ಆದ್ಯೋತ್ ಸಿನೇಮಾ ಸುದ್ದಿ
‘ನಾ ಅದೀನಿ’ ತಂಡದವರು‘ಕಾಲ್ ಮಿ ‘ಎಂಬ ಮತ್ತೊಂದು ಕನ್ನಡ ಕಿರು ಚಲನ ಚಿತ್ರ ಪ್ರಾರಂಬಿಸಿದ್ದಾರೆ. ಈಗಾಗಲೆ
ಗದಗ ನಗರ ಹಾಗೂ ನಗರದ ಹೊರ ವಲಯದ ಸುತ್ತಮುತ್ತಲಲ್ಲಿ ಚಿತ್ರೀಕರಣ ಪ್ರಾರಂಭವಾಗಿದೆ.
ಗದಗ ನಗರದ ಮುಳಗುಂದ ರಸ್ತೆಯ ದುರ್ಗಮ್ಮ ದೇವಸ್ಥಾನದ ಬಳಿ ನೆರವೇರಿದ ಮುಹೂರ್ತ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ಉಪಾಧಿಕ್ಷಕರಾದ ಎಸ್. ಕೆ. ಪ್ರಹ್ಲಾದ ಅವರು ಕ್ಯಾಮರಾ ಗುಂಡಿ ಒತ್ತುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿ ಚಿತ್ರೀಕರಣ ಯಶಸ್ವಿಯಾಗಿ ಸಾಗಲಿ, ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ನೀಡಿದ್ದು ಇನ್ನೂ ಹೆಚ್ಚಿನ ಪ್ರತಿಭೆಗಳು ನಿಮ್ಮ ತಂಡದ ಮೂಲಕ ಬೆಳಕಿಗೆ ಬರಲಿ, ಉತ್ತಮ ಕಥಾ ವಸ್ತು ಹೊಂದಿರುವ ಚಿತ್ರಗಳೂ ನಿಮ್ಮ ತಂಡದಿಂದ ಬರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯ ರಾಜ್ಯ ಸಂಚಾಲಕರಾದ ಪ್ರಭಾಕರ ಹೆಬಸೂರ, ಡಿಆರ್‌ಓ ಎಂಜನೀಯರ್ ಶ್ರೀನಿವಾಸ ಬೆಟಗೇರಿ, ಗಣ್ಯ ವರ್ತಕರಾದ ಸಂತೋಷ ಗುಡ್ಡದ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸಾಮಾಜಿಕ ಜಾಗೃತಿ ಮೂಡಿಸುವ ಕಥಾವಸ್ತು ಹೊಂದಿರುವ ಕಾಲ್ ಮಿ ಕಿರುಚಿತ್ರವನ್ನು ಸಂಪೂರ್ಣ ಗದಗ ಸುತ್ತಮುತ್ತಲು ಚಿತ್ರೀಕರಣ ನಡೆಸಲಿದ್ದು ಸ್ಥಳೀಯ ಕಲಾವಿದರೇ ಅಭಿನಯಿಸುತ್ತಿದ್ದಾರೆ.
ಚಿತ್ರದ ನಿರ್ದೇಶಕ ಬಿ. ಮೌನೇಶ, ಸಹ ನಿರ್ದೇಶಕ ಡಾ. ಪ್ರಭು ಗಂಜಿಹಾಳ, ನಿರ್ಮಾಣ ಮೇಲ್ವಿಚಾರಕ ಸುನಿಲಸಿಂಗ್ ಲದ್ದಿಗೇರಿ, ಛಾಯಾಗ್ರಹಣ ಹಾಗೂ ಸಂಕಲನಕಾರರಾದ ಉಮೇಶ ಸಜ್ಜನ, ರಾಜು ಪವಾರ, ತುಳಸಿನಾಥ ಪವಾರ, ಕಲಾದರಾದ ಪ್ರೊ. ಆರ್. ಎನ್. ಕುಲಕರ್ಣಿ, ಶ್ರೀಮತಿ ಗಾಯತ್ರಿ ಹಿರೇಮಠ, ಸುನಂದಾ ಹಿರೇಮಠ, ಮಂಜು ಡಂಬಳ, ರಾಚಯ್ಯ ಹೊಸಮಠ, ಶಂಕರ ಮಡ್ಲೂರ, ಸೇರಿದಂತೆ ಈ ತಂಡದ ಸದಸ್ಯರು ಪಾಲ್ಗೊಂಡಿದ್ದರು. ಚಿತ್ರಕ್ಕೆ ಪ್ರಚಾರಕಲೆ ಡಾ.ವೀರೇಶ ಹಂಡಗಿ ಅವರದಿದೆ.
