ಬಡಗುತಿಟ್ಟಿನ ಯಕ್ಷಗಾನ ಭಾಗವತ ಕೆ.ಪಿ.ಹೆಗಡೆಯವರಿಗೆ ರಾಜ್ಯೋತ್ಸವ ಪ್ರಶಸ್ತಿ

ಆದ್ಯೋತ್ ಸುದ್ದಿನಿಧಿ
ಸಿದ್ದಾಪುರ ತಾಲೂಕಿನ ಗೋಳಗೋಡಿ ಬಡಗುತಿಟ್ಟಿನ ಯಕ್ಷಗಾನ ಭಾಗವತ ಕೆ.ಪಿ.ಹೆಗಡೆಯವರಿಗೆ ಪ್ರಸ್ತುತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.

ಬಡಗು ತಿಟ್ಟಿನ ಸಂಪ್ರದಾಯದ ಶ್ರೇಷ್ಠ ಭಾಗವತರಾಗಿ ಗುರುತಿಸಿಕೊಂಡಿರುವ ಕೆ.ಪಿ.ಹೆಗಡೆಯವರು ಮಾರ್ವಿ ಶೈಲಿಯ ಉಪ್ಪೂರು ನಾರಾಯಣಪ್ಪ ಭಾಗವತರ ಪ್ರಿಯ ಶಿಷ್ಯರು. ಖ್ಯಾತ ಭಾಗವತ ಕೊಳಗಿ ಕೇಶವ ಹೆಗಡೆಯವರು ಸೇರಿದಂತೆ ಇಂದು ವಿವಿಧ ಮೇಳಗಳಲ್ಲಿ ಭಾಗವತರಾಗಿ ಸೇವೆ ಸಲ್ಲಿಸುತ್ತಿರುವ ಅನೇಕ ಭಾಗವತರು ಕೆ.ಪಿ.ಹೆಗಡೆಯವರ ಶಿಷ್ಯರಾಗಿದ್ದಾರೆ. ನೂರಾರು ಯಕ್ಷಗಾನ ಕಲಾವಿದರನ್ನು ಸೃಷ್ಟಿಸಿದ ಕೀರ್ತಿಯೂ ಇವರಿಗಿದೆ.

ಸಿದ್ದಾಪುರ ತಾಲೂಕಿನ ಹೆಗ್ನೂರು ಸಮೀಪದ ಗೋಳಗೋಡಿನ ದಿ.ಪರಮೇಶ್ವರ ಹೆಗಡೆ ಹಾಗೂ ಶ್ರೀಮತಿ ತುಂಗಭದ್ರಾ ದಂಪತಿಗಳ ಪುತ್ರರಾದ ಕೃಷ್ಣ ಪರಮೇಶ್ವರ ಹೆಗಡೆಯವರು(ಜನನ: ೦೩-೦೭-೧೯೫೯) ೧೯೭೭ ರಿಂದಲೂ ಯಕ್ಷಗಾನ ಕಲಾಕ್ಷೇತ್ರದಲ್ಲಿ ಸೇವೆಗೈಯ್ಯುತ್ತಿದ್ದಾರೆ. ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ಯಕ್ಷಗಾನಕಲೆಯ, ಭಾಗವತಿಕೆಯ ಕುರಿತು ಅಭ್ಯಾಸ ಮಾಡಿದ್ದಾರೆ ವೃತ್ತಿಪರ ಮೇಳಗಳಲ್ಲಿ ಹಾಗೂ ಯಕ್ಷಗಾನ ಕಲಿಕಾ ಕೇಂದ್ರಗಳಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ನಾಡಿನ ನಾನಾಭಾಗಗಳಲ್ಲಿ ಕೆ.ಪಿ.ಹೆಗಡೆಯವರಿಗೆ ಮಾನಸಂಮಾನಗಳು ಸಂದಿವೆ. ಶ್ರೀ ಮಹಾಲಿಂಗೇಶ್ವರ ಮೇಳ ಕೋಟ, ಶ್ರೀ ಗುರುಪ್ರಾಸಾದಿತ ಮೇಳ ಸಾಲಿಗ್ರಾಮ, ಶ್ರೀ ಅನಂತಪದ್ಮನಾಭ ದಶಾವತಾರ ಮೇಳ ಪೆರ್ಡೂರು, ಶ್ರೀ ಮಾರಿಕಾಂಬಾ ಯಕ್ಷಗಾನ ಮಂಡಳಿ ಶಿರಸಿ, ಶ್ರೀ ದುರ್ಗಾಪರಮೇಶ್ವರೀ ಮೇಳ ಮಂದಾರ್ತಿ, ಕುಮಟಾ ಮೇಳ, ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರೀ ಮೇಳ ಕಮಲಶಿಲೆ, ಶ್ರೀ ಪಂಚಲಿAಗೇಶ್ವರ ಮೇಳ ಶಿರಸಿ, ಶ್ರೀ ಅಮೃತೇಶ್ವರೀ ಮೇಳ ಕೋಟ, ಶ್ರೀ ಗುತ್ಯಮ್ಮ ಮೇಳ ತೀರ್ಥಹಳ್ಳಿ ಸೇರಿದಂತೆ ಹಲವಾರು ಪ್ರಸಿದ್ಧ ಯಕ್ಷಗಾನ ಮಂಡಳಿಗಳಲ್ಲಿ ಪ್ರಮುಖ ಭಾಗವತರಾಗಿ ಸೇವೆ ಸಲ್ಲಿಸಿರುವ ಹೆಗಡೆಯವರು ಸತತ ೪ ದಶಕಗಳ ಕಾಲ ಭಾಗವತರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಐದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭಾಗವತಿಕೆಯ ಪಾಠ ಮಾಡಿದ್ದಾರೆ. ಇವರಿಂದ ಕಲಿತ ನೂರಾರು ಶಿಷ್ಯರು ವಿವಿಧ ಮೇಳಗಳಲ್ಲಿ ಮಿಂಚುತ್ತಿದ್ದಾರೆ.

