ಆದ್ಯೋತ್ ಕಥಾಗುಚ್ಛ

ಅವಳು

ಲವ್ ಗಿವ್ ಎಲ್ಲಾ ಪುಸ್ತಕದ ಬದನೆಕಾಯಿ ಕಂಡ್ರಿ ಅಂತ ಡೈಲಾಗ್ ಹೊಡೆಯುತ್ತಿದ್ದ ನನಗೆ ಲವ್ ಬಗ್ಗೆ ನಂಬಿಕೆಯಿರಲಿಲ್ಲ. ಹಾಗಂತ ಅದರ ವಿರೋಧಿಯೂ ನಾನಾಗಿರಲಿಲ್ಲ.

ಯಾರೋ ಅವಳು ನಾ ತಿಳಿಯೆ.ಅವಳ ಮೊಗವನ್ನು ನೋಡುತ್ತಿದ್ದರೆ ಏನೋ ಒಂದು ಆನಂದ. ಏನೋ ಕಳೆದುಕೊಂಡ ವಸ್ತುವನ್ನು ಪಡೆದಂತಹ ಸಂತೋಷ.
ಲವ್ ಅಟ್ ಫಸ್ಟ್ ಸೈಟ್ ಎಂಬ ಮಾತಿನಲ್ಲಿ ನನಗೆ ನಂಬಿಕೆ ಇರಲಿಲ್ಲ. ನೋಡ್ರಿ ,ಈ ಲೈಫ್ ಇದೆ ಅಲ್ಲ ಅದು ನಿಮ್ಮನ್ನ ಎಲ್ಲೆಲ್ಲೋ ಕರ್ಕೊಂಡು ಹೋಗುತ್ತೆ ಕಂಡ್ರಿ. ನೀವು ಬೇಡ ಅಂದ್ರು ಅದು ಕರ್ಕೊಂಡು ಹೋದ ಕಡೆ ಎಷ್ಟೂ ಸಾರಿ ತಿಳಿದೋ ತಿಳಿದೆನೂ ನಾವು ಹೋಗಲೇಬೇಕು.

2019 ಅಗಸ್ಟ 4 ನನ್ನ  ಫ್ರೆಂಡ್ ಸುಶಾಂತ್ ಮದುವೆಗೆ ಅಂತ ಸಿರ್ಸಿಗೆ ಹೋಗಿದ್ದೆ. ಅದೂಂದು ಮರೆಯಲಾಗದ ಸುಂದರ ಅನುಭವ. ಸಿರ್ಸಿ ಸಮೀಪದ ಒಂದು ಚಿಕ್ಕ ಹಳ್ಳಿ. ಆದರೆ ಊರಿಗೆ ಊರೇ ಮದುವೆಯ ಸಂಭ್ರಮದಲ್ಲಿ ಮಗ್ನವಾದಂತಿತ್ತು. ತಳಿರು-ತೋರಣಗಳಿಂದ ಸಿಂಗರಿಸಿದ  ಊರಿನ ಹೆಬ್ಬಾಗಿಲು ಕಣ್ಣು ಕುಕ್ಕುವಂತಿತ್ತು.

