ಆದ್ಯೋತ ಕಥಾಂಕಣ

ಒಂದು ಹುಡುಗಿಯ ಕಥೆ
**** **** **** **** **** **** **** ****
ಬೆಂಗಳೂರಿನಲ್ಲಿ ಹವಾಮಾನ 39.2ರಷ್ಟು ಗರಿಷ್ಟ ಏರಿಕೆಯಾಗಿದೆ. ಏಪ್ರಿಲ್ 1931ರ ನಂತರ ಆ ವರ್ಷ ಗರಿಷ್ಟ ತಾಪಮಾನ ದಾಖಲಾಗಿತ್ತು.
ತನ್ನ ಸ್ನೇಹಿತನ ಮನೆಗೆ ಹೊರಟಿದ್ದ ಸಂದೀಪ್ ಉಡುಪಿ ಗಾರ್ಡನ್ ಸಿಗ್ನಲ್‍ನಲ್ಲಿ 30 ನಿಮಿಷಗಳಿಂದ ಕಾಯುತ್ತಿದ್ದ. ಅಲ್ಲಿನ ಟ್ರಾಫಿಕ್ ಎಂದಿನಂತೆ ವಿಪರೀತವಿತ್ತು. ಅಲ್ಲೇ ಹತ್ತಿರವಿದ್ದ ಬಸ್‍ಸ್ಟಾಪ್ ಒಂದರಲ್ಲಿ ವಯಸ್ಸಾಗಿದ್ದ ಮುದುಕನನ್ನು ಅಕಸ್ಮಾತ್
ನೋಡುತ್ತಾನೆ.
60 ವರ್ಷ ದಾಟಿದಂತೆ ಕಾಣುತ್ತಿದ್ದ ಮುದುಕನಿಗೆ
ಆ ಬಿಸಿಲಿನಲ್ಲಿ ನಿಲ್ಲುವುದು ಕಷ್ಟವಾಗಿತ್ತು, ಬಸ್‍ಸ್ಟಾಪ್‍ನಲ್ಲಿದ್ದ ಕುಳಿತುಕೊಳ್ಳುವ ಆಸನಗಳು ತುಂಬಿದ್ದವು, ಆಸನದಲ್ಲಿ ಕುಳಿತಿದ್ದ ಯುವಕರು ಅವರಿಗೆ ಸೀಟು ಬಿಟ್ಟುಕೊಟ್ಟಿರಲಿಲ್ಲ, ಆತನ ಮುಖದಲ್ಲಿ ತುಂಬ ದಣಿವು ಎದ್ದು ಕಾಣುತ್ತಿತ್ತು, ಆತನ ಮುಖದ ತುಂಬ ಬೆವರು ತುಂಬಿತ್ತು, ಆ ವೃದ್ದರು ಧೋತಿಯನ್ನು ಧರಿಸಿದ್ದರು ಮತ್ತು ಆ ಧೋತಿ ಬೆವರಿನಿಂದ ಒದ್ದೆಯಾಗಿತ್ತು. ಆ ವೃದ್ಧರು ಯುವಕರಿಗೆ ಬೈಯ್ದುಕೊಳ್ಳುತ್ತಿದ್ದದ್ದು ಮುಖದ ಹಾವಭಾವದಿಂದ ತಿಳಿಯುತ್ತಿತ್ತು. ಮತ್ತು ಆ ವೃದ್ಧರು ತಮ್ಮ ಕೈಯಿಂದ ಮುಖವನ್ನು ಒರೆಸಿಕೊಂಡು ಎಷ್ಟು ಬೆವರಿದೆ ಎಂದು ಪರಿಶೀಲಿಸುತ್ತಿದ್ದರು, ಆ ಸುಡುವ ಬಿಸಿಲು ಅವರನ್ನು ಮತ್ತಷ್ಟು ಕ್ಷೀಣಿಸಿತ್ತು. ಸಂದೀಪ್ ನೋಡುತ್ತಿದ್ದಂತೆಯೇ ಅವರು ಕುಸಿದು ಬಿದ್ದರು. ತಕ್ಷಣ ಸಂದೀಪ್ ಕಾರಿನಿಂದ ಇಳಿದು ಅವರ ಬಳಿ ಧಾವಿಸಿದನು, ಅಲ್ಲಿದ್ದ ಜನರು ಕೂಡ ಗುಂಪು ಕಟ್ಟಿದರು. ಆ ವೃದ್ಧರು ಪ್ರಜ್ಞೆ ಇಲ್ಲದೆ ಮಲಗಿದ್ದರು, ಅವರನ್ನು ಹತ್ತಿರದ ಆಸ್ಪತ್ರೆಗೆ ಸಂದೀಪ್ ವರ್ಗಾಯಿಸಿದ. ವೈದ್ಯರು ಅವರನ್ನು ಪರಿಶೀಲಿಸಿ ಲೋ ಬ್ಲಡ್‍ಪ್ರಷರ್ ಆಗಿದೆ ಎಂದು ತಿಳಿಸಿದರು, ಅವರ ಬಳಿ ಯಾವುದೇ ಮೊಬೈಲ್ ಫೋನ್ ಇರಲಿಲ್ಲ, ಸಂದೀಪ್ ಅವರ ಬ್ಯಾಗನ್ನು ಪರಿಶೀಲಿಸಿದನು, ಅದರಲ್ಲಿ ಕೆಲವು ಜೊತೆ ಬಟ್ಟೆಗಳು ಬಿಟ್ಟರು ಬೇರೇನು ಇರಲಿಲ್ಲ. ಒಂದು ಗಂಟೆ ನಂತರ ಆ ವೃದ್ಧರಿಗೆ ಪ್ರಜ್ಞೆ ಬಂದಿತು. ಸಂದೀಪ್ ವಾರ್ಡ್‍ನೊಳಗೆ ಹೋಗಿ ಆತನನ್ನು ಪರಿಚಯಿಸಿಕೊಂಡನು.
“ನಮಸ್ತೆ ನನ್ನ ಹೆಸರು ಸಂದೀಪ್ ನಾಯಕ್, ಇಂದು ಬೆಳಗ್ಗೆ ಬಸ್‍ಸ್ಟಾಂಡ್ ಬಳಿ ಪ್ರಜ್ಞೆ ತಪ್ಪಿದುದನ್ನು ಕಂಡು ನಿಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಬಂದೆ”
“ಹಲೋ, ನನ್ನ ಹೆಸರು ರಘುನಂದನ್.” ಆ ವೃದ್ಧರು ದಿಂಬಿನ ಮೇಲೆ ಒರಗಿ ಕುಳಿತರು. “ನಿಮ್ಮ ಸಹಾಯಕ್ಕೆ ಧನ್ಯವಾದಗಳು” ಎಂದು ಹೇಳಿದರು.
“ನಿಮಗೆ ಲೋ ಬ್ಲಡ್‍ಪ್ರಷರ್ ಆಗಿದೆ ಎಂದು ತಪಾಸಣೆ ಮಾಡಿದ ವೈದ್ಯರು ತಿಳಿಸಿದರು, ನಿಮ್ಮ ಮನೆಯ ವಿಳಾಸ ಅಥವಾ ಫೋನ್ ನಂಬರ್ ತಿಳಿಸಿದರೆ ನಾನು ಅವರಿಗೆ ವಿಷಯ ತಿಳಿಸುತ್ತೇನೆ”
“ನಾನು ಬೆಂಗಳೂರಿನ ನಿವಾಸಿಯಲ್ಲ, ನನ್ನ ಊರು ಸಕಲೇಶಪುರ, ನಾನು ಇಂದು ಬೆಳಗ್ಗೆ ನನ್ನ ಮೊಬೈಲ್‍ನ್ನು ಕಳೆದುಕೊಂಡೆನು, ನನ್ನ ಮಗಳ ದೂರವಾಣಿ ಸಂಖ್ಯೆ ನನಗೆ ನೆನಪಿನಲ್ಲಿ ಇಲ್ಲ”
ಸಂದೀಪ್ ಮುಂದೇನು ಮಾಡುವುದು ಎಂದು ಯೋಚಿಸುತ್ತಾ ನಿಂತನು.
“ನಿಮಗೆ ಅಭ್ಯಂತರವೇನು ಇಲ್ಲದಿದ್ದರೆ ನನ್ನ ಮನೆಗೆ ಒಂದು ಕ್ಯಾಬನ್ನು ಏರ್ಪಡಿಸಲು ಸಾಧ್ಯವೇ?” ಎಂದು ಹೇಳಿ ತನ್ನ ಮನೆಯ ವಿಳಾಸವನ್ನು ಒಂದು ಚೀಟಿಯಲ್ಲಿ ಬರೆದು ಸಂದೀಪ್ ಕೈಗೆ ಕೊಟ್ಟರು.
“ವೈದ್ಯರು ನಿಮ್ಮಗೆ ಇಲ್ಲೇ ಚಿಕಿತ್ಸೆ ಮುಂದುವರಿಸಲು ಸೂಚಿಸಿದ್ದಾರೆ, ಮತ್ತು ಈ ಸಂದರ್ಭದಲ್ಲಿ ನೀವು ಪ್ರಯಾಣಿಸುವುದು ಉಚಿತವಲ್ಲ, ನಿಮ್ಮನ್ನು ಡಿಸ್ಚಾರ್ಜ್ ಮಾಡಿದ ನಂತರ ನಿಮ್ಮನ್ನು ಮನೆಗೆ ಕಳುಹಿಸುವ ಏರ್ಪಾಡು ನಾನು ಮಾಡುತ್ತೇನೆ.”
“ಆದರೆ ನನ್ನ ಮಗಳು ಆತಂಕದಿಂದಿರುತ್ತಾಳೆ”
“ನಿಮ್ಮ ಪರಿಸ್ಥಿತಿ ನನಗೆ ಅರ್ಥವಾಗುತ್ತದೆ. ಆದರೆ ನಮಗೆ ಈಗ ಬೇರೆ ದಾರಿ ಇಲ್ಲ, ಇನ್ನು ಒಂದು ದಿನ ನೀವು ಇಲ್ಲೇ ಇರಬೇಕಾಗುತ್ತದೆ.”
ಆ ವೃದ್ಧರು ಏನು ಮಾತನಾಡದೆ ಸುಮ್ಮನೆ ಕುಳಿತರು. ತಮ್ಮ ವಿವರಣೆ ಅರ್ಥವಾಗಿದೆ ಎಂದು ತಿಳಿದ
ಸಂದೀಪ್ ಹೊರನಡೆಯಲು ಮುಂದಾದ.
“ನಿಮ್ಮ ಸಹಾಯಕ್ಕೆ ಧನ್ಯವಾದಗಳು” ಎಂದು ವೃದ್ಧರು ಇನ್ನೊಮ್ಮೆ ಹೇಳಿದರು, ಸಂದೀಪ್ ಮುಗುಳುನಗುತ್ತ ಅಲ್ಲಿಂದ ಹೊರ ನಡೆದನು.
ಅದೇ ಸಂಜೆ ವೃದ್ಧರಿಗಾಗಿ ಸಂದೀಪ್ ಹಣ್ಣುಗಳನ್ನು ತಂದನು. ಸಂದೀಪ್ ಆಸ್ಪತ್ರೆಗೆ ಬಂದಾಗ ವೃದ್ಧರು ಮಲಗಿದ್ದರು. ಅವರಿಗೆ ತೊಂದರೆ ಕೊಡದೆ ವಾರ್ಡ್‍ನಲ್ಲೇ ಕುಳಿತನು. ಜೇಬಿನಿಂದ ಮೊಬೈಲನ್ನು ತೆಗೆದು ಫೇಸ್‍ಬುಕ್ಕನ್ನು ಚೆಕ್ ಮಾಡುತ್ತಾ ಕುಳಿತನು. ಅದೇ ಸಮಯಕ್ಕೆ ವೈದ್ಯರು ದಿನನಿತ್ಯದ ತಪಾಸಣೆಗಾಗಿ ಅಲ್ಲಿಗೆ ಬಂದರು. ಅದಕ್ಕಾಗಿ ಆ ವೃದ್ಧರನ್ನು ಸಂದೀಪ್ ಎಚ್ಚರಗೊಳಿಸಿದನು. ಅವರನ್ನು ಪರಿಶೀಲಿಸಿದ ವೈದ್ಯರು ಮರುದಿನ ಅವರನ್ನು ಮನೆಗೆ ಕರೆದುಕೊಂಡು ಹೋಗಬಹುದು ಎಂದು ತಿಳಿಸಿದರು. ಈ ವಿಚಾರವನ್ನು ಸಂದೀಪ್ ಆ ವೃದ್ಧರಿಗೆ ತಿಳಿಸಿದನು.