ಕೆ.ಪಿ.ಹೆಗಡೆಯವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, “ಯಕ್ಷಗಾನ ರತ್ನ”, “ಪೌರಾಣಿಕ ಯಕ್ಷ ಮಾಧುರ್ಯ”ದಂತಹ ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ಚಿಟ್ಟಾಣಿ ರಾಮಚಂದ್ರ ಹೆಗಡೆ, ಗೋಡೆ ನಾರಾಯಣ ಹೆಗಡೆ, ತೆಕ್ಕಟ್ಟೆ ಆನಂದ ಮಾಸ್ತರ, ಕುಂಜಾಲು ರಾಮಕೃಷ್ಣ, ಎಂ.ಎ.ನಾಯ್ಕ, ಕೊಕ್ಕಡ ಈಶ್ವರ ಭಟ್ಟರಂತಹ ಘಟಾನುಘಟಿ ಕಲಾವಿದರು ಕೆ.ಪಿ.ಹೆಗಡೆಯವರ ಭಾಗವತಿಕೆಗೆ ಅಭಿನಯ ನೀಡಿದ್ದಾರೆ. ಯಕ್ಷಗಾನ ಪಾತ್ರಧಾರಿಯಾಗಿಯೂ ಗುರುತಿಸಿಕೊಂಡಿದ್ದ ಇವರು ಶ್ರೀಕೃಷ್ಣ, ಸುಧನ್ವನಂತಹ ಪಾತ್ರಗಳಲ್ಲಿ ಹೆಸರು ಪಡೆದಿದ್ದಿದೆ.
ಕೆ.ಪಿ.ಹೆಗಡೆಯವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ನನಗೆ ತುಂಬಾ ಸಂತೋಷವಾಗಿದೆ. ಸಾಕಷ್ಟು ಯಕ್ಷಗಾನ ಭಾಗವತರನ್ನು ಅವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ್ದಾರೆ. ನಾನೂ ಸಹ ಅವರ ಶಿಷ್ಯನಾಗಿದ್ದು ಇದಕ್ಕೂ ಮೊದಲೇ ಅವರಿಗೆ ಈ ಪ್ರಶಸ್ತಿ ಬರಬೇಕಾಗಿತ್ತು. ಎನ್ನುತ್ತಾರೆ ಖ್ಯಾತ ಯಕ್ಷಗಾನ ಭಾಗವತ ಕೇಶವ ಹೆಗಡೆ ಕೊಳಗಿ

About the author

Adyot

Leave a Comment