ಮಳೆಗಾಲದ ಸಮಯ, ಹೇಳಿ ಕೇಳಿ ಈ ಸಮಯದಲ್ಲಿ ಹಳ್ಳಿಯ ರೋಡ್ಗಳಂತೂ ಚರಂಡಿಯಂತೆ ಆಗಿರುತ್ತದೆ. ಕಾರಿನಲ್ಲಿ ಊರ ಹೆಬ್ಬಾಗಿಲು ದಾಟಿ ಒಳದಾರಿ ಪ್ರವೇಶಿಸಿದೆವು ನಾನು ಮತ್ತು ಗಣಿ. ಅವನೊಡನೆ ಮಾತನಾಡುತ್ತಾ ಮಾತನಾಡುತ್ತಾ ರೋಡಲ್ಲಿ ನೀರುತುಂಬಿದ ಹೊಂಡವನ್ನು ಗಮನಿಸಲೇ ಇಲ್ಲ. ವೇಗವಾಗಿದ್ದ ಕಾರು ಹೊಂಡವನ್ನು ದಾಟಿದ್ದೇ ತಡ ಅಲ್ಲಿದ್ದ ಕೊಳಚೆ ನೀರು ಪಕ್ಕದಲ್ಲಿ ಬರುತ್ತಿರುವ ಕೆಲವರಿಗೆ ತಾಕಿದ್ದು. ಅಲ್ಲಿದ್ದವರಲ್ಲಿ ಯಾರೋ ಮುಷ್ಟಿ ಗಾತ್ರದ ಕಲ್ಲನ್ನೆತ್ತಿ ನನ್ನ ಕಾರ್ಗೆ ಎಸೆದರು. ಗಾಡಿಯನ್ನು ಸೈಡ್ಗೆ ನಿಲ್ಲಿಸಿದ ನಾನು. ಫ್ರೆಂಡ್ಗೆ ಹೇಳಿದೆ ನೋಡು ಮಗ ನನ್ನ ಕಾರಿಗೆ ಕಲ್ಲೆಸೆದವನ್ನಾ ಸುಮ್ನೆ ಬಿಡಲ್ಲ.ಅವರತ್ರ ಕಾರ್ ಡ್ಯಾಮೇಜ್ ರಿಕವರಿ ಮಾಡೇ ಇಲ್ಲಿಂದ ಹೊರಡೋದು ಅಂತ ಕಾರಿನ ಹ್ಯಾಂಡ್ ಬ್ರೇಕ್ ಹಾಕಿದೆ.

ಕಾರಿನಿಂದಿಳಿದು ಹೊರಬರುತ್ತಿದ್ದಂತೆಯೇ ಇನ್ನೊಂದು ಕಲ್ಲನ್ನು ಹಿಡಿದು ನನ್ನೆಡೆಗೆ ಎಸೆಯಲು ನಿಂತಿದ್ದಳು ಅವಳು. ಅವಳ ಕೋಪದ ಮುಖ ಇನ್ನೂ ನನ್ನ ನೆನಪಿನಲ್ಲಿ ಪ್ರಸ್ತುತ. ಯಾಕೋ ಏನೋ ಒಂದೆ ನೋಟಕ್ಕೆ ಸ್ತಬ್ಧವಾಗಿ ನಿಂತಿದ್ದೆ ಅಂದು ನಾನು. ಆ ಕ್ಷಣಕ್ಕೆ ನಾನು ಮೂಕನೂ ಹೌದು. ಕಿವುಡನೂ ಹೌದು. ಮುಖದಲ್ಲಿ ಏನೋ ಒಂದು ಮಂದಹಾಸ. ಮನಸ್ಸಿನಲ್ಲಿ ತಂಪಾದ ತಂಗಾಳಿಯ ಅನುಭವ.ಎದೆಯಲ್ಲಿ ಏನೋ ಒಂದು ಆಹ್ಲಾದ. ಕಣ್ಣಿಗೆ ಅವಳ ತುಟಿಯ ಹೊಯ್ದಾಟ ಒಂದೇ ಕಾಣುತ್ತಿತ್ತು. ( ನೋ ಆಡಿಯೋ )

2 ನಿಮಿಷಗಳ ನಂತರ ಎಚ್ಚರವಾದಾಗ ಅವಳ ಗೆಳತಿ ಅವಳನ್ನು ಕೈಹಿಡಿದು ಕಲ್ಲನ್ನು ಎಸೆಯದಂತೆ ತಡೆದಿದ್ದಳು. ಅವಳ ಚೊಡಿದಾರದ ತುದಿಗೆ ಎಲ್ಲೋ ಒಂದೆರಡು ಹನಿ ನೀರು ತಾಕಿತ್ತು ಅಷ್ಟೆ. ಯುದ್ಧವನ್ನೇ ಮಾಡುವಂತೆ ಬಿಲ್ಡಪ್ ಕೊಟ್ಟು ಬಂದಿದ್ದ ನಾನು ಒಂದೇ ಕ್ಷಣದಲ್ಲಿ ಅವಳಿಗೆ ಸೋತು ಶರಣಾದಂತಿದ್ದೆ. ಅವಳ ಮೊಗದಲ್ಲಿದ್ದ ಹುಸಿ ಕೋಪ ಆ ಟೆನ್ಶನ್ ನೋಡಿ
I am so sorry😁 ಎಂದು  ಹಲ್ಲುಕಿರಿಯುತ್ತಾ ನಿಂತಿದ್ದೆ.

