ಆದ್ಯೋತ್ ಸುದ್ಯಾಂಕಣ:
ಆಗಷ್ಟೇ ಚಂದಮಾಮ, ಬಾಲಮಿತ್ರ ಮುಂತಾದ ಮಾಸಿಕಗಳ ಜೊತೆಗೆ ಮಕ್ಕಳ ಕಥೆಗಳ ಓದಿನ ಜಾಡಿನಿಂದ ಪಕ್ಕಕ್ಕೆ ಸರಿಯುತ್ತಿದ್ದ ದಿನಗಳು. ಆ ಮೊದಲೇ £ಮ್ಮೂÀರಿನಲ್ಲಿ ಸಮಾಜಮಂದಿರವೆಂಬ ಸಾಕಷ್ಟು ದೊಡ್ಡದಾದ ಕಟ್ಟಡವೊಂದು ರೂಪುಗೊಂಡಿತ್ತು. ಈಗಿನಂತೆ ಸಭಾಭವನ ಕಟ್ಟಲು ಸರಕಾರದ ಅನುದಾನಕ್ಕೆ ಕೈಯೊಡ್ಡದೇ ಊರವರೇ ಸದಭಿರುಚಿಯ ಶ್ರಮದಾನದ ಮೂಲಕ, ಅಷ್ಟಿಷ್ಟು ವಂತಿಗೆಯ ಮೂಲಕ ಕಟ್ಟಿಕೊಂಡ ಅದರಲ್ಲಿ ಭಾಗ್ಯೋದಯ ವಾಚನಾಲಯ ಎನ್ನುವ ಹೆಸರಿನ ಲೈಬ್ರರಿಯೂ ಇತ್ತು. ನಾನು ಹುಟ್ಟಿರದಕ್ಕಿಂತ ಮೊದಲೇ ಆರಂಭವಾಗಿದ್ದ ಆ ವಾಚನಾಲಯದಲ್ಲಿ ಆ ವೇಳೆಗೇ ಸಾವಿರಾರು ಪುಸ್ತಕಗಳಿದ್ದವು. ಸರಕಾರದಿಂದ ದೊರೆತ ಪುಸ್ತಕಗಳಲ್ಲ ಅವು; ದೇಣ ಗೆ ಕೊಟ್ಟದ್ದು, ಊರವರೇ ಸೇರಿಸಿದ ಹಣದಲ್ಲಿ ಕೊಂಡು ತಂದದ್ದು. ಊರವರೇ ಒಬ್ಬರು ಅದರ ನಿರ್ವಹಣೆ ಮಾಡುತ್ತಿದ್ದರು. ಮಹಾತ್ಮಾ ಗಾಂಧಿ ಅವರ ಬಹುತೇಕ ಎಲ್ಲ ದಪ್ಪ ದಪ್ಪನೆಯ ಗ್ರಂಥಗಳು, ಜವಹರಲಾಲ್ ನೆಹರೂ ಅವರ ಗ್ರಂಥಗಳ ಹಿಂದೀ ಮತ್ತು ಅದರ ಕನ್ನಡ ಅನುವಾದದ ಗ್ರಂಥಗಳೂ ಅಲ್ಲಿದ್ದವು. ಚಿಕ್ಕವನಾದ ನನಗೆ ಅವನ್ನು ನೋಡಲೂ ಭಯವೆನ್ನಿಸುತ್ತಿತ್ತು. ಅದರ ಜೊತೆಗೆ ಅನಕೃ, ತರಾಸು, ಕಟ್ಟೀಮನಿ, ಕುವೆಂಪು, ಕಾರಂತ, ಬೀಚಿ, ನಾಡಿಗೇರ ಕೃಷ್ಣರಾಯ,ಎಂ.ಕೆ.ಇಂದಿರಾ, ವ್ಯಾಸರಾಯ ಬಲ್ಲಾಳ, ಚಡಗ.. ಆ ಕಾಲದಲ್ಲಿ ಬರೆಯುತ್ತಿದ್ದ ಮುಖ್ಯ ಸಾಹಿತಿಗಳ ಪುಸ್ತಕಗಳಿದ್ದವು. ವಿಶೇಷ ಪ್ರಾಮುಖ್ಯತೆ ಪತ್ತೇದಾರಿ ಕಾದಂಬರಿಗಳಿಗೆ, ಮಾ.ಬಿ.ಶೇಷಗಿರಿರಾವ್‍ರಿಂದ ಟಿ.ಕೆ.ರಾಮರಾವ್ ಮುಂತಾದವರ ಎಲ್ಲ ಕಾದಂಬರಿಗಳಿದ್ದವೇನೋ? ನಮಗೆ ಅವೆಲ್ಲ ನಿಷಿದ್ಧ; ಅವುಗಳತ್ತ ತಲೆಹಾಕಲೂ ಬಿಡುತ್ತಿರಲಿಲ್ಲ. ನಮಗೆ ರಾಜರತ್ನಂ, ಮೇವುಂಡಿ ಮಲ್ಲಾರಿಯಂಥವರೇ ಗತಿ.
ವಾಚನಾಲಯದಲ್ಲಿದ್ದ ಆ ಪುಸ್ತಕಗಳನ್ನೆಲ್ಲ ಯಾವಾಗ ಓದಿಯೇನು? ಎನ್ನುವ ತಹತಹವೊಂದು ಆಗಿನಿಂದಲೇ ಕ್ಷೀಣವಾಗಿ ಹುಟ್ಟಿಕೊಂಡಿತ್ತು. ಅಪ್ಪ ತಂದು ಓದುತ್ತಿದ್ದ ಪುಸ್ತಕಗಳನ್ನ ಕದ್ದುಮುಚ್ಚಿ ಗಮನಿಸುತ್ತಿದ್ದೆ. ನಾನು ಪಾಠ ಓದದೇ ಈ ಪುಸ್ತಕಗಳನ್ನು ಓದುತ್ತೇನೆಂದು ಅಕ್ಕಂದಿರು ಗದರಿಸುತ್ತಿದ್ದರು. ನಂತರದಲ್ಲಿ ಹೆಚ್ಚಿನ ಓದಿಗೆಂದು ಇಬ್ಬರೂ ಅಕ್ಕಂದಿರು ಸಂಬಂಧಿಕರ ಮನೆಯಲ್ಲಿ ಉಳಿದಾಗ ನನಗೆ ನಿರಾಳವಾಗಿತ್ತು. ಮೂರನೆ ಅಕ್ಕನನ್ನು ಸಂಭಾಳಿಸುವದು ನನಗೆ ಗೊತ್ತಿತ್ತು.
ಅಂಥ ಸಂದರ್ಭದಲ್ಲೇ ಅಪ್ಪ ಓದಲೆಂದು ತಂದ ‘ಕುಡಿಯರ ಕೂಸು’ ಎನ್ನುವ ಶಿವರಾಮ ಕಾರಂತರ ಕಾದಂಬರಿಯನ್ನು ಓದಿದ್ದು. ಅದು ಓದಿಸಿಕೊಂಡು ಹೋದ ಕಾರಣದಿಂದ ಇಷ್ಟವಾಯಿತು. ಉಳಿದವರ ಬರಹದಲ್ಲಿರದ ಏನೋ ಇದರಲ್ಲಿದೆÉ ಎನ್ನುವದಷ್ಟೇ ನನ್ನ ಎಳಸುಬುದ್ದಿಗೆ ಅನ್ನಿಸಿದ್ದು. ಬುದ್ದಿ ಬಲಿಯದ ಆ ವಯಸ್ಸಿನಲ್ಲೇ ಕಾರಂತರು ನನ್ನ ಆಕರ್ಷಿಸಿಬಿಟ್ಟಿದ್ದರು. ವಯಸ್ಕನಾಗುತ್ತ ಬಂದಂತೇ ಅವರನ್ನು ಓದಿಕೊಳ್ಳುತ್ತ ಬಂದಂತೆ ಆ ಆಕರ್ಷಣೆ ಮತ್ತಷ್ಟು ಪ್ರಖರವಾಗುತ್ತ ಹೋಯಿತು. ಮುಖ್ಯವಾಗಿ ಪರಿಸರ, ವ್ಯಕ್ತಿಗಳು, ಘಟನೆಗಳು ಸೇರಿದಂತೆ ಇಡೀ ಕಥಾಹಂದರವೇ ನನ್ನದ್ದು ಎನ್ನಿಸಿದ್ದು ಕಾರಣವಾಗಿರಬಹುದು.
ಬಡಗುತಿಟ್ಟಿನ ಯಕ್ಷಗಾನದ ಪ್ರಸಿದ್ಧ ಸ್ತ್ರೀ ವೇಷಧಾರಿ ಭಾಸ್ಕರ ಜೋಶಿ ನಮ್ಮೂರ ಪಕ್ಕವೇ ಇರುವ ಶಿರಳಗಿಯವರು. ನಮ್ಮ ಹಾಗೂ ಅವರ ಕುಟುಂಬದ ನಡುವೆ ಆತ್ಮೀಯತೆ ಇತ್ತು. ಕಷ್ಟ, ಬಡತನ, ಸಂಕಟ ಮುಖ್ಯವಾಗಿ ಸ್ವಜಾತಿಯವರ ತಾತ್ಸಾರ ಮುಂತಾದ ದಾರುಣತೆಯಲ್ಲಿ ಎರಡೂ ಕುಟುಂಬಗಳು ನಲುಗಿದ್ದು ಒಂದೇ ತೆರನಾಗಿದ್ದಕ್ಕೂ ಇರಬಹುದು. ನನ್ನ ಅಕ್ಕಂದಿರು ಮತ್ತು ಭಾಸ್ಕರ ಜೋಶಿ ತಂಗಿಯರು ವಿಶ್ವಾಸದ ಸ್ನೇಹಿತೆಯರೂ ಆಗಿದ್ದರು. ಕೆರೆಮನೆ ಶಂಭು ಹೆಗಡೆಯವರ ಮೇಳದಲ್ಲಿದ್ದ ಭಾಸ್ಕರ ಜೋಶಿಯವರನ್ನ ಕಾರಂತರು ತಮ್ಮ ಯಕ್ಷರಂಗಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಉಡುಪಿಗೆ ತರಬೇತಿಗೆ ಹೋಗಿರುತ್ತಿದ್ದ ಭಾಸ್ಕರ ಜೋಶಿ ಬಂದಾಗೆಲ್ಲ ಅಲ್ಲಿನ ಅನುಭವಗಳನ್ನ, ಮುಖ್ಯವಾಗಿ ಕಾರಂತರ ಕುರಿತು ಹೇಳುತ್ತಿದ್ದ. ನಂತರ ಯಕ್ಷರಂಗದ ಕಾರ್ಯಕ್ರಮಗಳಿಗೆ ವಿದೇಶಗಳಿಗೆ ಹೋಗಿಬಂದಾಗಲೂ ಅಲ್ಲಿನದನ್ನೆಲ್ಲ ವಿವರಿಸುತ್ತಿದ್ದ. ಆವರೆಗೆ ಕೇವಲ ಅನುಭೂತಿಯಾಗಿ ಮಾತ್ರ ನನ್ನೊಳಗಿದ್ದ ಶಿವರಾಮ ಕಾರಂತರು ನನಗೆ ವ್ಯಕ್ತಿಯಾಗಿ ಗೋಚರಿಸತೊಡಗಿದರು. ತರಂಗದಲ್ಲಿನ ಅವರ ಉತ್ತರಗಳು, ಲೇಖನಗಳು, ಅವರ ಹೇಳಿಕೆಗಳು ಅವರ ಬಗ್ಗೆ ವಿಸ್ಮಯ ಹುಟ್ಟಿಸುತ್ತಿತ್ತು.