“ನೀವು ಬೆಂಗಳೂರಿನಲ್ಲಿ ಏನು ಮಾಡುತ್ತಿದ್ದೀರಿ?” ವೈದ್ಯರು ನಿರ್ಗಮಿಸಿದ ನಂತರ ಸಂದೀಪ್ ವೃದ್ಧರನ್ನು ಕೇಳಿದನು.
“ನನ್ನ ಮಗಳಿಗೆ ಇನ್ಫೋಸಿಸ್‍ನಲ್ಲಿ ಕೆಲಸ ಸಿಕ್ಕಿದ್ದು, ಮತ್ತು ಅವಳು ಬೆಂಗಳೂರಿನಲ್ಲಿ ಎಲ್ಲಿ ಉಳಿದುಕೊಳ್ಳುತ್ತಾಳೆ ಎಂದು ಚಿಂತೆಯಾಗಿತ್ತು. ಅಂತರ್ಜಾಲದಲ್ಲಿ ಬಾಡಿಗೆ ಮನೆಗಳ ಮಾಹಿತಿ ತಿಳಿದು ಅದನ್ನು ಪರಿಶೀಲಿಸಲು ಇಲ್ಲಿಗೆ ಬಂದಿದ್ದೆ.
“ನಡವಳಿಕೆಯಲ್ಲಿ ನೀನು ನನ್ನ ಮಗಳಂತೆಯೇ, ಆಕೆಯು ಕೂಡ ಬೇರೆಯವರು ಸಹಾಯ ಕೇಳದಿದ್ದರೂ ಸಹಾಯ ಮಾಡುತ್ತಾಳೆ.”
“ಹೌದಾ?” ಸಂದೀಪ ನಗುತ್ತಾನೆ.
“ಹೌದು, ನನ್ನ ಜೀವನದಲ್ಲಿ ತುಂಬ ಸುಂದರವಾದ ವಿಚಾರ ಎಂದರೆ ನನ್ನ ಮಗಳು. ಅಕ್ಟೋಬರ್ 3 ಅವಳ ಹುಟ್ಟಿದ ದಿನಾಂಕ, ಆ ದಿನ ನಾನು ಸಂಭ್ರಮಿಸುವುದನ್ನು ನೋಡಿ ನನ್ನ ಸಂಬಂಧಿಕರು ಬೆರಗಾಗಿದ್ದರು. ಅದೇ ಸಂದರ್ಭದಲ್ಲಿ, ತನಗೆ ಮಗಳು ಹುಟ್ಟಿದ್ದಕ್ಕೆ ನನ್ನ ಹೆಂಡತಿಯ ತಂಗಿ ಗಂಡ ಬೇಸರಗೊಂಡಿದ್ದರು. ಆತನನ್ನು ನೋಡಿ ನನಗೆ ಬೇಸರವಾಗಿತ್ತು.
“ನನ್ನದು ಕಾಫಿ ಎಸ್ಟೇಟ್ ಇದೆ. ನನ್ನ ಮಗಳು ಮನೆಗೆ ಬಂದ ನಂತರ ನನಗೆ ಆಫೀಸಿನಲ್ಲಿ ಅವಳ ಬಗ್ಗೆಯೇ ಯೋಚನೆ ಇರುತ್ತಿತ್ತು. ನನ್ನ ಮಗಳ ಜೊತೆಗೆ ಇರಬೇಕೆಂದು ಬಯಸುತ್ತಿದ್ದೆ. ಕೆಲಸದ ಬಗ್ಗೆ ನನಗೆ ಆಸಕ್ತಿ ಕಮ್ಮಿಯಾಗಿತ್ತು. ಆದರೆ ಅದರಿಂದ ಯಾವತ್ತು ನನಗೆ ಬೇಸರವಾಗಿರಲಿಲ್ಲ. ನನ್ನ ಮ್ಯಾನೇಜರ್‍ರನ್ನು ಕರೆದು ಆಫೀಸಿನ ಕೆಲಸವನ್ನು ನೋಡಿಕೊಳ್ಳುವಂತೆ ಹೇಳಿ ಮನೆಗೆ ಪಲಾಯನ ಮಾಡುತ್ತಿದ್ದೆ. ಮನೆಗೆ ಬಂದ ಕೂಡಲೇ ನನ್ನ ಮಗಳ ಬಳಿಯೇ ಇರುತ್ತಿದ್ದೆ. ಇದು ನನ್ನ ಹೆಂಡತಿಗೂ ಕೂಡ ಅಸೂಯೆ ತರುತ್ತಿತ್ತು.
“ನಮ್ಮ ಮನೆಯ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ನನ್ನ ಹೆಂಡತಿ ಅಪಘಾತದಲ್ಲಿ ತೀರಿಕೊಂಡಳು. ಆದರೆ ಆಕೆಗೆ ನಮ್ಮ ಮಗಳ ಬಗ್ಗೆ ಯಾವುದೇ ಚಿಂತೆ ಇರಲಿಲ್ಲ ಮತ್ತು ಅವಳಿಗೆ ನನ್ನ ಮೇಲೆ ಸಂಪೂರ್ಣ ನಂಬಿಕೆ ಇತ್ತು. ನನ್ನ ಹೆಂಡತಿ ತೀರಿಕೊಂಡ ನಂತರ ನನ್ನ ಮಗಳ ರಂಪಾಟ ನಿಲ್ಲಲಿಲ್ಲ, ನಾನು ಬಹಳ ಮುಂಗೋಪಿಯಾಗಿದ್ದರೂ, ನನ್ನ ಮಗಳ ಮೇಲೆ ಯಾವತ್ತೂ ಕೋಪಗೊಂಡಿರಲಿಲ್ಲ. ನನಗೆ ಇಂಜೆಕ್ಷನ್ ಕಂಡರೆ ಭಯ, ಅದು ನನ್ನ ಮಗಳಿಗೆ ಕೊಟ್ಟರೂ ಕೂಡ ನನಗೆ ಭಯವಾಗುತ್ತಿತ್ತು.
“ಕಾಲ ಬಹಳ ಬೇಗ ಕಳೆದು ಹೋಯಿತು, ಅವಳು ಬಹಳ ಬೇಗ ಬೆಳೆದು ಶಾಲೆಗೆ ಹೋಗಲು ಸಿದ್ದಳಾದಳು. ನಾನು ಅವಳು ನಿನ್ನೆ ಮೊನ್ನೆಯಷ್ಟೆ ಹುಟ್ಟಿದ್ದಾಳೆ ಎಂಬ ಭಾವನೆಯಲ್ಲೇ ಇದ್ದೆ. ನಾನು ಬೆಳಗಿನಿಂದ ಸಂಜೆಯವರೆಗೂ ಅವಳ ಬಳಿಯಲ್ಲೇ ಕಾಲಕಳೆಯುತ್ತಿದ್ದೆ. ಅದು ಬಹಳಷ್ಟು ಸಂತೊಷದ ದಿನಗಳಾಗಿದ್ದವು. ಆದರೆ ಅವಳು ಶಾಲೆಗೆ ಹೋಗುವ ಬಂದೇ ಬಿಟ್ಟಿತು. ಆ ದಿನ ಅವಳು ರಂಪಾಟ ಮಾಡುತ್ತಾಳೆ ಎಂದು ಭಾವಿಸಿದ್ದೆ, ಆದರೆ ಅವಳು ಸಂತೋಷವಾಗೇ ಸಿದ್ದಳಾದಳು. ಆದರೆ ನಾನೇ ಬೇಸರದಲ್ಲಿದ್ದೆ. ಅವಳನ್ನು ಶಾಲೆಗೆ ಬಿಟ್ಟು ಮನೆಗೆ ಬಂದೆ, ಮನೆ ಪಾಳುಬಿದ್ದ ಅರಮನೆಯಂತಿತ್ತು, ಮತ್ತು ನನ್ನ ಕಣ್ಣಿನಲ್ಲಿ ನೀರಿತ್ತು, ನಾನು ಮನೆಯಲ್ಲಿ ಗಂಟೆಗಳ ಕಾಲ ಸುಮ್ಮನೆ ಕುಳಿತು ಅವಳ ಬಗ್ಗೆಯೇ ಯೋಚಿಸುತ್ತಿದ್ದೆ. ನಂತರ ಸಂಜೆ ಬೇಗನೆ ಶಾಲೆಗೆ ತೆರಳಿದೆ. ಅವಳ ನಗುಮುಖ ಕಂಡು ಅವಳು ಶಾಲೆಯಲ್ಲಿ ಸಂತೋಷದಿಂದ ಇದ್ದಳು ಎಂಬುದು ಕಂಡುಬಂದಿತು. ಮೊದ ಮೊದಲು ಮನೆಯಲ್ಲಿ ಒಬ್ಬಂಟಿಯಾಗಿರುವುದು ಬೇಸರವಾಗುತ್ತಿತ್ತು, ನಂತರ ಬದಲಾವಣೆಗೆ ನಾನೇ ಒಗ್ಗಿದೆ.
“ಅವಳು ಸೈಕಲ್ ಕಲಿಯಲು ಆಸೆ ಪಡುತ್ತಿದ್ದಳು, ಆದರೆ ಸೈಕಲ್ ಕಂಡರೆ ನನಗೆ ಕಂಡರೆ ಭಯವಾಗುತ್ತಿತ್ತು, ಆದ್ದರಿಂದ ಅವಳಿಗೆ ಎಂದೂ ಸೈಕಲ್ ಕಲಿಯಲು ಬಿಡಲಿಲ್ಲ. ಅದನ್ನು ಈಗಲೂ ಸಹ ಹೇಳಿ ನನ್ನನ್ನು ತಮಾಷೆ ಮಾಡುತ್ತಾಳೆ”
ಸಂದೀಪ್ ಆಕಳಿಸುತ್ತಾನೆ.
“ನಿಮಗೆ ನಿದ್ದೆ ಬರುತ್ತಿದ್ದೆಯೇ? ನನ್ನ ಮಾತಿನಿಂದ ನಿಮಗೆ ಬೋರಾಯಿತ?”
“ಹಾಗೇನಿಲ್ಲ”
“ಈಗಾಗಲೇ ಸಮಯ ಹನ್ನೊಂದು ಗಂಟೆಯಾಗಿದೆ. ನಾವು ಇದನ್ನು ಬೆಳಗ್ಗೆ ಮುಂದುವರಿಸೋಣ”
“ಅದು ಒಳ್ಳೆಯ ಉಪಾಯ”
ಆ ವೃದ್ಧರು ಮುಗುಳ್ನಗುತ್ತಾರೆ.
“ಹಾಗಾದರೆ ನಾನು ಹೊರಡುತ್ತೇನೆ”
ಸಂದೀಪ್ ಆಸ್ಪತ್ರೆಯಿಂದ ಹೊರಡುತ್ತಾನೆ.
*****
ಮರುದಿನ ಬೆಳಗ್ಗೆ, ತಾವು ಮನೆಗೆ ಹೋಗುವ ವಿಚಾರದಿಂದ ವೃದ್ಧರು ಬಹಳಷ್ಟು ಸಂತೋಷದಿಂದಿದ್ದರು. ಆದರೆ ಸಂದೀಪ್ ಅವರಿಗೆ ಕೆಟ್ಟಸುದ್ದಿಯನ್ನು ತಿಳಿಸಿದನು. ಅವರ ಆರೋಗ್ಯದಲ್ಲಿ ಸುಧಾರಣೆ ಇಲ್ಲದಿದ್ದನ್ನು ಕಂಡು ವೈದ್ಯರು ಇನ್ನೂ ಒಂದು ದಿನ ಅಲ್ಲೇ ಇರಬೇಕೆಂದು ತಿಳಿಸಿದರು. ಇದು ಆ ವೃದ್ಧರ ಕನಸಿಗೆ ತಣ್ಣೀರೆರಚಿದಂತಾಯಿತು. ಆದರೆ ಸಂದೀಪ್ ಅವರ ಮಗಳ ವಿಷಯವನ್ನು ಪ್ರಸ್ತಾಪಿಸಿ ಅವರ ಮುಖದಲ್ಲಿ ನಗು ಮೂಡುವಂತೆ ಮಾಡಿದನು. ಆ ವೃದ್ಧರು ಸಂತಸದಿಂದ ತನ್ನ ಮಗಳ ವಿಷಯವನ್ನು ಹೇಳಲು ಮುಂದುವರಿದರು.

