ಆಶಾಕಾರ್ಯಕರ್ತೆಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಆಗ್ರಹ

ಆದ್ಯೋತನ್ಯೂಸ್:
ದೇಶಾದ್ಯಂತ ಕೊವೈಡ್19 ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಜನತರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ತಳಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾಕಾರ್ಯಕರ್ತೆಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಅವಶ್ಯಕ ವಸ್ತುಗಳನ್ನು ಪೂರೈಸಬೇಕು ಎಂದು ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಯಮುನಾ ಗಾಂವ್ಕರ ಆಗ್ರಹಿಸಿದ್ದಾರೆ.
ಈ ಕುರಿತು ಪ್ರದಾನಿ ನರೇಂದ್ರ ಮೋದಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚೀವೆ ಸ್ಮ್ರತಿ ಇರಾನಿಯವರಿಗೆ ಪತ್ರ ಬರೆದಿರುವ ಗಾಂವ್ಕರ,ಈ ಸಾಂಕ್ರಾಮಿಕದ ವಿರುದ್ದ ವಿವಿಧ ರಾಜ್ಯ ಸರಕಾರಗಳು ಬೃಹತ ಹೋರಾಟದ ಮೂಲಕ ಜನರ ಜೀವವನ್ನು ರಕ್ಷಿಸುವ ಮಹತ್ವದ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಲಾಕ್ ಡೌನ್ ಸಂದರ್ಭದಲ್ಲಿ ‌ಕೊವೈಡ್ ಸೊಂಕಿತರನ್ನು ಕಂಡು ಹಿಡಿಯುವಲ್ಲಿ,ಆರೋಗ್ಯ ಸಂಬಂಧಿತ ಕಾರ್ಯಗಳಲ್ಲಿ ಆಶಾಕಾರ್ಯಕರ್ತೆಯರನ್ನು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ತೊಡಗಿಸಿಕೊಂಡಿದ್ದಾರೆ.ಆದರೆ
ಈ ಎರಡೂ ಕಾರ್ಯಕರ್ತೆಯರಿಗೆ ಯಾವುದೇ ಸುರಕ್ಷತಾ ಉಪಕರಣಗಳಾದ ಮುಖ ಕವಚ (ಮಾಸ್ಕ) ಗ್ಲೌಸ್ ಮತ್ತು ನೈರ್ಮಲ್ಯ ದ್ರವಗಳನ್ನಾಗಲಿ (ಸೆನಿಟೈಜರ್) ಪೂರೈಸಿಲ್ಲ ಎಂಬುದು ತೀವ್ರ ಎಚ್ಚರಿಕೆಯ ಮತ್ತು ಅಪಾಯಕಾರಿ ವಿಚಾರವಾಗಿದೆ.
ಅವರು ಇಂಥ ಸುರಕ್ಷಿತ ಸಾಧನಗಳನ್ನು ತಮ್ಮ ಜೇಬಿನಿಂದಲೇ ಖರ್ಚು ಮಾಡಿ ಮಾಸ್ಕ ಮತ್ತು ಸೆನಿಟೈಸರ್ ಖರೀದಿಸಲು ಹೇಳಿದ್ದಾರೆ. ಯಾವುದೇ ಸುರಕ್ಷಾ ಮಾನದಂಡಗಳಿಲ್ಲದೇ ಯಾರೂ ಕೂಡ ತಮ್ಮ ಮನೆಗಳಿಂದ ಹೊರಬಂದು ಕೆಲಸ ಮಾಡಲು ಹೇಳುವುದು, ಸಲಹೆ ಕೊಡುವುದು ಕೆಲಸಕ್ಕೆ ಹಚ್ಚುವುದು ಸರಿಯಲ್ಲ ಮತ್ತು ಸಾಧುವೂ ಅಲ್ಲ ಹಣಕಾಸು ಮಂತ್ರಿಗಳು ಮುಂಚೂಣಿ ಕಾರ್ಮಿಕರಿಗೆ ಘೋಷಿಸಿದ 50 ಲಕ್ಷ ರೂ. ವಿಮಾ ಸೌಲಭ್ಯವೂ ಕೂಡಾ ಅಂಗನವಾಡಿ ನೌಕರರಿಗೆ ಅನ್ವಯಿಸುವಂತೆ ಒಳಗೊಂಡಿಲ್ಲ ಎಂಬುದು ಆತಂಕದ ವಿಚಾರವಾಗಿದೆ.
