ಆದ್ಯೋತ್ ಸುದ್ದಿನಿಧಿ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಎನ್ನುವುದು ಮರೀಚಿಕೆಯಾಗಿದೆ. ಕೊರೊನಾ ಬಂದಿರುವ ಈ ಸಂದರ್ಭದಲ್ಲೂ ಈ ಆಸ್ಪತ್ರೆ ಒಪಿಡಿ ಚೀಟಿಗೆ 15 ರೂಪಾಯಿ ಪಡೆಯುವ ಮೂಲಕ ಜನರ ಸುಲಿಗೆಗೆ ಮುಂದಾಗಿದೆ.
ಸುಮಾರು ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಕೆಲವು ಸಿ ಮತ್ತು ಡಿ ವರ್ಗದ ಸಿಬ್ಬಂದಿಗಳ ಕೊರತೆ ಇದ್ದರೂ ವೈದ್ಯರ ಕೊರತೆ ಇಲ್ಲ. ಎಕ್ಸ್-ರೇ, ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ ಎಲ್ಲವನ್ನೂ ಇಲ್ಲಿ ಮಾಡಲಾಗುತ್ತದೆ. ಯಾವುದೇ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತೆ ಇಲ್ಲಿ ಶುಲ್ಕವನ್ನು ವಸೂಲು ಮಾಡಲಾಗುತ್ತದೆ. ಇಲ್ಲಿ ಒಪಿಡಿ ಚೀಟಿಗೆ 15 ರೂಪಾಯಿ ಪಡೆಯಲಾಗುತ್ತಿದೆ. ಕರ್ನಾಟಕದ ಯಾವುದೇ ಸರಕಾರಿ ಆಸ್ಪತ್ರೆಯಲ್ಲಿ ಒಪಿಡಿ ಚೀಟಿಗೆ 15 ರೂಪಾಯಿ ಇಲ್ಲ. ಹಾಗಂತ ಇಲ್ಲಿ ಹೆಚ್ಚುವರಿ ವ್ಯವಸ್ಥೆ ಇದೆಯೇ ಕೇಳಿದರೆ ಯಾವ ವ್ಯವಸ್ಥೆಯೂ ಇಲ್ಲ.
ಈ ಬಗ್ಗೆ ಕಳೆದ ಐದಾರು ತಿಂಗಳಿನಿಂದ ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ. ತಾಲೂಕು ಪಂಚಾಯತ್ ಸಭೆಯಲ್ಲಿ ಸದಸ್ಯರು ಸಾಕಷ್ಟು ಬಾರಿ ವಿರೋಧಿಸಿದ್ದಾರೆ. ಶಾಸಕರೂ ಸೇರಿದಂತೆ ವಿವಿಧ ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ. ಜಿಲ್ಲಾಆರೋಗ್ಯಾಧಿಕಾರಿ ಡಾ.ಅಶೋಕಕುಮಾರ ಗಮನಕ್ಕೆ ತಂದಾಗ ಅವರು ತಕ್ಷಣ ಐದು ರೂಪಾಯಿ ಮಾಡುವಂತೆ ಆಡಳಿತಾಧಿಕಾರಿಗಳಿಗೆ ಸೂಚಿಸಿ ಮೂರು ತಿಂಗಳು ಕಳೆದಿದೆ ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಈಗ ಒಂದು ತಿಂಗಳಿನಿಂದ ಕೊರೊನಾ ಲಾಕ್ ಡೌನ್ ಆಗಿರುವುದರಿಂದ ಜನರಿಗೆ ದುಡಿಮೆ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರಕಾರ ಜನರಿಗೆ ವಿವಿಧ ರೀತಿಯ ಸಹಾಯದ ಜೊತೆಗೆ ಹಲವು ರಿಯಾಯತಿಯನ್ನೂ ನೀಡಿದೆ. ಆದರೆ ಸಿದ್ದಾಪುರ ಸರಕಾರಿ ಆಸ್ಪತ್ರೆಯಲ್ಲಿ ಜ್ವರದ ಕ್ಲಿನಿಕ್ ಸೇರಿದಂತೆ ಎಲ್ಲಾ ಒಪಿಡಿ ಚೀಟಿಗೂ 15 ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಇಲ್ಲಿಯ ಆರೋಗ್ಯರಕ್ಷಾ ಸಮಿತಿಯ ಅಧ್ಯಕ್ಷರು ಈ ಭಾಗದ ಶಾಸಕರು, ವಿಧಾನಸಭಾದ್ಯಕ್ಷರು ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರು. ಶಿರಸಿ ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷರೂ ಕಾಗೇರಿಯವರೇ ಆಗಿದ್ದಾರೆ. ಶಿರಸಿಯಲ್ಲಿ ಬಿಪಿಎಲ್ ಕಾಡ್೯ ಉಳ್ಳವರಿಗೆ ಒಪಿಡಿ ಚೀಟಿ ಉಚಿತವಾಗಿದ್ದರೆ ಉಳಿದವರಿಗೆ 5 ರೂಪಾಯಿ. ಒಬ್ಬರೆ ಎರಡೂ ಸಮಿತಿಯ ಅಧ್ಯಕ್ಷರಾಗಿದ್ದರೂ ಸಿದ್ದಾಪುರ ಸರಕಾರಿ ಆಸ್ಪತ್ರೆಯಲ್ಲಿ 15 ರೂಪಾಯಿ ಮಾಡಿರುವುದು ಏಕೆ? ಎನ್ನುವುದು ಸಾರ್ವಜನಿಕರ ಪ್ರಶ್ನೆ.
