ್ಲೆಯ ಜನರಿಗೆ ಪ್ರಯೋಜನವಿಲ್ಲ ಇಲ್ಲಿಯ ಜನರಿಗೆ ಅವಶ್ಯಕತೆ ಇರುವ ಮಲ್ಟಿ ಸ್ಪೇಷಲ್ ಆಸ್ಪತ್ರೆ,ಉದ್ಯೋಗ ಸೃಷ್ಟಿಸುವಂತಹ
ಜನಪರ ಯೋಜನೆಗಳನ್ನು ತೆಗೆದುಕೊಂಡು ಬನ್ನಿ ಅದನ್ನು ಹೊರತುಪಡಿಸಿ ಜನರಿಗೆ ಮಾರಕವಾಗುವ ಯೋಜನೆ ತಂದರೆ ಉಗ್ರ ರೀತಿಯಿಂದ ಹೋರಾಡಲು ನಾವು ಸಿದ್ದರಿದ್ದೆವೆ ಹಿಂದೆ ಶಾಸಕರಾಗಿದ್ದ ಕಾನಡೆರವರು ಹೇಳಿದ್ದರು ಇಲ್ಲಿ ಅಣೆಕಟ್ಟು ಕಟ್ಟುವುದಾದರೆ ನನ್ನ ಎದೆಯ ಮೇಲೆ ಕಟ್ಟಿ ಎಂದು ಹೇಳಿದ್ದರು.ನಾವು ಅಣೆಕಟ್ಟು ಕಟ್ಟುವುದಾದರೆ ನಮ್ಮ ಎದೆಯ ಮೇಲೆ ಕಟ್ಟಿ ಎಂದು ವಿಧಾನ ಸೌಧಕ್ಕೆ ಪಾದಯಾತ್ರೆ ಮಾಡಿ ಮುತ್ತಿಗೆ ಹಾಕಲೂ ಸಿದ್ದ.ನದಿ ಜೋಡಣೆ ಯೋಜನೆಯಿಂದ ೬೦೦ ಹೆ.ಅರಣ್ಯಭೂಮಿ ನಾಶವಾಗುತ್ತದೆ,೧೫೦ ಮೀನಿನ ಸಂತತಿ ಅಳಿಸಿಹೋಗುತ್ತದೆ,ರಾಷ್ಟ್ರೀಯ ಜಲವಿಜ್ಞಾನ ಸಂಸ್ತೆಯು ಈ ಯೋಜನೆಯ ತೊಂದರೆಯನ್ನು ವಿವರಿಸಿದೆ ಈ ಎಲ್ಲಾಕಾರಣದಿಂದ ಸರಕಾರಗಳು ಈ ಯೋಜನೆಯನ್ನು ಕೈಬಿಡಬೇಕು.


ಯೋಜನೆ ವಿರೋಧಿಸಿ ಇಂದು ಒಂದೇ ದಿನದಲ್ಲಿ ೨೫ ಸಾವಿರ ಮನವಿಯನ್ನು ತಹಸೀಲ್ದಾರ ಮೂಲಕ ಸರಕಾರಕ್ಕೆ ಸಲ್ಲಿಸಲಾಗುತ್ತಿದೆ ದೇಶದ ಯಾವುದೇ ಹೋರಾಟದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮನವಿಯನ್ನು ನೀಡಲಾಗಿಲ್ಲ ಇದೊಂದು ಸಾರ್ವಕಾಲಿಕ ದಾಖಲೆಯಾಗಿದೆ.ಸಿದ್ದಾಪುರ ಸ್ವಾತಂತ್ರ‍್ಯ ಹೋರಾಟದಲ್ಲಿ ಮಂಚೂಣಿಯಲ್ಲಿದ್ದ ಸ್ಥಳವಾಗಿದೆ. ರಾಜಕೀಯ ಹೋರಾಟಗಾರರಾದ ರಾಮಕೃಷ್ಣ ಹೆಗಡೆ ಹಾಗೂ ಬಂಗಾರಪ್ಪನವರ ಕಾರ್ಯಕ್ಷೇತ್ರವಾಗಿದೆ ಇಂತಹ ಸ್ಥಳದಲ್ಲಿ ಯೋಜನೆಯ ವಿರುದ್ದ ಹೋರಾಟ ಮಾಡಲು ನಾವು ಸಿದ್ದರಿದ್ದೆವೆ ಎಂದು ಗುಡುಗಿದರು

ಮಾಜಿ ಜಿಪಂ ಸದಸ್ಯ ಎನ್.ವಿ.ಹೆಗಡೆ ಮುತ್ತಿಗಿ ಮಾತನಾಡಿ,
ಅಘನಾಶಿನಿ ನದಿ ಜೋಡಣೆಯಂತಹ ವಿನಾಶಕಾರಿ ಯೋಜನೆಗಳ ವಿರುದ್ಧದ ಕಿಚ್ಚು ಎಂದಿಗೂ ಆರಿಹೋಗಬಾರದು. ಈ ಹೋರಾಟ ಕೇವಲ ಇವತ್ತು ನಿನ್ನೆಯದಲ್ಲ, ಇದು ನಮ್ಮ ಭೂಮಿ ಮತ್ತು ನೀರನ್ನು ಉಳಿಸಿಕೊಳ್ಳುವ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಕಳೆದ ೪೦ ವರ್ಷಗಳಿಂದ ನಾವು ನಡೆಸಿಕೊಂಡು ಬಂದಿರುವ ಈ ಹೋರಾಟಕ್ಕೆ ಇಂದು ಅಂತಿಮ ರೂಪ ನೀಡುವ ಕಾಲ ಬಂದಿದೆ. ನೇತ್ರಾವತಿ, ಅಘನಾಶಿನಿ ಅಥವಾ ಶರಾವತಿ ಸೇರಿದಂತೆ ಯಾವುದೇ ನದಿ ಮೂಲಗಳನ್ನು ನಾಶಮಾಡುವ ಯೋಜನೆಗಳ ವಿರುದ್ಧ ಹೋರಾಡಬೇಕಾಗಿದೆ.
ನಾವು ನಮ್ಮ ಶಕ್ತಿಯನ್ನು ವ್ಯರ್ಥ ಮಾಡಬಾರದು, ಬದಲಾಗಿ ಸಮಾಜದ ಹಿತದೃಷ್ಟಿಯಿಂದ ಸಂಘಟಿತವಾಗಿ ಹೋರಾಟವನ್ನು ಮುಂದುವರಿಸಬೇಕು .ಎಂದು ಕರೆ ನೀಡಿದರು.