ಕಾರಂತರ ಶಿಸ್ತು, ಪ್ರಾಮಾಣ ಕತೆ, ಸಮಯಪಾಲನೆ, ಅನ್ನಿಸಿದ್ದನ್ನ ವ್ಯಕ್ತಗೊಳಿಸುವ ಧೃಡತೆ, sಸುಲಭಕ್ಕೆ ರಾಜಿಯಾಗದ ಮನೋಭಾವಗಳ ಬಗ್ಗೆ ಜೋಶಿ ಹೇಳುತ್ತಿದ್ದರಲ್ಲಿ ಗಟ್ಟಿಯಾಗಿ ಮನಸ್ಸಿನಲ್ಲಿ ಉಳಿದಿದ್ದು ಅವರ ಉಗ್ರ ಸಿಟ್ಟಿನ ಬಗ್ಗೆ ಹೇಳಿದ್ದು. ಕಾರಂತರ ಬಗ್ಗೆ ಕೇಳಿದ, ಓದಿದ ಎಲ್ಲದರಿಂದ ಅವರೊಬ್ಬ ವಿಲಕ್ಷಣ ಹಾಗೂ ಅಪರೂಪದ ಮನುಷ್ಯನಾಗಿ ಅನಿಸುತ್ತಿದ್ದರು. ಓರ್ವ ಕೋಪಿಷ್ಠ, ನಿಷ್ಠುರ ನಿಲುವಿನ ವ್ಯಕ್ತಿಯಾಗಿ ಮನಸ್ಸಿನಲ್ಲಿದ್ದರು.
ಅವರ ಕುರಿತು ಆ ನಿಲುವಿದ್ದರೂ ಎಂದಾದರೂ ಕಾರಂತರನ್ನ ನೋಡಬೇಕು ಎನ್ನುವ ಪ್ರಭಲ ವಾಂಚೆ ನನ್ನಲ್ಲಿತ್ತು. ಅದು ಫಲಿಸಿದ್ದು ಹೆಗ್ಗೋಡಿನಲ್ಲಿ. ಕೆ.ವಿ.ಸುಬ್ಬಣ್ಣ ಆಗಷ್ಟೇ ಪರಿಚಯವಾಗಿ, ನನ್ನ ಕುರಿತು ಆತ್ಮೀಯತೆ ಇಟ್ಟುಕೊಂಡಿದ್ದರು. ಹದಿನೈದು, ಇಪ್ಪತ್ತು ದಿನಕ್ಕೆ ಹೆಗ್ಗೋಡಿಗೆ ಹೋಗಿಬಂದರೆ ನನಗೂ ಸಮಾಧಾನ. ಹೋದಾಗೆಲ್ಲ ಸುಬ್ಬಣ್ಣ ನನ್ನನ್ನ ತಮ್ಮ ಮನೆಗೆ ಊಟಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಒಮ್ಮೆ ಅವರಿಂದ ಪತ್ರ ಬಂತು; ‘ಶಿವರಾಮ ಕಾರಂತರು ಇಂಥ ದಿನ ಹೆಗ್ಗೋಡಿಗೆ ಬರ್ತಾರೆ, ಬನ್ನಿ’ ಎಂದು. ಆ ದಿನ ಹೋದೆ. ಕಾರಂತರು ಅವರದೇ ಹೆಸರಿನ ಹೆಗ್ಗೋಡಿನ ರಂಗಮಂದಿರದ ಇದಿರು ನಿಂತಿದ್ದರು. ಮೈಸೂರು ವಿಶ್ವ ಕನ್ನಡ ಸಮ್ಮೇಳನದಲ್ಲಿ ತೀರಾ ಹತ್ತಿರದ ಎದುರಿನ ಸಾಲಿನಲ್ಲಿ ಕೂತು ಅವರ ವಿಶ್ವ ವಿಖ್ಯಾತ ಮಸಾಲೆ ದೋಸೆ ಭಾಷಣವನ್ನ ಕೇಳಿದ್ದರೂ ಮೊಟ್ಟ ಮೊದಲ ಬಾರಿಗೆ ಇಷ್ಟು ಹತ್ತಿರದಿಂದ ಪ್ರತ್ಯಕ್ಷವಾಗಿ ಅವರನ್ನ ನೋಡುತ್ತಿದ್ದುದು. ಅವರ ವ್ಯಕ್ತಿತ್ವ, ಮುಖಭಾವನೆ, ಮಾತಿನ ಕ್ರಮ ಅಂಜಿಕೆ ಹುಟ್ಟಿಸಿತ್ತು; ಆದರೂ ಅವರತ್ತ ಒಂಥರಾ ಸೆಳೆತ.ಸುಬ್ಬಣ್ಣ ಪರಿಚಯಿಸಿದಾಗ ಒಮ್ಮೆ ಅಮೂಲಾಗ್ರವಾಗಿ ನೋಡಿ ‘ ಶಿರಸಿ ಸಿದ್ದಾಪುರದವರೋ’ ಎಂದರು. ಹೌದು ಎನ್ನಲು ಭಯಪಟ್ಟು ತಲೆಯಾಡಿಸಿದ್ದೆ.
ಮಧ್ಯಾಹ್ನ ಊಟಕ್ಕೆ ಸುಬ್ಬಣ್ಣನ ಮನೆಗೆ ಹೊರಟರು; ಸುಬ್ಬಣ್ಣ ಎಂದಿನಂತೆ ನನ್ನನ್ನೂ ಕರೆದರು. ನನಗೆ ಭಯ, ಕಾರಂತರೊಟ್ಟಿಗೆ ನಾನು ಹೋಗುವದೇ? ಮತ್ತೆರಡು ಬಾರಿ ಕರೆದಾಗ ಗತ್ಯಂತರವಿಲ್ಲದೇ ಒದ್ದೆ ಬೆಕ್ಕಿನಂತೆ ಕಾರಂತರ ಅಚ್ಚ ಬಿಳಿಯ ಅಂಬಾಸಡರ್ ಕಾರಿನಲ್ಲಿ ಮುದುಡಿ ಕೂತೆ.
ಊಟ ಮುಗಿಸಿದ ಕಾರಂತರು ಸುಬ್ಬಣ್ಣನ ಮನೆಯ ಹೊರಗಿನ ವರಾಂಡದಲ್ಲಿ ಕೂತಿದ್ದರು. ಅಷ್ಟರಲ್ಲಿ ಮೈ ಚಳಿ ತುಸು ಕಡಿಮೆಯಾಗಿ ಕಾರಂತರನ್ನ ಮಾತನಾಡಿಸುವ ಉಮೇದು ಬರತೊಡಗಿತ್ತು. ಆದರೂ ಅಳುಕು; ನನ್ನಂಥ ಹದಿನೆಂಟು,ಇಪ್ಪತ್ತರ ಪೋರನ ಜೊತೆ ಮಾತನಾಡಿಯಾರೇ? ಸಿಟ್ಟಿನಿಂದ ಹೂಂಕರಿಸಿದರೆ? ಆಗಲೂ, ಈಗಲೂ ನನಗೊಂದು ಹುಂಬತನ. ಎಷ್ಟೇ ಪ್ರಮುಖರಿರಲಿ, ಅವರೊಡನೆ ಮಾತನಾಡಬೇಕು ಎನ್ನಿಸಿದರೆ ಯಾವ ಹಿಂಜರಿಕೆಯೂ ಇಲ್ಲದೇ ಮಾತನಾಡುತ್ತೇನೆ. ಅವತ್ತೂ ಹಾಗೆಯೇ ಭಂಡಧೈರ್ಯ ಮಾಡಿಬಿಟ್ಟೆ.
ಅವರೆದುರು ಸುಳಿದ ನನ್ನನ್ನು ಅವರಾಗೇ ಕರೆದು ‘ಕೂತುಕೊಳ್ಳಿ’ ಎಂದರು.
‘ನಿಮ್ಮೂರು ಸಿದ್ದಾಪುರವೋ?’ ಎಂದರು.
‘ಅಲ್ಲ, ಅಲ್ಲೇ ಸಮೀಪದ ಕೊಳಗಿ’ಎಂದೆ.
‘ನಮ್ಮ ಜೋಶಿ ಗೊತ್ತುಂಟಾ?’ ಎಂದರು.
‘ಹೌದು, ನಮ್ಮ ಹತ್ತಿರದವರು, ಅವರ ಊರು ಪಕ್ಕದ ಶಿರಳಗಿ’ ಎಂದೆ.
‘ಓಹೋ’ ಎಂದವರು ಘಳಿಗೆ ತಡೆದು ‘ ನಾನು ಶಿರಳಗಿಗೆ ಹಿಂದೊಮ್ಮೆ ಹೋಗಿದ್ದೆ. ಅಲ್ಲೊಂದು ದೇವಾಲಯ ಉಂಟಲ್ಲ, ಅಲ್ಲಿಗೆ’ ಎಂದರು. ಅಲ್ಲಿರುವ ಹತ್ತಾರು ದೇವಾಲಯಗಳಲ್ಲಿ ಯಾವುದೆಂದು ನನಗೆ ಗೋಜಲಾಯಿತು.