ಈ ಬಗ್ಗೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಿವಾಸ ಹೇಳುವ ಪ್ರಕಾರ, ಇಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರಿಗೆ ಸಂಬಳ ನೀಡಲು ಹಾಗೂ ಇತರ ಕೆಲಸಗಳಿಗೆ ಉಪಯೋಗಿಸಲಾಗುವುದು. ಒಪಿಡಿ ಚೀಟಿಯ ದರ ನಿಗದಿಯಾಗಿರುವುದು ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಎನ್ನುತ್ತಾರೆ.
ಆದರೆ ಕಾಗೇರಿಯವರನ್ನು ಕೇಳಿದರೆ, ಆಸ್ಪತ್ರೆಗೆ ಅನುದಾನದ ಕೊರತೆ ಇಲ್ಲ. ಗುತ್ತಿಗೆದಾರರ ಸಂಬಳ ಆಗುತ್ತಿದೆ. ಒಪಿಡಿ ಚೀಟಿಗೆ 15 ರೂಪಾಯಿ ಮಾಡಿರುವುದು ಹೌದು. ಇದರಿಂದ ಜನರಿಗೆ ತೊಂದರೆಯಾಗುವುದಾದರೆ ಕಡಿಮೆ ಮಾಡಲಾಗುವುದು ಎನ್ನುತ್ತಾರೆ. ಕೊರೊನಾ ಲಾಕ್ ಡೌನ್ ನಂತಹ ಸಂದರ್ಭದಲ್ಲಿ ಜನರಿಗೆ ದುಡಿಮೆಯೇ ಇಲ್ಲದಿರುವಂತಹ ಸಂದರ್ಭದಲ್ಲಿ ಎಲ್ಲಾ ಚಿಕಿತ್ಸೆಗಳನ್ನು ಉಚಿತವಾಗಿ ನೀಡಬೇಕು. ಆದರೆ ಸಿದ್ದಾಪುರ ಸರಕಾರಿ ಆಸ್ಪತ್ರೆಯ ಜವಾಬ್ದಾರಿ ಹೊತ್ತವರು ವಸೂಲಿಗೆ ಮುಂದಾಗಿರುವುದು ಖಂಡನೀಯವಾಗಿದೆ.
“ಸಿದ್ದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಪಿಡಿ ಚೀಟಿಗೆ 15 ರೂಪಾಯಿ ಮಾಡಿರುವುದರ ಬಗ್ಗೆ ತಾಲೂಕು ಪಂಚಾಯತ್ ಸಭೆಯಲ್ಲಿ ಸಾಕಷ್ಟು ಬಾರಿ ಚರ್ಚಿಸಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕೊರೊನಾ ಬಂದಿರುವ ಈ ಸಮಯದಲ್ಲಾದರೂ ಉಚಿತ ಚಿಕಿತ್ಸೆ ನೀಡಬೇಕಾಗಿತ್ತು. ಸಂಬಂಧಿಸಿದವರು ಮಾನವೀಯತೆಯನ್ನು ಮರೆತಿರುವಂತೆ ಕಾಣುತ್ತದೆ” ಎಂದು ಆದ್ಯೋತ್ ನ್ಯೂಸ್ ಗೆ ತಾಲೂಕು ಪಂಚಾಯತ್ ಸದಸ್ಯ ನಾಸೀರ್ ವಲ್ಲಿ ಖಾನ್ ಪ್ರತಿಕ್ರಿಯಿಸಿದ್ದಾರೆ.
“ಕೊರೊನಾದಂತಹ ಮಾರಕ ಖಾಯಿಲೆ ಬಂದು ಜನರ ಜೀವನ ನಿರ್ವಹಣೆ ಕಷ್ಟವಾಗಿರುವಂತಹ ಸಂದರ್ಭದಲ್ಲಿ ಆರೋಗ್ಯ ಚಿಕಿತ್ಸೆಗಳು ಉಚಿತವಾಗಬೇಕಿತ್ತು. ಆದರೆ ಸಿದ್ದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಪಿಡಿ ಚೀಟಿಗೆ 15 ರೂಪಾಯಿ ಮಾಡುವ ಮೂಲಕ ಜನರ ಸುಲಿಗೆ ಮಾಡುತ್ತಿದ್ದಾರೆ. ಶಾಸಕರು ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು” ಎಂದು ವಾಜಗೋಡು ಗ್ರಾಮಚಾಯತ್ ಅಧ್ಯಕ್ಷ ಕೃಷ್ಣಮೂರ್ತಿ ನಾಯ್ಕ ಐಸೂರು ಹೇಳಿದ್ದಾರೆ.
👌👍