ನನಗೊಂದು ಕೆಟ್ಟ ಹ್ಯಾಬಿಟ್ ಕಂಡ್ರಿ, ಯಾವುದೇ ಸೀರಿಯಸ್ ಸಿಚುವೇಶನ್ ಇದ್ದರೂ ಹಲ್ಲು ಕಿಸಿಯೋದು.ಇಲ್ಲೂ ಅದೇ ರಿಪೀಟ್ ಆಯ್ತು. “ಸ್ವಲ್ಪನೂ ಮ್ಯಾನರ್ಸ್ ಇಲ್ವಲ್ರೀ ನಿಮಗೆ”ಅಂತ ನನ್ನೆಡೆಗೆ ಕೈ ತೋರಿಸಿ ಕಿರುಚಿದಳು ಅವಳು.

ಸ್ವಲ್ಪ ಸೀರಿಯಸ್ ಆಗಿ ನಾನು. “ನೋಡೇ ಇಲ್ಲ ಮೇಡಂ, ಮಿಸ್ಟೇಕ್ ಆಗೋಯ್ತು ಸಾರೀ ಕಣ್ರೀ” ಅಂತ ಹೇಳಿ ಪರಿಸ್ಥಿತಿಯನ್ನು ಸಂಭಾಳಿಸಿದೆ. ಇನ್ನೇನು ಹತ್ತುಮಾರು ಅಲ್ಲೇ ಮದುವೆ ಮನೆ ಅಂಗಳ. ಅವಳು ಗೆಳತಿಯೊಡನೆ ಮುಂದೆ ನಡೆದಳು. ನಾನು “ರೀ ಕಾರ್ ಪಾರ್ಕಿಂಗ್ ಎಲ್ಲಿ ಮಾಡಬೇಕು” ಅಂತ ಕೂಗಿ ಕೇಳಿದೆ, ಅವಳು ಹಿಂತಿರುಗಿ ಕೋಪದಿಂದ ಅವಳ ತಲೆಯನ್ನು ತೋರಿಸುತ್ತಾ ಒಳ ನಡೆದಳು.

ನಾನು ನಗುತ್ತಾ ನಗುತ್ತಾ ಅದೇ ಹ್ಯಾಂಗೋವರ್ ನಲ್ಲಿ ಕಾರ ಹೊರಗಡೆಯೇ ನಿಂತಿದ್ದೆ. ಇದನ್ನೆಲ್ಲಾ ನೋಡುತ್ತಿದ್ದ ಗಣಿ ನನಗೆ ಬೈಯ್ಯಲು ಪ್ರಾರಂಭಿಸಿದ್ದ. ಅಂತೂ ಕಾರ್ ಪಾರ್ಕ್ ಮಾಡಿ ಮದುವೆ ಮನೆಯ ಒಳ ಸೇರಿದೆವು. ಮದುವೆ ಮನೆಗೆ ಬಂದ ನನಗೆ ಕೇವಲ ಅವಳದೇ ಹುಡುಕಾಟ. ಸುಶಾಂತ್ ನನ್ನನ್ನು, ಗಣಿಯನ್ನೂ ಮಾತನಾಡಿಸಿ ಮನೆಯವರಿಗೆ ನಮ್ಮನ್ನು ಪರಿಚಯಿಸಿದ. ಆದರೆ ನನ್ನ ವ್ಯಾಕುಲತೆಯನ್ನು ನೋಡಿ ಅವರೆಲ್ಲಾ ಆಶ್ಚರ್ಯ ಗೊಂಡಿರಬೇಕು. ನಿಜ ಹೇಳಬೇಕೆಂದರೆ ದಾರಿಯಲ್ಲಿ,ಹೊಂಡದ ಪಕ್ಕದಲ್ಲೆಲ್ಲೋ ನಾನು ಕಳೆದು ಹೋಗಿದ್ದೆ.

