ಆದ್ಯೊತ್ ಸುದ್ದಿನಿಧಿ:;
ಶಿವಮೊಗ್ಗ ಜಿಲ್ಲೆಯ ಹೊಸನಗರದ ಶ್ರೀರಾಮಚಂದ್ರಾಪುರ ಮಠದ ಶರಾವತಿ ತೀರದಲ್ಲಿ ಇರುವ ಶ್ರೀರಾಮಚಂದ್ರಾಪುರ ಮಠಕ್ಕೆ ನೂತನ ಕಟ್ಟಡ ನಿರ್ಮಾಣವಾಗಲಿದ್ದು ಪ್ರಧಾನ ಮಠ ಪುನರ್ನಿರ್ಮಾಣ ಸಮಿತಿಯವರು ನವ ನಿರ್ಮಾಣದ ‘ರಾಮಸಾನ್ನಿಧ್ಯ’ದ ಶಿಲಾನ್ಯಾಸ ಕಾರ್ಯಕ್ರಮ ಹಾಗೂ ಧರ್ಮಸಭೆ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ಶಿಲಾನ್ಯಾಸ ನೆರವೇರಿಸಿ, ಧರ್ಮಸಭೆಯ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ,ಶ್ರೀ ರಾಮಚಂದ್ರಾಪುರ ಮಠಕ್ಕೆ ಶಿಷ್ಯರೇ ನಿಜವಾದ ಸಂಪತ್ತಾಗಿದ್ದು, ಪ್ರಧಾನ ಮಠದ ಶಿಲಾನ್ಯಾಸದ ಮೂಲಕ ಶರಾವತಿ ನದಿ ತೀರದಲ್ಲಿ ಸಹಸ್ರಮಾನದ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.ರಾಮಚಂದ್ರಾಪುರ ಮಠದ ಕುರಿತು ಹೊರ ಜಗತ್ತಿನಲ್ಲಿ ಇರುವ ಕಲ್ಪನೆಯೇ ಬೇರೆ ಅದು ಹಣವಿರುವ ಅತ್ಯಂತ ಸಂಪದ್ಬರಿತ ಮಠ, ಇಲ್ಲಿ ಹಣದ ಕೊಪ್ಪರಿಗೆಯೇ ಇದೆ ಎಂದು ಹಲವಾರು ಭಕ್ತರು ಮತ್ತು ಸಾರ್ವಜನಿಕರು ಭಾವಿಸಿದ್ದಾರೆ. ಆದರೆ ನಿಜವಾಗಿಯೂ ನಮ್ಮಲ್ಲಿ ಹಣದ ಕೊಪ್ಪರಿಗೆ ಇಲ್ಲ. ಮಠದ ಎಲ್ಲಾ ಯೋಜನೆಗಳು ಶೂನ್ಯದಿಂದಲೇ ಆರಂಭಗೊಳ್ಳುತ್ತವೆ. ಆದರೆ ನಮಗೆ ಶಿಷ್ಯರೇ ನಿಜವಾದ ಸಂಪತ್ತಾಗಿದ್ದು, ನಮ್ಮ ಶಿಷ್ಯರು ಗುರುವಿನ ಯಾವ ಆದೇಶವನ್ನು ಇದುವರೆಗೂ ಮೀರಿ ನಡೆದವರಲ್ಲ. ಸಂಕಷ್ಟವಿದ್ದಾಗಲೂ, ಸಂಭ್ರಮವಿರುವಾಗಲೂ ಮಠದೊಂದಿಗೆ ಅವರ ಭಾವನಾತ್ಮಕವಾದ ಸಂಬAಧವಿದೆ. ಹಾಗಾಗಿಯೇ ಗುರುಗಳು ಎಂತಹ ಕಠಿಣ ಯೋಜನೆಗಳನ್ನು ಮುಂದಿಟ್ಟರೂ ನಮ್ಮ ಮಠ’ ಎಂಬ ಪ್ರೀತಿಯಿಂದ ಅವರು ಸ್ವೀಕರಿಸುತ್ತಾರೆ ಎಂದು ಹೇಳಿದರು.