ಈಗ ಹಲವಾರು ಹಳ್ಳಿಗಳಲ್ಲಿ ಬ್ಯಾಂಕ್ ಖಾತೆಗೆ ಹಣಕಾಸು ವರ್ಗಾಯಿಸಲು ಫಲಾನುಭವಿಗಳಿಗೆ ಮನೆಮನೆಗೆ ಹೋಗಿ ಆಧಾರ ಮತ್ತು ಬ್ಯಾಂಕ್ ಖಾತೆಯ ವಿವರ ಸಂಗ್ರಹಿಸಲು ಆದೇಶಿಸಿದ್ದಾರೆ. ಆಹಾರ ಪೂರೈಕೆಯ ಬದಲು ಕೇವಲ ನೇರ ನಗದು ವರ್ಗಾವಣೆ ಮಾಡಿದರೆ, ಐಸಿಡಿಎಸ್ ಮೂಲ ನಿರ್ದೇಶನ ಮತ್ತು ಉದ್ದೇಶಗಳಿಗೆ ಮತ್ತು ಅದು ಅಪೌಷ್ಠಿಕತೆಯ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಮಾತ್ರವಲ್ಲ ಆಹಾರ ಸುರಕ್ಷಾ ಕಾಯ್ದೆಯ ಉದ್ದೇಶವನ್ನೇ ನಾಶ ಮಾಡುತ್ತದೆ ಅಪೌಷ್ಠಿಕತೆ ಅತಿಹೆಚ್ಚು ಇರುವ ಪ್ರದೇಶಗಳಲ್ಲಿ ಅಂದರೆ ಬುಡಕಟ್ಟು ಜನರು ವಾಸಿಸುವ ಕೊಪ್ಪಗಳಲ್ಲಿ ಅಥವಾ ಹಳ್ಳಿಗಳಲ್ಲಿ ಜನರಿಗೆ ಬ್ಯಾಂಕ್ ಖಾತೆ ಇರುವುದಿಲ್ಲ ಅಥವಾ ಬ್ಯಾಂಕಿಂಗ್ ಸೌಲಭ್ಯ ಮತ್ತು ಆಹಾರ ಧಾನ್ಯ ಖರೀದಿಸಲು ಮಾರ್ಗಗಳಿರುವುದಿಲ್ಲ. ಅಲ್ಲದೇ ನೇರ ನಗದು ವರ್ಗಾವಣೆಯಲ್ಲಿ ಸರ್ಕಾರ ಹಾಕುವ ಅತ್ಯಂತ ಕನಿಷ್ಟ ಹಣದಿಂದ ಮುಕ್ತ ಮಾರುಕಟ್ಟೆಗೆ ಹೋಗಿ ಫಲಾನುಭವಿ ಖರೀದುಸುವಾಗ ಯಾವುದೇ ಪ್ರಮಾಣದ ಗುಣಾತ್ಮಕ ಪೌಷ್ಠಿಕ ಆಹಾರವೂ ದೊರೆಯದು. ಈ ರೀತಿಯಲ್ಲಿ ಸರ್ಕಾರದ ನಡೆಯಿಂದ ಈಗಾಗಲೇ ಅಪೌಷ್ಟಿಕತೆಯ ಅಪಾಯಕಾರಿ ಸನ್ನಿವೇಶ ಮತ್ತು ಹಸಿವಿನ ಸಾವು ಮುಂದಿನ ದಿನಗಳಲ್ಲಿ ಇನ್ನಷ್ಟು ದುಃಸ್ಥಿತಿಗೆ ತಲುಪುತ್ತದೆ.