“ನಾವು ನನ್ನ ಕನಸು ಬಗ್ಗೆ ಮಾತನಾಡುತ್ತಿದ್ದೆವು”
“ಯಾರು ಈ ಕನಸು”
“ನನ್ನ ಮಗಳ ಹೆಸರು ಕನಸು”
“ಓ ಕನಸು ಒಳ್ಳೆಯ ಹೆಸರು”
“ನನ್ನ ಮಗಳು ಬೆಳೆದಂತೆ, ನಾನು ಅವಳ ಸ್ನೇಹಿತರನ್ನು ದ್ವೇಷಿಸಲು ಪ್ರಾರಂಭಿಸಿದೆ.”
“ಏಕೆ?” ಎಂದು ಸಂದೀಪ್ ಆಶ್ಚರ್ಯದಿಂದ ಕೇಳಿದನು.
“ಹೌದು, ಅವಳು ಶಾಲೆಗೆ ಹೋಗಲು ಪ್ರಾರಂಭಿಸಿದ ನಂತರ, ನಾನು ಆಫೀಸಿಗೆ ಹೋಗಲು ಪ್ರಾರಂಭಿಸಿದೆ. ಆದರೆ ಸಂಜೆ ನನ್ನ ಮಗಳೊಟ್ಟಿಗೆ ಕಾಲ ಕಳೆಯಲು ಮನೆಗೆ ಬೇಗ ಬರುತ್ತಿದ್ದೆ, ಆದರೆ ಅವಳು ಅವಳ ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದಳು. ಇದು ನನಗೆ ಇಷ್ಟವಾಗುತ್ತಿರಲಿಲ್ಲ, ನನ್ನ ಮನೆಯೇ ನನಗೆ ಜೈಲು ಎಂದು ಭಾಸವಾಗುತ್ತಿತ್ತು. ನಾನು ಈ ಅಸಮಾಧಾನವನ್ನು ಅವಳೊಂದಿಗೆ ಚರ್ಚಿಸಲಿಲ್ಲ.
“ಅವಳು ಹೈಸ್ಕೂಲಿಗೆ ತೆರಳಿದ ನಂತರ, ನನ್ನ ಮನೆ ಇನ್ನೂ ಬಿಕೋ ಎನ್ನುತ್ತಿತ್ತು, ನನಗೆ ಮನೆಯಲ್ಲಿರುವುದೇ ಕಷ್ಟವಾಗುತ್ತಿತ್ತು. ಅವಳು ತನ್ನ ಸ್ನೇಹಿತರೊಂದಿಗೆ ಕಾಲ ಕಳೆಯುವುದು ಜಾಸ್ತಿಯಾಯಿತು ಮತ್ತು ಮನೆಗೆ ತಡವಾಗಿ ಬರುತ್ತಿದ್ದಳು. ಇದು ತಡೆಯಿಲ್ಲದೆ ನಡೆಯುತ್ತಿತ್ತು. ಆದರೆ ನಾನು ಅವಳನ್ನು ನಿರ್ಬಂದಿಸುತ್ತಿರಲಿಲ್ಲ. ಆದರೆ ಅವಳ ಬಗ್ಗೆ ನನಗೆ ಯಾವಾಗಲೂ ಚಿಂತೆ ಇರುತ್ತಿತ್ತು, ಅವಳಿಗೆ ಪದೇ ಪದೇ ಕರೆ ಮಾಡಿ ವಿಚಾರಿಸುವುದೇ ನನ್ನ ಕೆಲಸವಾಗಿತ್ತು, ನನ್ನ ಕರೆಗಳಿಂದ ಅವಳಿಗೆ ಎಷ್ಟೇ ಕಿರಿಕಿರಿಯಾಗಿದ್ದರೂ ಅದನ್ನು ನಿಲ್ಲಿಸುವಂತೆ ಯಾವತ್ತೂ ಹೇಳಲಿಲ್ಲ.”
“ನೀವು ಓವರ್ ಪ್ರೊಟೆಕ್ಟೀವ್.”
“ಇರಬಹುದು”
“ಆಕೆಗೆ ಯಾರಾದರೂ ಬಾಯ್ ಫ್ರೆಂಡ್ ಇದ್ದಾನ?”
“ನನ್ನ ಮಗಳ ಬಾಯ್ ಫ್ರೆಂಡ್ ಬಗ್ಗೆ ನಿನಗೇಕೆ ಚಿಂತೆ?”
“ನೀವು ಓವರ್ ಪ್ರೊಟೆಕ್ಟೀವ್ ಇದ್ದೀರಿ, ಅಕಸ್ಮಾತ್ ನಿಮ್ಮ ಮಗಳಿಗೆ ಬಾಯ್ ಫ್ರೆಂಡ್ ಇದ್ದು ಅವನ ಪರಿಸ್ಥಿತಿ ಹೇಗಿರಬಹುದು ಎಂದು ಯೋಚಿಸುತ್ತಿದ್ದೆ”
ಆ ವೃದ್ಧರು ನಗುತ್ತಾ ಪ್ರಾರಂಭಿಸಿದರು “ಅವಳು ಡಿಗ್ರಿ ಓದುವಾಗ ತನ್ನ ಬಾಯ್ ಫ್ರೆಂಡ್ ಬಗ್ಗೆ ನನಗೆ ತಿಳಿಸಿದ್ದಳು”
“ಆತ ಯಾರು?”
“ಆತ ಅವಳ ಸಹಪಾಠಿ, ಗುಣದಲ್ಲಿ ಅವನು ಸರಿಯಿರಲಿಲ್ಲ”
“ಯಾಕೆ? ಆತ ಏನು ಮಾಡಿದ?”
“ಆತ ತುಂಬಾ ಪೊಸೆಸೀವ್ ಆಗಿದ್ದ. ಪ್ರಾರಂಭದಲ್ಲಿ ಎಲ್ಲವೂ ಸರಿಯಿತ್ತು, ಆದರೆ ಕೆಲವು ದಿನಗಳ ನಂತರ ನನ್ನ ಮಗಳ ಮುಖದಲ್ಲಿ ಖುಷಿ ಕಾಣಿಸುತ್ತಿರಲಿಲ್ಲ. ಆತ ಎಲ್ಲದಕ್ಕೂ ನಿರ್ಬಂಧ ಹೇರುತ್ತಿದ್ದ, ಆಕೆ ಯಾವ ಹುಡುಗನನ್ನು ಮಾತನಾಡಿಸುವಂತಿರಲಿಲ್ಲ ಮತ್ತು ಯಾರೊಂದಿಗೂ ಹೊರಗೆ ಸುತ್ತಾಡುವಂತಿರಲಿಲ್ಲ, ಈ ಸಂಬಂಧದಿಂದ ನನ್ನ ಮಗಳು ತನ್ನ ಸುತ್ತ ಚಕ್ರವ್ಯೂಹವನ್ನು ಸೃಷ್ಟಿಸಿಕೊಂಡಿದ್ದಳು.
“ನನ್ನ ಮಗಳಿಗೆ ಇನ್ಫೋಸಿಸ್‍ನಲ್ಲಿ ಕೆಲಸ ಸಿಕ್ಕಿತು, ಆದರೆ ಅವಳು ಕೆಲಸಕ್ಕೆ ಹೋಗದಂತೆ ನಿರ್ಬಂಧ ಹೇರಿದ್ದ. ಅವನು ಬಹಳ ಶ್ರೀಮಂತ ಹುಡುಗನಾಗಿದ್ದು ಮತ್ತು ಇವಳು ಕೆಲಸಕ್ಕೆ ಹೋಗುವ ಅವಶ್ಯಕತೆ ಇಲ್ಲ ಎಂಬುದು ಅವನ ಭಾವನೆಯಾಗಿತ್ತು. ನನ್ನ ಮಗಳಿಗೆ ಮದುವೆಯ ನಂತರ ಮನೆಯಲ್ಲೇ ಇರುವುದಕ್ಕೆ ಒತ್ತಾಯಪಡಿಸುತ್ತಿದ್ದ, ಆದರೆ ನನ್ನ ಮಗಳನ್ನು ಬೇರೊಬ್ಬರ ಮನೆಯಲ್ಲಿ ಅಡಿಯಾಳಾಗಿರುವುದು ನನಗೆ ಇಷ್ಟವಿರಲಿಲ್ಲ. ಮತ್ತು ಇದು ನನಗೆ ಬಹಳಷ್ಟು ಕೋಪ ತಂದಿತ್ತು. ಅವನನ್ನು ಮನೆಗೆ ಕರೆದು ಎರಡು ನಿಯಮಗಳನ್ನು ಹೇಳಿದೆ.”
“ಆ ಎರಡು ನಿಯಮಗಳು ಯಾವುವು?” ಸಂದೀಪ್ ಆಶ್ಚರ್ಯದಿಂದ ಕೇಳಿದ
“ನೀನು ಯಾವುದೇ ನಿಯಮಗಳನ್ನು ಮಾಡುವಂತಿಲ್ಲ, ಆದರೆ ನನ್ನ ಮಗಳು ಮಾಡುತ್ತಾಳೆ. ಮತ್ತು ನಿನಗೆ ಬೇರೆ ಅವಕಾಶವಿರುವುದಿಲ್ಲ ಅದನ್ನು ಒಪ್ಪಿಕೊಳ್ಳಬೇಕು.”
“ಇದು ಆಸಕ್ತಿದಾಯಕವಾಗಿದೆ, ನಂತರ ಏನಾಯಿತು?”
“ನನ್ನ ಭೇಟಿ ನಂತರ ಅವರಿಬ್ಬರು ದೂರವಾದರು. ಅವರಿಬ್ಬರು ದೂರಾದ ನಂತರ ನನ್ನ ಮಗಳು ಮತ್ತೆ ಎಂದಿನಂತೆ ಖುಷಿಯಾಗಿದ್ದಳು.”
ಸಂದೀಪ್ ಮುಗುಳ್ನಕ್ಕನು
“ಒಂದು ಹೆಣ್ಣುಮಗಳಿಗೆ ತಂದೆಯಾಗಿರುವುದು ಬಹಳ ಕಷ್ಟದ ಕೆಲಸ, ಇದರ ನಿನಗೆ ಏನನ್ನಿಸುತ್ತದೆ ಸಂದೀಪ್?”
“ಇರಬಹುದು, ನಾನು ಒಂದು ಹೆಣ್ಣುಮಗುವಿಗೆ ತಂದೆಯಾಬೇಕು ಎಂದು ಎರಡು ದಿನಗಳ ಹಿಂದೆ ನಿರ್ಧಾರ ಮಾಡಿದ್ದೆ.”
“ಅಲ್ಲಿಯ ತನಕ”
“ನನ್ನ ಯೋಚನೆಗಳೇ ಬೇರೆಯಾಗಿತ್ತು”
“ಎರಡು ದಿನಗಳ ಹಿಂದೆ ಏನಾಗಿತ್ತು”

ನಾನು ನ್ಯೂಯಾರ್ಕ್‍ನಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿದ್ದೆ. ನಾನು ಕೆಲಸವನ್ನು ಬಿಟ್ಟು ಭಾರತದಲ್ಲಿ ನೆಲಸಬೇಕು ಎಂದು ನಿರ್ಧಾರ ಮಾಡಿದ್ದೆ. ನನ್ನ ಭಾರತೀಯ ಸ್ನೇಹಿತ ಮನೀಷ್ ವಿಧಾಯದ ಸಲುವಾಗಿ ಮನೆಯಲ್ಲಿ ಒಂದು ಪಾರ್ಟಿಯನ್ನು ಏರ್ಪಡಿಸಿದ್ದ, ಈ ರೀತಿ ಸಣ್ಣ ಸಣ್ಣ ಸಂದರ್ಭಗಳಿಗಾಗಿ ಅಲ್ಲಿ ನೆಲೆಸಿದ್ದ ಎಲ್ಲಾ ಭಾರತೀಯರು ಒಟ್ಟಾಗಿ ಸೇರುತ್ತಾರೆ. ಈ ರೀತಿಯ ಆಚರಣೆ ಸಲುವಾಗಿ ಸಣ್ಣ ಸಣ್ಣ ಸಮಾರಂಭಗಳು ದೊಡ್ಡ ಸಮಾರಂಭವಾಗುತ್ತದೆ. ಆದರೆ ಆ ದಿನ ಎಲ್ಲರೂ ಸಂತೋಷದಿಂದ ಇರಲಿಲ್ಲ, ಅವರ ಸ್ನೇಹಿತನೊಬ್ಬ ಅವರನ್ನು ಬಿಟ್ಟು ಮರಳಿ ತನ್ನ ದೇಶಕ್ಕೆ ಹೋಗುತ್ತಿದ್ದ.