ಗೋಕರ್ಣದಲ್ಲಿ ಶಂಕರಾಚಾರ್ಯರು ಸಂಸ್ಥಾಪಿಸಿದ ಮಠವನ್ನು ಹೊಸನಗರದ ರಾಮಚಂದ್ರಾಪುರ ಮಠವು ಶತಮಾನಗಳ ಮೊದಲು ತನ್ನತ್ತ ಎಳೆದುಕೊಂಡಿದೆ. ರಾಮನ ಬಾಣದಿಂದ ಹೊರಹೊಮ್ಮಿದ ಶರಾವತಿ ನದಿಯ ತೀರದಲ್ಲಿ ನಮ್ಮ ಪ್ರಧಾನ ಮಠ ನೆಲನಿಂತಿರುವುದು ಅತ್ಯಂತ ವಿಶೇಷವಾಗಿದೆ. ಈ ಪುಣ್ಯ ನೆಲಕ್ಕೆ ಒಂದು ವಿಶೇಷ ಮಹತ್ವವಿದ್ದು, ಇಲ್ಲಿ ಸುಮ್ಮನೆ ಕಟ್ಟುವ ಕಟ್ಟಡವೂ ಗಟ್ಟಿಯಾಗುವುದು ವಾಡಿಕೆಯಾಗಿದೆ. ಇಂದಿನ ಈ ಶಿಲಾನ್ಯಾಸವು ಸಹಸ್ರಮಾನದ ಇತಿಹಾಸಕ್ಕೆ ಭವ್ಯ ನಾಂದಿಯಾಗಲಿದೆ ಎಂದು ಶ್ರೀಗಳು ತಿಳಿಸಿದರು. ಈಗಿರುವ ಮಠದ ಕಟ್ಟಡವನ್ನು ಗಮನಿಸಿದರೆ ಅದು ಹಿಂದೆ ಯಾವುದೋ ಆಪತ್ಕಾಲದಲ್ಲಿ ನಿರ್ಮಿಸಿದಂತಿದೆ. ಅದನ್ನು ಸರಿಪಡಿಸುವ ಕಾರ್ಯಕ್ಕೆ ಇದೀಗ ಚಾಲನೆ ದೊರಕಿದ್ದು, ಈ ಶುಭ ಸಂದರ್ಭದಲ್ಲಿ ಅಯೋಧ್ಯೆಯ ಪುಣ್ಯ ಮಣ್ಣನ್ನು ಶಿಲಾನ್ಯಾಸದ ಗುಂಡಿಯಲ್ಲಿ ನಿಕ್ಷೇಪ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಪ್ರಧಾನ ಮಠದ ಪುನರ್ನಿರ್ಮಾಣಕ್ಕೆ ಒಟ್ಟು ೧೦೦೮ ದಿನಗಳ ಗುರಿಯನ್ನು ನೀಡಲಾಗಿದ್ದು, ನಿರ್ಮಾಣ ಪೂರ್ಣಗೊಂಡ ನಂತರ ೮ ದಿನಗಳ ಕಾಲ ವೈಭವದ ಕಾರ್ಯಕ್ರಮದ ಮೂಲಕ ಪ್ರಧಾನ ಮಠದ ಲೋಕಾರ್ಪಣೆ ನೆರವೇರಲಿದೆ. ಈ ಸಮಾರಂಭವು ಈ ಹಿಂದೆ ಮಠದಲ್ಲಿ ನಡೆದಿದ್ದ ಐತಿಹಾಸಿಕ ‘ರಾಮಾಯಣ ಮಹಾಸತ್ರ’ ಹಾಗೂ ‘ವಿಶ್ವ ಗೋಸಮ್ಮೇಳನ’ದ ವೈಭವವನ್ನು ನೆನಪಿಸುವಂತಿರಲಿದೆ ಎಂದು ಶ್ರೀಗಳು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಗೃಹ ಸಚಿವ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, “ನಮ್ಮ ಜೀವನದಲ್ಲಿ ನಿಜವಾದ ಪವಾಡಗಳನ್ನು ಕಣ್ಣಾರೆ ನೋಡುವಂತೆ ಮಾಡಿದ ಸ್ಥಳವೆಂದರೆ ಅದು ರಾಮಚಂದ್ರಾಪುರ ಮಠ ಹಾಗೂ ಇಲ್ಲಿನ ಗುರುಗಳು,” ಎಂದು ಹೇಳಿದರು. ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, “ಗೋಸಂರಕ್ಷಣೆಯಿAದಲೇ ಜಗತ್ತಿನಲ್ಲಿ ಹೆಸರು ಪಡೆದಿರುವ ನಮ್ಮ ಮಠ ಅಭಿವೃದ್ಧಿಯಾಗಬೇಕು ಎನ್ನುವುದು ನಮ್ಮ ಕನಸು ಮತ್ತು ಮನಸ್ಸು ಎರಡೂ ಹೌದು. ಆ ಹಿನ್ನೆಲೆಯಲ್ಲಿ ಮಠಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರಕ್ಕೆ ನಾನು ಸದಾ ಬದ್ಧನಿದ್ದೇನೆ,” ಎಂದರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ, ಅವರು ೨೦೦೭-೦೮ ರಲ್ಲಿ ಶ್ರೀಮಠದಲ್ಲಿ ನಡೆದಿದ್ದ, ದೇಶ ವಿದೇಶಗಳ ಲಕ್ಷಾಂತರ ಜನರು ಭಾಗವಹಿಸಿದ್ದ ರಾಮಾಯಣ ಮಹಾಸತ್ರ ಹಾಗೂ ವಿಶ್ವ ಗೋಸಮ್ಮೇಳನದ ನೆನಪನ್ನು ಹಂಚಿಕೊAಡರು.