ಮತ್ತೆ ಕಾರಂತರು ಅಪ್ಪಟ ನಾಸ್ತಿಕರು: ಅವರ್ಯಾಕೆ ದೇವಸ್ಥಾನಕ್ಕೆ ಹೋಗಿದ್ದರು? ಎನ್ನುವ ತಲೆಬಿಸಿ. ನನ್ನ ಗೊಂದಲ ಅರ್ಥವಾಗಿರಬೇಕು. ‘ ಅದರ ಹೆಸರು ಮರೆತಿದೆ. ನಾನೊಂದು ಪುಸ್ತಕ ಬರೆಯುವ ಕಾಲದಲ್ಲಿ ನಿಮ್ಮ ಕಡೆ ಹಲವು ದೇವಾಲಯಗಳಿಗೆ ಹೋಗಿದ್ದೆ. ಆ ದೇವಾಲಯದಲ್ಲಿ ಗರುಡನ ವಿಗ್ರಹ ಇದ್ದ ನೆನಪು’ ಎಂದರು.( ನಂತರ ಅವರ ಹುಚ್ಚು ಮನಸ್ಸಿನ ಹತ್ತು ಮುಖಗಳು ಓದಿದಾಗ ನಮ್ಮ ಜಿಲ್ಲೆಯಲ್ಲಿನ ಅವರ ಸಂಚಾರದ ವಿವರ ತಿಳಿಯಿತು).
‘ಓಹ್, ನಾರಾಯಣ ದೇವಸ್ಥಾನ ‘ ಅಂದೆ.
‘ಹಾಂ, ಅದೇ, ಅಲ್ಲೇ ಹಾಲುಹೊಂಡ ಅನ್ನುವ ಜಾಗಕ್ಕೂ ಹೋಗಿದ್ದೆ’ ಎಂದರು. ನನಗೆ ಆ ಜಾಗ ಹೊಳೆಯಲಿಲ್ಲ( ಈಗಲೂ ಅದೆಲ್ಲಿದೆ ಅಂತ ಪತ್ತೆಯಾಗಿಲ್ಲ).
ನಂತರ ನಮ್ಮ ಮಾತು ನನ್ನ ಕುಟುಂಬ, ಕೃಷಿಯ ಬಗ್ಗೆ ತಿರುಗಿತು. ಅಡಕೆ ಬೇಸಾಯದ ಕುರಿತಾದ ಅವರ ಅರಿವು ಅಪ್ಪಟ ಅಡಕೆ ಕೃಷಿಕನಿಗಿಂತ ಏನೂ ಕಡಿಮೆಯಿರಲಿಲ್ಲ.
ಕಾರಂತರು ಸಾಂಪ್ರದಾಯಿಕ ಅಡಕೆ ಕೃಷಿಯ ಬಗ್ಗೆ ತಳಮಟ್ಟದಿಂದ ಅರಿತುಕೊಂಡಿದ್ದರು. ಅಡಕೆ ಮರಗಳಿಗೆ ಗೊಬ್ಬರ ಹಾಕಲು ಮೊದಲೆಲ್ಲ ಮೂರು ವಿಧಾನಗಳಿದ್ದವು. ಮೊದಲ ವರ್ಷ ಕೊಟ್ಟಿಗೆ ಗೊಬ್ಬರ, ಅದಕ್ಕೆ ಮರದ ಟೊಂಗೆ ಕಡಿದು ತಿಂಗಳುಗಟ್ಟಲೆ ಬಿಸಿಲಲ್ಲಿ ಒಣಗಿದ ಸೊಪ್ಪಿನ ಮುಚ್ಚಿಗೆ, ಎರಡನೇ ವರ್ಷ ಅರೆಬರೆಯಾಗಿ ಗೊಬ್ಬರವಾದ ಹುಲ್ಲಿನ ಸದೆ ಗೊಬ್ಬರ, ಮೂರನೇ ವರ್ಷ ಏನೂ ಇಲ್ಲದೇ ಖಾಲಿ. ಅದನ್ನೆಲ್ಲ ಕಾರಂತರು ವಿವರಿಸುತ್ತ ‘ಈಗಲೂ ಅದೇ ನಡೀತಿದೆಯಾ?’ ಅಂದಿದ್ದರು. ನಾನು ಸಾಂಪ್ರದಾಯಿಕ ಕೃಷಿಯನ್ನು ತಳ್ಳಿಹಾಕಿ ಹೊಸ ಪದ್ಧತಿಯ ಅಗತ್ಯದ ಬಗ್ಗೆ ಹೇಳಿದ್ದೆ. ಅದಕ್ಕೆ ಅವರು ಮೊದಲಿನದೇ ಸರಿಯಾದ ಪದ್ಧತಿ ಎಂದಿದ್ದರು.( ಕೃಷಿಯಲ್ಲಿ ಆದ ಆಧುನಿಕ ಸುಧಾರಣೆಗಳನ್ನ ಸಾಕಷ್ಟು ಗಮನಿಸಿರುವ ನನಗೆ ಈಗ ಕಾರಂತರ ಮಾತೇ ಸರಿ ಅನ್ನಿಸಿದೆ) ನಾನು ಅದನ್ನು ವಿರೋಧಿಸಿದೆ; ಇಂಥ ಮಾತಿನ ನಡುವೆಯೇ ಅಕಸ್ಮಾತಾಗಿ ಕಾರಂತರು’ ನೀನೊಬ್ಬ ಅಧಿಕಪ್ರಸಂಗಿ’ ಎಂದು ಗುಡುಗಿದರು. ನಂತರ ಮೊದಲಿನಂತೆ ಸ್ನೇಹಶೀಲವಾಗೇ ಮಾತು ಮುಂದುವರಿಸಿದರು.
ನಾನು ಪೆಚ್ಚಾಗಿದ್ದೆ. ಗೊತ್ತಿದ್ದೂ ಕಾರಂತರ ಜೊತೆ ವಾಗ್ವಾದ ನಡೆಸುವ ದುಸ್ಸಾಹಸಕ್ಕೆ ಕೈ ಹಾಕಿದ್ದೆ.( ನಂತರದಲ್ಲಿ ನನಗೆ ಅಧಿಕಪ್ರಸಂಗಿ ಎಂದದ್ದನ್ನ ಪತ್ರದಲ್ಲಿ ಜ್ಞಾಪಿಸಿದಾಗ, ನನಗೆ ಮರೆತುಹೋಗಿದೆ. ನೀವೂ ಮನಸ್ಸಲ್ಲಿಟ್ಟುಕೊಳ್ಳಬೇಡಿ ಎಂದು ಮರುತ್ತರ ಬರೆದಿದ್ದರು). ಸುಬ್ಬಣ್ಣನ ಮನೆಯಿಂದ ಹೊರಡುವಾಗ ಹಾಗೇ ಎದ್ದು ಸ್ವಲ್ಪ ದೂರದ ಬೇಲಿಸಾಲಿನ ಮರೆಗೆ ಹೋಗಿ, ಆ ಕಾಲದ ಎಲ್ಲ ಹಿರಿಯರಂತೆ ಕುಕ್ಕರಗಾಲಲ್ಲಿ ಕೂತು ಮೂತ್ರವಿಸರ್ಜನೆ ಮಾಡಿ ಬಂದಾಗ ಇವರು ಕಾರಂತರೇ? ಎನ್ನುವ ಅನುಮಾನ ಕಾಡಿತ್ತು. ತಾನೊಬ್ಬ ಸೆಲೆಬ್ರಿಟಿ ಎನ್ನುವದನ್ನು ಮರೆತು, ಸಹಜವಾಗಿ ನಡೆದುಕೊಂಡ ರೀತಿ ಖುಷಿಕೊಟ್ಟಿತ್ತು.
ಆ ನಂತರ ಅವರೊಡನೆ ನಡೆದದ್ದು ಪತ್ರ ವ್ಯವಹಾರ. ನಾನು ಬರೆದ ಪ್ರತಿ ಪತ್ರಕ್ಕೂ ಉತ್ತರಿಸದೇ ಇರುತ್ತಿರಲಿಲ್ಲ. ಕೆಲವೊಮ್ಮೆ ತಡವಾದರೂ. ಅವರಿರಬಹುದು, ನಾನು ಪತ್ರದ ಮೂಲಕ ಸಂವಹನ ನಡೆಸುತ್ತಿದ್ದ ಅನಂತಮೂರ್ತಿ, ಲಂಕೇಶ್, ತೇಜಸ್ವಿ, ಸುಬ್ಬಣ್ಣ ಎಲ್ಲರೂ ಹಾಗೆಯೇ; ತಪ್ಪದೇ ಉತ್ತರಿಸುತ್ತಿದ್ದರು. ಇವತ್ತಿನ ಸಾಹಿತ್ಯ ವಲಯದ ಬಹುತೇಕ ಸೆಲೆಬ್ರಿಟಿಗಳ ವರ್ತನೆಗೂ ಅವರದ್ದಕ್ಕೂ ಅಜಗಜಾಂತರ ವ್ಯತ್ಯಾಸ.( ನನಗೆ ಅಂಥ ದೊಡ್ಡವರ ಜೊತೆ ಪತ್ರ ವ್ಯವಹಾರವಿತ್ತು ಎನ್ನುವದು ಖಂಡಿತ ಒಣ ಹಮ್ಮಾಗಲೀ, ಪ್ರತಿಷ್ಠೆಯಾಗಲಿ ಅಲ್ಲ. ಆ ಕಾಲದ ನನ್ನ ತೊಳಲಾಟವನ್ನು ಆ ಪತ್ರಗಳೇ ಕಡಿಮೆ ಮಾಡಿ, ಜೀವನ್ಮುಖಿಯಾಗಿಸಿದ್ದು).
ನನ್ನ ಬಾಲ್ಯಕಾಲದ ಗೆಳೆಯ, ಈಗಿನ ಬಡಗು ಯಕ್ಷಗಾನದ ಪ್ರಸಿದ್ಧ ಭಾಗವತ ಕೇಶವ ಆ ಮರುವರ್ಷ ಕೋಟದಲ್ಲಿ ಉಪ್ಪೂರು ಭಾಗವತರು ಮತ್ತು ಸುಬ್ರಹ್ಮಣ್ಯ ಧಾರೇಶ್ವರರ ಕಲಿಕೆಯಲ್ಲಿ ನಡೆಯುತ್ತಿದ್ದ ಮಳೆಗಾಲದ ಭಾಗವತಿಕೆ ಶಿಬಿರಕ್ಕೆ ಸೇರಿಕೊಂಡ. ಮೇಳದ ತಿರುಗಾಟವಿರದ ಮಳೆಗಾಲದ ಮೂರು ತಿಂಗಳಿನ ಶಿಬಿರ ಅದು. ಶಿಬಿರದಿಂದ ಗಣೇಶ ಚತುರ್ಥಿಗೆ ಊರಿಗೆ ಬಂದ ಕೇಶವ ಕೋಟಕ್ಕೆ ಬಾ ನನಗೆ ದುಂಬಾಲು ಬಿದ್ದ. ಅವನ ಒತ್ತಾಯವಲ್ಲದೇ ಮತ್ತೊಂದು ಆಸೆ ನನಗಿತ್ತು. ಊರಲ್ಲಿರುವ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕಾರಂತರು ಕೋಟದವರೆಗೂ ವಾಯುವಿಹಾರಕ್ಕೆ ಬರುತ್ತಾರೆಂತಲೂ, ಸಂಚಾರ ನಿಯಮದ ಪ್ರಕಾರವೇ ಬರುವಾಗ ಹೋಗುವಾಗ ಎಡಭಾಗದಲ್ಲೇ ನಡೆಯುತ್ತಾರೆಂತಲೂ, ಅವರು ಬರುವಾಗ ಊರವರು ಗೌರವದಿಂದ ಅಲ್ಲಲ್ಲೇ ಮರೆಯಾಗುತ್ತಾರೆಂದು ಹೇಳಿದ್ದ. ನನ್ನಲ್ಲಿದ್ದ ಕಾರಂತರನ್ನ ಕಾಣುವ ಕನಸು ಕುಡಿಯೊಡೆಯಲು ಅಷ್ಟು ಸಾಕಲ್ಲವೇ?