ಕೆಲವರು ನಾನು ನನ್ನ ದೇಶಕ್ಕೆ ವಾಪಸಾಗುತ್ತಿರುವ ಕಾರಣವನ್ನು ಕೇಳಿದರು, ಅದಕ್ಕೆ ಉತ್ತರವಾಗಿ ನಾನು ನನ್ನ ತಾಯಿಯ ಆಸೆಯಂತೆ ಮದುವೆಯಾಗಿ ಭಾರತದಲ್ಲೇ ನೆಲೆಸಬೇಕೆಂದು ನಿರ್ಧಾರ ಮಾಡಿದ್ದೇನೆ ಎಂದು ಹೇಳಿದೆ. ನೋಡನೋಡುತ್ತಿದ್ದಂತೆ ಮನೀಷ್ ಟೇಬಲ್‍ವೊಂದರ ಮೇಲೆ ನಿಂತು ಎಲ್ಲರನ್ನೂ ಉದ್ದೇಶಿಸಿ ಮಾತನಾಡತೊಡಗಿದ. ನಾವಿಬ್ಬರೂ ನ್ಯೂಯಾರ್ಕ್‍ನಲ್ಲಿ ಕಳೆದ ದಿನಗಳ ಬಗ್ಗೆ ಮತ್ತು ನಮ್ಮಿಬ್ಬರ ಸ್ನೇಹದ ಬಗ್ಗೆ ಎಲ್ಲರಿಗೂ ತಿಳಿಸಿದ, ಮತ್ತು ನಾನು ನ್ಯೂಯಾರ್ಕ್‍ನಲ್ಲಿ ಕಳೆದ ಆವಿಸ್ಮರಣೀಯ ಕ್ಷಣದ ಬಗ್ಗೆ ಹೇಳುವಂತೆ ಕೇಳಿದ.
ನಾನು ಮೊದಲು ಅಲ್ಲಿಗೆ ಬಂದಿದ್ದ ಎಲ್ಲರಿಗೂ ಮತ್ತು ಪಾರ್ಟಿಯನ್ನು ಏರ್ಪಡಿಸಿದ್ದ ಮನೀಷ್‍ನಿಗೆ ವಂದನೆಯನ್ನು ತಿಳಿಸಿದೆ. ಮತ್ತು ಆ ಪ್ರಶ್ನೆಗೆ ಉತ್ತರವಾಗಿ “ನನ್ನ ನ್ಯೂಯಾರ್ಕ್‍ನಲ್ಲಿ ಅವಿಸ್ಮರಣೀಯ ಕ್ಷಣವೆಂದರೆ, ನಾವು ಭಾರತೀಯ ಸ್ವತಂತ್ರ ದಿನವನ್ನು ನ್ಯೂಯಾರ್ಕ್‍ನಲ್ಲಿ ಆಚರಣೆ ಮಾಡಿದೆವು. ಅದು ನನ್ನ ತಾಯ್ನಾಡನ್ನು ತುಂಬಾ ನೆನಪಿಸಿತು, ಈ ವಿಚಾರವನ್ನು ನಾನು ನನ್ನ ಮಗನೊಂದಿಗೆ ಹಂಚಿಕೊಳ್ಳುತ್ತೇನೆ.”
“ನಿನಗೆ ಯಾವಾಗ ಮಗು ಹುಟ್ಟಿತು? ಈ ವಿಚಾರ ನನಗೆ ತಿಳಿಸಲೇ ಇಲ್ಲ” ಗುಂಪಿನಲ್ಲಿ ಯಾರೋ ಒಬ್ಬ ಈ ಪ್ರಶ್ನೆಯನ್ನು ಕೇಳಿದ.
“ನಾನು ಮುಂದೆ ಹುಟ್ಟುವ ನನ್ನ ಮಗನ ಬಗ್ಗೆ ಮಾತನಾಡುತ್ತಿದ್ದೇನೆ.”
ಸುಮಾರು 8-30ಕ್ಕೆ ನಾನು ಎಲ್ಲರಿಗೂ ವಿದಾಯ ತಿಳಿಸಿ ಮನೆಗೆ ಹೊರಟೆ. ಅದು ಬೇಗ ಎನಿಸಿದರೂ ಮುಂಜಾನೆಯೇ ನನಗೆ ಪ್ಲೈಟ್ ಇದ್ದುದರಿಂದ ನಾನು ಬೇಗನೇ ಹೊರಟೆ. ಅದಿತಿ ದೇಸಾಯಿ ನನ್ನ ಗೆಳತಿ ಮತ್ತು ನನ್ನ ಸಹೋದ್ಯೋಗಿ ಅವಳು ನನ್ನನ್ನು ಮನೆಗೆ ಡ್ರಾಪ್ ಮಾಡಲು ಕಾರಿನಲ್ಲಿ ಬಂದಳು, ಅವಳೂ ಕೂಡ ನನ್ನ ಮನೆಯ ಪಕ್ಕದ ಮನೆಯಲ್ಲೇ ವಾಸವಿದ್ದಳು.
ಹೋಗುವ ದಾರಿಯಲ್ಲಿ ಅದಿತಿ ಮಾತನಾಡದೇ ಸುಮ್ಮನೇ ಕಾರನ್ನು ಡ್ರೈವ್ ಮಾಡುತ್ತಿದ್ದಳು. ಅವಳು ತುಂಬಾ ನಿರಾಶಳಂತೆ ಕಾಣುತ್ತಿದ್ದಳು, ನಾನು ಅವಳನ್ನು ದಿಟ್ಟಿಸಿ ನೋಡುತ್ತಿದ್ದರೂ ಕೂಡ ಅವಳು ನನ್ನ ಕಡೆಗೆ ನೋಡಲಿಲ್ಲ.
“ಏನಾದರೂ ಸಮಸ್ಯೆ ಇದೆಯೇ?” ನಾನು ಪ್ರಶ್ನಿಸಿದೆ
“ನೀನು ಪಾರ್ಟಿಯಲ್ಲಿ ಹೇಳಿದ್ದು ನನಗೆ ಇಷ್ಟವಾಗಲಿಲ್ಲ” ಅದಕ್ಕೆ ಉತ್ತರವಾಗಿ ಅವಳು ಹೇಳಿದಳು
“ನೀನು ಬೇಸರವಾಗುವ ಸಂಗತಿಯನ್ನು ನಾನು ಏನು ಹೇಳಿದೆ?”
“ನೀನು ನಿನ್ನ ಮಗನ ಬಗ್ಗೆ ಹೇಳಿದ್ದು ನನಗೆ ಇಷ್ಟವಾಗಲಿಲ್ಲ”
“ಅದರಲ್ಲಿ ತಪ್ಪೇನಿದೆ”
“ನಾನು ನಿನಗೆ ನನ್ನ ತಮ್ಮನ ಬಗ್ಗೆ ಹೇಳಿದ್ದೆ ನೆನಪಿದೆಯಾ?”
“ಹೌದು ನೆನಪಿದೆ, ಆತ ನಿನಗಿಂತ 8 ವರ್ಷ ಚಿಕ್ಕವನಲ್ಲವೇ?”
“ಹೌದು ಈ 8 ವರ್ಷದಲ್ಲಿ ನನ್ನ ತಾಯಿಗೆ ಹುಟ್ಟಿದ ಮೂರು ಮಕ್ಕಳು ತೀರಿಕೊಂಡವು”
“ಅವರು ಹೇಗೆ ತೀರಿಕೊಂಡರು?”
“ಮೊದಲನೇ ಮಗು ಅಪೌಷ್ಟಿಕತೆಯಿಂದ, ಎರಡನೇ ಮಗು ನ್ಯುಮೋನಿಯಾದಿಂದ ಮತ್ತು ಕೊನೆಯ ಮಗು ತೀವ್ರ ಬೇದಿಯಿಂದ ತೀರಿಕೊಂಡವು”
“ಅವರಿಗೆ ನನ್ನ ಸಂತಾಪವನ್ನು ಸೂಚಿಸುತ್ತೇನೆ”
“ನಮ್ಮ ಭಾರತ ದೇಶ ಹೆಣ್ಣುಮಕ್ಕಳಿಗೆ ಬಹಳಷ್ಟು ಅಪಾಯಕಾರಿ ದೇಶ”
“ಅದಿತಿ ನಿನ್ನ ಸಮಸ್ಯೆ ಏನು? ಒಂದು ಮಾನಸಿಕ ಸಮಸ್ಯೆ ಇದೆ, ಅದರಲ್ಲಿ ಜನ ಸಂಬಂಧವಿಲ್ಲದ ವಿಚಾರಗಳನ್ನು ಮಾತನಾಡುತ್ತಿರುತ್ತಾರೆ. ನೀನು ಇಂದು ಪಾರ್ಟಿಯಲ್ಲಿ ನಾನು ಮಾತನಾಡಿದ ವಿಷಯದಿಂದ ಪ್ರಾರಂಭಿಸಿದೆ, ನಂತರ ಎಂದೋ ತೀರಿಹೋದ ಆ ಮಕ್ಕಳ ಬಗ್ಗೆ ಹೇಳಿದೆ, ಈಗ ಭಾರತದ ಸಾಮಾಜಿಕ ಸಮಸ್ಯೆ ಬಗ್ಗೆ ಹೇಳುತ್ತಿದ್ದೀಯ, ನಿನ್ನ ಮಾನಸಿಕ ಆರೋಗ್ಯ ಸರಿಯಿದೆಯಾ?”
