ಸಹಕಾರಿ ಧುರೀಣ ಎನ್.ಬಿ.ಹೆಗಡೆ ಮತ್ತಿಹಳ್ಳಿ ವಿಧಿವಶ

ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಮತ್ತಿಹಳ್ಳಿಯ ಹಿರಿಯ ಸಹಕಾರಿ ಧುರೀಣ,ಉತ್ತಮ ಕೃಷಿಕ,ಸಾಮಾಜಿಕ ಕಾರ್ಯಕರ್ತ ನಾರಾಯಣ ಬಂಗಾರೇಶ್ವರ ಹೆಗಡೆ(೭೨) ಶನಿವಾರ ವಿಧಿವಶರಾಗಿದ್ದಾರೆ‌.

1954 ಮಾರ್ಚ್ 2ರಂದು ಮತ್ತೀಹಳ್ಳಿಯಲ್ಲಿ ಬಂಗಾರೆಶ್ವರ ಹೆಗಡೆ ಮತ್ತು ಸರಸ್ವತಿ ದಂಪತಿಗಳ ಪುತ್ರರಾಗಿ ನಾರಾಯಣ ಹೆಗಡೆ ಜನಿಸಿದ್ದರು. ಪ್ರಾಥಮಿಕ ಶಿಕ್ಷಣವನ್ನು ಮತ್ತೀಹಳ್ಳಿ ಮತ್ತು ನಾಣಿಕಟ್ಟದಲ್ಲಿ ಪಡೆದು, ಪ್ರೌಢಶಿಕ್ಷಣವನ್ನು ಕಾನಸೂರಿನಲ್ಲಿ ಪೂರ್ಣಗೊಳಿಸಿ ನಂತರ ಸಿರಸಿ ಯಲ್ಲಿ ಬಿ.ಎಸ್‌.ಸಿ ಪದವಿ ಪಡೆದಿದ್ದರು.
ನಾಣಿಕಟ್ಟಾದ ತ್ಯಾಗಲಿ ಸೇವಾ ಸಹಕಾರಿ ಸಂಘದಲ್ಲಿ 1983ರಿಂದ ಸೇವೆ ಸಲ್ಲಿಸಿ, 1995ರಿಂದ ನಿರಂತರವಾಗಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.ಇವರ ನಾಯಕತ್ವದಲ್ಲಿ ಸಂಘವು ‘‘ ವರ್ಗದಿಂದ ‘’ ವರ್ಗಕ್ಕೆ ಏರಿಕೆಯಾಗಿದ್ದು 1995ರಲ್ಲಿ 1.7 ಲಕ್ಷ ರೂ ಲಾಭದಿಂದ 2025ರಲ್ಲಿ 50 ಲಕ್ಷಕ್ಕೂ ಹೆಚ್ಚು ಲಾಭ ಹೊಂದಿರುವ ಸಹಕಾರಿ ಸಂಘವಾಗಿದೆ. ರಿಸರ್ವ್ ಫಂಡ್ 2 ಲಕ್ಷ ರೂ ದಿಂದ 1 ಕೋಟಿಗೂ ಅಧಿಕವಾಗಿ ವೃದ್ಧಿಯಾಗಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ 2017ರಲ್ಲಿ ಶತಮಾನೋತ್ಸವವನ್ನು ಎಲ್ಲಾ ಸಹಕಾರಿ ಸಂಘಗಳಿಗೆ ಮಾದರಿಯಾಗಿ ಆಚರಣೆ ಮಾಡಿದ್ದು ಕೂಡ ಶ್ರೇಯಸ್ಸಿನ ಗರಿಯಾಗಿದೆ.

ಅಡಿಕೆ ತೋಟಗಳಲ್ಲಿ ಕೊಯ್ಲು ಮತ್ತು ಔಷಧಿ ಸಿಂಪಡಣೆಗಾಗಿ ಪೈಬರ್ ತಂತ್ರಜ್ಞಾನ ಪರಿಚಯಿಸಿ, ಯುವಕರಿಗೆ ತರಬೇತಿ ನೀಡಿ ಉದ್ಯೋಗಾವಕಾಶ ಸೃಷ್ಟಿಸಿದರು. ಕೃಷಿಕರ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.ದೀರ್ಘಕಾಲದ ಸೇವೆಯನ್ನು ಗುರುತಿಸಿ ವಿವಿಧ ಸಂಸ್ಥೆಗಳು ಅನೇಕ ಬಾರಿ ಸನ್ಮಾನಿಸಿವೆ ಅವುಗಳಲ್ಲಿ 2013ರಲ್ಲಿ ಸೇವಾರತ್ನ ಸನ್ಮಾನ,2014-15ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೌರವ 2017, 2018, 2019ರಲ್ಲಿ ವಿವಿಧ ಸಾಮಾಜಿಕ ಸಂಸ್ಥೆಗಳ ಸನ್ಮಾನ , 2022ರಲ್ಲಿ ರಜತ ಸನ್ಮಾನ 2024ರಲ್ಲಿ ಅಖಿಲ ಭಾರತ ಹವ್ಯಕಮಹಾಸಭಾ ಬೆಂಗಳೂರು ಪ್ರಶಸ್ತಿ ಲಭಿಸಿದ್ದು ಅವರ ನೇತೃತ್ವದಲ್ಲಿ ಸಂಘವು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದೆ.

ತಾಲೂಕು ಮಾರ್ಕೇಟಿಂಗ್ ಸೊಸೈಟಿ ಉಪಾಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು.ಮಲೆನಾಡು ಕೃಷಿ ಟ್ರಸ್ಟ್ ನಿರ್ದೇಶಕರಾಗಿ ಹಾಗೂ ಕಾಳೇನಳ್ಳಿ ಮೃತ್ಯಂಜಯೇಶ್ವರ ದೇವಸ್ಥಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ರೈತ ಉತ್ಪಾದಕ ಸೌಹಾರ್ಧ ಸಹಕಾರಿ ನಿ. ಸ್ಥಾಪಿಸಿ ರೈತರಿಗೆ ಅನುಕೂಲ ಕಲ್ಪಿಸಿದ್ದರು
ಗ್ರಾಮಾಭಿವೃದ್ಧಿ, ಕೃಷಿ ಉತ್ತೇಜನ ಹಾಗೂ ಯುವಕರ ಅಭಿವೃದ್ಧಿಗೆ ತಮ್ಮ ಜೀವನವನ್ನು ಸಮರ್ಪಿಸಿದ್ದರು.
ಎನ್. ಬಿ. ಹೆಗಡೆಯವರ ಸರಳ ಜೀವನ, ನಿಷ್ಠಾವಂತ ಸೇವೆ ಮತ್ತು ದೃಢ ನಾಯಕತ್ವವು ಸದಾ ಸ್ಮರಣೀಯವಾಗಿರಲಿದೆ

About the author

Adyot

Leave a Comment