ಕೋಟಕ್ಕೆ ಹೋದಾಗ ಮತ್ತೊಂದು ಅಚ್ಚರಿ ಕಾದಿತ್ತು. ಶಿಬಿರ ನಡೆಯುವ ದೇವಾಲಯದ ಪಕ್ಕವೇ ಶಿವರಾಮ ಕಾರಂತರ ಮೂಲಮನೆ. ಅದರ ಪಕ್ಕವೇ ಒಂದು ಕೆರೆಯಂಥ ಕಲ್ಯಾಣ . ಕಾರಂತರ ಅಣ್ಣನೊಬ್ಬರಿದ್ದ ಆ ಮನೆಯಲ್ಲಿ ಕನಿಷ್ಠ 40-50 ಬೆಕ್ಕುಗಳು.( ನಂತರ ತಿಳಿಯಿತು. ಕಾರಂತರ ಕುಟುಂಬದ ಸಹೋದರರಿಗೆ ಒಂದೊಂದು ಸದಭಿರುಚಿಯ ಭಿನ್ನ ಹವ್ಯಾಸ, ಆ ಅಣ್ಣನಿಗೆ ಬೆಕ್ಕು ಸಾಕುವ ಹವ್ಯಾಸ!). ಸಾಲದ್ದಕ್ಕೆ ಕೇಶವ ಉಳಿದುಕೊಂಡ ಕೊಠಡಿಯು ಕಾರಂತರ ಕುಟುಂಬದ ಪುರೋಹಿತರದ್ದು. ಪ್ರಸಿದ್ಧ ಚಂಡೆವಾದಕ ಶಿವಾನಂದ ಕೋಟ ಎನ್ನುವವರ ತಂದೆ ಆ ಪುರೋಹಿತರು. ಆಗಲೇ ಅವರಿಗೆ 80 ವರ್ಷ ದಾಟಿ ಶಾರೀರಿಕವಾಗಿ ಜೀರ್ಣವಾಗುತ್ತಿದ್ದರು. ಅವರ ಮನೆಯ ಕೊಠಡಿಯಲ್ಲಿ ಮೆಚ್ಚಿನ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರೂ ಇದ್ದರು.
ನನಗೆ ಮತ್ತೇನು ಕೆಲಸ: ಸಮುದ್ರದ ಕಡೆ ಹೋಗುವದು ಬಿಟ್ಟರೆ ಪುರೋಹಿತರು ಮತ್ತು ಅವರ ಪತ್ನಿಯಿಂದ ಕಾರಂತರ ಬಗ್ಗೆ ತಿಳಿದುಕೊಳ್ಳುವದು. ಆ ವೃದ್ದರು ತಮ್ಮ ಅಸ್ಪಷ್ಟವಾದ ಮಾತಿನಲ್ಲಿ ಹೇಳುತ್ತಿದ್ದರು. ‘ಮಗಾ, ಕಾರಂತರು ಒಳ್ಳೆ ಜನ. ಸಿಟ್ಟು ಜಾಸ್ತಿ. ನಮ್ಮಮನೆಗೆ ಎಲ್ಲಾದರೂ ಬರ್ತಾರೆ. ಊರಲ್ಲಿದ್ರೆ ಅವರ ತಂದೆ, ತಾಯಿ ವಾರ್ಷಿಕದ ದಿನ ಬಂದು ಹೋಗ್ತಾರೆ. ದೇವರಲ್ಲೆಲ್ಲ ನಂಬಿಕೆ ಇಲ್ಲದ ಜನ ಅವರು. ಬಂದಾಗೆಲ್ಲ ನನಗೆ ನಮಿಸಿ, ಬೇರೆಯವರಿಗೆ ಕಾಣದಂತೆ ಸಾಕಷ್ಟು ಹಣವನ್ನ ಹಿಡಿಸಿ ಹೋಗುತ್ತಾರೆ’ ಎಂದಿದ್ದರು.
ಮೂರು ದಿನದ ನಂತರ ಒಂದು ಸಂಜೆ ಕೋಟದ ರಸ್ತೆಯಲ್ಲಿ ಕಾರಂತರ ಸಂಚಾರವನ್ನು ಕಂಡೆ. ಅಲ್ಲಿ ಮಾತನಾಡಿಸುವ ಧೈರ್ಯವಾಗಲಿಲ್ಲ. ಊರಲ್ಲಿದ್ದಾರೆ ಎನ್ನುವದಂತೂ ಖಾತ್ರಿಯಾಯ್ತು.
ಕೇಶವನ ಬಳಿ ಕಾರಂತರ ಮನೆಗೆ ಹೋಗುವಾ ಎಂದೆ. ಒಮ್ಮೇಲೆ ಆತ ಕುಮಟಿಬಿದ್ದ. ‘ನಾನು ಬರೋದಿಲ್ಲ ಮಾರಾಯಾ, ಅವರು ಮೊದಲೇ ಉಗ್ರನರಸಿಂಹ ಅಂತಾರೆ. ಮುಖ,ಮುಸುಡಿ ನೋಡದೇ ಬೈಸಿಕೊಳ್ಳೋದು ಬ್ಯಾಡ’ ಎಂದು ನಿರಾಕರಿಸಿದ. ಅಂತೂ,ಇಂತೂ ಅವನನ್ನ ಒಪ್ಪಿಸಿ ಮಧ್ಯಾಹ್ನ ಇಬ್ಬರೂ ಕೋಟದ ಪಕ್ಕದ ಸಾಲಿಗ್ರಾಮದ ಹೆದ್ದಾರಿ ಪಕ್ಕದಲ್ಲೇ ಇದ್ದ ‘ಸುಹಾಸ’ ವನ್ನು ಹೊಕ್ಕೆವು.
ಬಾಗಿಲು ತಟ್ಟಿದಾಗ ಓರ್ವ ಮಹಿಳೆ ಕದ ತೆರೆದರು. ಅಪ್ಪಟ ಕುಂದಾಪುರದವರೆಂದು ಕೂಡಲೇ ಹೇಳಬಹುದಾದ ಆ ಮಹಿಳೆ ‘ಏನು?’ ಎಂದರು.
‘ಕಾರಂತರನ್ನ ನೋಡಬೇಕಿತ್ತು’ ಎಂದೆ. ‘ಸ್ವಲ್ಪ ತಡೀನಿ’ ಎಂದ ಆಕೆ ಎದುರಿನ ವರಾಂಡದಲ್ಲಿನ ಏಣ ಯನ್ನು ಹತ್ತಿ ಮಹಡಿಗೆ ಹೋದರು. ಹಾಗೇ ಇಳಿದುಬಂದು ‘ ಕೂರಿ ಆಯ್ತಾ, ಕೆಲಸದ ಮೇಲಿದ್ರು, ಬರ್ತಾರೆ’ ಎಂದು ನಮ್ಮಿಬ್ಬರನ್ನ ಒಳಕ್ಕೆ ಕರೆದರು.
ಅಲ್ಲಿ ಕೂತ ನಮಗೆ ಅಸ್ಪಷ್ಟವಾಗಿ ಮಹಡಿಯಿಂದ ಯಾರೋ ಮಾತನಾಡುವದು ಕೇಳುತ್ತಿತ್ತು. ಸ್ವಲ್ಪ ಹೊತ್ತಿನ ಬಳಿಕ ಅದು ಒಬ್ಬರದೇ ಧ್ವನಿ ಎನ್ನುವದು ತಿಳಿಯಿತು. ಕೇಶವ ತನಗಾಗುತ್ತಿದ್ದ ಗಾಭರಿಯಲ್ಲೂ ‘ಕಾರಂತರು ನಾಟಕದ ಮಾತು ಗಟ್ಟು( ಬಾಯ್ಹಾರ್ಟ) ಮಾಡ್ತಿದ್ರೇನೋ? ಎನ್ನುವ ಶಂಕೆ ವ್ಯಕ್ತಪಡಿಸಿದ. ಒಮ್ಮೊಮ್ಮೆ ಆ ಧ್ವನಿ ಎತ್ತರಿಸುತ್ತಿತ್ತು. ಹಾಗೇ ಕುಗ್ಗುತ್ತಿತ್ತು. ರೇಡಿಯೋದಲ್ಲಿ ಕೆಲವೊಂದು ಸ್ಟೇಶನ್‍ಗಳ ಪ್ರಸಾರದಲ್ಲಿ ಆದಂತೆ.
ಹೊರಗೆ ಕರಾವಳಿಯ ಮಳೆ ಸುರಿಯುತ್ತಿತ್ತು; ಅಂದರೆ ದಪ್ಪ ಹನಿಗಳ ರಭಸದ ಮಳೆ. ಅದು ಮಲೆನಾಡಿನ ಮಳೆಯಂಥಲ್ಲ. ಮಳೆ ಇದ್ದರೂ ಸೆಕೆ. ನಮಗೆ ಮತ್ತೂ ಹೆಚ್ಚು ಸೆಕೆ. ಕಾರಂತರನ್ನು ಕಾಣಲು ಸಿಂಹದ ಗುಹೆ ಹೊಕ್ಕಿದ್ದೇವೆ ಎನ್ನುವ ಅನಿಸಿಕೆ. ಏನಾಗುವದೋ ಎನ್ನುವ ಆತಂಕ. ಕೇಶವ ನಿಜಕ್ಕೂ ಹೆದರಿಕೊಂಡಿದ್ದು ಅವನ ಮುಖದಲ್ಲೇ ಕಾಣುತ್ತಿತ್ತು.
ಒಮ್ಮೇಲೆ ಮಳೆ ನಿಂತಂತೇ ಮೇಲಿನ ಸಂಭಾಷಣೆಯೂ ನಿಂತಿತು. ಏಣ ಮೆಟ್ಟಿಲಿಂದ ಓರ್ವ ಯುವತಿ ಇಳಿದುಬಂದು ‘ ಈಗ ಬರ್ತಾರೆ’ಎಂದು ಹೊರಟುಹೋದಳು.
