ಮುಂದುವರಿದ ಭಾಗ….
ಜರ್ಮನಿಯಲ್ಲಿ ಸೈಕಲ್ ಸವಾರಿ ಏಕೆ? ಸೈಕಲ್ ಸವಾರರ ಮುಂದಿರುವ ಸವಾಲುಗಳೇನು?
ಹವ್ಯಾಸಕ್ಕಾಗಿ ಸೈಕಲ್:
ಜರ್ಮನ್ನರು ಸೈಕಲ್ ಪ್ರಿಯರು, ಅದಕ್ಕಾಗಿಯೆ ಸಾಮಾನ್ಯವಾಗಿ ಎಲ್ಲಾ ಊರುಗಳ ಸುತ್ತಮುತ್ತ ಸೈಕಲ್ ಟ್ರಾಕ್ ನಿರ್ಮಿಸಿದ್ದಾರೆ. ರಜಾದಿನಗಳಲ್ಲಿ ಕುಟುಂಬ ಸಹಿತ ಅಥವಾ ಸ್ನೇಹಿತರ ಜೊತೆಗೂಡಿ ಪರಿಸರದ ಸೊಬಗನ್ನು ಆಸ್ವಾದಿಸುತ್ತಾ ಸೈಕಲ್ ಏರಿ ಸವಾರಿ ಮಾಡುವುದು ಒಂದು ಮೋಜು. ಹಸಿರಿನ ಪ್ರಕೃತಿಯ ಮಧ್ಯೆ ಗೆಳೆಯರೊಂದಿಗೆ ಸೈಕಲ್ ಜೊತೆಯಾಗುವುದು ರಜಾದಿನದ ಸಡಗರ.
ಫ್ರಾಂಕ್ ಫರ್ಟ್ ಎನ್ನುವ ಜರ್ಮನಿಯ ದೊಡ್ದ ನಗರದ ಸುತ್ತಲೂ ಗ್ರೀನ್ ಗ್ರುಟಲ್ ( ಹಸಿರು ಪಟ್ಟಿ) ಎನ್ನುವ 63 ಕಿಲೋಮೀಟರ್ ಉದ್ದದ ಸೈಕಲ್ ಪಥ ಹಸಿರಿನ ಸಿರಿಯ ಮಧ್ಯದಿಂದ, ನದಿಗಳ ತಟದಿಂದ ಸಾಗುವುದು. ಎಳೆಯ ಮಕ್ಕಳಿಂದ ವಯಸ್ಕರು ಕೂಡ ಸಲೀಸಾಗಿ ಹೆಚ್ಚುಕಡಿಮೆ 50 ಕಿಲೋಮೀಟರ್ ಹವ್ಯಾಸಕ್ಕಾಗಿ ಸೈಕಲ್ ತುಳಿಯುತ್ತಾರೆ, ಹೀಗೆ ಸೈಕಲ್ ವಿಹಾರಿಗಳಿಗೆಂದೇ ಅಲ್ಲಲ್ಲಿ ವಿಶ್ರಾಂತಿಗಾಗಿ ಕುರ್ಚಿ ಮೇಜುಗಳ ವ್ಯವಸ್ಥೆ ಇದೆ. ಸುತ್ತಮುತ್ತಲೂ ಹಕ್ಕಿಗಳ ಹಾಡು ಕಿವಿಗಳಿಗೆ ಇಂಪನ್ನು ನೀಡಿದರೆ, ಕೆರೆ – ನದಿಗಳ ಮೇಲೆ ತೆಲುವ ಹಂಸಗಳು ಕಣ್ಣಿಗೆ ಮುದ ನೀಡುತ್ತವೆ. ಯಾವ ವಾಹನದ ಸದ್ದೂ ಕೇಳದಿರುವುದು ಒಂದಾದರೆ, ಸವಾರಿಯ ನಡುವೆ ಅಕಸ್ಮಾತ್ ಪಾದಚಾರಿಗಳು ಅಡ್ಡಬಂದರೆ ಸೈಕಲ್ ರಿಂಗಣಿಸದೆ ಸಂಯಮದಿಂದ ಕಾದು, ರಸ್ತೆ ಸಿಕ್ಕ ಬಳಿಕ ಪ್ರಯಾಣ ಮುಂದುವರಿಸುವ ಪರಿ ಅಬ್ಬಾ ಎನಿಸುತ್ತದೆ. ಆದ್ದರಿಂದಲೆ ಎಷ್ಟೋ ಸೈಕಲ್ ಗಳಿಗೆ ಬೆಲ್ ಗಳೇ ಇರುವುದಿಲ್ಲ, ಯಾಕೆಂದರೆ ಬೆಲ್ ಗಳ ಅವಶ್ಯಕತೆಯೆ ಇಲ್ಲವಲ್ಲ!
ಸೈಕಲ್ ಸವಾಲುಗಳು:
ಸೈಕಲ್ ಗಳ ಜೊತೆಗೆ ನಮ್ಮ ಕಣ್ಣಿಗೆ ಬೀಳುವ ದೊಡ್ಡ ದೊಡ್ಡ ವಸ್ತುವೇ ಸೈಕಲ್ ಚೈನುಗಳು! ಅರ್ಥಾತ್ ಸೈಕಲ್ ಬೀಗಗಳು. ಹೌದು ಸ್ವಾಮಿ, ಸೈಕಲ್ ಕಳ್ಳರ ಹಾವಳಿ ಇಲ್ಲಿ ಜಾಸ್ತಿ. ಒಂದು ವರದಿಯ ಪ್ರಕಾರ ಜರ್ಮನಿಯಲ್ಲಿ ಪ್ರತಿವರ್ಷ ಸರಾಸರಿ 3 ಲಕ್ಷ ಸೈಕಲ್ ಕಳ್ಳತನದ ಕಂಪ್ಲೇಂಟ್ ಇಲ್ಲಿನ ಪೋಲಿಸರಿಗೆ ಸಲ್ಲುತ್ತದೆ. ಹಾಗಾಗಿ ಸೈಕಲ್ ಖರೀದಿಸಿದವನು ಅವಶ್ಯವಾಗಿ ಸೈಕಲ್ ಚೈನನ್ನು ಮತ್ತು ದೊಡ್ದ ಬೀಗವನ್ನು ಖರೀದಿಸುವುದು ಮುಖ್ಯ. ಹೊಸ ಸೈಕಲ್ಲಿನ ಬೆಲೆ ಇಪ್ಪತ್ತು ಸಾವಿರದಿಂದ ಲಕ್ಷಕ್ಕಿಂತಲೂ ಜಾಸ್ತಿ, ಹಾಗಿದ್ದ ಮೇಲೆ ಸುಮಾರು ಹತ್ತು ಸಾವಿರದ ಬೀಗ ಜಾಸ್ತಿಯೆನು ಅಲ್ಲ ಬಿಡಿ ಅಲ್ಲವೆ ?
ನಮ್ಮಲಿನ ಹಾಗೆ ಇಲ್ಲಿ ಅಲ್ಲಲ್ಲಿ ಸೈಕಲ್ ಶಾಪ್ ಗಳು ಕಾಣಸಿಗುವುದಿಲ್ಲ. ಸೈಕಲ್ ಗಾಳಿ ಕಮ್ಮಿ ಆಯಿತೊ ಅಥವಾ ಸಣ್ಣಪುಟ್ಟ ರಿಪೇರಿಗಳನ್ನು (ಸೈಕಲ್ ಪಂಕ್ಚರ್ ಸಮೇತ) ಅವರವರೇ ಮಾಡಿಕೊಳ್ಳುವುದು ಸೂಕ್ತ. ಸಣ್ಣಪುಟ್ಟ ರಿಪೇರಿಗಳು ಸಹ ಬಹಳ ದುಬಾರಿ, ಎಷ್ಟು ದುಬಾರಿ ಆಗಬಹುದು ಎಂದರೆ, ಸೈಕಲ್ ಪೆಡಲ್ ಹಾಳಾಯಿತು ಅಂದರೆ ಪೂರ್ತಿ ಪೆಡೆಲ್ ಸೆಟ್ ಹೊಸತು ಹಾಕಿ ರಿಪೇರಿ ಮಾಡುವುದಕ್ಕೆ ಬರುವ ಖರ್ಚಿನಲ್ಲಿ ಮತ್ತೊಂದು ಸಾಧಾರಣ (ಪೂರ್ತಿ) ಸೈಕಲ್ಲನ್ನೇ ಕೊಂಡುಕೊಳ್ಳಬಹುದು! ಆದ್ದರಿಂದಲೇ ಸೈಕಲ್ ಸವಾರರು ಸ್ವಾವಲಂಬಿಗಳಾಗಿರುವುದೇ ಸೂಕ್ತ! ಅದಕ್ಕಾಗಿಯೇ, ನಮ್ಮ ಶಾಲೆಯ ಮೇಷ್ಟ್ರು ಒಬ್ಬರು ಆಗಾಗ ಹೇಳುವ ಮಾತು ನೆನಪಾಗುವುದು: ”ನಮ್ಮ ನಮ್ಮ ಕೆಲಸ ನಾವ್ ನಾವೇ ಮಾಡಿಕೊಳ್ಳಬೇಕು! ”
ಮುಂದಿನ ಸಲ ನಾವೇನಾದರೂ ಒಬ್ಬ ಸೈಕಲ್ ಸವಾರನನ್ನು ನೋಡಿದರೆ ಅವರ ಬಗ್ಗೆ ಗೌರವ ಭಾವ ನಮ್ಮಲ್ಲಿರಲಿ, ಇಂತವರಿಂದಲೇ ನಮ್ಮ ದೇಶದ ಪೆಟ್ರೋಲಿಯಮ್ ಉತ್ಪನ್ನಗಳ ಆಮದು ಕಡಿಮೆಯಾಗುತ್ತಿದೆ ಹಾಗೂ ಆ ಮೂಲಕ ಪೆಟ್ರೋಲ್/ ಡೀಸೆಲ್ ಬೆಲೆ ತಕ್ಕಮಟ್ಟಿಗೆ ಕಡಿಮೆ ಆಗುತ್ತಿದೆ ಎನ್ನುವುದು ನೆನಪಿರಲಿ. ನಮ್ಮ ಪರಿಸರ ರಕ್ಷಣೆ ನಮ್ಮ ಹೊಣೆಯಾಗಿರಲಿ, ನಮ್ಮಲ್ಲೂ ಹೀಗೆ ಸೈಕಲ್ ಸವಾರಿಗೆ ಉತ್ತೇಜನ ಸಿಗುವಂತಾಗಲಿ ಹಾಗೂ ಸೈಕಲ್ ಸವಾರನ ಸುರಕ್ಷೆ ನಮ್ಮ ವಾಹನಚಾಲಕರ ಜವಾಬ್ದಾರಿಯಾಗಲಿ.
ಲೇಖಕರು : ಅಪೂರ್ವ ಬೆಳೆಯೂರು