“ಭಾರತದಲ್ಲಿ ಹೆಣ್ಣುಮಕ್ಕಳು ಅವರ ಪೋಷಕರಿಗೆ ಹೊರೆ ಎಂದೇ ಭಾವಿಸುತ್ತಾರೆ. ಹೊಟ್ಟೆಯಲ್ಲಿ ಹೆಣ್ಣುಮಗು ಇದೆ ಎಂದು ತಿಳಿದ ತಕ್ಷಣ ಅಬಾಷನ್ ಮಾಡಿಸುತ್ತಾರೆ, ಬಹಳಷ್ಟು ಸಮಯ ಇದು ಗಂಡನಿಂದ ಅಥವಾ ಗಂಡನ ಮನೆಯವರ ಒತ್ತಾಯದಿಂದ ನಡೆಯುತ್ತದೆ. ಗಂಡು ಮಕ್ಕಳಿಗೆ ಆರೋಗ್ಯ ಹದಗೆಟ್ಟರೆ ಅವರನ್ನು ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ, ಅದೇ ಆಸಕ್ತಿ ಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ತೋರಿಸುವುದಿಲ್ಲ. ಏಕೆಂದರೆ ಆ ಮನೆಯವರಿಗೆ ಹೆಣ್ಣುಮಕ್ಕಳ ಬಗ್ಗೆ ಅದೇ ಆಸಕ್ತಿ ಇರುವುದಿಲ್ಲ. ಹೆಣ್ಣುಮಕ್ಕಳು ಯಾವಾಗಲೂ ಶಾಪ ಅಥವಾ ಹಣಕಾಸಿನ ವಿಚಾರದಲ್ಲಿ ಹೊರೆ ಎಂದೇ ಭಾವಿಸುತ್ತಾರೆ. ಅದರಲ್ಲೂ ಬಡವರಾದರೆ ಮದುವೆಯ ಮತ್ತು ವರದಕ್ಷಿಣೆಯ ವಿಚಾರವಾಗಿ ಯೋಚನೆ ಮಾಡುತ್ತಾರೆ. ಆದರೆ ಗಂಡು ಮಕ್ಕಳ ವಿಚಾರದಲ್ಲಿ ಅವರ ವೃದ್ಧಾಪ್ಯದಲ್ಲಿ ಆಸರೆಯಾಗುತ್ತಾರೆಂದು ತಿಳಿಯುತ್ತಾರೆ. ತಾವು ಶ್ರೀಮಂತರಾದರೂ, ಬಡವರಾದರೂ ತಮಗೆ ಗಂಡುಮಕ್ಕಳೇ ಬೇಕೆಂದು ಯೋಚನೆ ಮಾಡುತ್ತಾರೆ. ಅಕಸ್ಮಾತ್ ಹೆಣ್ಣುಮಕ್ಕಳು ಹುಟ್ಟದಿದ್ದ ಪಕ್ಷದಲ್ಲಿ ಗಂಡು ಒಂದಕ್ಕಿಂತ ಹೆಚ್ಚು ಮದುವೆಯಾಗುತ್ತಾನೆ, ಗಂಡು ಮಗು ಹುಟ್ಟಿದಾಗ ಸಂತಸದಿಂದ ಆಚರಣೆ ಮಾಡುತ್ತಾರೆ, ಅದೇ ಹೆಣ್ಣುಮಗು ಹುಟ್ಟಿದರೆ ಬೇಸರದ ವಾತಾವರಣ ಸೃಷ್ಟ್ಟಿಸುತ್ತಾರೆ. ನಮ್ಮ ಸಮಾಜ ಮತ್ತು ಆರ್ಥಿಕತೆ ನಮಗೆ ಒಂದೇ ಮಗು ಬೇಕೆಂದು ಹೇಳುತ್ತಾರೆ. ಆ ಕಾರಣಕ್ಕಾಗಿ ಹೆಣ್ಣು ಮಗು ಹುಟ್ಟುತ್ತದೆ ಎಂದು ತಿಳಿದ ತಕ್ಷಣ ಆ ಮಗುವನ್ನು ಕೊಲ್ಲುತ್ತಾರೆ ಅಥವಾ ಅದನ್ನು ಅನಾಥಾಶ್ರಮಕ್ಕೆ ಬಿಟ್ಟುಬರುತ್ತಾರೆ.”
“ನೀನು ನಿನ್ನ ಸತ್ತು ಹೋದ ಮೂವರು ಮಕ್ಕಳ ಬಗ್ಗೆ ಹೇಳಿದೆಯಲ್ಲ ಅವರು ಹೆಣ್ಣುಮಕ್ಕಳೇ?”
“ಹೌದು”
“ಅವರು ಹೇಗೆ ಸತ್ತರು?”
“ನನ್ನ ತಂದೆ ಒಬ್ಬ ಸ್ವಾರ್ಥಿ ಮತ್ತು ಕ್ರೂರಿಯಂತೆ ವರ್ತಿಸುತ್ತಿದ್ದರು. ನಾನು ಹುಟ್ಟಿದ ದಿನ ಅವರು ಅವರ ಗುಣದ ಬಗ್ಗೆ ಪರಿಚಯಿಸಿದರು. ಅವರಿಗೆ ಒಂದು ಹೆಣ್ಣುಮಗು ಹುಟ್ಟಿದ್ದು ಬೇಸರ ತಂದಿತ್ತು ಮತ್ತು ಅವರ ಅಸಮಾಧಾನವನ್ನು ತೋರಿಸಿದರು. ತನಗೆ ಗಂಡುಮಗು ಹುಟ್ಟಲಿಲ್ಲ ಎಂದು ಬಹಳ ಬೇಸರದಲ್ಲಿದ್ದರು ಮತ್ತು ಅವರು ಮುಂದಿನ ಮಗು ಹೆಣ್ಣುಮಗುವಾಗಿದ್ದರೆ ಅದನ್ನು ಕೊಲ್ಲುತ್ತೇನೆ ಎಂದು ಎಚ್ಚರಿಕೆ ಕೊಟ್ಟರು. ದುರಾದೃಷ್ಟವಶಾತ್ ಮುಂದಿನ ಮಗು ಕೂಡ ಹೆಣ್ಣುಮಗು ಹುಟ್ಟಿತು, ಆ ಮಗು ನನಗಿಂತ ಸುಂದರವಾಗಿದೆ ಎಂದು ಒಮ್ಮೆ ನನ್ನ ಅಮ್ಮ ನನಗೆ ಹೇಳಿದರು. ಆದರೆ ನನ್ನ ತಂಗಿ ಮನೆಗೆ ಬಂದ ನಂತರ ಅವಳನ್ನು ನನ್ನ ತಂದೆ ವಶಕ್ಕೆ ತೆಗೆದುಕೊಂಡು ಕೋಣೆಯಲ್ಲಿ ಇಟ್ಟು ಬೀಗ ಹಾಕಿದರು ಮತ್ತು ಯಾರನ್ನೂ ಒಳಗೆ ಹೋಗಲು ಬಿಡಲಿಲ್ಲ, ನನ್ನ ತಂದೆಗೆ ಹೆದರಿ ನನ್ನ ತಾಯಿ ಆ ಮಗುವನ್ನು ರಕ್ಷಿಸಲು ಯಾವ ಸಾಹಸ ಕೂಡ ಮಾಡಲಿಲ್ಲ. ನನ್ನ ಅಜ್ಜಿ-ತಾತ ಇದನ್ನು ಸರಿ ಎಂದು ಸಮರ್ಥನೆ ಮಾಡಿಕೊಂಡರು. ನಾವು ಒಂದು ತೋಟದ ಮನೆಯಲ್ಲಿ ವಾಸಿಸುತ್ತಿದ್ದೆವು ಮತ್ತು ಅಕ್ಕಪಕ್ಕದಲ್ಲಿ ಯಾವುದೇ ಮನೆಯಿಲ್ಲದ ಕಾರಣ ಆ ಕೋಣೆಯಲ್ಲಿದ್ದ ಮಗುವಿನ ರಂಪಾಟ ಯಾರಿಗೂ ಕೇಳಿಸಲಿಲ್ಲ. ಮೂರು ದಿನಗಳ ನಂತರ ಆ ಕೋಣೆಯ ಬಾಗಿಲನ್ನು ತೆರೆದಾಗ ಮಗು ಸತ್ತುಹೋಗಿತ್ತು. ನನ್ನ ತಾಯಿಯ ಪೋಷಕರು ಈ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ಆದರೆ ನನ್ನ ತಂದೆ ಆ ಸಾವಿನ ಬಗ್ಗೆ ಯಾರಿಗಾದರೂ ಹೇಳಿದರೆ ನನ್ನನ್ನು ಕೊಲ್ಲುವುದಾಗಿ ನನ್ನ ತಾಯಿಗೆ ಬೆದರಿಕೆ ಹಾಕಿದರು. ನನ್ನನ್ನು ಎಲ್ಲಿ ಕಳೆದುಕೊಳ್ಳುತ್ತೇನೋ ಎಂಬ ಭಯದಲ್ಲಿ ನನ್ನ ತಾಯಿ ಯಾರಿಗೂ ವಿಷಯ ತಿಳಿಸಲಿಲ್ಲ.
“ಕೆಲವು ತಿಂಗಳುಗಳ ನಂತರ ನನ್ನ ತಾಯಿ ಮತ್ತೆ ಗರ್ಭವತಿಯಾದಳು ಮತ್ತು ಅದು ಗಂಡುಮಗುವಾಗಲೆಂದು ದೇವರಲ್ಲಿ ಪ್ರಾರ್ಥಿಸಿದಳು, ಆದರೆ ಮತ್ತೆ ಹೆಣ್ಣುಮಗು ಹುಟ್ಟಿತು. ಆಶ್ಚರ್ಯವೆಂದರೆ ನನ್ನ ತಂದೆ ಯಾವುದೇ ಕೋಪ ತೋರಲಿಲ್ಲ, ಅವರು ಅಸಮಾಧಾನದಲ್ಲಿದ್ದರೂ ಶಾಂತಿರೀತಿಯಲ್ಲೇ ವರ್ತಿಸಿದರು. ಕೆಲವು ದಿನಗಳ ನಂತರ ಒಂದು ರಾತ್ರಿ ನನ್ನ ತಾಯಿ ಎಚ್ಚರಗೊಂಡು ನೋಡಿದಾಗ ಪಕ್ಕದಲ್ಲಿ ಮಗು ಇರಲಿಲ್ಲ. ಆದರೆ ಕೋಣೆಯ ಹೊರಗಡೆಯಿಂದ ಮಗು ಅಳುವ ಶಬ್ದ ಕೇಳಿ ಹೊರನಡೆದರು, ಕೋಣೆಯ ಹೊರಗಡೆ ನನ್ನ ತಂದೆ ಮಗುವನ್ನು ಎತ್ತಿಕೊಂಡಿದ್ದರು, ಮತ್ತು ಒಂದು ಬಕೇಟಿನಲ್ಲಿ ನೀರನ್ನು ಇಟ್ಟು ಅದಕ್ಕೆ ತಮ್ಮ ಕೈಯಲ್ಲಿದ್ದ ಟವಲನ್ನು ಬಕೇಟಿನಲ್ಲಿದ್ದ ನೀರಿನಲ್ಲಿ ಅದ್ದಿ ಮಗುವಿಗೆ ಸುತ್ತಿದರು. ಇದನ್ನು ಕಂಡು ಆಶ್ಚರ್ಯಗೊಂಡ ನನ್ನ ತಾಯಿ ಅದೇನೆಂದು ತಿಳಿಯಲು ನನ್ನ ತಂದೆಯ ಬಳಿ ದಾವಿಸಿದಳು, ನೋಡನೋಡುತ್ತಿದ್ದಂತೆಯೇ ಟವಲಿನಲ್ಲಿ ಸುತ್ತಿದ್ದ ಮಗುವನ್ನು ನೀರಿನಲ್ಲಿ ಅದ್ದಿದರು. ತಕ್ಷಣವೇ ನನ್ನ ತಾಯಿ ನನ್ನ ತಂದೆಯ ಮೇಲೆ ಎರಗಿದರು ಮತ್ತು ಮಗುವನ್ನು ಹೊರತೆಗೆಯುವಂತೆ ಕಿರುಚಿದರು. ಆದರೆ ನನ್ನ ತಂದೆ ಕೆಲ ಸಮಯ ನೀರಿನಲ್ಲಿಯೇ ಅದುಮಿಟ್ಟಿದ್ದರು. ನಂತರ ಮಗುವನ್ನು ಹೊರತೆಗೆದಾಗ ಮಗುವು ಚೀರಾಡುತ್ತಿತ್ತು. ನಂತರ ಒಣಗಿದ ಟವಲಿನಲ್ಲಿ ಮಗುವನ್ನು ಒರೆಸಿ ವೈದ್ಯರ ಬಳಿಗೆ ಕರೆದುಕೊಂಡು ಹೋದರು. ಮಗುವನ್ನು ಪರೀಕ್ಷಿಸಿದ ವೈದ್ಯರು ಮಗುವಿಗೆ ನ್ಯುಮೋನಿಯಾದ ಗುಣ ಲಕ್ಷಣಗಳು ಇದೆ ಎಂದು ತಿಳಿಸಿದರು. ಮತ್ತು ಔಷಧಿ ಮಾತ್ರೆಗಳನ್ನು ಬರೆದುಕೊಟ್ಟರು. ಆದರೆ ದಾರಿಯಲ್ಲಿ ಬರುವಾಗ ಆ ಚೀಟಿಯನ್ನು ಹೊರಗೆಸೆದು ಮಗುವಿಗೆ ಯಾವುದೇ ಔಷಧಿಗಳನ್ನು ನೀಡಲಿಲ್ಲ. ಮತ್ತು ಕೆಲವು ದಿನಗಳ ನಂತರ ಆ ಮಗು ಸತ್ತು ಹೋಯಿತು. ಮತ್ತು ಮಗು ಸತ್ತಿದ್ದಕ್ಕೆ ನ್ಯುಮೋನಿಯಾ ಎಂಬ ಸರ್ಟಿಫಿಕೇಟ್ ಕೂಡ ಬಂದಿತು.