ಅಷ್ಟರಲ್ಲಿ ಮನೆಯೊಳಗಿಂದ ಅವಳು ಮತ್ತು ಕೆಲವು ಹೆಣ್ಣುಮಕ್ಕಳು ಹೊರಬಂದರು. ಕೈಯಲ್ಲಿ ಪ್ಲೇಟನ್ನು ಹಿಡಿದು ಅದರ ತುಂಬ ಪಾನಕ/ಕೂಲ್ ಡ್ರಿಂಕ್ಸ್  ಹಿಡಿದು, ಮದುವೆ ಮನೆಗೆ ಬಂದ ಅತಿಥಿಗಳಿಗೆ ಪಾನಕದ ಗ್ಲಾಸನ್ನು ಕೊಡುತ್ತಾ ಬರತೊಡಗಿದರು. ಅವಳು, ನಾನು ಕುಳಿತ ಸಾಲಿನಲ್ಲೇ  ಬರತೊಡಗಿದಳು. ನನ್ನ ಗೆಳೆಯ ಗಣಿ ಪಕ್ಕದಲ್ಲೇ ಕೂತಿದ್ದ. ಅವನಿಗೆ ಪಾನಕವನ್ನು ಕೊಡುತ್ತಿರುವಾಗ I am sorry 😔ಕಣ್ರೀ ಅಂದೆ. ಆದರೆ ನನ್ನನ್ನು ನೋಡಿಯೂ ನೋಡದಂತೆ  ನನಗೊಬ್ಬನಿಗೆ ಪಾನಕದ ಗ್ಲಾಸನ್ನು ಕೊಡದೇ ಮುನ್ನಡೆದಳು.  ಗಣಿಯಂತೂ ನನ್ನನ್ನು ನೋಡಿ ನಗತೊಡಗಿದ್ದ. ಲೋ ಎಕ್ಚುಲಿ ಸಾರಿ ಕೇಳಬೇಕಾದ್ದು ಅವಳು ನೀನಲ್ಲ ಎಂದ. ಇಲ್ಲ ಪಾಪ ಅವರ್ಯಾಕೆ ಸಾರಿ ಕೇಳಬೇಕು ಅಂತ ನನ್ನ ವಾದವಾಗಿತ್ತು.

ಅವಳು ನನ್ನ ಮೇಲೆ ಇನ್ನೂ ಕೋಪಗೊಂಡಿದ್ದಾಳೆನೋ ಎಂದು ನನಗೆ ತಲೆಯಲ್ಲಿ ಕೊರೆಯುತ್ತಿತ್ತು. “ಮಗಾ ನನ್ ಮೇಲೆ ಫುಲ್ ಸೀಟ್ ಮಾಡಿಕೊಂಡಿದ್ದಾಳೆ “ಎಂದು ಗಣಿ ತಲೆ ತಿನ್ನುತ್ತಿದ್ದೆ. ಗೆಳೆಯನ ಮದುವೆ ಆದರೆ ನನ್ನ ಒಂದು ಕಣ್ಣು ಅವಳನ್ನೇ ನೋಡುತ್ತಿತ್ತು.

ಮದುವೆಯ ಮುಹೂರ್ತದ ಸಮಯವಾಗಿತ್ತು. ಮದುಮಕ್ಕಳಿಗೆ ಅಕ್ಷತೆಯನ್ನು ಹಾಕುವಂತೆ ಎಲ್ಲರ ಕೈಯಲ್ಲೂ ಅಕ್ಷತೆಯನ್ನು ಕೊಟ್ಟಿದ್ದರು. ಆಗ ದೂರದಲ್ಲಿ ನಿಂತಿದ್ದ ಅವಳು ನನ್ನನ್ನೊಮ್ಮೆ ನೋಡಿದಳು. ಎರಡು ಕೈಗಳನ್ನು ಕಿವಿಗೆ ತಾಕಿಸಿ ಐ ಯಾಮ್ ಸಾರಿ ಎಂದು ಕಣ್ಮುಚ್ಚಿ ಕೇಳಿದೆ. ಅವಳು ನಗು ನಗುತ್ತಾ ಹಣೆಗೆ ಕೈತಟ್ಟಿ ಮದುಮಕ್ಕಳಿಗೆ ಅಕ್ಷತೆ ಹಾಕುವಂತೆ ಕೈತೋರಿಸಿದಳು.

