ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಗೋಸ್ವರ್ಗದಲ್ಲಿ ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಶಂಕರ ಪಂಚಮಿ ಕಾರ್ಯಕ್ರಮ ನಡೆಯುತ್ತಿದೆ.
ಚಂಡಿಹವನ,ರಾಮತಾರಕ ಹವನ,ಸೂರ್ಯಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ,ಶ್ರೀಶಂಕರಾಚಾರ್ಯರ ಕಾಷ್ಠಮೂರ್ತಿ ಪ್ರತಿಷ್ಠಾಪನೆ,ವಿಶೇಷ ಪೂಜೆ,ಶಂಕರ ಕಿಂಕರ ಪ್ರಶಸ್ತಿ ಘೋಷಣೆ,ಪುರುಷೋತ್ತಮ ಪ್ರಶಸ್ತಿ ಪ್ರದಾನ,ಹಸಿರು ಸ್ವರ್ಗಕ್ಕೆ ಚಾಲನೆ,ನಮಾಮಿ ಉಪ್ಪಿನಕಾಯಿ ಬಿಡುಗಡೆ,ಮೊದಲಾದ ಕಾರ್ಯಕ್ರಮಗಳು ನಡೆದವು.
ಸಭೆಗೆ ಆಶೀರ್ವಚನ ನೀಡಿದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ,ಆಧುನಿಕ ಜಗತ್ತು ಹಲವು ಆಮೀಷಗಳನ್ನು ಒಡ್ಡುತ್ತಿದ್ದರೂ ನಮ್ಮ ಸಮಾಜದ ಹಿರಿಯರು ತಮ್ಮ ಪರಂಪರೆಯನ್ನು ಮರೆಯದೆ ಆಚರಣೆ ಮಾಡುತ್ತಿದ್ದಾರೆ ಆದರೆ ಯುವಕರು ನಮ್ಮ ಪರಂಪರೆಯನ್ನು ಮರೆಯುತ್ತಿದ್ದು ಇದರಿಂದ ಸಮಾಜದ ಮೌಲ್ಯ ಕುಸಿಯುತ್ತದೆ.ಜಗತ್ತಿನಲ್ಲಿ ಹಲವು ಮಹಾನುಭಾವರು ಆವಿರ್ಭವಿಸಿದ್ದಾರೆ ಅದರಲ್ಲಿ ಸೂರ್ಯನಂತೆ ಬೆಳಗುತ್ತಿರುವವರು ಶಂಕರರು.ಕೇವಲ ತತ್ವ ಮತ್ತು ಉಪದೇಶದಿಂದ ಸಮಗ್ರ ಭಾರತದ ಕಲ್ಪನೆಯನ್ನು ಕಟ್ಟಿಕೊಟ್ಟವರು ಭಾರತವನ್ನು ಒಟ್ಟೂಗೂಡಿಸಿದವರು. ಇಂತಹ ದಾರ್ಶನಿಕರ ಜನ್ಮದಿನಾಚರಣೆ ಮಾಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಈ ಬಾರಿಯ ಶಂಕರ ಕಿಂಕರ ಪ್ರಶಸ್ತಿಗೆ ಶಂಕರರ ಬಗ್ಗೆ ಅಪಾರ ಜ್ಞಾನವುಳ್ಳ ವಿದ್ವಾಂಸ ಚನೈನ ಮಣಿದ್ರವಿಡ ಶಾಸ್ತ್ರೀಯವರಿಗೆ ನೀಡಲಾಗುತ್ತಿದೆ. ರಾಮನವಮಿ ದಿನ ಘೋಷಣೆಯಾದ ಪುರುಷೋತ್ತಮ ಪ್ರಶಸ್ತಿಯನ್ನು ಶಂಕರಪಂಚಮಿಯಂದು ಎಲ್ಲಾರೀತಿಯಿಂದಲೂ ಯೋಗ್ಯರಾಗಿರುವ ಕರ್ನಾಟಕ ಬ್ಯಾಂಕ್‍ನ ಎಂ.ಎಸ್.ಮಹಾಬಲೇಶ್ವರರಿಗೆ ನೀಡಲಾಗಿದೆ ಇದು ಶಂಕರರ ಪ್ರೇರಣೆ ಮತ್ತು ಅನುಗ್ರಹದಿಂದ ಆಗಿರುವುದು ಎಂದು ಹೇಳಿದರು.