ನಾನು ಕೇಳಿದ್ದೆ; ಕಾರಂತರು ಪತ್ರವೊಂದುಳಿದು ಉಳಿದೆಲ್ಲ ಬರಹಗಳನ್ನು ಬೇರೆಯವರಿಂದ ಬರೆಸುತ್ತಾರೆ ಎಂದು. ಪ್ರಾಯಶ: ಈ ಯುವತಿ ಅವರ ಡಿಕ್ಟೇಶನ್ ತೆಗೆದುಕೊಂಡು ಬರೆಯುವಾಕೆ ಎಂದು ಅಂದುಕೊಂಡೆ.
ಕೇಶವ ನಿಧಾನಕ್ಕೆ ಎದ್ದು ಬಾಗಿಲಾಚೆ ಹೋಗಿ ಹೊರಗೆ ನಿಂತ. ಅಷ್ಟರಲ್ಲಿ ಏಣ ಮೆಟ್ಟಿಲಿಂದ ಮತ್ಯಾರೋ ಇಳಿದುಬರುವ ಸದ್ದಾಗಿ ಕಾರಂತರೇ ಇರಬಹುದು ಅನ್ನಿಸಿ ನಾನು ಎದ್ದು ಸ್ವಲ್ಪ ದೂರವೇ ನಿಂತೆ.
ಇವತ್ತಿಗೂ ಆ ದೃಶ್ಯ ಕಣ ್ಣಗೆ ಕಟ್ಟಿದಂತಿದೆ. ಆ ವೃದ್ದಾಪ್ಯದಲ್ಲೂ ಕೊಂಚವೂ ಕುಗ್ಗದ ಶುಭ್ರವಾದ ಬಿಳಿ ಪಂಚೆ,ಜುಬ್ಬಗಳಲ್ಲಿನ ಶರೀರ, ಕೆಂಫಗಿನ ಗಂಭೀರ ಮುಖ, ತಲೆಯ ಹಿಂಭಾಗದಲ್ಲಿ ಅವರ ವ್ಯಕ್ತಿತ್ವಕ್ಕೆ ಶೋಭೆ ಕೊಟ್ಟ ಉದ್ದನೆಯ ವಿರಳ ಕೂದಲು. ವ್ಯಕ್ತಿಯಾದವನಿಗೆ ದಕ್ಕಿದರೆ ಇಂಥ ವ್ಯಕ್ತಿತ್ವ ಧಕ್ಕಬೇಕು ಅನ್ನಿಸಿತು.
ಕಾರಂತರು ಇಳಿದುಬರುತ್ತಿದ್ದಂತೇ ತಟ್ಟನೆ ನಾನು ಮಾಡಿಕೊಂಡ ಅಧಿಕಪ್ರಸಂಗ ನೆನಪಾಯಿತು. ಅವರನ್ನು ಭೇಟಿಯಾಗಲು ಮುಂಚಿತವಾಗಿ ತಿಳಿಸಿರಲಿಲ್ಲ. ಇದಕ್ಕೆ ಅವರಿಂದ ಬೈಯಿಸಿಕೊಳ್ಳುವದು ಗ್ಯಾರಂಟಿ ಅನ್ನಿಸಿಬಿಟ್ಟಿತು. ಇಳಿದುಬಂದ ಕಾರಂತರು ನನ್ನನ್ನ ನೋಡಿ ಏನೂ ಹೇಳದೇ ಸನ್ನೆ ಮಾಡಿ ಕೂರುವಂತೆ ಸೂಚಿಸಿ, ತಾನೂ ಅಲ್ಲಿದ್ದ ಕುರ್ಚಿಯೊಂದರಲ್ಲಿ ಕೂತರು. ನನ್ನ ಪರಿಚಯ ಹೇಳಿದಾಗ ‘ ‘ನೀವು, ಕಳೆದ ವರ್ಷ ಹೆಗ್ಗೋಡಿನಲ್ಲಿ ಕಂಡವರು, ನಿಮ್ಮ ಪತ್ರ ಬರುತ್ತಿರುತ್ತದೆಯಲ್ಲ’ ಎಂದವರೇ ‘ನಿಮಗೇನು ತೃಷೆಗೆ’ ಅಂದರು. ಅಂದರೆ ಮನೆಗೆ ಬಂದವರನ್ನ ಮೊದಲು ಆಸರಿಕೆ ಕೇಳುವ ಕ್ರಮ. ನಾನು ಸುತ್ತಮುತ್ತ ನೋಡುತ್ತಿದ್ದೆ. ಕೇಶವ ಕಾಣುತ್ತಿರಲಿಲ್ಲ. ಎಲ್ಲಿ ಹೋದ ಈತ ಎನ್ನುವ ಆತಂಕ. ನನ್ನ ಗಡಿಬಿಡಿ ನೋಡಿದ ಕಾರಂತರು ಏನು? ಅಂದರು. ಏನಿಲ್ಲ ಅಂದು ಸುಮ್ಮನಾದೆ.( ನಂತರ ಗೊತ್ತಾಯಿತು. ಕೇಶವ ಕಾರಂತರು ಮಹಡಿಯಿಂದ ಇಳಿದುಬರುತ್ತಿದ್ದಂತೆ ನಿಧಾನಕ್ಕೆ ಹಿಂದೆ ಸರಿಯುತ್ತ, ಸುಹಾಸದ ಕಂಪೌಂಡ ದಾಟಿ, ರಸ್ತೆಗೆ ಬಂದು ಕೋಟದತ್ತ ನಾಗಾಲೋಟ ಹೊಡೆದಿದ್ದ).
‘ಕಾಫಿ ಆಗುತ್ತದೆಯೇ’ ಎಂದಾಗ ತಲೆ ಅಲ್ಲಾಡಿಸಿದೆ. ಮೊದಲು ಮಾತನಾಡಿಸಿದ ಮಹಿಳೆ ಕಾಫಿ ತಂದುಕೊಟ್ಟಾಗ ಅದನ್ನ ಗುಟುಕರಿಸುತ್ತ ಮೊದಲೇ ಮನಸ್ಸಿನಲ್ಲಿದ್ದ ಪರಿಸರದ ಕುರಿತಾದ ಕೆಲವು ಮಾಹಿತಿಗಳನ್ನ ಕೇಳಿದೆ. ಎಷ್ಟು ಸಮಾಧಾನದಿಂದ ಉತ್ತರಿಸಿದರೆಂದರೆ ನನಗೇ ಅಚ್ಚರಿಯಾಗುವಷ್ಟು! ಎದ್ದು ಹೋಗಿ ಒಳಗಿನಿಂದ ಒಂದು ಕಂತೆ ಪುಸ್ತಕ, ಜರ್ನಲ್‍ಗಳನ್ನು Àತಂದು ಹರವಿದರು.
‘ಇದೆಲ್ಲ ನೋಡಿ, ಹಣ ಕೊಟ್ಟು ತೆಗೆದುಕೊಳ್ಳುವಂಥದಲ್ಲ. ಹಣ ಕೊಟ್ಟರೂ ಸಿಕ್ಕಿತೆಂಬ ಭರವಸೆಯಿಲ್ಲ. ನಾನು ವಿದೇಶದ ಕೆಲವೊಂದು ಸಂಸ್ಥೆಗಳ ಜೊತೆ ಸಂಪರ್ಕವಿಟ್ಟುಕೊಂಡಿದ್ದೇನಲ್ಲ. ಅವರು ಕೊಟ್ಟದ್ದು’ ಎಂದು ವಿವರಿಸಿದರು. ಅರಣ್ಯದ ಬಗ್ಗೆ, ವನ್ಯಪ್ರಾಣ ಗಳ ಬಗ್ಗೆ, ಮಳೆ,ಹವಾಮಾನ.. ಹೀಗೇ ಪ್ರಕೃತಿ,ಪರಿಸರದ ಸಾಕಷ್ಟು ಅಂಶಗಳ ಕುರಿತಾದ ಜರ್ನಲ್ ಅವಾಗಿದ್ದವು.
ಸುಮಾರು ಒಂದು ತಾಸು ಅವರೊಡನೆ ಕಳೆದಿರಬೇಕು. ನಾವು ಅಲ್ಲಿಗೆ ಬರುವಾಗಲೇ ಸಂಜೆ ನಾಲ್ಕು ಗಂಟೆಯಾಗಿತ್ತು. ಈಗ ಮುಸ್ಸಂಜೆಯಾಗುತ್ತಿತ್ತು. ‘ ನಾನು ಹೊರಡುತ್ತೇನೆ’ ಎಂದು ಸಣ್ಣಗೆ ಹೇಳಿದೆ.
ಆವರೆಗೆ ನಾನು ಎಲ್ಲಿಂದ ಬಂದೆ? ಏಕೆ ಬಂದೆ? ಎಂದು ಕೇಳಿರದ ಕಾರಂತರು ‘ಎಲ್ಲಿಗೆ ಹೋಗುವದು?’ ಎಂದರು. ನಾನು ಆ ಕುರಿತಾದ ಎಲ್ಲ ವಿವರವನ್ನು ಹೇಳಿದೆ. ಸ್ವಲ್ಪ ಸುಮ್ಮನಿದ್ದ ಕಾರಂತರು ‘ ಇವತ್ತು ಇಲ್ಲೇ ಉಳಿಯಿರಿ’ ಎಂದು ಆಜ್ಞೆಯ ಲೇಪವಿದ್ದ ಮಾತನಾಡಿದರು. ಅವರ ಸ್ವರ, ಖಚಿತ ಧ್ವನಿ ಕೇಳಿದ ಯಾರೂ ಅದನ್ನು ಮೀರುವ ಧೈರ್ಯ ಮಾಡಲಾರರೇನೋ? ನಾನು ನಿರುಪಾಯನಾಗಿದ್ದೆ. ಅಲ್ಲೇನೂ ಉಸಿರುಗಟ್ಟಿಸುವ ವಾತಾವರಣವಿರಲಿಲ್ಲ. ನನ್ನಿಂದ ಕಾರಂತರಿಗೆ ತೊಂದರೆಯಾದೀತೇನೋ ಎನ್ನುವದು ನನ್ನ ಆತಂಕವಷ್ಟೇ. ಅಷ್ಟು ಹೇಳಿದ್ದೇ ‘ ನಿಮಗೆ ಇಷ್ಟವಾದದ್ದನ್ನ ಓದುತ್ತಾ ಇರಿ, ಬಂದೆ’ ಎಂದು ಒಳಗೆ ಹೋಗಿ ಒಂದು ಕೊಡೆ ಹಿಡಿದು ವಾಕ್ ಮಾಡಲು ಹೊರಟೇಬಿಟ್ಟರು.