ಆ ದಿನವೆಲ್ಲ ಮದುವೆಯಲ್ಲಿ ಭಾಗವಹಿಸಿದ್ದೇನೆ ನಿಜ. ಆದರೆ ಅವಳನ್ನು ಬಿಟ್ಟು ಆ ಮದುವೆಯಲ್ಲಿ ಮತ್ತೇನು ನನ್ನ ಗಮನಕ್ಕೆ ಬಂದಿರಲಿಲ್ಲ. ಊಟದ ನಂತರ ಉಡುಗೊರೆ ಹಾಗೂ ಫೋಟೋ ಸೆಷನ್ ಇತ್ತು. ಅವಳು ಮಧುಮಗಳ ಗೆಳತಿ ಇರಬೇಕು. ಅಥವಾ ರಿಲೇಟಿವ್ ಇರಬಹುದು.ನಾನು ಗಣಿ ಮದುಮಕ್ಕಳಿಗೆ ಉಡುಗೊರೆ ನೀಡಿದೆವು. ಫ್ರೆಂಡ್ಸ್ ಫೋಟೋಸ್ ಸರದಿ ಬಂದಾಗ ನಾನು ಮತ್ತು ಗಣಿ,ಸುಶಾಂತ್ ಪಕ್ಕ ಹೋಗಿ ನಿಂತೆವು. ಆಗ ನನ್ನನ್ನು ನೋಡಿ ಸ್ಮೈಲ್ ಮಾಡಿದ ಅವಳು ತನ್ನ ಗೆಳತಿಯೊಡನೆ ಮದುಮಗಳ ಪಕ್ಕ ಬಂದು ನಿಂತಳು. ಫೋಟೋ ಫ್ಲಾಶ್ ಆಯಿತು.

ಇನ್ನೇನು ಮದುವೆ ಮನೆಯಿಂದ ಹೊರಡುವ ಸಮಯವಾಗಿತ್ತು. ನನಗೆ ಅಲ್ಲಿಂದ ಹೊರಡುವ ಮನಸ್ಸೇ ಇರಲಿಲ್ಲ. ಆದರೆ ಪಾಪೀ ಗಣಿ ಲೇಟಾಯ್ತು ಲೇಟಾಯ್ತು ಎಂದು ಹೊರಡಲು ಒತ್ತಾಯಿಸುತ್ತಿದ್ದ. ಅವಳು ಅಲ್ಲಿ ಎಲ್ಲೆಲ್ಲೋ ಕಾಣುತ್ತಿರಲಿಲ್ಲ.

Atleast ಅವಳನ್ನೊಮ್ಮೆ ನೋಡಿ ಹೋಗೋಣ ಅಂತ ಅನ್ಕೊಂಡ್ರೆ ಕೊನೆಗೂ ಅದಕ್ಕೆ ಅವಕಾಶ ಕೊಡದೆ ಗಣಿ ಒತ್ತಾಯಿಸಿ ಪಾರ್ಕಿಂಗ್ ನೆಡೆ ಕರೆದುಕೊಂಡು ಬಂದ. ನನಗೆ ಮೂಡ್ ಆಫ್ ಆಗಿತ್ತು. ನಾನ್ ಡ್ರೈವಿಂಗ್ ಮಾಡಲ್ಲ ಅಂದೇ ಸರಿ ನಾನೇ ಮಾಡ್ತೀನಿ ಅಂತ ಗಣಿ ಪಾರ್ಕಿಂಗ್ ನಿಂದ ಕಾರನ್ನು ತೆಗೆದು ಹೊರಟ. ಒಲ್ಲದ ಮನಸ್ಸಿನಿಂದ ಕಾರನ್ನು ಹತ್ತಿದೆ.

