ಆದ್ಯೊತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಹಲಗೇರಿಯಲ್ಲಿ ಶುಕ್ರವಾರ ಹಿಂದೂ ಸಮಾವೇಶ ನಡೆಯಿತು.


ಸಮಾವೇಶದ ದಿವ್ಯ ಸಾನಿಧ್ಯವಹಿಸಿದ್ದ ಶಿರಳಗಿ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಮಾತನಾಡಿ,ಸನಾತನ ಧರ್ಮವು ಶಾಶ್ವತ ಸತ್ಯಗಳನ್ನು ಒಳಗೊಂಡ ಸಮಗ್ರ ಜೀವನ ಮಾರ್ಗವಾಗಿದ್ದು, ಮಾನವ ಜೀವನಕ್ಕೆ ಶಾಂತಿ ಮತ್ತು ನೆಮ್ಮದಿಯನ್ನು ನೀಡುವ ಶಕ್ತಿ ಹೊಂದಿದೆ.ಶಾಶ್ವತ ಸತ್ಯಗಳ ಸಮಗ್ರ ರೂಪವೇ ಸನಾತನ ಧರ್ಮ.

ಜಗತ್ತು ಧರ್ಮದ ಆಧಾರದ ಮೇಲೆ ನಡೆಯುತ್ತಿದ್ದು, ಪ್ರತಿಯೊಂದು ಪ್ರಾಣಿಗೂ ತನ್ನದೇ ಆದ ಧರ್ಮವಿದೆ. ಮನುಷ್ಯನು ತನ್ನ ಮನಸ್ಸಿನ ಆಧಾರದ ಮೇಲೆ ದೇವರಾಗಲೂ, ದಾನವನಾಗಲೂ ಸಾಧ್ಯ.ಸನಾತನ ಧರ್ಮವು ಹುಟ್ಟಿಲ್ಲದದ್ದರಿಂದ ಅದಕ್ಕೆ ನಾಶವೂ ಇಲ್ಲ. ಅದರಲ್ಲಿರುವ ಮೌಲ್ಯಗಳು ಶಾಶ್ವತವಾಗಿದ್ದು, ಇಂದಿನ ಸಮಾಜದಲ್ಲಿ ಅವುಗಳನ್ನು ಮಕ್ಕಳಿಗೆ ತಿಳಿಸುವುದು ಅತ್ಯಾವಶ್ಯಕವಾಗಿದೆ ದೇಶಭಕ್ತಿ, ಸಂಸ್ಕೃತಿ ಮತ್ತು ಧರ್ಮದ ಗೌರವವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ ರಾಷ್ಟ್ರ ರಕ್ಷಣಾ ಪಡೆ (ಗೋ ರಕ್ಷಣಾ ಪಡೆ) ಸಂಸ್ಥಾಪಕ ಪುನೀತ್ ಕೆರೆಹಳ್ಳಿ ಮಾತನಾಡಿ,ರಾಷ್ಟ್ರದ ಹೊರತು ಬೇರೆ ಧರ್ಮವಿಲ್ಲೆನ್ನುವ ಸಿದ್ದಾಂತವನ್ನು ಹೊಂದಿರುವುದು ಸನಾತನಧರ್ಮ. ನಮ್ಮ ಧರ್ಮ ನಮ್ಮ ಹೆಮ್ಮೆ ಎನ್ನುವುದನ್ನು ನಾವು ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕು. ನಮ್ಮ ಸಂಸ್ಕೃತಿ,ಪರಂಪರೆಯ ಬಗ್ಗೆ ಜಾಗೃತಿ ಮೂಡಿಸುವ ಶಿಕ್ಷಣವನ್ನು ನೀಡಬೇಕು. ಗೋವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ನಾವು ಗೋವನ್ನು ಮಾತೆ ಎಂದು ಹೇಳುತ್ತೆವೆ ಗೋಮಾತೆಯನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಧರ್ಮವಾಗಿದೆ. ನಾವು ನಮ್ಮ ಧರ್ಮದ ಉಳಿವಿಗೆ ಕಟಿಬದ್ಧವಾಗಬೇಕು ಎಂದು ಹೇಳಿ ರಾಷ್ಟ್ರಭಕ್ತಿ ಮತ್ತು ಗೋರಕ್ಷಣೆಯ ಮಹತ್ವವನ್ನು ವಿವರಿಸಿದರು.


ಕೃಷ್ಣಮೂರ್ತಿ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ವೀರಭದ್ರ ನಾಯ್ಕ, ಅಮೃತಾ ಹೆಗಡೆ ಸೇರಿದಂತೆ ಹಲವರು ಮಾತನಾಡಿದರು. ಶ್ರೀಧರ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು, ರವಿ ನಾಯ್ಕ ಸ್ವಾಗತಿಸಿದರು. ಚಂದ್ರಶೇಖರ ಕೊಡಿಯಾ ನಿರೂಪಣೆ ನಡೆಸಿದರು. ಜಾನಕಿ ಮತ್ತು ಸಂಗಡಿಗರು ಪ್ರಾರ್ಥನೆ ಹಾಡಿದರು.
