
ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಾನರ ಸೇನೆಯ ಪಾತ್ರ.
1931-32 ರಲ್ಲಿ ಸಿದ್ದಾಪುರ ತಾಲೂಕಿನಲ್ಲಿ ಕರನಿರಾಕರಣೆಯ ಕಾವು ಜೋರಾದಾಗ ಪ್ರಾಥಮಿಕ ಶಾಲೆಗಳಲ್ಲಿ ಕಲಿಯುತ್ತಿದ್ದ ಮಕ್ಕಳೂ ಸಹ ಶಾಲೆಗಳನ್ನು ತ್ಯಜಿಸಿ ದೇಶಕಾರ್ಯಕ್ಕೆ ಮುಂದಾದುದು ದೇಶದ ಜನತೆ ಸದಾ ಸ್ಮರಣೆಯಲ್ಲಿಡಬೇಕಾದ ವಿಚಾರ. ಮಕ್ಕಳ ಪಾಲಕರೂ ಸಹ ಅವರನ್ನು ಶಾಲೆ ತ್ಯಜಿಸಿದ್ದಕ್ಕಾಗಿ ಗದರದೇ ಹೆಮ್ಮೆಯಿಂದ ಅವರನ್ನು ಹುರಿದುಂಬಿಸಿದ್ದು “ಮಕ್ಕಳ ವಾನರ ಸೇನೆ” ಹುಟ್ಟಲು ಕಾರಣವಾಯಿತು. ಜೊತೆಗೆ ಹೆಣ್ಣುಮಕ್ಕಳಿಗಾಗಿ “ಭಗಿನೀ ಮಂಡಲ” ಸ್ಥಾಪಿಸಲ್ಪಟ್ಟಿತು. ಭಗಿನೀ ಮಂಡಲ ಹಾಗೂ ವಾನರಸೇನೆ ಸಮಾಜದಲ್ಲಿ ತಮ್ಮ ಓರಗೆಯವರಲ್ಲಿ ರಾಷ್ಟಿçÃಯ ಭಾವನೆಯನ್ನು ಜಾಗೃತಗೊಳಿಸಬೇಕಿತ್ತು. ಧ್ವಜವಂದನೆ ಮಾಡಿ “ವಂದೇ ಮಾತರಂ” ಹಾಡುವುದು, ಸಾರ್ವಜನಿಕರಿಂದ ಮಷ್ಟಿ ಫಂಡ್ ಸಂಗ್ರಹ, ಧನ ಸಂಗ್ರಹ ಮಾಡಿ ಗಾಂಧಿ ಫಂಡಿಗೆ ಹಾಗೂ ರಾಷ್ಟಿçÃಯ ಶಾಲೆಗೆ ನೀಡಬೇಕಾಗಿತ್ತು.

ಮೈಲಿಕಲ್ಲುಗಳನ್ನು-ಫರ್ಲಾಂಗು ಕಲ್ಲುಗಳನ್ನು ಕೀಳುವುದು, ಮನೆ ನಂಬರ್ಗಳನ್ನು ಅಳಿಸುವುದು, ಬೋರ್ಡಗಳಿಗೆ ಮಸಿ ಹಚ್ಚುವುದು ಒಟ್ಟಾರೆಯಾಗಿ ಬ್ರಿಟಿಷ್ ಆಡಳಿತಕ್ಕೆ ಅಡೆತಡೆ ಉಂಟುಮಾಡಿ ಪ್ರತಿಭಟಿಸುವುದು ವಾನರ ಸೇನೆಯ-ಭಗಿನೀ ಮಂಡಲದ ಪ್ರಮುಖ ಉದ್ದೇಶವಾಗಿತ್ತು. ೧೯೩೨ ಜನೆವರಿ ತಿಂಗಳಲ್ಲಿ ೨೬ ಮಕ್ಕಳು ಸಿದ್ದಾಪುರ ಬಸವಣ್ಣ ಗುಡಿಯಿಂದ ಪ್ರಭಾತ ಪೇರಿ ನಡೆಸಿ ದೇಶ ಭಕ್ತಿಯ ಗೀತೆಗಳನ್ನು ಹಾಡುತ್ತಾ ಚಂದ್ರಘಟಗಿ ಪಠಾಂಗಣ ಸೇರಿದರು. ವಿಷಯ ತಿಳಿದ ೨೫ ಪೊಲೀಸರು ಧಾವಿಸಿ ಬಂದು ಮಕ್ಕಳನ್ನು ದನಬಡಿದಂತೆ ಬಡಿದು ಠಾಣೆಗೆ ಒಯ್ದು ಸಂಜೆಯವರೆಗೂ ಉಪವಾಸ ಕೂಡ್ರಿಸಿದರು. ಆದರೂ ಮಕ್ಕಳಲ್ಲಿಯ ಕೆಚ್ಚು ವಿಚಲಿತವಾಗಲಿಲ್ಲ. ಪೆಟ್ಟು ಬಿದ್ದಷ್ಟೂ ಅವರಲ್ಲಿ ಹೋರಾಟದ ಕಿಚ್ಚು ಹೆಚ್ಚುತ್ತಲೇ ಇತ್ತು.