ಇಂಗ್ಲೀಷ್ ಜರ್ನಲ್, ಪುಸ್ತಕಗಳೇ ಹೆಚ್ಚಾಗಿದ್ದ ಅವುಗಳನ್ನ ನನಗೆ ಅರ್ಥವಾದಷ್ಟು ಇಂಗ್ಲೀಷ್‍ನಲ್ಲಿ ಓದಿದೆ ಎನ್ನುವದಕ್ಕಿಂತ ತಿರುವಿ ಹಾಕಿದೆ ಎಂದರೆ ಸರಿಯೇನೋ. ಅಷ್ಟರಲ್ಲಿ ಕಾರಂತರು ವಾಕ್ ಮುಗಿಸಿ ಬಂದು, ಜುಬ್ಬಾ ಕಳಚಿಟ್ಟು ಬಂದು ಕೂತು ಮಾತನಾಡುತ್ತ ಹೋದರು. ನಾನು ಕೇಳಿಸಿಕೊಳ್ಳುತ್ತಿದ್ದೆ. ತಮ್ಮ ಮಗ ಉಲ್ಲಾಸ ಕಾರಂತರ ಹುಲಿಗಳ ಅಧ್ಯಯನದ ಬಗ್ಗೆಯೂ ಹೇಳಿದರು. ಮಾತಿನ ನಡುವೆಯೇ ತಟ್ಟನೆ ‘ ಏಳಿ, ಊಟ ಮಾಡೋಣ’ ಎನ್ನುತ್ತ ಎದುರಿನ ಗೋಡೆಯ ಮೇಲಿದ್ದ ಗಡಿಯಾರವನ್ನ ನೋಡಿದರು. ನಾನೂ ನೋಡಿದೆ. ಕರಾರುವಕ್ಕಾಗಿ 7.45.
ನನÀಗಾಗುತ್ತಿದ್ದುದು ಅಂಜಿಕೆಯೋ? ತಳಮಳವೋ? ಹೊಚ್ಚಹೊಸದೊಂದು ಅನುಭವ ಉಂಟುಮಾಡುತ್ತಿರುವ ತೊಳಲಾಟವೋ? ಯಾವುದೆಂದು ಗೊತ್ತಿಲ್ಲ; ಈಗಲೂ ಗುರುತಿಸಲಾಗುತ್ತಿಲ್ಲ. ಕಾರಂತರ ಮನೆಯಲ್ಲಿ ಅವರ ಜೊತೆ ಊಟ ಮಾಡುವದನ್ನು ನಾನು ಊಹಿಸಿರಲೇ ಇಲ್ಲ; ನನ್ನ ಜೊತೆ ಒಂದಿಷ್ಟು ಮಾತನಾಡಬಹುದು; ಅದೂ ಅವರ ಮೂಡ್ ಉಲ್ಲಾಸವಾಗಿದ್ದರೆ ಎಂದಷ್ಟೇ ಅಂದುಕೊಂಡಿದ್ದೆ. ಆ ಒಳ ಒತ್ತಡದಲ್ಲೇ ಅವರ ಹಿಂದೆ ಹೆಜ್ಜೆ ಹಾಕಿದೆ. ಬಾತ್‍ರೂಂ ತೋರಿಸಿದರು. ಅಲ್ಲಿ ಕಾಲು, ಕೈ ತೊಳೆದು ಬಂದೆ. ಡೈನಿಂಗ ಟೇಬಲ್ ಎದುರಿನ ಕುರ್ಚಿಯೊಂದರಲ್ಲಿ ಕಾರಂತರು ಕುಳಿತು ಎದುರಿದ್ದ ಕುರ್ಚಿ ತೋರಿಸಿದರು.
ಸುಹಾಸಕ್ಕೆ ಬಂದಾಗ ಮೊದಲು ಮಾತನಾಡಿದ ಮಹಿಳೆಯೇ ಊಟ ಬಡಿಸುತ್ತಿದ್ದಳು. ಆಕೆ ಈ ಮನೆಗೆಲಸದವಳು ಅಂತಾ ಆಗ ಊಹಿಸಿದೆ. ಕಾರಂತರ ಪಕ್ಕದಲ್ಲಿ ಸಾಕಷ್ಟು ವಯಸ್ಸಾದಂತೆ ಕಾಣುತ್ತಿದ್ದ, ಆ ವಯಸ್ಸಿನಲ್ಲೂ ಸಾಕಷ್ಟು ಸುಂದರವಾಗೇ ಇನ್ನೊರ್ವ ಮಹಿಳೆ ಕುಳಿತಿದ್ದರು; ನಾನು ಅವರು ಕಾರಂತರ ಪತ್ನಿ ಲೀಲಾ ಕಾರಂತ ಇರಬಹುದು ಎಂದು ಅಂದುಕೊಳ್ಳುತ್ತಿದ್ದಂತೇ ಅವರಿಗೆ ಕಾರಂತರು ನನ್ನ ಪರಿಚಯಿಸಿದರು. ಆಕೆ ನನ್ನ ನೋಡಿ ಸಣ್ಣಗೆ ನಕ್ಕರು. ಸಣ್ಣಗೆ ಹಸನ್ಮುಖವಾಗಿದ್ದ ಲೀಲಾ ಅವರ ಮುಖದಲ್ಲಿ ಏನೋ ಅಸಹಜತೆಯನ್ನ ನಾನು ಗುರುತಿಸಿದೆ.( ನಂತರ ತಿಳಿಯಿತು. ಕಾರಂತರ ಹಿರಿಯ ಮಗ ಹರ್ಷ ಅಕಾಲದಲ್ಲಿ ತೀರಿಕೊಂಡ ನಂತರ ಲೀಲಾ ಮಾನಸಿಕವಾಗಿ ಸ್ವಲ್ಪ ಅಸ್ವಸ್ಥಗೊಂಡರಂತೆ). ಕಾರಂತರು ಊಟ ಮಾಡುವಾಗ ಪತ್ನಿಯ ಬಳಿ ಅದು,ಇದೂ ಮಾತನಾಡುತ್ತಿದ್ದರು. ನನಗೆ ತುತ್ತು ನುಂಗಲೂ ಕಷ್ಟವೆನ್ನಿಸುತ್ತಿತ್ತು. ಅವರೆಲ್ಲ ಸಹಜವಾಗಿದ್ದರೂ ನನಗೊಂಥರ ತಳಮಳ. ಸಾಕಷ್ಟು ವೇಗವಾಗಿ ಊಟ ಮುಗಿಸಿದ ಕಾರಂತರು ‘ ನಿಧಾನಕ್ಕೆ ಮಾಡಿ’ ಎಂದು ನಡೆದುಬಿಟ್ಟರು. ಅಷ್ಟರ ನಂತರ ನಾನು, ಲೀಲಾ ಕಾರಂತ ಇಬ್ಬರೇ. ‘ ಮಗೂ, ನಿಧಾನ ಊಟ ಮಾಡಿ. ಅವರು ಹಾಗೆಯೇ. ಗಡಿಬಿಡಿಯಲ್ಲೇ ಊಟ ಮಾಡೋದು’ ಎಂದು ಅದೆಷ್ಟು ಕಕ್ಕುಲತೆಯಿಂದ ಹೇಳಿದರು ಎಂದರೆ ಆ ಸ್ವರ ಇಷ್ಟು ವರ್ಷದ ನಂತರವೂ ಮನಸ್ಸಿನಲ್ಲಿ ಉಳಿದುಕೊಂಡಿದೆ.
ಊಟವಾದ ನಂತರ ಮತ್ತೆ ಮಾತು; ಚರ್ಚೆಗಳ ನಡುವೆ ಮತ್ತಷ್ಟು ಪುಸ್ತಕ, ಜರ್ನಲ್‍ಗಳನ್ನು ತೋರಿಸಿದರು. ಗಂಟೆ ಒಂಬತ್ತಾಗುತ್ತಿದ್ದಂತೇ ‘ ಇನ್ನೂ ಮಲಗೋಣ’ ಎಂದು ‘ಬನ್ನಿ, ನಿಮಗೆ ಕೊಠಡಿ ತೋರಿಸುತ್ತೇನೆ’ ಎಂದು ಕರೆದು ನಾನು ಮಲಗಬೇಕಾದ ರೂಮ್ ತೋರಿಸಿದರು. ‘ಅಲ್ಲೇ ಪಂಚೆ ಇದೆ. ಉಟ್ಟುಕೊಳ್ಳಿ, ಚೆನ್ನಾಗಿ ನಿದ್ದೆಮಾಡಿ’ ಎಂದು ಹೋದರು.
ನಾನೊಬ್ಬನೇ ಅಲ್ಲಿ ಕುಳಿತು ಯೋಚಿಸಿದೆ. ಊಹೆಗೂ ನಿಲುಕದಂತೆ ಸಂದರ್ಭಗಳು ಘಟಿಸಿದ್ದವು. ತಮ್ಮದೇ ಆದ ರೀತಿಯಲ್ಲಿ ಪ್ರಖ್ಯಾತರಾದ, ಜಾಗತಿಕ ಪ್ರಸಿದ್ಧರೂ ಆಗಿರುವ ಕಾರಂತರೆಲ್ಲಿ? ನಾನೆಲ್ಲಿ? ಅಂತರರಾಷ್ಟ್ರೀಯ ಮಟ್ಟದಲ್ಲಿ, ದೇಶ,ರಾಜ್ಯಗಳ ವಿವಿಧ ಕ್ಷೇತ್ರಗಳ ಧೀಮಂತರೂ ಗೌರವಿಸುವ ಕಾರಂತರ ಸನಿಹಕ್ಕೆ ಬರುವ ಯೋಗ್ಯತೆಯಿಲ್ಲದ ನನ್ನನ್ನು ಅವರು ಆದರಿಸಿದ್ದು ನಿಜವೇ? ಎನ್ನುವ ಶಂಕೆ ನನಗಾಗುತ್ತಿತ್ತು. ಆದರೆ ವಾಸ್ತವ ಇದಿರಿಗೇ ಇತ್ತಲ್ಲ. ಇಂಥ ಯೋಚನೆಗಳು ಬೇಡ ಎಂದು ಆರಿಸಿ ತಂದಿದ್ದ ನಾಲ್ಕಾರು ಜರ್ನಲ್‍ಗಳನ್ನ ಹರವಿಕೊಂಡು ನೋಡತೊಡಗಿದೆ.