******
‘ಮನೆ‘ ಚಲನಚಿತ್ರಕ್ಕೆ ‘ಯು‘ ಸರ್ಟಿಫಿಕೇಟ್
ಗಾಯಿತ್ರಿ ಕ್ರಿಯೇಷನ್ಸ್ ಬೆಂಗಳೂರು ಹಾಗೂ ಸಂಯುಕ್ತ ಸ್ಟುಡಿಯೋಸ್ ಸಹಯೋಗದೊಂದಿಗೆ ನಿರ್ಮಾಣವಾಗಿರುವ ‘ಮನೆ‘ ಕಲಾತ್ಮಕ ಕನ್ನಡ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘ಯು’ ಸರ್ಟಿಫಿಕೇಟ್ ದೊರೆತಿದೆ.
ಮನೆ ಚಿತ್ರದ ಚಿತ್ರೀಕರಣವು ಹುಬ್ಬಳ್ಳಿ, ಶಿರಗುಪ್ಪಿ ಮತ್ತು ನಲವಡಿ ಗ್ರಾಮದಲ್ಲಿ ಹಾಗೂ ಅದರ ಸುತ್ತಮುತ್ತಲಿನಲ್ಲಿ ಒಟ್ಟು 10 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಮನೆ ಚಿತ್ರವು ಒಂದು ಕಲಾತ್ಮಕ ಚಿತ್ರವಾಗಿದ್ದು ಕೌಟುಂಬಿಕ ಕಥಾಹಂದರವನ್ನು ಹೊಂದಿದೆ.
ಒಬ್ಬ ಕೂಲಿ ಕಾರ್ಮಿಕನಿಗೆ ತನ್ನದೇ ಆದ ಸ್ವಂತ ಮನೆ ಕಟ್ಟಬೇಕೆಂಬ ಹಂಬಲ, ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ಹೇಗೆ ತನ್ನದೇ ಆದ ಸ್ವಂತ ಮನೆಯನ್ನು ಕಟ್ಟುತ್ತಾನೆ, ಮಗ ಸೊಸೆಯರಿಗಾಗಿ ಸಿದ್ದಪ್ಪ, ಭಾಗ್ಯಮ್ಮ ತೆಗೆದುಕೊಳ್ಳುವ ತೀರ್ಮಾನ, ಊರ ಗೌಡರು ಸಿದ್ದಪ್ಪಗೆ ಮಾಡುವ ಸಹಾಯ ಕುತೂಹಲ ಮೂಡಿಸುತ್ತದೆ. ಇದೀಗ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ‘ಯು’ ಸರ್ಟಿಫಿಕೇಟ್ ನೀಡಿದ್ದು ತಂಡಕ್ಕೆ ಖುಷಿ ತಂದಿದೆ.
