ಆದ್ಯೋತ್- ವಿಶೇಷ ಅಂಕಣ

ಅಪರೂಪದ ಪಕ್ಷಿಧಾಮ ಅತ್ತಿವೇರಿ ಪಕ್ಷಿಧಾಮ
ಸುತ್ತಲೂ ಆವರಿಸಿರೋ ಜಲಾಶಯ. ಅದರ ಮಧ್ಯೆ ಅಲ್ಲಲ್ಲಿ ಕುರುಚಲು ಗಿಡ ಹಾಗೂ ಮರಗಳ ನಡುಗಡ್ಡೆ. ಆ ಗಿಡಗಳಲ್ಲಿ ಕುಳಿತಿರೋ ನೂರಾರು ಪಕ್ಷಿಗಳು. ಅಲ್ಲಿಯೇ ಮೊಟ್ಟೆ ಇಟ್ಟು ಮರಿಗಳಿಗೆ ಕಾವು ಕೊಡುತ್ತಿರೋ ಹಕ್ಕಿಗಳು. ಅದನ್ನೆಲ್ಲಾ ದೂರದಿಂದ ವೀಕ್ಷಿಸುತ್ತಿರೋ ಪ್ರವಾಸಿಗರು. ಹಕ್ಕಿಜ್ವರದ ಮಧ್ಯೆಯೂ ಸ್ವತಂತ್ರವಾಗಿ ಹಾರಿಕೊಂಡಿರೋ ಪಕ್ಷಿಗಳು. ಹಾಗಿದ್ರೆ ಎಲ್ಲಿ ಇದು ಅಂತೀರಾ? ಈ ಸ್ಟೋರಿ ನೋಡಿ..



ಹೌದು.. ಇವೆಲ್ಲಾ ಕಂಡುಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಅತ್ತಿವೇರಿ ಪಕ್ಷಿಧಾಮದಲ್ಲಿ. ಪರಿಸರ ಪ್ರೇಮಿ ಪಿ.ಡಿ ಸುದರ್ಶನ್ ಅವರ ದೂರದೃಷ್ಟಿಗೆ ಕೊಡುಗೆ ಈ ಪಕ್ಷಿಧಾಮ. ಅತ್ತಿ ಮರಗಳು ಹೆಚ್ಚಾಗಿದ್ದ ಈ ಪ್ರದೇಶದಲ್ಲಿ ಮೊದ ಮೊದಲು ಕೆಲವು ಪಕ್ಷಿಗಳು ಹಣ್ಣನ್ನು ತಿನ್ನಲು ಬರುತ್ತಿದ್ವು. ಮೊದಲು ಜಲಾಶಯವಾಗಿದ್ದ ಈ ಜಾಗದಲ್ಲಿ ನಿಧಾನವಾಗಿ ಬೇರೇ ಬೇರೇ ರಾಷ್ಟ್ರ ಹಾಗೂ ರಾಜ್ಯಗಳಿಂದ ಪಕ್ಷಿಗಳು ಬರಲಾರಂಭಿಸಿದವು. ಇದನ್ನು ನೋಡಿದ ಸರ್ಕಾರ 2000 ನೇ ಇಸ್ವಿಯಲ್ಲಿ ಇದನ್ನು ಪಕ್ಷಿಧಾಮವೆಂದು ಘೋಷಿಸಿ ಅರಣ್ಯ ಇಲಾಖೆಯ ಸುಪರ್ದಿಗೆ ಒಪ್ಪಿಸಿತು. ಸುಮಾರು 22 ಚದರ ಕಿಲೋಮೀಟರ್ ವಿಸ್ತೀರ್ಣವುಳ್ಳ ಈ ಪಕ್ಷಿಧಾಮದಲ್ಲಿ 22 ವಿವಿಧ ದೇಶಗಳ 79 ಪ್ರಭೇದದ ವಲಸೆ ಹಕ್ಕಿಗಳು ಆಶ್ರಯ ಪಡೆದಿವೆ. ರಾಜ್ಯದಲ್ಲಿ ಕಂಡುಬಂದಿರೋ 495 ಪ್ರಭೇದಗಳಲ್ಲಿ 207 ಹಕ್ಕಿಗಳನ್ನ ಇಲ್ಲಿ ನೋಡಬಹುದಾಗಿದೆ. ಪ್ರಮುಖವಾಗಿ ಪಟ್ಟೆ ಬಾತು, ನೀಲಿರೆಕ್ಕೆಯ ಬಾತು, ಉಲಿಯಕ್ಕಿ, ಬಲೂಚಿಸ್ತಾನದ ಬ್ಲೀಥ್ ರೀಡ್ ವಾರೆಬಲರ್, ಬ್ಲ್ಯಾಕ್ ಹೆಡೆಡ್ ಐಬಿಸ್, ಕಿಂಗ್ ಫಿಶರ್, ಇಂಡಿಯನ್ ಗ್ರೇ ಹಾರ್ನ್ ಬಿಲ್, ಇಂಡಿಯನ್ ಕಾಟಲ್ ಎಗ್ರೇಟ್ ಹಾಗೂ ವಿಶೇಷವಾಗಿ ಯುರೇಷಿಯನ್ ಸ್ಪೂನ್ ಬಿಲ್ ಪಕ್ಷಿ ವೀಕ್ಷಕರ ಮನಸ್ಸಿಗೆ ಮುದ ನೀಡುತ್ತವೆ.