ಕಾಂಗ್ರೆಸ್ ಝೇಂಡಾ ವಂದನೆ, ಬ್ರಿಟಿಷ್ ಸರಕಾರದ ವಿರುದ್ಧ ಘೋಷಣೆ ಕೂಗುವುದನ್ನು ಅಂದಿನ ಸರಕಾರ ನಿಷೇಧಿಸಿತ್ತು. ಈ ಕಟ್ಟಳೆಯನ್ನು ಮುರಿದು ಮಕ್ಕಳಲ್ಲಿ, ಸಾರ್ವಜನಿಕರಲ್ಲಿ ದೇಶಾಭಿಮಾನ, ಸ್ವಾಭಿಮಾನ ಹಾಗೂ ಸ್ವಾತಂತ್ರö್ಯದ ಕಲ್ಪನೆ ಮೂಡಿಸಬಹುದೆಂದು ಮಹಿಳೆಯರು ನಿರ್ಧರಿಸಿ ನೇರವಾಗಿ ರಾಷ್ಟಿçÃಯ ಚಳವಳಿಯಲ್ಲಿ ಧುಮುಕಲು ಮುಂದಾದರು. ಬಿಳಗಿಯ ದೇವ್ಯಾನಿ ಹರಿ ಪೈ ತಮ್ಮ ಮನೆಯ ಅಂಗಳದಲ್ಲಿಯೇ ಧ್ವಜಸ್ಥಂಭ ಸ್ಥಾಪಿಸಿಬಿಟ್ಟರು. ಹತ್ತಿರದ ಮನೆಯ ಗಂಗಾಬಾಯಿ ವಾಸುದೇವ ಪೈ ಹಾಗೂ ಊರ ಮಕ್ಕಳನ್ನು ಕರೆತಂದು ಪ್ರತಿದಿನ ತಮ್ಮ ಮನೆಯ ಎದುರು ಕಾಂಗ್ರೆಸ್ ಝೇಂಡಾಕ್ಕೆ ವಂದನೆ ಸಲ್ಲಿಸಿ, ಬ್ರಿಟಿಷರ ವಿರುದ್ಧ ಹಾಗೂ ಗಾಂಧೀಜಿಯವರ ಪರವಾದ ಘೋಷಣೆಗಳನ್ನು ಕೂಗುತ್ತ ಪ್ರಭಾತ ಫೇರಿ ಆರಂಭಿಸಿದರು. ೧೯೩೨ ರ ಮಾರ್ಚ ಎರಡನೇ ವಾರದಿಂದ ಪ್ರಾರಂಭವಾದ ಈ ಫೇರಿಯಲ್ಲಿ ಓರ್ವ ಬಾಲಕ ಕೈಯ್ಯಲ್ಲಿ ಧ್ವಜ ಹಿಡಿದು ಮುಂದೆ ಸಾಗುವುದು, ಅವನ ಹಿಂದೆ ಮಕ್ಕಳು ಹಾಗೂ ಹೆಂಗಸರು ಭಾರತ ಮಾತೆಗೆ ಜಯಘೋಷ ಕೂಗುತ್ತಾ ಸಾಗುವುದು, ಊರಿನಲ್ಲೆಲ್ಲಾ ಫೇರಿ ನಡೆಸಿ ಮರಳುವುದು ನಡೆಯಿತು. ಕಾರ್ಯಕ್ರಮ ಪ್ರಾರಂಭವಾಗಿ ಒಂದು ವಾರದಲ್ಲಿ ಸಿದ್ದಾಪುರದಿಂದ ಬಂದ ಫೌಜದಾರನೋರ್ವ ಬೆಳಗಿನ ಧ್ವಜ ಫೇರಿ ಹೋಗುತ್ತಿದ್ದುದನ್ನು ಕಂಡು ಮುಂದೆ ಸಾಗುತ್ತಿದ್ದ ಹುಡುಗನ ಕೈಯ್ಯಲ್ಲಿದ್ದ ಝೇಂಡಾವನ್ನು ಕಸಿಯಲು ಪ್ರತ್ನಿಸಿದ. ಚಿಕ್ಕಹುಡುಗನು ಕೊಸರಾಡಿ ತಪ್ಪಿಸಿಕೊಂಡು ಧ್ವಜವನ್ನು ಕೆಳಗೆ ಬೀಳಿಸದೇ ಮೇಲೆತ್ತಿ ಹಿಡಿದು “ಭಾರತ ಮಾತಾಕಿ ಜೈ” ಎಂದು ಘೋಷಣೆ ಮಾಡಿದ. ಫೌಜದಾರನನ್ನು ಸುತ್ತುವರಿದ ಮಕ್ಕಳು ಆತನ ಅಂಗಿ ಚಡ್ಡಿ ಹಿಡಿದು ಜಗ್ಗಲು ಮುಂದಾದರು. ಜೊತೆಯಲ್ಲಿದ್ದ ಮಹಿಳೆಯರು ಫೌಜದಾರನಲ್ಲಿ ಮಕ್ಕಳ ಮೇಲೆ ಕೈಮಾಡಿದ ಕುರಿತು ಜಗಳಕ್ಕೆ ಮುಂದಾದರು.