ಸಭೆಯಲ್ಲಿ ಸುರೇಶ ಮೇಸ್ತ ಹೊನ್ನಾವರ,ಮಂಜು ಮರಾಠೆ ಕುಮಟಾ,ಮಹೇಶ ಹೆಗಡೆ ಚಟ್ನಳ್ಳಿ,ಮಹಾಬಲೇಶ್ವರ ನಾಯ್ಕ ಬೇಡ್ಕಣಿ,ರಾಜು ನಾಯ್ಕ ಬಿಳಗಿ,ರಾಮಕೃಷ್ಣ ನಾಯ್ಕ ವಂದಾನೆ,ನಾಗಪತಿ ಗೌಡ ಮುಂತಾದವರು ಮಾತನಾಡಿದರು
ಸಭೆಯಲ್ಲಿ ನದಿಜೋಡಣೆ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹಾಗೂ ಬಂಗಾರಮಕ್ಕಿಯ ಶ್ರೀಮಾರುತಿ ಗುರೂಜಿಯವರ ಸಂದೇಶವನ್ನು ಓದಲಾಯಿತು.ಸ್ವರ್ಣವಲ್ಲಿ ಶ್ರೀಗಂಗಾಧರೇAದ್ರ ಸರಸ್ವತೀ ಸ್ವಾಮೀಜಿಯವರು ಬೆಂಬಲ ಸೂಚಿಸಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಮಧುಸೂದನ ಕುಲಕರ್ಣಿಮಾತನಾಡಿ,
ಈಗಾಗಲೇ ತಮ್ಮೆಲ್ಲರ ಪರವಾಗಿ ಒಂದು ಮನವಿಯನ್ನು ರವೀಂದ್ರ ನಾಯ್ಕ ರವರು ನಮಗೆ ನೀಡಿದ್ದಾರೆ ಅದನ್ನು ನಾನು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳು ಬೆಂಗಳೂರು ಕಳಿಸುವ ವ್ಯವಸ್ಥೆ ಮಾಡುತ್ತೇನೆ. ನಮ್ಮ ಕಚೇರಿಯಲ್ಲಿ ಈ ಮನವಿಗಳನ್ನು ಸ್ವೀಕರಿಸಲು ೧೦ ಕೌಂಟರ್ ಗಳನ್ನು ತೆರೆಯಲಾಗಿದೆ. ಮನವಿ ನೀಡಿದ ಪ್ರತಿಯೊಬ್ಬರಿಗೂ ಮನವಿ ಸ್ವೀಕರಿಸಿದ ಬಗ್ಗೆ ಸ್ವೀಕೃತ ಪತ್ರ ನೀಡಲಾಗುವುದು ಎಂದರು.
ಕೆ.ಟಿ.ನಾಯ್ಕ,ದಿವಾಕರ ನಾಯ್ಕ ಸಭೆಯನ್ನು ನಿರ್ವಹಿಸಿದರು
————-
ಬಿಳಗಿ ಶ್ರೀ ಮಾರಿಕಾಂಬಾ ದೇವಾಲಯದಿಂದ ಪಟ್ಟಣದ ನೆಹರೂ ಮೈದಾನದವರೆಗೆ ಸುಮಾರು ೧೫ ಕಿಮಿ ಪಾದಯಾತ್ರೆ.
—–
ಭಾನ್ಕುಳಿ ಮಠದವತಿಯಿಂದ ಹಾಗೂ ಕೆಲವು ಯುವಕರಿಂದ ತಂಪುಪಾನಿಯ ವಿತರಣೆ.
———
ಒಂದೇ ದಿನ ೨೫೦೦೦ ಮನವಿ ಪತ್ರ ನೀಡಿರುವುದು ದಾಖಲೆ
ಅದನ್ನು ಸ್ವೀಕರಿಸಿ ಮುಟ್ಟಿದ ದಾಖಲೆ ನೀಡಲು ತಹಸೀಲ್ದಾರ ಕಚೇರಿಯಲ್ಲಿ ೧೦ ಕೌಂಟರ್ ತೆರೆದಿರುವುದು ದಾಖಲೆಯೆ
——-
ಇತ್ತೀಚಿನ ದಿನಗಳಲ್ಲಿ ಪ್ರತಿಭಟನೆಗೆ
ಇಷ್ಟು ದೊಡ್ಡ ಪ್ರಮಾಣದಲ್ಲಿ ಯಾವುದೇ ಆಸೆ- ಆಮೀಷಗಳಿಗೆ ಒಳಗಾಗದೆ ಜನರು ಸೇರಿರುವುದು ಒಂದು ದಾಖಲೆ
