ಆದ್ಯೋತ್ ಸುದ್ದಿನಿಧಿ:
ಮಾಜಿ ವಿಧಾನಪರಿಷತ್ ಸದಸ್ಯ ಶ್ರೀಕಾಂತ ಘೋಟ್ನಕರ್ ಗೆ ಸಂಕಷ್ಟ ಎದುರಾಗಿದ್ದು ಬಂಧನದ ಭೀತಿ ಎದುರಿಸುತ್ತಿದ್ದಾರೆ.
ಕಾಂಗ್ರೆಸ್ ನ ಮಾಜಿ ಎಂಎಲ್ ಸಿ ಶ್ರೀಕಾಂತ್ ಘೋಟ್ನೇಕರ್ ವಿರುದ್ಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ವಸಂತ್ ನೀಲಕಂಠ ಚೊರ್ಲೇಕರ್ ಹಿಂದೆ ದೂರು ನೀಡಿದ್ದರು. ಹಳಿಯಾಳದ ಕ್ಷತ್ರಿಯ ಮರಾಠ ಭವನಕ್ಕೆ ಸ್ಲ್ಯಾಬ್ ಅಳವಡಿಸುವ ಟೆಂಡರ್ ಕಾಮಗಾರಿಯನ್ನು ತಾನು ಪಡೆದಿದ್ದೆ. ಆದರೆ ದೇಣಿಗೆ ಹಣದಿಂದ ಸ್ಲಾಬ್ ಹಾಕಿಸಿದ್ದ ಶ್ರೀಕಾಂತ್ ಘೊಟ್ನೇಕರ್, ಕ್ಷತ್ರೀಯ ಮರಾಠ ಪರಿಷತ್ತಿನಿಂದ ಬಿಲ್ ಮಾಡಿಸಿದ್ದರು. ಜೊತೆಗೆ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದಿಂದ ಹಣ ಪಾವತಿ ಮಾಡಿಸಿದ್ದರು. ಟೆಂಡರ್ ಪಡೆದಿದ್ದ ತನಗೆ 3.71 ಲಕ್ಷ ರೂ ಪಾವತಿಯಾಗಿತ್ತು . ಆ ಹಣ ತನಗೆ ನೀಡುವಂತೆ ಎಂಎಲ್ಸಿ ಶ್ರೀಕಾಂತ್ ಬೆದರಿಕೆ ಹಾಕಿದ್ದಲ್ಲದೆ, 3.33 ಲಕ್ಷದ ಚೆಕ್ ಗೆ ಬಲವಂತದ ಸಹಿ ಪಡೆದರೆಂದು ಆರೋಪಿಸಿ ದೂರು ದಾಖಲಿಸಿದ್ದರು.
ಅಂದು ವಿಧಾನಪರಿಷತ್ ಸದಸ್ಯರಾಗಿದ್ದ ಘೋಟ್ನೇಕರ್ ಮೇಲೆ ಪ್ರಕರಣ ದಾಖಲಿಸಲು ರಾಜ್ಯಪಾಲರ ಅನುಮತಿ ಅವಶ್ಯಕವಾಗಿತ್ತು,ಅಲ್ಲದೆ ಬಂಧನವನ್ನು ತಪ್ಪಿಸಿಕೊಳ್ಳಲು ಘೋಟ್ನೇಕರ್ ಹೈಕೋರ್ಟ ಮೊರೆ ಹೋಗಿದ್ದರು ಆದರೆ ಈಗ ಹೈಕೋರ್ಟ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ರಾಜ್ಯಪಾಲರ ಅನುಮತಿ
ಲೋಕಾಯುಕ್ತರು ಮಾಡಿದ್ದ ಶಿಫಾರಸನ್ನು ಅಂಗೀಕರಿಸಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್,ವೈಯಕ್ತಿಕ ಹಿತಾಸಕ್ತಿಗಾಗಿ ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ, ಅಷ್ಟೂ ಹಣವನ್ನು ಬಡ್ಡಿ ಸಮೇತ ವಸೂಲು ಮಾಡಲು ಅನುವು ಮಾಡಿಕೊಟ್ಟಿದ್ದಾರೆ.
ಪ್ರಕರಣದ ವಿವರಗಳನ್ನು ಗಮನಿಸಿದರೆ ಮಾಜಿ ಎಂಎಲ್ ಸಿ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದು ಸ್ಪಷ್ಟವಾಗಿದೆ. ಹಾಗಾಗಿ ಅವರ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು”ಎಂದು ರಾಜ್ಯಪಾಲರು ಅನುಮತಿ ಪತ್ರದಲ್ಲಿ ಹೇಳಿದ್ದಾರೆ.
ಈ ಸಂಕಷ್ಟದ ಜೊತೆಗೆ ಶ್ರೀಕಾಂತ್ ಘೊಟ್ನೇಕರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಆಲಿಸಿದ ನ್ಯಾ. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.ಅರ್ಜಿದಾರರ ಮೇಲೆ ಗಂಭೀರ ಪ್ರಕರಣವಾಗಿದೆ, ಇನ್ನೂ ತನಿಖೆ ನಡೆಯುತ್ತಿದೆ, ಈ ಹಂತದಲ್ಲಿ ಜಾಮೀನು ನೀಡಲಾಗುದು ಎಂದು ನ್ಯಾಯಾಲಯ ಜಾಮೀನು ನಿರಾಕರಿಸಿದೆ.