ಇನ್ನೇನು ಮದುವೆ ಮನೆಯ ಅಂಗಳವನ್ನು ಹಾದು ಕಾರು ಹೊರಡುತ್ತಿತ್ತು. ಆಗ ಗ್ಲಾಸ್ ಮಿರರ್ ನಲ್ಲಿ ಅವಳು ಕಾಣುತ್ತಿದ್ದಾಳೆ. ತಕ್ಷಣ ಎಕ್ಸೈಟ್ ಆಗಿ ಹಿಂತಿರುಗಿದೆ. ಅವಳು ತನ್ನ ಕೈಯನ್ನು ಎತ್ತಿ bye ಮಾಡಿದಳು. ನಾನು bye ಮಾಡಬೇಕೆನ್ನುವಷ್ಟರಲ್ಲಿ ಹಾಳಾದ ಗಣಿ ಗಾಡಿಯನ್ನು ಟರ್ನ ಮಾಡಿದ್ದ.

ಸನಂ ರೇ ,ಸನಂ ರೇ  ಸೊಂಗ್ ಪ್ಲೇ ಆಗುತ್ತಿತ್ತು. ವಾಲ್ಯೂಮ್ ಅನ್ನು ಇನ್ಕ್ರೀಸ್ ಮಾಡಿದೆ.ಫುಲ್ ಜರ್ನಿ ಹ್ಯಾಂಗೋವರ್ ನಲ್ಲೇ ಸಾಗಿತ್ತು. ನಾನು ಮದುವೆ ಮನೆಯಲ್ಲಿ ಈ ಮಟ್ಟದಲ್ಲಿ  ಕಳೆದುಹೋಗಿದ್ದೆ ಎಂದು ಗಣಿಗೆ ತಿಳಿಸಿದರೆ ,ಅವನು ನನ್ನನ್ನು ಹುಡುಕಿಸುವ ಪ್ರಯತ್ನ ಖಂಡಿತ ಮಾಡುತ್ತಿದ್ದ. ಆದರೆ ನಾನು ಗಣಿಗೂ ಆ ವಿಚಾರ ತಿಳಿಸಲಿಲ್ಲ.

ಮದುವೆ ನಂತರ ಅಲ್ಬಮ್ ಗಾಗಿ ಸುಶಾಂತ್ಗೂ ಅಷ್ಟು ಅರ್ಜೆಂಟ್ ಇರಲಿಲ್ಲವೇನೊ, ಆದರೆ ನಾನು ಐದಾರುಬಾರಿ ಅಲ್ಬಮ್ ಗಾಗಿ ವಿಚಾರಿಸಿದ್ದೆ.ಕೊನೆಗೂ ಒಂದು ಫೈನ್ ಡೇ ಅವಳು ಮತ್ತು ನಾನು ನಿಂತ ಆ ಫೋಟೋ ನನ್ನ ಕೈಸೇರಿತು.

ಅವಳು ಯಾರು, ಅವಳ ಹೆಸರೇನು, ಏನೋ ನನಗೆ ಗೊತ್ತಿಲ್ಲ ಕಣ್ರೀ, ಇವತ್ತಿಗೆ ಒಂದು ವರ್ಷದ 9 ತಿಂಗಳು ಕಳೆದಿವೆ. ಆದರೆ ಈ ಚಿತ್ರಪಟ ಅದರ ಹಿಂದಿರುವ ಸುಂದರ ನೆನಪುಗಳನ್ನು ಬಿಟ್ಟು, ನನ್ನೊಂದಿಗೆ ಮತ್ತೇನು ಇಲ್ಲ. ನಿಮಗೆ ಅವಳ ಹೆಸರು, ಅಡ್ರೆಸ್  or ಫೋನ್ ನಂಬರ್ ಏನಾದ್ರೂ ಗೊತ್ತಿದ್ರೆ ದಯವಿಟ್ಟು ನನಗೆ ಹೇಳಿ.

-ನಿರಂಜನ ಹೆಗಡೆ

About the author

Adyot

Leave a Comment