ದೇಶದ 24 ರಾಜ್ಯಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಅಂಗನವಾಡಿ ನೌಕರರನ್ನು ಪ್ರತಿನಿಧಿಸುವ ಸಂಘಟನೆಯಾದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಅಖಿಲ ಭಾರತ ಫೆಡರೇಶನ್ (ಸಿಐಟಿಯು) ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಂಥ ಕಠಿಣ ನಡಾವಳಿಯಿಂದ ಕೇವಲ 26 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಜೀವನವನ್ನು ಅಪಾಯಕ್ಕೆ ಸಿಲುಕಿಸುವುದಷ್ಟೇ ಅಲ್ಲ ಕೋಟ್ಯಾಂತರ ಜನ ಫಲಾನುಭವಿ ಮತ್ತು ಜನಸಾಮಾನ್ಯರನ್ನು ಅಪಾಯಕ್ಕೆ ಸಂಕಷ್ಟಕ್ಕೆ ದೂಡುತ್ತದೆ.
ಪೂರಕ ಪೌಷ್ಟಿಕ ಆಹಾರವನ್ನು ಇತರ ಆಹಾರ ಪದಾರ್ಥಗಳಂತೆಯೇ (ಆಹಾರ ಧಾನ್ಯಗಳು, ಎಣ್ಣೆ, ಬೆಲ್ಲ, ದ್ವಿದಳ ಧಾನ್ಯ, ತತ್ತಿ ಮತ್ತು ಒಣ ಹಣ್ಣುಗಳು) ಸಾಕಷ್ಟು ಪ್ರಮಾಣದಲ್ಲಿ ಎಲ್ಲಾ ಫಲಾನುಭವಿಗಳಿಗೆ ವಿತರಿಸುವುದು. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಈ ಪೂರಕ ಪೌಷ್ಟಿಕ ಆಹಾರವನ್ನು ಫಲಾನುಭವಿಗಳಿಗೆ ವಿತರಿಸಬಹುದು.
ಸಮುದಾಯದ ಸೇವೆಯಲ್ಲಿ ತೊಡಗಿರುವ ಎಲ್ಲಾ ಕಾರ್ಮಿಕರಿಗೆ ಸಂರಕ್ಷಣಾತ್ಮಕ ಮಾನದಂಡಗಳಾದ ಮಾಸ್ಕ, ಗ್ಲೌಸ್, ದೇಹಪೂರ್ತಿ ಮುಚ್ಚುವಂತ ಸೂಟ್ಸ್ ಅಂದರೆ ಜೋಡಿ ಉಡುಪುಗಳನ್ನು ಮತ್ತು ಸೋಪು ಹಾಗೂ ಕೈಶುದ್ಧೀಕರಣದ ದ್ರವಗಳನ್ನು ಇತ್ಯಾದಿ ನೀಡಬೇಕು.
ಎಲ್ಲಾ ಅಂಗನವಾಡಿ ನೌಕರರಿಗೆ ಮನೆ ಮನೆ ಸರ್ವೆಯ ಮೊದಲು ಎಲ್ಲಾ ರೀತಿಯ ಸೂಕ್ತ ತರಬೇತಿ ನೀಡಬೇಕು.
ಯಾವುದೇ ವಿಳಂಬವಿಲ್ಲದೇ ಬಾಕಿ ಇರುವ ಗೌರವಧನ, ಭತ್ಯೆ ಮತ್ತು ಇನ್ನಿತರ ಹಣಕಾಸು ಸಹಾಯವನ್ನು ನೀಡಿ, ನಿಗದಿತ ವೇತನವನ್ನು ಖಾತ್ರಿಗೊಳಿಸಿ. (ಕೆಲವು ರಾಜ್ಯಗಳಲ್ಲಿ 2-6 ತಿಂಗಳ ಗೌರವಧನ ಬಾಕಿ ಇದೆ.)
ಅಂಗನವಾಡಿ ನೌಕರರ ಕೆಲಸದ ಖಾಯಮಾತಿ ವಿಚಾರವು ಬಾಕಿ ಇರುವುದರಿಂದ, ಈ ಕರೋನಾದ ಭಾರೀ ಅಪಾಯದ ಸಂದರ್ಭದಲ್ಲಿ ಅದರಲ್ಲೂ ಚಲನ-ವಲನ ದಿಗ್ಬಂಧನದ ವೇಳೆ ಹೊರಾಂಗಣದಲ್ಲಿ ಸಮುದಾಯದ ಒಳಿತಿಗಾಗಿ ಕ್ರಿಯಾಶೀಲ ಮತ್ತು ಜೀವಪರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲರಿಗೂ ಹೆಚ್ಚುವರಿ ವೇತನ/ಪ್ರೋತ್ಸಾಹಧನ ಕೊಡಬೇಕು.
ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಆಶಾಕಾರ್ಯಕರ್ತೆಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಯಾವುದೇ ಸುರಕ್ಷಾ ಸಾಧನಗಳನ್ನು ನೀಡದೆ ಪ್ರತಿ ಮನೆಗೂ ಭೇಟಿ ನೀಡಿ ಜ್ವರ ಬಂದವರನ್ನು ಗುರುತಿಸುವಂತೆ ಸೂಚಿಸಲಾಗಿದೆ
ಆದರೆ ಇದರಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೇಲೆ ಸಾರ್ವಜನಿಕರ ತಂಟೆ, ತಕರಾರು, ಊರೊಳಗೆ ಬಿಡದೇ ಇರುವುದು, ವಾರ್ಡ್ ಗೆ ಹೋಗುವ ದಾರಿ ಬಂದ್ ಮಾಡಿರುವುದು ಮತ್ತು ಮಾನಸಿಕ ಹಿಂಸೆ ನೀಡುವುದು ಮಾಡಲಾಗುತ್ತಿದೆ.ಇದಲ್ಲದೆ ಸ್ಥಳೀಯ ಪುಡಾರಿಗಳ ಕಾಟ ಶುರುವಾಗಿದೆ. ನೀವು ನಮ್ಮೂರೊಳಗೆ ಬರಬೇಡಿ, ನಿಮ್ಮಿಂದಲೇ ಕರೋನಾ ಬಂತು, ನಿಮ್ಮನ್ನೇ ಫಿನಾಯಿಲ್ ಹಾಕಿ ನೀರುಗುಂಡಿಯಲ್ಲಿ ಮುಳುಗಿಸಿಬಿಡಬೇಕು ಎಂದೆಲ್ಲ ಹೇಳುತ್ತ ಮಾನಸಿಕ ಹಿಂಸೆ ನೀಡುತ್ತಿದ್ದಾರೆ.
ಮಕ್ಕಳು ಯುವಕರು ಗುಂಪಾಗಿ ಆಟವಾಡಲು ಹರಟೆ ಹೊಡೆಯಲು ಕಟ್ಟೆಪುರಾಣಕ್ಕೆ ಹೊರಹೋಗಬಾರದೆಂದು ತಿಳಿವಳಿಕೆ ಕೊಟ್ಟರೆ ಕೆಲವೆಡೆ ಬೈಯುವುದು, ಸಮಸ್ಯೆಯ ಬಗ್ಗೆ ಅದರ ಮೇಲಾಧಿಕಾರಿಗಳಿಗೆ ಹೇಳಿದರೆ ಸೇಡು ತೀರಿಸುವವರಂತೆ ಮೇಲೆರಗುವಿಕೆ ಶುರುವಾಗಿದೆ.
ಒಂದೆರಡು ಕಡೆಗಳಲ್ಲಿ ಯಾವುದೇ ಡೌಟ್ ಕೇಳಿದಾಗ ಇಲಾಖೆಯಲ್ಲಿರುವವರೇ ಬೈದಿರುವುದು ಸಮಜಾಯಿಸಿ ಉತ್ತರ ನೀಡದಿರುವುದು ನಮಗೆ ಗೊತ್ತಾಗಿದೆ. ಹಾಗಾಗಿ ದಯವಿಟ್ಟು ಈ ರೀತಿಯ ಸಮಸ್ಯೆಗಳಿಗೆ ಇಲಾಖೆ ಮತ್ತು ಜಿಲ್ಲಾಡಳಿತ ತಮ್ಮ ಇಲಾಖೆಯ ಕೊನೆಯ ನೌಕರರ ಬಗ್ಗೆ ಮತ್ತು ಈ ಬಡ ಕಾರ್ಯಕರ್ತೆಯರ ಪರವಾಗಿ ರಕ್ಷಣಾತ್ಮಕವಾಗಿ ಇರಬೇಕು ಎಂದು ಯಮುನಾ ಗಾಂವ್ಕರ ಆಗ್ರಹಿಸಿಧ್ದಾರೆ.

About the author

Adyot

1 Comment

Leave a Comment