“ದುರಾದೃಷ್ಟವಶಾತ್, ಮುಂದಿನ ಮಗು ಕೂಡ ಹೆಣ್ಣುಮಗುವೇ ಆಗಿತ್ತು. ಮಗು ಮನೆಗೆ ಬಂದ ನಂತರ ಆ ಮಗುವಿಗೆ ತೀವ್ರ ಬೇದಿ ಶುರುವಾಯಿತು. ಕೆಲವು ದಿನಗಳ ನಂತರ ಆ ಮಗು ಕೂಡ ಸತ್ತು ಹೋಯಿತು. ಆ ಮಗುವು ಸತ್ತ ನಂತರ ನನ್ನ ತಂದೆ ಆ ಮಗುವಿಗೆ ಒಂದು ಚಮಚ ಮದ್ಯಪಾನವನ್ನು ತಾನೇ ಕುಡಿಸಿದ್ದಾಗಿ ನನ್ನ ತಾಯಿಗೆ ತಿಳಿಸಿದರು, ಅದರಿಂದಾಗಿ ಆ ಮಗುವಿಗೆ ತೀವ್ರ ಬೇದಿಯಾಗಿ ಸತ್ತುಹೋಯಿತು ಎಂದು ಹೇಳಿದರು. ಮತ್ತು ಮುಂದಿನ ಮಗು ಹೆಣ್ಣು ಮಗುವಾಗಿದ್ದರೆ ಆ ಮಗುವಿನ ಜೊತೆಗೆ ಎಂಟು ವರ್ಷದವಳಿದ್ದ ನನ್ನನ್ನು ಕೂಡ ಕೊಲ್ಲುವುದಾಗಿ ನನ್ನ ತಂದೆ ಎಚ್ಚರಿಸಿದರು. ನನ್ನ ತಾಯಿ ಮಗು ಸಾಯುವುದನ್ನು ಕಂಡು ತೀವ್ರ ಬೇಸತ್ತಿದ್ದರು, ಮತ್ತು ಗಂಡುಮಗುವಿಗಾಗಿ ಕಾಯುತ್ತಿದ್ದರು. ಕೊನೆಗೂ ನಾಲ್ಕನೇ ಮಗು ಗಂಡುಮಗುವಾಗಿತ್ತು. ಆ ಗಂಡು ಮಗು ಹುಟ್ಟಿದ ನಂತರ ನನ್ನ ತಂದೆ ಬಹಳಷ್ಟು ಸಂತೋಷದಿಂದಿದ್ದರು.”
ಅದಿತಿ ಕಾರನ್ನು ತನ್ನ ಮನೆಯ ಮುಂದೆ ನಿಲ್ಲಿಸಿದಳು. ಅದಿತಿ ಮತ್ತು ನಾನು ಇಬ್ಬರೂ ಕಾರಿನಲ್ಲೇ ಕುಳಿತಿದ್ದು ಯಾರೊಬ್ಬರೂ ಇಳಿಯಲಿಲ್ಲ.
“ನನಗೆ ಗಂಡು ಮಗು ಇಷ್ಟ ಎಂಬ ಕಾರಣಕ್ಕೆ ನನಗೆ ಹೆಣ್ಣು ಮಗು ಹುಟ್ಟಿದರೆ ಅದನ್ನು ಕೊಲ್ಲುತ್ತೇನೆ ಎಂಬ ಅರ್ಥ ಅಲ್ಲ” ಸ್ವಲ್ಪ ಸಮಯದ ನಿಶ್ಯಬ್ದದ ನಂತರ ಸಂದೀಪ್ ಹೇಳಿದನು.
“ನೀನು ಈಗಾಗಲೇ ಹೆಣ್ಣುಮಗುವನ್ನು ನಿನ್ನ ಯೋಚನೆಯಲ್ಲೇ ಕೊಂದಿದ್ದೀಯ. ಇದೇ ಎಲ್ಲಾ ಅನಾಹುತಗಳಿಗೂ ಪ್ರಾರಂಭ.”
ತನ್ನ ಕಾರನ್ನು ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ ನನಗೆ ಮುಂಜಾನೆ ಕರೆ ಮಾಡುವಂತೆ ಮತ್ತು ಮುಂಜಾನೆ ಏರ್‍ಪೋರ್ಟ್ ತಾನೇ ಬಿಡುವುದಾಗಿ ತಿಳಿಸಿ ಅದಿತಿ ಮನೆಗೆ ತೆರಳಿದಳು.
ಮರುದಿನ ಬೆಳಗ್ಗೆ ಏರ್‍ಪೋರ್ಟ್‍ನಲ್ಲಿ ಅದಿತಿ ನಿಶ್ಯಬ್ಧವಾಗಿ ಕುಳಿತಿದ್ದಳು. ನಾನು ನನ್ನ ಬೋರ್ಡಿಂಗ್ ಪಾಸ್‍ಗಾಗಿ ಕಾಯುತ್ತಾ ಕುಳಿತಿದ್ದೆ. ಅವಳ ಮುಖದಲ್ಲಿ ಇನ್ನೂ ಬೇಸರ ಕಾಣುತ್ತಿತ್ತು.
“ನಾನು ಒಂದು ನಿರ್ಧಾರ ಮಾಡಿದ್ದೇನೆ” ಎಂದು ಸಂದೀಪ್ ಮಾತು ಪ್ರಾರಂಭಿಸಿದ.
“ಏನು ನಿರ್ಧಾರ ಮಾಡಿದೆ?” ಇದಕ್ಕೆ ಉತ್ತರವಾಗಿ ಅದಿತಿ ಪ್ರಶ್ನಿಸಿದಳು.
“ನನಗೆ ಮುಂದೆ ಹುಟ್ಟುವ ಹೆಣ್ಣುಮಗುವಿಗೆ ನಿನ್ನ ಹೆಸರನ್ನೇ ಇಡಬೇಕೆಂದು ನಿರ್ಧಾರ ಮಾಡಿದ್ದೇನೆ.”
“ನಿನಗೆ ಗಂಡು ಮಗು ಬೇಕೆಂದು ಅಪೇಕ್ಷಿಸಿದೆ ಅಲ್ಲವೇ?”
“ನಾನು ನನ್ನ ನಿರ್ಧಾರವನ್ನು ಬದಲಾಯಿಸಿದ್ದೇನೆ. ಅಕಸ್ಮಾತ್ ನನ್ನ ಹೆಂಡತಿ ಗಂಡು ಮಗುವನ್ನು ಹೆರುತ್ತಾಳೆ ಎಂದು ತಿಳಿದರೆ ಅದನ್ನು ಅಬಾರ್ಷನ್ ಮಾಡಿಸುವುದಕ್ಕೆ ಹೇಳುತ್ತೇನೆ.” ಎಂದು ಸಂದೀಪ್ ನಗುತ್ತಲೇ ಹೇಳಿದನು.
ಅದನ್ನು ನೋಡಿ ಅದಿತಿ ಕೂಡ ನಕ್ಕಳು.
“ಕೊನೆಗೂ ನಿನ್ನ ಮುಖದಲ್ಲಿ ನಗು ಮೂಡಿತಲ್ಲ”
ನನಗೆ ಬೋರ್ಡಿಂಗ್ ಪಾಸ್‍ಗೆ ಕರೆ ಬಂದಿತು. ಅವಳನ್ನು ತಬ್ಬಿಕೊಂಡು ನಿನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದನು.
“ನಿನ್ನೆ ರಾತ್ರಿ ಬಹಳಷ್ಟು ಮಾತನಾಡಿದೆ ನನ್ನನ್ನು ಕ್ಷಮಿಸು” ಎಂದು ಅದಿತಿ ತಿಳಿಸಿದಳು.
“ನೀನು ಕ್ಷಮೆ ಕೇಳುವಂತದ್ದು ಏನು ಹೇಳಲಿಲ್ಲ. ನನ್ನ ಯೋಚನೆಗಳೇ ಸರಿಯಾಗಿರಲಿಲ್ಲ.”
“ನಾನು ಕೂಡ ನಿನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ.” ಎಂದು ಹೇಳಿ ನನಗೆ ಬೋಳ್ಕೊಟ್ಟಳು.

“ಎಂತಹ ಮೋಸ” ಎಂದು ನಾನು ಕಥೆಯನ್ನು ಹೇಳಿ ಮುಗಿಸಿದ ನಂತರ ಆ ವೃದ್ಧರು ಹೇಳಿದರು.
“ಹೌದು”
“ನಾನು ಅದಿತಿ ತಂದೆಯನ್ನೊಮ್ಮೆ ಭೇಟಿ ಮಾಡಬೇಕಲ್ಲ.”
“ನಿಮ್ಮ ಭೇಟಿಯಿಂದ ಅವರ ನಿರ್ಧಾರಗಳು ಬದಲಾಗುವುದಿಲ್ಲ.” ಎಂದು ಹೇಳಿ ಸಂದೀಪ್ ಕುರ್ಚಿಯ ಮೇಲಿನಿಂದ ಎದ್ದನು. “ನಾನು ನನ್ನ ಸ್ನೇಹಿತನನ್ನು ಭೇಟಿ ಮಾಡುವುದಿದೆ. ನಾನು ಈಗ ತೆರಳಿ ಸಂಜೆ ಬರುತ್ತೇನೆ.”
“ನೀನು ಹೋಗಲೇ ಬೇಕ?”
“ಹೌದು, ನನ್ನ ಸ್ನೇಹಿತನು ನನಗಾಗಿ ಕಾಯುತ್ತಿದ್ದಾನೆ, ನೀವು ಮಲಗಿ ವಿಶ್ರಾಂತಿ ತೆಗೆದುಕೊಳ್ಳಿ, ನಾನು ಸಂಜೆ ಬರುತ್ತೇನೆ.”
ಸಂದೀಪ್ ಆಸ್ಪತ್ರೆಯಿಂದ ಹೊರನಡೆಯುತ್ತಾನೆ. ಸಂದೀಪ್ ತೆರಳಿದ ನಂತರ ಆ ವೃದ್ಧರು ಅದಿತಿ ಬಗ್ಗೆ ಬಹಳಷ್ಟು ಯೋಚನೆ ಮಾಡುತ್ತಾರೆ. ಮತ್ತು ಸಂದೀಪನು ಅದಿತಿಯೊಂದಿಗೆ ವರ್ತಿಸಿದ ರೀತಿಯನ್ನು ಮೆಚ್ಚಿಕೊಳ್ಳುತ್ತಾರೆ. ನಂತರ ಅದಿತಿ ತಂದೆಗೆ ಶಪಿಸುತ್ತಾರೆ.
*****

“ಮುಂದುವರಿಸೋಣವೇ?” ಮರುದಿನ
ಸಂದೀಪ್ ಆಸ್ಪತ್ರೆಗೆ ಬಂದ ಕೂಡಲೇ ವೃದ್ಧರನ್ನು ಕೇಳುತ್ತಾನೆ.
“ಏನನ್ನು ಮುಂದುವರಿಸೋಣ?”
“ನೀವು ನಿಮ್ಮ ಮಗಳ ಬಗ್ಗೆ ಹೇಳುತ್ತಿದ್ದಿರಿ. ಅದನ್ನು ಮುಂದುವರಿಸಲು ಹೇಳಿದೆ.”
“ಹೇಳಲು ಇನ್ನೇನು ಬಾಕಿ ಉಳಿದಿಲ್ಲ, ಇನ್ನು ಸ್ವಲ್ಪ ದಿನದಲ್ಲೇ ಅವಳು ಬೆಂಗಳೂರಿಗೆ ಬರುತ್ತಾಳೆ. ಊರಿನಲ್ಲಿ ನಾನೊಬ್ಬನೇ ಉಳಿದುಕೊಳ್ಳುತ್ತೇನೆ.”
“ನೀವು ನಿಮ್ಮ ಮಗಳೊಂದಿಗೆ ಬೆಂಗಳೂರಿಗೆ ಯಾಕೆ ಬರಬಾರದು?”
“ನನ್ನ ಆರೋಗ್ಯ ಸರಿಯಿಲ್ಲ ಮತ್ತು ನನ್ನೂರಿನಲ್ಲಿ ನನ್ನ ಅಕ್ಕ ವೈದ್ಯರಾಗಿದ್ದಾರೆ. ಮತ್ತು ಅವಳು ನನ್ನ ಆರೋಗ್ಯದ ತಪಾಸಣೆ ಮಾಡುತ್ತಿರುತ್ತಾಳೆ. ನನ್ನ ಮಗಳಿಗೆ ನಾನು ಹೊರೆಯಾಗಲು ಇಷ್ಟಪಡುವುದಿಲ್ಲ.”