ನಿದ್ದೆ ಮಾಡಲೆತ್ನಿಸಿದರೂ ಬರಬೇಕಲ್ಲ; ಒಂದು ತೆರನಾದ ಖುಷಿ ಬೆರೆತ ಆಂದೋಳನ ಮನಸ್ಸಿನಲ್ಲಿ. ಸ್ವಚ್ಛವಾದ, ಮೆತ್ತನೆಯ ಮಂಚದಲ್ಲಿ ಮಲಗಿದ್ದರೂ ನನ್ನೊಳಗಿನ ಭಾವ ನಿದ್ದೆಯನ್ನ ತಡೆದಿತ್ತು. ನನ್ನಂಥವರ ಮನಸ್ಥಿತಿ ಪ್ರಾಯಶ: ಹೇಗೆಂದರೆ ನಮಗೆ ಸಂತೋಷದಲ್ಲೂ ಸುಖಪಡುವ ಭಾಗ್ಯವಿಲ್ಲ; ಸಂಕಟದಲ್ಲಂತೂ.. ಅವತ್ತು ನನಗಾಗುತ್ತಿದ್ದುದು ಮೇರೆ ಮೀರಿದ ಸಂತೋಷ. ಆದರೆ ತಲೆಬಿಸಿ.
ಅದ್ಯಾವಾಗಲೋ ನಿದ್ದೆ ಹತ್ತಿತ್ತು; ತಟ್ಟನೆ ಎಚ್ಚರವಾಯಿತು. ಹೊರಗೆ ಸಣ್ಣದಾಗಿ ಮಾತು ಕೇಳುತ್ತಿತ್ತು. ವಾಚ್ ನೋಡಿದೆ. ಬೆಳಗಿನ ಐದು ಗಂಟೆ. ಯಾರಿಂದಲೋ ಕೇಳಿದ ಮಾತು ತಟ್ಟನೆ ನೆನಪಾಯಿತು. ಕಾರಂತರು ಬೇಗನೇ ಏಳುತ್ತಾರೆ ಎಂದು. ಅವರು ಬಂದು ನನ್ನನ್ನ ಎಬ್ಬಿಸಿ, ಅವರೆದುರು ನಾನು ಸಣ್ಣವನಾಗುವದು ಬೇಡ ಎನ್ನುವ ಅಹಂಭಾವ ಕಾಡಿತು. ಹಾಗೇ ಎದ್ದು ಬಾತ್‍ರೂಮಿಗೆ ಹೋಗಿ, ತಣ್ಣಗಿನ ನೀರಿನಲ್ಲೇ ಸ್ನಾನ ಮುಗಿಸಿ, ಪ್ಯಾಂಟ್,ಶರ್ಟ ಹಾಕಿ ಸಿದ್ಧನಾಗಿ ಹೊತ್ತು ಕಳೆಯಲು ಮತ್ತೆ ಓದುತ್ತ ಕೂತೆ.
ಏಳರ ಸುಮಾರಿಗೆ ಕೋಣೆಯ ಬಾಗಿಲು ಟಕಟಕ ಎಂದಿತು; ಬಾಗಿಲು ತೆರೆದೆ. ಎದುರಲ್ಲಿ ಕಾರಂತರು ನಿಂತಿದ್ದರು. ಒಂದುಕ್ಷಣ ನನ್ನನ್ನು ನೋಡಿ ಕಕ್ಕಾಬಿಕ್ಕಿಯಾಗಿದ್ದು ಗೊತ್ತಾಯಿತು. ಅವರಿಗೆ ಆಶ್ಚರ್ಯವಾಗಿರಬೇಕು? ನನ್ನ ಅವತಾರ ನೋಡಿ.
‘ ಏನು, ಇಷ್ಟು ಬೇಗ. ತಣ ್ಣರಲ್ಲೇ ಸ್ನಾನ ಮಾಡಿದ್ರಾ? ಬಿಸಿನೀರು ಸ್ವಲ್ಪ ಹೊತ್ತಿಗೆ ಬರ್ತಿತ್ತು’ ಎಂದರು. ಅಷ್ಟರಲ್ಲಾಗಲೇ ನಾನು ಸ್ನಾನ ಮಾಡಿದ್ದನ್ನೂ ಅಂದಾಜು ಮಾಡಿದ್ದರು.
‘ನಿಮ್ಮನ್ನ ಏಳಿಸಲೆಂದು ಬಂದೆ. ಯಾಕೆ ನಿದ್ರೆ ಬರಲಿಲ್ಲವೋ ಎಂದು ಪ್ರಶ್ನಿಸುತ್ತ ‘ ನಿಮಗೆ ಅಭ್ಯಾಸವಿದ್ದರೆ ಬೆಳಗಿನ ಟೀ ಕುಡಿಯಬಹುದು’ ಎಂದರು. ನಾನು ಅವರ ಹಿಂದೇ ಬಂದು ಜಗಲಿಯಲ್ಲಿನ ಮಾಮೂಲಿ ಸೀಟಿನಲ್ಲಿ ಕೂತೆ. ಚಹಾ ಕುಡಿಯುತ್ತ’ ನಿಮ್ಮಲ್ಲಿ ಬೆಳಗಿನ ಚಹಾ,ಕಾಫಿ ಕುಡಿಯೋ ಕ್ರಮ ಇಲ್ಲವಲ್ಲ. ಬೆಳಿಗ್ಗೆ ಎದ್ದವರೇ ಕೊಟ್ಟಿಗೆಗೆ ಬೇಕಾದ ಸೊಪ್ಪು, ತರಗೆಲೆಗೋ, ಇಲ್ಲವಾದರೆ ತೋಟಕ್ಕೆ ಹೋಗುವ ಪದ್ಧತಿ ನನಗೆ ಗೊತ್ತು. ಅದನ್ನು ಮುಗಿಸಿದ ನಂತರ ಮೊಗೆಕಾಯಿ ಇಲ್ಲಾ ಸೌತೆಯ ದೋಸೆ ಕಬಳಿಸುತ್ತ, ಚೊಂಬುಗಟ್ಟಲೆ ಹಾಲು ಎನ್ನಬಹುದಾದ ಬಿಸಿನೀರನ್ನ ಕುಡಿಯುವದೂ ಗೊತ್ತು’ ಎಂದು ಅವರದ್ದೇ ಬ್ರ್ಯಾಂಡ್ ಆದ ಶೈಲಿಯಲ್ಲಿ ನಕ್ಕರು.( ಕಾರಂತರು ನಗುವದನ್ನು ನೋಡಲೂ ಯೋಗ ಬೇಕು ಎನ್ನುವ ಮಾತು ಚಾಲ್ತಿಯಲ್ಲಿತ್ತು. ನನಗೆ ಅದು ದೊರಕಿತ್ತು).
ಸ್ವಲ್ಪ ಹೊತ್ತಿಗೆ ಬೆಳಗಿನ ತಿಂಡಿ; ಬೆಳ್ಳನೆ ಮಲ್ಲಿಗೆಯಂಥ ಇಡ್ಲಿ. ಇಡ್ಲಿ ತಿನ್ನುತ್ತಲೇ ಕಾರಂತರು ‘ನಿಮ್ಮಕಡೆ ಬೆಳಗಿನ ತಿಂಡಿಗೆ ಅಂದರೆ ಆಸರಿಗೆ ಕಡಬು ಮಾಡುತ್ತಾರಲ್ಲಾ, ಅದರದ್ದೇ ಸೊಗಸು’ ಎಂದು ಆ ಬಗ್ಗೆ ಒಂದಿಷ್ಟು ವಿವರಣೆ ಕೊಟ್ಟರು. ಆಗಲೂ ಅದೇ. ಕ್ವಚಿತ್ತಾಗಿ ತಿಂಡಿ ತಿಂದು ‘ ನಿಧಾನ’ಎಂದು ಎದ್ದು ಹೋದರು. ನಿನ್ನೆಯಂತೆ ಲೀಲಾ ಕಾರಂತ ಉಪಚಾರ. ಈ ಬಾರಿ ಲೀಲಾ ನನ್ನ ಬಗ್ಗೆ ಒಂದಿಷ್ಟು ಮಾಹಿತಿ ಕೇಳಿದರು.
ಆ ಬೆಳಗಿನ ಆಹ್ಲಾದ ವಾತಾವರಣದಲ್ಲಿ ಮತ್ತೊಂದಿಷ್ಟು ಮಾತನಾಡಿ ‘ ನಾನಿನ್ನು ಬರುತ್ತೇನೆ’ ಎಂದೆ. ಆರಾಮ ಕುರ್ಚಿಯಲ್ಲಿ ಕೂತಿದ್ದ ಕಾರಂತರು ‘ನಿಮ್ಮ ಮುಂದಿನ ಪಯಣ ಎಲ್ಲಿಗೆ?’ ಎಂದು ಪ್ರಶ್ನಿಸಿದರು.
‘ ತೀರ್ಥಹಳ್ಳಿ ಸಮೀಪ ಭೀಮನಕಲ್ಲು ಎನ್ನುವಲ್ಲಿ ನಾಗರಾಜರಾವ್ ಎನ್ನುವವರು ಜರ್ಮನಿಯಿಂದ ಬಂದು ವ್ಯವಸಾಯ ಮಾಡ್ತಿದಾರಂತಲ್ಲಾ? ಅಲ್ಲಿ ಹೋಗಿ ಊರಿಗೆ ಹೋಗಬೇಕು’ ಎಂದೆ. ‘ ಓ, ಮೂರ್ತಿರಾಯರ ಮಗ. ಹೌದು, ನಾನೂ ಅಲ್ಲಿಗೆ ಹೋಗಿದ್ದೆ’ ಎಂದು ಅಲ್ಲಿಗೆ ಹೋಗುವ ದಾರಿಯ ಬಗ್ಗೆ ಹೇಳಿದರು. ಮತ್ತೆ ‘ನಾನು ಹೊರಡಲೇ?’ಎಂದೆ. ‘ ನಾನು ಈಗ ಯಕ್ಷರಂಗಕ್ಕೆ ಹೋಗ್ತಿದ್ದೇನೆ, ನಿಮಗೆ ಬಿಡುವಿದ್ದರೆ ಬನ್ನಿ’ ಎಂದರು.
ಇಲ್ಲವೆನ್ನುವ ಯಾವ ಅರ್ಹತೆಯೂ ನನಗಿರಲಿಲ್ಲ. ಕರೆಯುತ್ತಿರುವದು ಕಾರಂತರು; ಅದೂ ನನ್ನಂಥ ಕಿರುವಯಸ್ಸಿನ ಹುಲುಮಾನವನನ್ನ. ಸಂತೋಷವೂ ಆಯಿತು. ಹೀಗಾದರೂ ಯಕ್ಷರಂಗ ನೋಡಬಹುದಲ್ಲ ಎಂದು.