ಪ್ರಮೀಳ ಸುಬ್ರಹ್ಮಣ್ಯ ಅವರನ್ನು ಹೊರತುಪಡಿಸಿ ಸಂಪೂರ್ಣ ಉತ್ತರ ಕರ್ನಾಟಕದ ಕಲಾವಿದರನ್ನೇ ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ. ಈ ಚಿತ್ರದಲ್ಲಿ ಕಲಾವಿದರೆಲ್ಲ ಸಹಜವಾದ ಉತ್ತಮ ಅಭಿನಯ ನೀಡಿದ್ದಾರೆ. ಸಂಭಾಷಣೆಯಲ್ಲಿ ಭಾಷೆಯ ಹಿಡಿತ, ಹಾಡುಗಳು ಚೆನ್ನಾಗಿವೆ. ಛಾಯಾಗ್ರಹಣ ಕೂಡ ಉತ್ತಮವಾಗಿದ್ದು , ‘ಮನೆ’ ಚಿತ್ರವನ್ನು ರಾಜ್ಯಾದ್ಯಂತ ಚಿತ್ರ ಮಂದಿರಗಳಲ್ಲಿ ತೆರೆ ಕಾಣಿಸಲು ಸಿದ್ದತೆ ನಡೆಸಿದ್ದೇವೆ ಎಂದು ಜಂಟಿ ನಿರ್ದೇಶಕಿಯರಾದ ಪೂರ್ಣ ಶ್ರೀ ಆರ್ ಮತ್ತು ರಶ್ಮಿ ಎಸ್ ತಿಳಿಸಿದ್ದಾರೆ.
ಮನೆ ಸಿನಿಮಾದ ಸಿದ್ದಪ್ಪ ಪಾತ್ರದಲ್ಲಿ ಹುಬ್ಬಳ್ಳಿಯ ರಂಗಕಲಾವಿದರಾದ ರೇಣುಕುಮಾರ್ ಸಂಸ್ಥಾನ ಮಠ, ಭಾಗ್ಯಮ್ಮನ ಪಾತ್ರದಲ್ಲಿ ಪ್ರಮೀಳ ಸುಬ್ರಮಣ್ಯಂ ಅಭಿನಯಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಸಾಗರ್ ಕೆ ಎಚ್, ಅಕ್ಷತ ವಿಲಾಸ್, ಮಂಜುನಾಥ ಪಾಟೀಲ್, ವಿದ್ಯಾ ಪ್ರಭು ಗಂಜೀಹಾಳ್, ಅವಿನಾಶ್ ಗಂಜಿಹಾಳ ಮೊದಲಾದವರು ಅಭಿನಯಿಸಿದ್ದಾರೆ.
ತಾಂತ್ರಿಕ ವರ್ಗದಲ್ಲಿ,ಸಂಗೀತ -ಶಿವಸತ್ಯ, ಛಾಯಾಗ್ರಹಣ-ವಿನಾಯಕ ರೇವಡಿ ಬಾಗಲಕೋಟೆ,ಚಿತ್ರಕಥೆ-ಸಂಕಲನ – ಮುತ್ತುರಾಜು ಟಿ,ಕಥೆ ಮತ್ತು ನಿರ್ಮಾಪಕರು ಟಿ.ಎಸ್.ಕುಮಾರ,ಸಾಹಿತ್ಯ-ಸಹ ನಿರ್ದೇಶನ- ಸತೀಶ್ ಜೋಶಿ ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ.ಡಾ. ವೀರೇಶ್ ಹಂಡಗಿ ಅವರದಿದೆ.
ಹಿಂದೆ ಶ್ರೀ ಕಬ್ಬಾಳಮ್ಮನ ಮಹಿಮೆ ಎಂಬ ಪೌರಾಣಿಕ ಸಿನಿಮಾದ ಮೂಲಕ ಚಿತ್ರರಂಗದಲ್ಲಿ ಮಹಿಳಾ ಜಂಟಿ ನಿರ್ದೇಶಕಿಯರಾಗಿ ಸಂಚಲನ ಮೂಡಿಸಿದ್ದ ಪೂರ್ಣ ಶ್ರೀ ಆರ್ ಮತ್ತು ರಶ್ಮೀ ಎಸ್ ನಿರ್ದೇಶನ ಮಾಡಿದ್ದಾರೆ.