ಸಿದ್ದಾಪುರ : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಸಮೀಪದ ಭಾನ್ಕುಳಿಮಠದ ಗೋಸ್ವರ್ಗ ಹೆಸರಿಗೆ ತಕ್ಕಂತೆ ಗೋವುಗಳಿಗೆ ಸ್ವರ್ಗ ಸದೃಶವಾಗಿದ್ದು ಉತ್ತಮವಾದ ಪ್ರವಾಸಿ ತಾಣವಾಗಿದೆ.
ಸಿದ್ದಾಪುರ – ಕುಮಟಾ ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಈ ತಾಣ ಸಿದ್ದಾಪುರದಿಂದ ಕೇವಲ ನಾಲ್ಕು ಕಿ.ಮಿ.ಅಂತರದಲ್ಲಿದೆ. ಸುತ್ತಲೂ ಭತ್ತದ ಗದ್ದೆ, ಅಲ್ಲಿ ಬತ್ತದ ನೀರಿನ ಸೆಲೆ ಹಸಿರಿನ ಪರಿಸರದ ಮಧ್ಯದಲ್ಲಿ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಗೋಸ್ವರ್ಗ ತಲೆ ಎತ್ತಿ ನಿಂತಿದೆ. ಇಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಗೋವುಗಳಿದ್ದು ಯಾವುದೇ ಬಂಧನವಿಲ್ಲದೆ ಸ್ವಚ್ಛಂದವಾಗಿ ಓಡಾಡಲು ಅನುಕೂಲ ಕಲ್ಪಿಸಲಾಗಿದೆ. ಶೇ.70ರಷ್ಟು ಪ್ರದೇಶವು ಸೂರ್ಯಕಿರಣಗಳಿಗೆ ತೆರೆದುಕೊಂಡಿದ್ದರೆ ಶೇ.30ರಷ್ಟು ಭಾಗದಲ್ಲಿ ಛಾವಣಿ ಇದೆ.ಎಲ್ಲಿಯೂ ಗೋಡೆ ಇಲ್ಲದಿರುವುದು ಇಲ್ಲಿನ ವಿಶೇಷವಾಗಿದೆ. ಗೋವುಗಳಿಗೆ ಅವಶ್ಯಕವಿರುವ ಮೇವು, ಶುದ್ಧ ನೀರು ಇಲ್ಲಿ ಲಭ್ಯವಿದೆ. ಇಲ್ಲಿ ಗೋವಿನ ಹಾಲನ್ನು ಕರೆಯುವುದಿಲ್ಲ ಬದಲಾಗಿ ಕರುಗಳಿಗೆ ನೀಡಲಾಗುತ್ತದೆ. ಒಂದು ವೇಳೆ ಕೊರತೆಯಾದರೆ ಪರ್ಯಾಯ ವ್ಯವಸ್ಥೆ ಇದೆ. ಗೋವುಗಳಿಗೆ ಸಹಜ ಜನನ, ಸಹಜ ಜೀವನ, ಸಹಜ ಮರಣಗಳಿಗೆ ಅವಕಾಶ ಕಲ್ಪಿಸುವ ಜಗತ್ತಿನ ಏಕೈಕ ತಾಣ ಗೋಸ್ವರ್ಗವಾಗಿದೆ.
ಹಾಗಿದ್ರೆ ಗೋಸ್ವರ್ಗದಲ್ಲಿ ಏನೇನಿದೆ :
**ಗೋತೀರ್ಥ : ಗೋಸ್ವರ್ಗದ ಮಧ್ಯದಲ್ಲಿ ನೂರು ಅಡಿ ಉದ್ದ-ಅಗಲದ ಸುವಿಶಾಲ ಸರೋವರವೇ ಗೋತೀರ್ಥ.
**ಸಪ್ತಸನ್ನಿಧಿ : ಸರೋವರದ ಮಧ್ಯದಲ್ಲಿ ಕಲಾಮಯವಾದ ಶಿಲಾಮಂಟಪವಿದ್ದು ಏಳು ಮಹಾದೇವತೆಗಳು ಜಲರೂಪದಲ್ಲಿ ನೆಲೆಸಿರುವ ಸಪ್ತಸನ್ನಿಧಿ ಇದೆ.
**ಪ್ರದಕ್ಷಿಣ ಪಥ : ಆಸ್ತಿಕರು ಗೋತೀರ್ಥ ಮತ್ತು ಸಪ್ತಸನ್ನಿಧಿಗಳಿಗೆ ಪ್ರದಕ್ಷಿಣೆ ಹಾಕುವ ಸತ್ಪಥ.
**ಗೋಪದ : ಸರೋವರದ ನಾಲ್ಕು ದಿಕ್ಕುಗಳಲ್ಲಿ ಗೋವುಗಳ ಶ್ರವಣಸುಖಕ್ಕಾಗಿ ಹಾಗೂ ಗೋವಿಚಾರ ಮಂಥನಕ್ಕಾಗಿ ಸತ್ಸಂಗ ವೇದಿಕೆ.
**ಸೋಪಾನ-ಸಭಾಂಗ : ಗೋಪದದಲ್ಲಿ ಸಂಪನ್ನಗೊಳ್ಳುವ ಕಾರ್ಯಕ್ರಮವನ್ನು ಹಾಗೂ ಗೋವಿನ ಚಟುವಟಿಕೆಗಳನ್ನು ವೀಕ್ಷಿಸುವ ಆಸನ ವ್ಯವಸ್ಥೆ.
**ಗೋವಿರಾಮ : ಗೋವುಗಳು ನೆರಳಿನಲ್ಲಿ ವಿಶ್ರಾಂತಿ ಸುಖವನ್ನು ಪಡೆಯಲೆಂದು ನಿರ್ಮಾಣಗೊಂಡಿರುವ ವಿರಾಮಧಾಮ.
**ಸುಧಾಸಲಿಲ : ಗೋವುಗಳ ಜಲಪಾನಕ್ಕೆ ಅಲ್ಲಲ್ಲಿ ಇಟ್ಟಿರುವ ಶಿಲಾಮಯ ಜಲಾಶ್ರಯಗಳು.
**ಪ್ರೇಕ್ಷಾಪಥ : ಜನರಿಗೆ ಸಂಪೂರ್ಣ ಗೋಸ್ವರ್ಗದ ಪ್ರದಕ್ಷಿಣೆ,ವೀಕ್ಷಣೆಗಳಿಗೆ ಅನುವು ಮಾಡಿಕೊಡುವ ಮಹಾಮಾರ್ಗ.
**ತೀರ್ಥಪಥ : ಯಾತ್ರಿಗಳನ್ನು ಪ್ರೇಕ್ಷಾಪಥದಿಂದ ಸರೋವರಮಧ್ಯದ ಸಪ್ತಸನ್ನಿಧಿಗೆ ಹೋಗುವ ಅಂತರ್ಮಾರ್ಗ.
ಇದೆಲ್ಲದರ ಜೊತೆಗೆ ಗುರುಪರಂಪರೆ ಹೊಂದಿರುವ ಶ್ರೀರಾಮದೇವ ಆವಾಸಸ್ಥಾನವಾದ ಭಾನ್ಕುಳಿಮಠವನ್ನ ಹೊಂದಿರೋ ಗೋಸ್ವರ್ಗ ಪ್ರವಾಸಿಗರನ್ನ ತನ್ನತ್ತ ಕೈ ಬೀಸಿ ಕರೆಯುತ್ತಿದೆ.