ಶಿಮುಲ್ ಅಧ್ಯಕ್ಷ ವಿದ್ಯಾಧರ ಗುರುಶಕ್ತಿ ಅವರು ಮಾತನಾಡಿ, ಈ ಮಹಾನ್ ಕಾರ್ಯಕ್ಕೆ ತಮ್ಮ ಪೂರ್ಣ ಬೆಂಬಲವನ್ನು ಘೋಷಿಸಿದರು. ವೇದಿಕೆಯಲ್ಲಿ ಎಂ.ಎ.ಡಿ.ಬಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಪ್ರಧಾನ ಮಠದ ಪುನರ್ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಪ್ರಭಾಕರ್ ರಾವ್ ಕಾರಣಗಿರಿ, ಸಮಿತಿಯ ಕಾರ್ಯಾಧ್ಯಕ್ಷ ಗಣಪತಿ ಭಟ್ ಜಟ್ಟಿಮನೆ, ಶಾಸನ ತಂತ್ರದ ಅಧ್ಯಕ್ಷ ಮೋಹನಭಾಸ್ಕರ ಹೆಗಡೆ, ಮಹೇಶ್ ಕಜೆ, ರಮೇಶ್ ಹೆಗಡೆ ಗುಂಡೂಮನೆ ಮುಂತಾದವರು ಉಪಸ್ಥಿತರಿದ್ದರು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಶಿಷ್ಯರು ಮತ್ತು ಭಕ್ತರು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇದಕ್ಕೂ ಮುನ್ನ ಬೆಳಿಗ್ಗೆ ೯ ಗಂಟೆಗೆ ಶಿಲಾನ್ಯಾಸದ ಶಿಲೆಯ ಭವ್ಯ ಮೆರವಣಿಗೆ ನಡೆಯಿತು. ಗುರುನಿವಾಸ ನಿರ್ಮಾಣದ ಸ್ಥಳದಲ್ಲಿ ಶ್ರೀಗುರುಪಾದುಕಾ ಸ್ತೋತ್ರ ಸಮರ್ಪಣೆ, ಶ್ರೀರಾಮತಾರಕ ಜಪ, ಸಹಸ್ರಾಧಿಕ ಕುಂಕುಮಾರ್ಚನೆ, ಶತಾಧಿಕ ರುದ್ರಪಠಣಪೂರ್ವಕ ಅಭಿಷೇಕ ಹಾಗೂ ಶಾರದಾಷ್ಟಕ ಪಠಣಗಳು ನೆರವೇರಿದವು. ವಿಶೇಷವಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಂಗಳೂರು, ಸಾಗರ ಹಾಗೂ ಕಾಸರಗೋಡು ಪ್ರದೇಶಗಳಿಂದ ಆಗಮಿಸಿದ ಸಾವಿರಾರು ಶಿಷ್ಯರಿಂದ ಮಠಕ್ಕೆ ‘ಮುಷ್ಟಿದ್ರವ್ಯ ಸಮರ್ಪಣೆ’ ನಡೆಯಿತು.