ಸರಿಯಾಗಿ 8.45. ಸುಹಾಸದ ಹಿಂದೆಯೇ ಇದ್ದ ಮನೆಯಲ್ಲಿದ್ದ ಅವರ ಡ್ರೈವರ್ ಬಿಳಿ ಅಂಬಾಸಡರ್ ಕಾರನ್ನ ತಂದು ನಿಲ್ಲಿಸಿದ. ಕಾರಂತರ ಒಳಕ್ಕೆ ಹೋಗಿ ಮಾತನಾಡುತ್ತಲೇ ಉಡುಪು ತೊಟ್ಟು ಸಿದ್ಧರಾಗಿ ಬಂದು ಕಾರನ್ನೇರಿದರು. ಅವರು ಮುಂದೆ; ಹಿಂದೆ ನಾನು. ದಾರಿಯುದ್ದಕ್ಕೂ ಅಕ್ಕಪಕ್ಕದ ಜಾಗಗಳ ಕುರಿತು ವಿವರಿಸುತ್ತಿದ್ದರು.
ಉಡುಪಿಯ ಯಕ್ಷರಂಗಕ್ಕೆ ಬಂದು ಒಳಹೊಕ್ಕಾಗ ಆಗಲೇ ಕಲಾವಿದರು ರಿಹರ್ಸಲ್‍ನಲ್ಲಿ ತೊಡಗಿದ್ದರು. ಆಗ ಭಾಸ್ಕರ ಜೋಶಿ ಅದರಿಂದ ಹೊರಬಂದು ವ್ಯವಸಾಯ ಮೇಳದಲ್ಲಿದ್ದರು. ಪಂಚವಟಿ ಆಖ್ಯಾನದ ರಿಹರ್ಸಲ್ ನಡೆದಿತ್ತು. ಸೀತೆಯ ಪಾತ್ರಧಾರಿ ನಟಿಸುತ್ತಿದ್ದುದು ಕಾರಂತರಿಗೆ ಸರಿಕಾಣಲಿಲ್ಲವಿರಬೇಕು.
ಸಟ್ಟನೆ ‘ ಇದು ಕರುಣಾರಸ ಬರಬೇಕಾದ ಸಂದರ್ಭ. ಇದಲ್ಲ’ ಎಂದವರೇ ತಮ್ಮ ಜುಬ್ಬಾ ಕಳಚಿ, ಕಚ್ಚೆಪಂಚೆಯನ್ನ ಎತ್ತಿ ಬಿಗಿದು ಅಭಿನಯಿಸತೊಡಗಿದರು. ಏಹ್ ದೇವರೇ! ಆಗಲೇ ಎಪ್ಪತ್ತು ವರ್ಷ ದಾಟಿದ ವೃದ್ದ ಎಂದು ಯಾರು ಹೇಳಿಯಾರು? ಅವರ ಶಾರೀರಿಕ ಶಕ್ತಿ ಎಂಥದ್ದು? ಪಾತ್ರವೊಂದರ ಒಳಗಿನ ಜೀವಶಕ್ತಿ, ಅದರ ಮನಸ್ಸು, ಅದರ ತುಡಿತ,ತಾಪ ಎಲ್ಲವನ್ನೂ ಸೂರೆಗೊಂಡಂತೆ ನರ್ತಿಸುತ್ತ, ಮುಖದಲ್ಲಿ ಆ ಭಾವವನ್ನು ಅಭಿವ್ಯಕ್ತಿಸುತ್ತ ಕುಣ ದರು.
ಅದು ನನ್ನ ಭಾಗ್ಯ, ಅದನ್ನ ಕಣ್ಣಾರೆ ನೋಡುವಂಥದ್ದು. ಯಾವ ಆಧುನಿಕ ಉಪಕರಣವೂ ಚಿತ್ರೀಕರಿಸಲಾಗದಂತೆ, ಗ್ರಹಿಸಿಕೊಳ್ಳಲಾಗದಂತೆ ನಾನು ಕಣ್ತುಂಬಿಕೊಂಡೆ. ನನ್ನ ಬಳಿ ಕ್ಯಾಮರಾವೂ ಇರಲಿಲ್ಲ. ಮನಸ್ಸಿನಲ್ಲೇ ಆ ಅಪರೂಪದ, ಅಸಾಮಾನ್ಯ ವ್ಯಕ್ತಿತ್ವದ ಮಹಾನುಭಾವನಿಗೆ ಸಾಷ್ಟಾಂಗ ನಮಿಸಿದೆ.
ಅವರ ತರಬೇತಿ ಮುಗಿಯುವತನಕವೂ ಅಲ್ಲಿದ್ದೆ. ಮುಗಿಸಿ ಹೊರಟುನಿಂತ ಕಾರಂತರು ‘ ನಿಮ್ಮನ್ನ ಬಸ್ ಸ್ಟಾಂಡಿಗೆ ಬಿಡುತ್ತೇನೆ’ ಎಂದರು.ಅಲ್ಲಿ ಬಿಟ್ಟು ಹೋಗಿಬನ್ನಿ ಎಂದರು.
ನನಗೀಗಲೂ ಇವೆಲ್ಲ ಅಚ್ಚರಿಯಾಗೇ ಉಳಿದಿದೆ. ಇಂಥ ಅನುಭವಗಳು ನನ್ನದಾಗಿದೆಯಲ್ಲ ಎನ್ನುವ ಸಂತಸವೂ ಆಗುತ್ತದೆ. ಶಿವರಾಮ ಕಾರಂತರ ಬಗ್ಗೆ ವಿವರಿಸಬೇಕಾದ ಅಗತ್ಯವೇ ಇಲ್ಲ; ಎಲ್ಲರಿಗೂ ಅವರು ಗೊತ್ತು. ಆದರೆ ಮೇಲ್ನೋಟಕ್ಕೆ ಶೀಘ್ರಕೋಪಿ, ನಿಷ್ಠುರವಾದಿ ಎಂದೆಲ್ಲ ಬಿರುದು ಪಡೆದ ಆ ವ್ಯಕ್ತಿತ್ವದ ಒಳಗೆ ಪ್ರೀತಿ, ಔದಾರ್ಯ, ವಿಶ್ವಾಸ, ಸ್ನೇಹಶೀಲತೆ ಮುಂತಾಗಿ ಮಾನವೀಯ ಗುಣಗಳೇ ಹೆಚ್ಚಿದ್ದವು ಎಂದು ಬಹುತೇಕರು ಗಮನಿಸಿರಲಾರರು. ನನಗೆ ತಿಳಿದಂತೆ ಅವರು ಪ್ರತಿ ತಿಂಗಳೂ ಅಸಹಾಯಕ ವಿಧವೆಯರಿಗೆ, ಹಣ್ಣುಮಕ್ಕಳಿಗೆ, ವಿದ್ಯಾರ್ಥಿಗಳಿಗೆ ನಿಯಮಿತವಾಗಿ ಒಂದಿಷ್ಟು ಹಣವನ್ನು ಮನಿಯಾರ್ಡರ್ ಮಾಡುತ್ತಿದ್ದರು; ತನ್ನ ಹೆಸರು ಗುಪ್ತವಾಗಿರಿಸಿಕೊಂಡು.
ಈ ಎಲ್ಲದರ ಬಗ್ಗೆ ಸಂಕ್ಷೀಪ್ತವಾಗಿ ಕಾರಂತರ ಮಾನಸ ಶಿಷ್ಯನೆಂದೇ ಖ್ಯಾತಿಪಡೆದ ಸಾಹಿತಿ, ಕಲಾವಿದ ಹಿರಿಯ ಗೆಳೆಯ ಗುರುರಾಜ ಮಾರ್ಪಳ್ಳಿಯವರ ಬಳಿ ಹೇಳಿದ್ದೆ. ತಟ್ಟನೆ ‘ಎಲ್ಲಿ ನಿಮ್ಮ ಎರಡೂ ಪಾದದ ಜೇರಾಕ್ಸ ಕೊಡಿ ಮಾರಾಯ್ರೆ’ ಎಂದರು. ಯಾಕೆ? ಎಂದೆ. ‘ ನಾನು ಅಷ್ಟು ಹತ್ತಿರದವ, ನನ್ನ ಜೊತೆ ಇಷ್ಟು ಸಲೀಸಾಗಿ ನಡೆದುಕೊಂಡಿಲ್ಲ. ನೀವೇ ಪುಣ್ಯವಂತರು’ ಎಂದರು.
ಪ್ರಾಯಶ: ಯಾರೂ ಈಗಿನ ಸಂದರ್ಭದಲ್ಲಿ ನಂಬದ ನನ್ನ ಅನುಭವಗಳಿವು. ಶಿವರಾಮ ಕಾರಂತರಂಥವರ ಜೊತೆ ನನಗಿದ್ದ ಸಣ್ಣ ಆತ್ಮೀಯತೆಯನ್ನ ಅವರಿದ್ದಾಗಲೂ ಬಳಸಿಕೊಂಡಿಲ್ಲ; ಈಗ ಬಳಸಿಕೊಳ್ಳುವ ಅಗತ್ಯವೂ ಇಲ್ಲ. ನನ್ನ ಬದುಕಿಗೊಂದು ದಿಕ್ಸೂಚಿಯನ್ನ ಕೊಟ್ಟ, ಹೇಗೆ ಬದುಕಬಹುದು ಎನ್ನುವದನ್ನ ಸೂಚ್ಯವಾಗಿ ಕಲಿಸಿದ ಅಂಥ ಹಿರಿಯರನ್ನ ನೆನಪಿಸಿಕೊಳ್ಳುವದೇ ವಿಕಲ್ಪಗಳನ್ನ ಎದುರಿಸುವ ಕ್ರಮ ಎಂದು ನಾನು ಆಗಲೂ, ಈಗಲೂ ಭಾವಿಸಿದ್ದೇನೆ. ಆ ಭೇಟಿಯ ನಂತರವೂ ಒಂದೆರಡು ಬಾರಿ ಭೇಟಿ ಮಾಡಿದ್ದೆ. ಪತ್ರ ವ್ಯವಹಾರ ನಿರಂತರವಾಗಿತ್ತು. ನನಗೂ, ಅವರಿಗೂ ಸುಮಾರು ಅರ್ಧ ಶತಮಾನದ ವಯಸ್ಸಿನ ಅಂತರವಿದ್ದರೂ – ನಾನೇಷ್ಟೇ ಗೋಗರೆದರೂ ಬಹುವಚನದಲ್ಲೇ ಸಂಬೋಧಿಸುತ್ತಿದ್ದುದು ಮತ್ತೊಂದು ಅಚ್ಚರಿ.
ತುಂಬಾ ಸುಂದರವಾಗಿ ಬರೆದಿದ್ದಾರೆ. ಅಭಿನಂದನೆಗಳು.🙏🙌👍👌
ತುಂಬಾ ಸುಂದರ, ಸವಿಸವಿ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ. ಅಭಿನಂದನೆಗಳು