ಪಕ್ಷಿಧಾಮವನ್ನ ವಿಕ್ಷಿಸೋಕೆ ನವೆಂಬರ್ ದಿಂದ ಮಾರ್ಚ್ ಉತ್ತಮವಾಗಿದೆ. ಆ ಸಮಯದಲ್ಲಿ ಪಕ್ಷಿಗಳು ದೂರ ದೂರದ ದೇಶ, ರಾಜ್ಯಗಳಿಂದ ಇಲ್ಲಿ ಬಂದು ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಕುರುಚಲು ಗಿಡಗಳ ಮೇಲೆ ಪಕ್ಷಿಗಳ ಹಾಗೂ ಅವುಗಳ ಮರಿಗಳ ಕಲರವ ನೋಡೋದೇ ಒಂದು ರೀತಿಯ ಆನಂದ. ಪಕ್ಷಿಧಾಮ ಜಿಲ್ಲೆಯ ಪ್ರಸಿದ್ಧ ಪಕ್ಷಿಧಾಮಗಳಲ್ಲೊಂದಾಗಿದ್ದು, ಹಲವಾರು ಪ್ರವಾಸಿಗರು ದಿನನಿತ್ಯ ಭೇಟಿ ನೀಡುತ್ತಾರೆ. ಕೊರೊನಾ ಕಾರಣದಿಂದಾಗಿ ಸ್ವಲ್ಪ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದ್ದು, ಈಗ ಮತ್ತೆ ಪ್ರವಾಸಿಗರು ಬರತೊಡಗಿದ್ದಾರೆ. ಕೊರೊನಾದ ಮುಂಜಾಗೃತಾ ಕ್ರಮಗಳನ್ನ ಇಲ್ಲಿ ಕೈಗೊಳ್ಳಲಾಗಿದೆ.



ಹಲವು ರಾಜ್ಯಗಳು ಹಕ್ಕಿಜ್ವರದ ಉಪಟಳಕ್ಕೆ ತತ್ತರಿಸಿ ಹೋಗಿವೆ. ಅದರ ನಡುವೆಯೂ ಇಲ್ಲಿ ಅನೇಕ ಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ. ಇಲ್ಲಿ ಪಕ್ಷಿಗಳು ಈಗಾಗಲೇ ಬಂದಿರುವುದರಿಂದ
ಹಕ್ಕಿಜ್ವರದ ಯಾವುದೇ ಅಪಾಯವಿಲ್ಲ. ಆದರೂ ಕೂಡ ಇದರ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಪಶು ವೈದ್ಯರಿಗೆ ಈ ಕುರಿತು ಸೂಚನೆಯನ್ನು ನೀಡಲಾಗಿದೆ. ಅದೇ ರೀತಿ ಅಕ್ಕ ಪಕ್ಕದ ಹಳ್ಳಿಗಳಲ್ಲಿ ಪಕ್ಷಿಗಳು ಸತ್ತಿದ್ದು ಕಂಡುಬಂದರೆ ಕೂಡಲೇ ತಿಳಿಸುವಂತೆ ಸೂಚಿಸಲಾಗಿದೆ ಎಂದು ಅರಣ್ಯಾಧಿಕಾರಿ ಸಂಜೀವ್ ಮಾಹಿತಿ ನೀಡಿದ್ದಾರೆ.


ಒಟ್ಟಿನಲ್ಲಿ ಜಿಲ್ಲೆಯ ಪ್ರಸಿದ್ಧ ಪಕ್ಷಿಧಾಮದಲ್ಲಿ ಪಕ್ಷಿಗಳ ಕಲರವದ ಜೊತೆಗೆ ಪ್ರವಾಸಿಗರ ಕಲರವ ಕೂಡ ಆರಂಭವಾಗಿದೆ. ಆದ್ರೆ ಹಕ್ಕಿ ಜ್ವರ ಹಾಗೂ ಕೊರೊನಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅಧಿಕಾರಿಗಳು ಹಾಗೂ ಪ್ರವಾಸಿಗರು ಗಮನ ಹರಿಸಬೇಕಿದೆ. ಅಲ್ಲದೆ ಇನ್ನು ಹೆಚ್ಚಿನ ಅಭಿವೃದ್ಧಿ ಕೆಲಸಗಳು ಈ ಪ್ರದೇಶದಲ್ಲಿ ಆದರೆ ರಾಜ್ಯದ ಒಂದು ಉತ್ತಮ ಪಕ್ಷಿಧಾಮವಾಗಿ ಈ ಸ್ಥಳ
ಆಗುವುದರಲ್ಲಿ ಸಂಶಯವಿಲ್ಲ..

ಶ್ರೀಧರ ಮದ್ದಿನಕೇರಿ

About the author

Adyot

Leave a Comment