ಶಿರಳಗಿ ಶ್ರೀರಾಮಕ್ಷೇತ್ರದ ಶ್ರೀಬ್ರಹ್ಮಾನಂದ ಭಾರತೀ ಸ್ವಾಮೀಜಿ ಮಾತನಾಡಿ,ಜಗತ್ತಿನಲ್ಲಿ ಸಾಕಷ್ಟು ಜನ ತತ್ವಜ್ಞಾನಿಗಳು ದಾರ್ಶನಿಕರು ಆಗಿದ್ದಾರೆ ಆದರೆ ಜಗದ್ಗುರು ಎನಿಸಿಕೊಂಡವರು ಶಂಕರ ಭಗವತ್ಪಾದರು ಮಾತ್ರ, ಎಲ್ಲಾ ಧರ್ಮ,ಜಾತಿ,ಲಿಂಗಭೇದ ಇಲ್ಲದೆ ಎಲ್ಲರೂ ಅನುಸರಿಸಬಹುದಾದ ಸಾರ್ವಕಾಲಿಕಾ ಉಪದೇಶವನ್ನು ನೀಡಿದವರು ಸಾಧನ ಚತುಷ್ಟಯದಿಂದ ಸಾಧನೆ ಮಾಡಿ ನಿಷ್ಕಾಮಕರ್ಮದಿಂದ ಕಾರ್ಯ ಮಾಡಿ ಮೋಕ್ಷಕ್ಕೆ ಹೋಗಲು ಎಲ್ಲರೂ ಅರ್ಹರು ಎಂದು ಸಾರಿದವರು ಶಂಕರಭಗವತ್ಪಾದಕರು. ಇಂತಹ ದಾರ್ಶನೀಕರ ಜನ್ಮದಿನಾಚರಣೆಯನ್ನು ಆಚರಿಸುತ್ತಿರುವ ದೊಡ್ಡ ಕೆಲಸವನ್ನು ರಾಮಚಂದ್ರಪುರಮಠದ ಶ್ರೀರಾಘವೇಶ್ವರ ಸ್ವಾಮೀಜಿಯವರು ಮಾಡುತ್ತಿದ್ದಾರೆ ಎಂದು ಹೇಳಿದರು.
ಪುರುಷೋತ್ತಮ ಪ್ರಶಸ್ತಿ ಸ್ವೀಕರಿಸಿದ ಎಂ.ಎಸ್.ಮಹಾಬಲೇಶ್ವರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕøತ ಆರ್.ಎಂ.ಹೆಗಡೆ ಬಾಳೆಸರ ದಂಪತಿಗಳನ್ನು ಶ್ರೀಗಳು ಸನ್ಮಾನಿಸಿದರು. ಅತಿಥಿಗಳಾಗಿ ಭಾಗವಹಿಸಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾದ್ಯಕ್ಷ ಡಾ.ಶಶಿಭೂಷಣ ಹೆಗಡೆ ಮಾತನಾಡಿದರು.
ಮಾತೃಮಂಡಳಿಯವರು ತಯಾರಿಸುತ್ತಿರುವ ಗೋಸ್ವರ್ಗ ವಿತರಣೆ ಮಾಡುತ್ತಿರುವ ನಮಾಮಿ ಉಪ್ಪಿನಕಾಯಿಯನ್ನು ಶ್ರೀರಾಘವೇಶ್ವರ ಸ್ವಾಮೀಜಿ ಹಾಗೂ ಶ್ರೀಬ್ರಹ್ಮಾನಂದ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಗೋಸ್ವರ್ಗವನ್ನು ಹಸಿರು ಸ್ವರ್ಗವನ್ನಾಗಿಸುವ ಹಸಿರು ಉತ್ಸವವನ್ನು ಪ್ರಾರಂಭಿಸಲಾಯಿತು.
ಸಿದ್ದಾಪುರ-ಕುಮಟಾ ಮುಖ್ಯ ರಸ್ತೆಯಿಂದ ಗೋಸ್ವರ್ಗದ ವರೆಗಿನ ಕಾಂಕ್ರೀಟ್ ರಸ್ತೆಯನ್ನು ಗುರುವಾರ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಲೋಕಾರ್ಪಣಗೊಳಿಸಿದರು.