“ನೀವು ನಿಮ್ಮ ಮಗಳಿಗೆ ಎಂದೂ ಹೊರೆಯಾಗುವುದಿಲ್ಲ ಅಂದರೆ ಅವಳು ಎಂದಿಗೂ ಆ ರೀತಿ ಯೋಚನೆ ಮಾಡುವುದಿಲ್ಲ ಎಂದು ಹೇಳಿದೆ.”
“ನೀನು ಹೇಳಿದ್ದು ಸರಿ ಆದರೆ ನನ್ನ ಆರೋಗ್ಯ ಸರಿಯಿಲ್ಲ ಮತ್ತು ನನ್ನ ಅಕ್ಕ ಅಲ್ಲಿ ನನ್ನನ್ನು ನೋಡಿಕೊಳ್ಳುತ್ತಿದ್ದಾಳೆ, ನಾನು ಬೆಂಗಳೂರಿಗೆ ಬಂದರೆ ನನ್ನ ಮಗಳಿಗೆ ಕೆಲಸ ಮತ್ತು ನನ್ನನ್ನು ನೋಡಿಕೊಳ್ಳುವ ಎರಡೂ ಕೆಲಸದಿಂದ ಕಷ್ಟವಾಗಬಹುದು.”
“ಹೌದು, ನೀವು ಹೇಳುವುದು ಸರಿ”
“ಇಂದು ಬೆಳಗಿನಿಂದಲೂ ನಾನು ನಿನ್ನ ಬಗ್ಗೆಯೇ ಯೋಚಿಸುತ್ತಿದ್ದೆ.”
“ನನ್ನ ಬಗ್ಗೆ ಏನು ಯೋಚನೆ ಮಾಡುತ್ತಿದ್ದಿರಿ?”
“ನೀನು ಬಹಳಷ್ಟು ಒಳ್ಳೆಯ ಮನುಷ್ಯ, ಮತ್ತು ನಿನ್ನ ಸ್ನೇಹ ನನಗೆ ಬಹಳಷ್ಟು ಇಷ್ಟವಾಯಿತು. ನಾನು ನನ್ನ ಮಗಳೊಂದಿಗೂ ಹಂಚಿಕೊಳ್ಳದ ಕೆಲವೊಂದು ವಿಷಯಗಳನ್ನು ನಿನ್ನೊಂದಿಗೆ ಹಂಚಿಕೊಂಡೆ. ಮತ್ತು ಈ ರೀತಿಯ ಮಾತುಕಥೆ ನಾನು ಯಾರೊಂದಿಗೂ ಆಡಿರಲಿಲ್ಲ.
“ನನಗೆ ಎರಡು ಬಾರಿ ಹಾರ್ಟ್‍ಅಟ್ಯಾಕ್ ಆಗಿದ್ದು, ಇನ್ನೊಮ್ಮೆ ಹಾರ್ಟ್‍ಅಟ್ಯಾಕ್ ಆದರೆ ನಾನು ಸಾಯುವ ಸಾಧ್ಯತೆಯಿದೆ. ನಾನು ಸಾಯುವ ಮುನ್ನ ನನ್ನ ಮಗಳ ಮದುವೆಯನ್ನು ನೋಡಬೇಕು. ನಾನು ನನ್ನ ಮಗಳನ್ನು ರಕ್ಷಣೆ ಮಾಡುವವನನ್ನು ಹುಡುಕುತ್ತಿಲ್ಲ ಬದಲಿಗೆ ನನ್ನಷ್ಟೇ ಪ್ರೀತಿ ಮಾಡುವವನನ್ನು ಹುಡುಕುತ್ತಿದ್ದೇನೆ. ಅದನ್ನು ನಿನ್ನಲ್ಲಿ ಕಂಡೆನು.”
“ನಿಮ್ಮ ಮಾತಿನ ಅರ್ಥವೇನು?”
“ನೀನೇಕೆ ನನ್ನ ಮಗಳನ್ನು ಮದುವೆಯಾಗಬಾರದು?”
“ನೀವೇನು ಹೇಳುತ್ತಿದ್ದೀರಿ? ನಾನು ಭೇಟಿನೇ ಮಾಡದಿರುವ ಒಂದು ಹುಡುಗಿಯನ್ನು ಹೇಗೆ ಮದುವೆಯಾಗಲಿ.”
“ನನ್ನನ್ನು ಕ್ಷಮಿಸು, ನಾನು ನನ್ನ ಆಸೆಯನ್ನು ವ್ಯಕ್ತಪಡಿಸಿದೆ ಅಷ್ಟೆ.”
“ನನಗೆ ನಿಮ್ಮ ಭಾವನೆ ಅರ್ಥವಾಗುತ್ತದೆ. ನಾನು ಬೆಂಗಳೂರಿಗೆ ನನ್ನ ತಾಯಿಯ ಆಸೆಯಂತೆ ಮದುವೆಯಾಗಲು ಬಂದದ್ದು ನಿಜ, ಆದರೆ ನಿಮ್ಮ ಮಗಳ ಬಗ್ಗೆ ಈ ರೀತಿ ಯೋಚನೆ ಮಾಡಿರಲಿಲ್ಲ. ನಿಮ್ಮ ಮನಸ್ಸಿನಲ್ಲಿ ಒಳ್ಳೆಯ ವಿಚಾರವಿದೆ, ಇದರ ಬಗ್ಗೆ ನಾನು ಯೋಚನೆ ಮಾಡುತ್ತೇನೆ.”
“ಹಾಗಾದರೆ ನಾಳೆ ಬೆಳಗ್ಗೆ ನನ್ನನ್ನು ಮನೆಗೆ ಡ್ರಾಪ್ ಮಾಡಲು ನೀವು ನನ್ನೊಡನೆ ಬನ್ನಿ. ನೀವು ನನ್ನ ಮಗಳನ್ನು ಭೇಟಿ ಮಾಡಬಹುದು.”
“ನಾಳೆ ಬೆಳಗ್ಗೆ ಖಂಡಿತವಾಗಲೂ ನಾನೇ ನಿಮ್ಮನ್ನು ಮನೆಗೆ ಕರೆದುಕೊಂಡು ಹೋಗುತ್ತೇನೆ. ಆದರೆ ನಾವು ಹೀಗೆ ಮಾತನಾಡಿದ ವಿಚಾರವನ್ನು ನಿಮ್ಮ ಮಗಳಿಗೆ ಹೇಳಬೇಡಿ. ಆಕೆ ಇದಕ್ಕೆ ಇನ್ನು ತಯಾರಾಗಿರುವುದಿಲ್ಲ, ಅವಳು ಈಗ ಕೆಲಸಕ್ಕೆ ಸೇರುವ ವಿಚಾರದಲ್ಲಿ ಖುಷಿಯಾಗಿರುತ್ತಾಳೆ. ಅವಳು ಕೆಲಸಕ್ಕೆ ಸೇರಿದ ನಂತರ ಈ ವಿಚಾರವನ್ನು ಪ್ರಸ್ತಾಪಿಸೋಣ.”
“ನೀವು ಹೇಳಿದ್ದು ಸರಿಯಿದೆ”
ಸಂದೀಪ್ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿ ಅಲ್ಲಿಂದ ಹೊರನಡೆದನು. ಹೋಗುವ ದಾರಿಯಲ್ಲಿ ಆ ವೃದ್ಧರು ತಮ್ಮ ಮಗಳ ಬಗ್ಗೆ ಹೇಳಿದ್ದನ್ನು ನೆನೆದು ಅವರ ಮಗಳು ಹೇಗಿರಬಹುದು ಎಂದು ಕಲ್ಪಿಸಿಕೊಂಡನು. ಮನೆಗೆ ತೆರಳಿದ ನಂತರವೂ ಬಹಳಷ್ಟು ಸಮಯ ನಿದ್ದೆ ಮಾಡಲಿಲ್ಲ. ಅನಿರೀಕ್ಷಿತವಾಗಿ ತಾನು ಮುಂದೆ ಮದುವೆ ಆಗಬಹುದಾದ ಹುಡುಗಿಯನ್ನು ನಾಳೆ ಭೇಟಿಯಾಗುವ ವಿಚಾರವನ್ನು ನೆನೆದು ಖುಷಿಯಾಗಿದ್ದನು.
ಅದೇ ಸಮಯಕ್ಕೆ ಬಂದ ಫೋನ್ ಕಾಲ್‍ನಿಂದ ತಮ್ಮ ಯೋಚನೆಗಳಿಂದ ಹೊರಬಂದನು.
“ನಾನು ಸಂದೀಪ್ ನಾಯಕ್‍ರನ್ನು ಮಾತನಾಡಿಸಬಹುದೇ?” ಹುಡುಗಿಯ ಧ್ವನಿಯೊಂದು ಕೇಳಿತು.
“ಹೌದು ಯಾರು ನೀವು?” ಅದಕ್ಕೆ ಉತ್ತರವಾಗಿ ಸಂದೀಪ್ ಕೇಳಿದ.
“ನಮಸ್ತೆ ಸಾರ್, ನಾವು ಆಸ್ಪತ್ರೆಯಿಂದ ಕಾಲ್ ಮಾಡುತ್ತಿದ್ದೇವೆ. ನೀವು ಆಸ್ಪತ್ರೆಗೆ ಸೇರಿಸಿದ್ದ ರಘುನಂದನ್ ಎಂಬ ವೃದ್ಧರು ಸ್ವಲ್ಪ ಸಮಯದ ಹಿಂದೆ ಹೃದಯಾಘಾತದಿಂದ ತೀರಿಹೋದರು. ನೀವು ಈ ಕೂಡಲೇ ಆಸ್ಪತ್ರೆಗೆ ಬನ್ನಿ.”
ತಕ್ಷಣವೇ ಸಂದೀಪ್ ಆಸ್ಪತ್ರೆಗೆ ಬಂದ. ಆ ವೃದ್ಧರು ತಟಸ್ಥವಾಗಿ ಮಲಗಿದ್ದರು. ನಂತರ ಆ ವೃದ್ಧರು ಕೊಟ್ಟಿದ್ದ ಮನೆಯ ವಿಳಾಸವನ್ನು ನೆನೆದು ತನ್ನ ಪರ್ಸಿನಲ್ಲಿ ಆ ಚೀಟಿಯನ್ನು ಹುಡುಕಿ ತೆಗೆದನು. ನಂತರ ತನ್ನ ಸ್ನೇಹಿತನಿಗೆ ಕರೆ ಮಾಡಿ ಆತನನ್ನು ಆಸ್ಪತ್ರೆಗೆ ಬರಲು ಹೇಳಿದನು. ಆಸ್ಪತ್ರೆಯ ವಿಧಿವಿಧಾನಗಳನ್ನು ಮುಗಿಸಿ ಆ ವೃದ್ಧರ ಶವವನ್ನು ಅವರ ಮನೆಗೆ ತರುವಂತೆ ಹೇಳಿ. ಆ ವಿಳಾಸದ ಒಂದು ಪ್ರತಿಯನ್ನು ಆತನಿಗೆ ನೀಡಿ, ಆ ವೃದ್ಧರ ಮನೆಯವರಿಗೆ ವಿಚಾರ ತಿಳಿಸಲು ಮತ್ತು ಆ ವೃದ್ಧರ ಮಗಳಾದ ಕನಸುಳನ್ನು ಭೇಟಿಯಾಗಲು ತಕ್ಷಣವೇ ತೆರಳಿದನು.
