ಸಾವಿನಲ್ಲೂ ಸಾರ್ಥಕತೆ ಮೆರೆದ ಆಟೋ ಚಾಲಕ.

ಇತ್ತೀಚೆಗೆ ಸಿದ್ದಾಪುರ ತಾಲೂಕಿನ ಶಿರಳಗಿ ಗ್ರಾಮದ ವಿನಾಯಕ ನಾಯಕ ಎಂಬ ಯುವಕ ಬೆಂಗಳೂರಿನಲ್ಲಿ ತನ್ನಷ್ಟಕ್ಕೆ ತಾನು ತನ್ನ ಆಟೋದಲ್ಲಿ ಕುಳಿತಿದ್ದಾಗ ಜವರಾಯನಂತೆ ಬಂದೆರಗಿದ ಬಸ್ಸೊಂದು ಇವನ ಪ್ರಾಣವನ್ನೇ ಕಿತ್ತುಕೊಂಡ ಧಾರುಣ ಘಟನೆ ಕುಟುಂಬದವರ ಪಾಲಿಗೆ ಬರಸಿಡಿಲು ಬಡಿದಂತಾಗಿದೆ. ಒಬ್ಬ ಯುವಕ ತನ್ನ ಸಾವಿನ ನಂತರ ಅವನ ಅಂಗಾಂಗ ದಾನ ಮಾಡುಬೇಕೆಂದು ನಿರ್ಧರಿಸಿದ್ದ ದಿಟ್ಟತನದ ದೂರದೃಷ್ಟಿಯ ಮನಸ್ಥಿತಿ ವಿಶೇಷವಾಗಿದ್ದು. ಈ ಯುವಕನ ಹಾಗೂ ಕುಟುಂಬದವರ ಮಾನವೀಯ ಕಾಳಜಿ ಎಲ್ಲರಿಗೂ ಮಾದರಿಯಾಗಿದೆ. ಸಾವಿನ ನಂತರ ಈ ದೇಹ ಬೆಂಕಿಯಲ್ಲಿ ಸುಟ್ಟು ಬೂದಿಯಾಗಿ ಮಣ್ಣಾಗಿ ಕಾಲಕೆಳಗಿನ ದೂಳಾಗುವ ಬದಲಿಗೆ ಬದುಕಿದ್ದೂ ಸಾವಿನಂಚಿನಲ್ಲಿ ನರಳುವ ಜೀವಗಳಿಗೆ ನಮ್ಮ ದೇಹದ ಅಂಗಾಂಗಳು ಇತರರ ಜೀವ ವುಳಿಸುವುದಾದರೆ ದೇಹಾಂಗದಾನ ಶ್ರೇಷ್ಠವಲ್ಲವೆ. ಅದಕ್ಕಿಂತ ಹೆಚ್ಚಿನ ಸಾರ್ಥಕತೆ ಬೇರೆಲ್ಲಿದೆ. ನಮ್ಮ ತಾಲೂಕಿನ ಶಿರಳಗಿ ಗ್ರಾಮದ ಯುವಕ ಆಟೋ ಚಾಲಕನಾಗಿ ಜನಸಾಮಾನ್ಯರ ನಿತ್ಯ ಬದುಕಿಗೆ ತನ್ನ ಕೈಲಾದ ಸಹಾಯ ಮಾಡುತ್ತ ಜೀವನ ಸಾಗಿಸುತ್ತಿದ್ದ ವ್ಯಕ್ತಿಯ ಅನಿರೀಕ್ಷಿತ ಸಾವು ಕುಟುಂಬಕ್ಕಷ್ಟೇ ಅಲ್ಲ. ನಾಡಿಗೂ ಬೆಲೆಕಟ್ಟಲಾಗದ ನಷ್ಟ. ಈತ ಆಕಸ್ಮಿಕ ಅಪಘಾತದಲ್ಲಿ ಜೀವನ್ಮರಣದ ಜೊತೆಗೆ ಹೋರಾಟದ ಕೊನೆ ಸ್ಥಿತಿಯಲ್ಲಿದ್ದಾಗ ಆಸ್ಪತ್ರೆಯ ವೈದ್ಯರ ಸಲಹೆ ಕೋರಿಕೆ ಮೇರೆಗೆ ಅಂಗಾಂಗಗಳ ದಾನಕ್ಕೆ ಕುಟುಂಬದ ಹಿರಿಯರು, ಸದಸ್ಯರು ದುಖಮಯವಾದ ಸ್ಥಿತಿಯಲ್ಲೂ ಒಪ್ಪಗೆ ನೀಡಿದ್ದರಿಂದ ಒಂದಲ್ಲ ಎರಡಲ್ಲ ಎಂಟು ಜನರ ಜೀವ ಉಳಿಸಿದ್ದು ನಿಜವಾಗಿಯೂ ಮೆಚ್ಚಲೇಬೇಕು. ಈ ಮಾನವೀಯ ಅಂತಃಕರಣಕ್ಕೆ ಮಿಡಿದದ್ದನ್ನು ನೋಡಿದರೆ ನನಗೆ ನಮ್ಮ ನಾಡಿನ ಶ್ರೇಷ್ಠ ಕವಿ, ಚಿಂತಕ, ಸ್ವಾತಂತ್ರ್ಯ ಹೋರಾಟಗಾರ, ಚುಟುಕು ಬ್ರಹ್ಮ ಎಂದೇ ಹೆಸರಾದ ‘ದಿನಕರ ದೇಸಾಯಿ’ಯವರು ಬರೆದ
‘ಸಾರ್ಥಕ’ ಕವನ ನೆನಪಾಗುತ್ತದೆ.
“ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿ,
ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ:
ಬೂದಿ-ಗೊಬ್ಬರವುಂಡು ತೆನೆಯೊಂದು ನೆಗೆದು ಬರೆ,
ಧನ್ಯವಾಯಿತು ಈ ಹುಟ್ಟು ಸಾವಿನಲ್ಲಿ….”
“ಸತ್ತ ಮೇಲಾದರೂ ಈ ದೇಹ ಸೇವೆಗೆ ನಿಲ್ಲಲಿ.
ಇಂದಿಗೀ ನರಜನ್ಮ ಸೇವೆಯೆಂದು
ತನ್ನ ಸ್ವಾರ್ಥವ ನೆನೆದು ವ್ಯರ್ಥವಾಗಿದೆ ದೇಹ,
ನಿಜಸೇವೆ ಗೈಯಲಿಕೆ ಬರಲಿ ಮುಂದು…”
ಇಂತಹ ಚಿಂತನಾಶೀಲ ವಾಗ್ಮಿಗಳ ಮಾತುಗಳು ಎಲ್ಲೋ ಕೆಲವು ಓದುಗರ, ಶ್ರೋತ್ರುಗಳ ಕಿವಿಮೇಲೆ ಬಿದ್ದಾಗ ಅದೇ ಅರಿವಿನಬೀಜ ಹೆಮ್ಮರವಾಗಿ ಬೆಳೆದಿತ್ತೇ ನಮ್ಮ ಯುವ ಚಾಲಕ ವಿನಾಯಕನ ಎದೆಯಲ್ಲಿ…”
ನೋವಿನಲ್ಲೂ ಮಾನವೀಯತೆ ಮೆರೆದ ಕುಟುಂಬದವರ ದುಃಖ ಅಂಗಾಂಗಗಳ ದಾನದ ನಿರ್ಧಾರದಿಂದ ತಮ್ಮ ಮಗನು ಮರಣಾನಂತರವೂ ಎಂಟು ಜನರ ಬದುಕಿನೊಂದೆಗೆ ಜೀವಂತವಾಗಿದ್ದಾನೆಂಬ ಸಮಾಧಾನ.. ತಾನೂ ಬದುಕಿ ಇತರರನ್ನೂ ಬದುಕಿಸೋಣ.
ಹೋಗಿ ಬಾ ಸಹೋದರ, ಮತ್ತೆ ಮತ್ತೆ ಹುಟ್ಟಿ ಬಾ ಎಲ್ಲರೆದೆಯಲ್ಲಿ….
########
ಗೋಪಾಲ ನಾಯ್ಕ ಭಾಶಿ.
ಶಿಕ್ಷಕರು ಸಾಯಿ ನಗರ ಸಿದ್ದಾಪುರ ಉ.ಕ.
8277742013