[caption id="attachment_20143" align="alignnone" width="1839"]
filter: 0; jpegRotation: 90; fileterIntensity: 0.000000; filterMask: 0;೧೯೩೨ ರ ನವೆಂಬರ ಎರಡನೇವಾರ ಬೇಡ್ಕಣಿ ಹತ್ತಿರದ ಹುಲಿಮನೆಯಲ್ಲಿ ತಾಲೂಕಾ ಮಹಿಳಾ ಪರಿಷತ್ತಿನ ಸಭೆ ಕರೆಯಲಾಗಿತ್ತು. ಬಿಳಗಿಯ ತಾರಾಬಾಯಿ ರಾಮ ಪೈ ಮೂಡ್ಲಗಿರಿ ಅಧ್ಯಕ್ಷರಾಗಿ, ಮಳ್ಳಿಮನೆ ಮಹಾದೇವಿಯವರು ಸ್ವಾಗತಾಧ್ಯಕ್ಷರಾಗಿ ಭಾಷಣ ಮಾಡಿದರು. ಸಭೆಯ ನಂತರ ಮಹಿಳಾ ಸದಸ್ಯರು ಬಿಳಗಿಗೆ ಮೆರವಣಿಗೆಯಲ್ಲಿ ತೆರಳಿದಾಗ ಊರ ಬಾಗಿಲಿನಲ್ಲಿದ್ದ ಹರುನ್ ಎಂಬ ಪೊಲೀಸ ಲಾಠಿ ಚಾರ್ಜ ಮಾಡಿಸಿ ಎಲ್ಲರನ್ನೂ ಓಡಿಸಲು ಮುಂದಾದ. ತಾರಾಬಾಯಿಯವರಿಗೂ, ಮಹಾದೇವಿಯವರಿಗೂ ಕೈಕಾಲುಗಳ ಮೇಲೆ ಬಾಸುಂಡೆ ಬರುವಂತೆ ಥಳಿಸಿದ. ಈ ಕುರಿತು ಹರುನ್ ಪೊಲೀಸನ ಮೇಲೆ ಸೇಡು ತೀರಿಸಿಕೊಳ್ಳಲು ಕೆಲವರು ಸಮಯ ಕಾಯುತ್ತಿದ್ದರು. ಒಮ್ಮೆ ಹರುನ್ ಬಿಳಗಿಯ ಮೂಡ್ಲಗಿರಿಯವರ ಮನೆಯ ಎದುರು ಬರುತ್ತಿದ್ದಂತೆ ಶ್ರೀನಿವಾಸ ಮಡಗಾಂವಕರ, ವೆಂಕಟೇಶ ನಾಗೇಶ ಪೈ, ಮರ್ತು ಭಂಡಾರಿ ಹಾಗೂ ಬಾಲಕ ಮಾಧವ ಪೈ ಆತನ ಮುಖಕ್ಕೆ ಸಗಣಿ ಎರಚಿ ಆತ ಕಕ್ಕಾಬಿಕ್ಕಿಯಾಗುತ್ತಲೇ ಓಡಿ ಹೋಗಿ ಅಡಗಿಕೊಂಡರು. ವಿಷಯ ತಿಳಿದ ಲಿಮೇಯ ಎಂಬ ಫೌಜದಾರ ಮರುದಿನವೇ ಸಿದ್ದಾಪುರದಿಂದ ಬಿಳಗಿಗೆ ಬಂದ. ಧ್ವಜವಂದನೆ, ಪ್ರಭಾತಫೇರಿ ಮುಗಿಸಿ ಊರ ಮಧ್ಯದ ಶ್ರೀ ಸೀತಾರಾಮಚಂದ್ರ ದೇವಾಲಯದಲ್ಲಿ ಭಜನೆ ಮಾಡುತ್ತ ಕುಳಿತಿದ್ದ ಆರು ಜನ ಹುಡುಗರಿಗೆ ಹಿಗ್ಗಾಮುಗ್ಗಾ ಥಳಿಸಿ ಸ್ಟೇಶನ್ನಿಗೆ ಕರೆದೊಯ್ದ. ಆರು ಜನ ಹುಡುಗರಲ್ಲಿ ಮಾಧವ ಪೈ ಹಾಗೂ ವಾಮನ ನಾಗೇಶ ಪೈ ಅವರಿಗೆ ವಿಪರೀತ ಹೊಡೆತ ತಗುಲಿತ್ತು. ಎಲ್ಲರನ್ನೂ ಮೂರು ದಿವಸಗಳ ಕಾಲ ಸ್ಟೇಶನ್ನಲ್ಲಿ ಕೂಡಿ ಹಾಕಿಟ್ಟು ನಂತರ ಬಿಡಲಾಯಿತು. ಆದರೆ ಸಗಣಿ ಎರಚಿಸಿಕೊಂಡ ಹರುನ್ ಪೊಲೀಸ ಮಾತ್ರ ಬಿಳಗಿ ಪೇಟೆಗೆ ಕಾಲು ಹಾಕುವುದನ್ನೇ ಬಿಟ್ಟುಬಿಟ್ಟ.

ಮಾಧವ ಪೈ ಸೇರಿದಂತೆ ಕೆಲವು ವಿದ್ಯಾರ್ಥಿಗಳು ಫ್ರಭಾತ ಫೇರಿ ನಡೆಸುವುದು, ಘೋಷಣೆ ಕೂಗುವುದು ಸರಕಾರಿ ಶಾಲೆಯ ಪಗಾರಿನಲ್ಲಿ ಬದುಕುತ್ತಿದ್ದ ಶಾಲೆಯ ಶಿಕ್ಷಕರಿಗೆ ಸರಿಬರಲಿಲ್ಲ. ಈ ಕುರಿತು ವಿದ್ಯಾರ್ಥಿಗಳಿಗೆಲ್ಲಾ ಬೋಧನೆ ಮಾಡಿ ಯಾರೂ ಈ ರೀತಿಯ ಹೋರಾಟ ಕಾರ್ಯಗಳಿಗೆ ತೆರಳದಂತೆ ತಾಕೀತು ಮಾಡಿದರು. ತಮ್ಮ ಕಾರ್ಯಕ್ಕೆ ತಡೆ ಒಡ್ಡುತ್ತಿದ್ದ ಶಿಕ್ಷಕರ ಮೇಲೆ ವಿದ್ಯಾರ್ಥಿಗಳಿಗೂ ಸಿಟ್ಟು ಉಕ್ಕಿ ಹರಿಯುತ್ತಿತ್ತು. ಆದರೂ ಫೇರಿಗೆ ಹೋಗುವುದು, ಶಿಕ್ಷಕರ ಬೈಗುಳ, ಹೊಡೆತ, ಶಿಕ್ಷೆ ಅನುಭವಿಸುವುದು ನಡೆಯುತ್ತಲೇ ಇತ್ತು. ಶಿಕ್ಷಕರು ಮಕ್ಕಳು ಹೊರಗೆ ಹೋಗದಂತೆ ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಕಾಯುತ್ತಿದ್ದರು. ಒಮ್ಮೆ ಶಿಕ್ಷಕರಿಗೆ ಬುದ್ಧಿ ಕಲಿಸಬೇಕೆಂದು ಕುಮಾರ ಮಾಧವ ಪೈ, ಕುಮಾರ ಹನುಮಂತ ಭಟ್ಟ, ಕುಮಾರಿ ಶಾರದಾ ಬಾಲಕೃಷ್ಣ ಪುರಾಣಿಕ, ಕುಮಾರಿ ಲಲಿತಾ ರಾಮಚಂದ್ರ ಮಡಗಾಂವಕರ ಶಿಕ್ಷಕರನ್ನು ಶಾಲೆಯಲ್ಲಿ ಕೂಡಿಹಾಕಿ ಧ್ವಜವಂದನೆಗೆ ಹೋಗುವ ಕರಾಮತ್ತು ಮಾಡಿದರು.