ಕೆಲವು ಗಂಟೆಗಳ ಪ್ರಯಾಣದ ನಂತರ, ಸಂದೀಪನು ಆ ವಿಳಾಸಕ್ಕೆ ತಲುಪಿದನು. ಅದು ಬಹಳಷ್ಟು ಹಳೆಯ ಮನೆಯಾಗಿತ್ತು ಮತ್ತು ಅದು ಕಾಫಿ ತೋಟದ ಮಧ್ಯದಲ್ಲಿ ಇತ್ತು. ಮತ್ತು ಎಲ್ಲೆಡೆ ಹಸಿರು ತುಂಬಿತ್ತು. ಕಾರಿನಿಂದ ಇಳಿದು ಆ ಮನೆಯ ಬಾಗಿಲ ಬಳಿ ಬಂದನು ಮತ್ತು ಕಾಲಿಂಗ್ ಬೆಲ್ ಒತ್ತಿದನು. ಮತ್ತು ಆ ಸಾವಿನ ವಿಚಾರವನ್ನು ಅವರ ಮಗಳಿಗೆ ಹೇಗೆ ತಿಳಿಸುವುದು ಎಂದು ಮಾನಸಿಕವಾಗಿ ಕುಗ್ಗಿದ್ದನು. ಬಾಗಿಲನ್ನು ಕನಸು ತೆಗೆಯುತ್ತಾಳೆ ಎಂದು ಅಪೇಕ್ಷಿಸುತ್ತಾ ನಿಂತಿದ್ದನು. ಆದರೆ ವಯಸ್ಸಾದ ವೃದ್ಧೆಯೊಬ್ಬರು ತೆಗೆದರು.
“ಯಾರು ನೀವು? ಏನಾಗಬೇಕಿತ್ತು?” ಆಕೆ ಪ್ರಶ್ನಿಸಿದರು.
“ನಾನು ಕನಸುರನ್ನು ಭೇಟಿ ಮಾಡಬೇಕಿತ್ತು. ಅವರನ್ನು ಕರೆಯಿರಿ”
“ರಘು ನಿಮ್ಮ ಬಳಿ ಇದ್ದಾನೆಯೇ?”
“ಹೌದು, ನೀವು ಯಾರು?”
“ನಾನು ರಘುವಿನ ಅಕ್ಕ. ರಘು ಎಲ್ಲಿದ್ದಾನೆ ಎಂಬುದು ನಮಗೆ ಚಿಂತೆಯಾಗಿತ್ತು, ಅವನು ನಿಮ್ಮೊಂದಿಗೆ ಇದ್ದಾನೆಯೇ?”
“ಹೌದು, ಅದರ ಬಗ್ಗೆ ನಾನು ಹೇಳುತ್ತೇನೆ. ಆದರೆ ನಾನು ಮೊದಲು ಕನಸುಳನ್ನು ಭೇಟಿ ಮಾಡಬೇಕು.”
“ರಘು ಡಿಲೂಜನಲ್ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ ಮತ್ತು ಅವನ ಮಗಳು ಸತ್ತು ಹೋಗಿ ತುಂಬ ದಿನ ಆಗಿದೆ. ಸತ್ತುಹೋದ ಅವನ ಮಗಳು ಇನ್ನು ಬದುಕಿದ್ದಾಳೆ ಎಂದು ಭ್ರಮಿಸಿ ಅವನು ಅವಳೊಂದಿಗೆ ಬದುಕುತ್ತಿದ್ದಾನೆ. ಅವಳು ಜೀವಂತವಾಗಿಲ್ಲ.”
ಸಂದೀಪ್ ಗಾಬರಿಯಿಂದ ಏನನ್ನೂ ಮಾತನಾಡದೇ ನಿಂತನು.
“ಈಗಲಾದರೂ ಹೇಳು ರಘು ಎಲ್ಲಿದ್ದಾನೆ ಎಂದು?”
“ನಿನ್ನೆ ರಾತ್ರಿ ಹೃದಯಾಘಾತದಿಂದ ಅವರು ತೀರಿಹೋದರು.” ಕೊನೆಗೆ ಅವನು ಸತ್ಯ ಹೇಳಿದ.
ಅದನ್ನು ಕೇಳಿ ಆಕೆ ಕುಸಿದು ಬಿದ್ದರು.
ಗಂಟೆಗಳ ಕಾಲ ಆಕೆ ಗೋಳಾಡಿದರು. ಅದಾದ ನಂತರ ಬೆಂಗಳೂರಿನಲ್ಲಿ ನಡೆದ ಸಂಗತಿಗಳ ಬಗ್ಗೆ ಸಂದೀಪ್ ಮುಂದುವರಿಸಿದ. ತನ್ನ ಸ್ನೇಹಿತನಿಗೆ ಕರೆ ಮಾಡಿ ಆತ ಎಲ್ಲಿರುವನೆಂದು ಮಾಹಿತಿ ಪಡೆದ. ನಂತರ ಬಹಳಷ್ಟು ಸಮಯ ಅವರಿಬ್ಬರೂ ಮಾತನಾಡದೇ ಕುಳಿತರು. ಆತನಿಗೆ ಏನು ಮಾತನಾಡುವುದು ಎಂದು ತೋಚಲಿಲ್ಲ. ಆ ಸಂದರ್ಭದಲ್ಲಿ ಗೋಡೆ ಮೇಲಿದ್ದ ಫೋಟೋಗಳ ಮೇಲೆ ಆತನ ಗಮನ ಬಿದ್ದಿತು. ಕುರ್ಚಿಯಿಂದ ಮೇಲೆದ್ದು ಫೋಟೋಗಳ ಬಳಿ ಬಂದ. ಅದು ಅವರ ಫ್ಯಾಮಿಲಿ ಫೋಟೋಗಳಾಗಿದ್ದವು. ಆ ಫೋಟೋಗಳು ಯಾವುದರಲ್ಲೂ ಕನಸು ಇರಲಿಲ್ಲ. ಒಂದು ಹಳೆಯ ಫೋಟೋದಲ್ಲಿ ಮಧ್ಯವಯಸ್ಸಿನ ವ್ಯಕ್ತಿಯೊಬ್ಬ ನಿಂತಿದ್ದ. ಅದು ಆ ವೃದ್ಧರು ಇರಬಹುದು ಎಂದು ಯೋಚನೆ ಮಾಡುತ್ತಿದ್ದ.
“ಆ ವ್ಯಕ್ತಿ ರಘು.” ಎಂದು ಆಕೆ ಹೇಳಿದರು.
“ಇಲ್ಲಿರುವ ಯಾವುದೇ ಫೋಟೋದಲ್ಲೂ ಕನಸು ಇಲ್ಲ. ಅವಳ ಫೋಟೋ ಎಲ್ಲಿದೆ?” ಸಂದೀಪ್ ಪ್ರಶ್ನಿಸಿದ
“ರಘು ಅವಳ ಬಗ್ಗೆ ಏನು ಹೇಳಿದ?”
“ಬಹಳಷ್ಟು ವಿಷಯ ಹೇಳಿದರು. ನಾವು ಭೇಟಿಯಾದಾಗಿನಿಂದ ನಮ್ಮ ಮಧ್ಯ ಮಾತುಕತೆಯಾಗಿರುವ ವಿಷಯ ಎಂದರೆ ಅವರ ಮಗಳ ವಿಷಯ ಮಾತ್ರ. ಹಾಗಾಗಿ ಅವಳ ಫೋಟೋ ನೋಡುವ ಕುತೂಹಲವಾಯಿತು.”
“ಕನಸಿನಲ್ಲಿರುವ ವ್ಯಕ್ತಿಯೊಬ್ಬರ ಫೋಟೋ ಹೇಗೆ ತೋರಿಸಲಿ?”
“ನಿಮ್ಮ ಮಾತು ನನಗೆ ಅರ್ಥವಾಗಲಿಲ್ಲ.”
“ಏಕೆಂದರೆ ಅವಳು ಹುಟ್ಟಲೇ ಇಲ್ಲ.”
“ನೀವು ಏನು ಹೇಳುತ್ತಿದ್ದೀರಿ?” ಆತ ಗಾಬರಿಯಿಂದ ಕೇಳಿದ.
“ಕನಸುಳಿನ ಅಮ್ಮ ಗರ್ಭವತಿಯಾದಾಗ ಆಕೆಗೆ ಗಂಡುಮಗುವಾಗುತ್ತದೆ ಎಂದು ಅವರಿಬ್ಬರೂ ಭಾವಿಸಿದ್ದರು. ಆದರೆ ವೈದ್ಯರ ತಪಾಸಣೆಯ ನಂತರ ಅದು ಹೆಣ್ಣುಮಗು ಎಂದು ತಿಳಿಯಿತು. ಅವರಿಬ್ಬರೂ ಮಾತುಕತೆ ನಡೆಸಿ ಆ ಮಗುವನ್ನು ತೆಗೆಸಲು ನಿರ್ಧರಿಸಿ ತೆಗೆಸಿದರು. ಆದರೆ ರಘುವಿಗೆ ಅದು ಇಷ್ಟವಿರಲಿಲ್ಲ. ಆದರೆ ಕನಸುಳಿನ ತಾಯಿ ಗಟ್ಟಿ ಹೃದಯದವಳಾಗಿದ್ದು ಅವನಿಗೆ ಧೈರ್ಯ ಹೇಳಿದಳು. ಕೆಲವು ದಿನಗಳ ನಂತರ ಅವಳೂ ಕೂಡ ಅಪಘಾತವೊಂದರಲ್ಲಿ ತೀರಿ ಹೋದಳು. ಮೊದಮೊದಲು ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು. ಇದ್ದಕ್ಕಿದ್ದ ಹಾಗೆ ಒಂದು ದಿನ ರಘು ತನ್ನ ಮಗಳ ಬಗ್ಗೆ ಮಾತನಾಡಲು ಶುರು ಮಾಡಿದ. ನಂತರ ಪಾರ್ಕಿಗೆ ಒಬ್ಬನೇ ಹೋಗಿ ತಾನು ತನ್ನ ಮಗಳೊಂದಿಗೆ ಆಡಲು ಬಂದಿದ್ದೇನೆಂದು ಹೇಳಲು ಪ್ರಾರಂಭಿಸಿದ. ನಂತರ ಸುತ್ತಮುತ್ತಲಿನ ಮನೆಯವರಿಗೆ ತನ್ನ ಮಗಳ ಬಗ್ಗೆ ಕಥೆಗಳನ್ನು ಹೇಳಲು ಪ್ರಾರಂಭಿಸಿದ. ಸುತ್ತಮುತ್ತಲಿನ ಜನ ಅವರು ಕೊಂದ ಹೆಣ್ಣುಮಗು ದೆವ್ವವಾಗಿ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಮಾತನಾಡಲು ಪ್ರಾರಂಭಿಸಿದರು. ಆದರೆ ಮನೋವೈದ್ಯರು ಇದಕ್ಕೆ ಡಿಲೂಜನಲ್ ಮಾನಸಿಕ ಕಾಯಿಲೆ ಎಂದು ಹೆಸರಿಟ್ಟರು.” ಎಂದು ಹೇಳಿ ಮುಗಿಸಿದಳು.
“ಹಾಗಾದರೆ ಕನಸು ಕೇವಲ ಕಾಲ್ಪನಿಕ ಹುಡುಗಿಯೇ?”
“ಹೌದು, ಹೆಣ್ಣುಮಗು ಎಂಬ ಕಾರಣಕ್ಕೆ ಆಕೆಯನ್ನು ಕೊಲ್ಲುತ್ತಾ ಬಂದರೆ ಒಂದು ಹೆಣ್ಣು ಮುಂದೆ ಬರೀ ಕಲ್ಪನೆಯಲ್ಲೇ ಇರುತ್ತಾಳೆ.”
ಮನೆಯ ಹೊರಗಡೆ ಗಾಡಿಯ ಶಬ್ದ ಅವರ ಗಮನವನ್ನು ಬದಲಿಸಿತು. ಸಂದೀಪನ ಸ್ನೇಹಿತ ಆ ವೃದ್ಧರ ಶವದೊಂದಿಗೆ ಅಲ್ಲಿಗೆ ತಲುಪಿದ್ದ. ಅಂತಿಮ ಸಂಸ್ಕಾರದ ನಂತರ ಸಂದೀಪ್ ಹೊರನಡೆದ ಮತ್ತು ಇನ್ನೆಂದೂ ಅಲ್ಲಿಗೆ ಮರಳಲಿಲ್ಲ.
******** ***** ***** ***** ***** *****

ಸುನಿಲ್ ಎಸ್.ಜಿ.ಹಾಸನ
8904030521

About the author

Adyot

1 Comment

Leave a Comment

Use the form on right side to Send your query related to Advertisement, to Send News and to Share Your Feedback!

Ad/Send News/Feedback

Copyright © 2025. Adyot News | All Rights Reserved