ಶಾಲೆಯ ಬೀಗದ ತಟ್ಟೆ ಹಾಗೂ ಬೀಗದ ಕೈ ಎಲ್ಲಿ ಇಡುತ್ತಾರೆಂದು ತಿಳಿದಿದ್ದ ಮಾಧವ ಪೈ ಇವೆರಡನ್ನೂ ತಂದು ಶಿಕ್ಷಕರೆಲ್ಲಾ ಒಳಗಡೆ ಇರುವಾಗ ಬಾಗಿಲು ಹಾಕಿ, ಬೀಗ ಜಡಿದು ಬೀಗದ ಕೈನೊಂದಿಗೆ ಧ್ವಜ ವಂದನೆಗೆ ತೆರಳಿಯೇ ಬಿಟ್ಟರು. ಈ ವಿಷಯ ಪೊಲೀಸರಿಗೂ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ ಮಾಧವ ಪೈ ಸೇರಿದಂತೆ ನಾಲ್ಕು ವಿದ್ಯಾರ್ಥಿಗಳನ್ನೂ ಬಂಧಿಸಿ ಕರೆದೊಯ್ದರು. ಐದು ದಿವಸಗಳ ಕಾಲ ಲಾಕಪ್ಪಿನಲ್ಲಿಟ್ಟು ನ್ಯಾಯಾಧೀಶರ ಎದುರು ಮಕ್ಕಳನ್ನು ಒಯ್ದು ನಿಲ್ಲಿಸಲಾಯಿತು. ಮಕ್ಕಳನ್ನು ಬಂಧಿಸಿ ಶಿಕ್ಷೆ ನೀಡಿದ್ದಕ್ಕೆ ಅಸಹನೆ ವ್ಯಕ್ತಪಡಿಸಿದ ನ್ಯಾಯಾಧೀಶರು ಮಕ್ಕಳನ್ನು ತಂದೆ ತಾಯಿಯರಿಂದ ಬೇರ್ಪಡಿಸುವುದೇ ಒಂದು ದೊಡ್ಡ ಶಿಕ್ಷೆ. ಅವರಿಗೆ ಇನ್ನೇನೂ ಶಿಕ್ಷೆ ನೀಡಬೇಕಾಗಿಲ್ಲ. ಈಗಾಗಲೇ ಅವರು ಶಿಕ್ಷೆ ಅನುಭವಿಸಿದಂತಾಗಿದೆ. ಮಕ್ಕಳನ್ನೆಲ್ಲಾ ಸುರಕ್ಷಿತವಾಗಿ ಪಾಲಕರ ಬಳಿ ಕಳಿಸಿ ಎಂದರು. ಎಷ್ಟು ಸಲ ಶಿಕ್ಷೆ ಅನುಭವಿಸಿದರೂ ತಮ್ಮ ಹೋರಾಟದ ಮಾರ್ಗದಿಂದ ವಿಮುಖರಾಗದ ಮಾಧವ ಪೈ ಅವರು ತಮಗಿಂತ ಚಿಕ್ಕ ಮಕ್ಕಳನ್ನು ಸೇರಿಸಿಕೊಂಡು ಅವರಿಗೆ ದೇಶ ಭಕ್ತಿಯ ಪದ್ಯಗಳನ್ನು, ಭಜನೆಗಳನ್ನು ಪಾಠ ಮಾಡತೊಡಗಿದರು. ಈ ಸಂದರ್ಭದಲ್ಲಿ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಾಧವ ಪೈ ಅವರನ್ನು ಬಂಧಿಸಿ ಕರೆದೊಯ್ದು ಕೆಲವು ದಿವಸಗಳ ನಂತರ ಬಿಡುಗಡೆ ಮಾಡಿದರು. ಹೀಗೆ ಅಂದಿನ ಸ್ವಾತಂತ್ರö್ಯ ಹೋರಾಟದಲ್ಲಿ ಮಕ್ಕಳ ವಾನರ ಸೇನೆ ತನ್ನ ವಿರಾಟ ರೂಪವನ್ನು ತೋರಿದ್ದು ಐತಿಹಾಸಿಕ ದಾಖಲೆಯಾಗಿ ಎಂದೆAದಿಗೂ ಉಳಿಯುತ್ತದೆ.
#############
ಕೆಕ್ಕಾರ ನಾಗರಾಜ ಭಟ್ಟ
